24 August 2011

ಕಥೆಯೇನು? ಕೊನೆಗಾಣದ ವ್ಯಥೆಯೇನು?!

ಯಡ್ಡಿ ಚಡ್ಡಿ ಹರಿದು ಹೋಗುವ ಎಲ್ಲಾ ಲಕ್ಷಣಗಳು ದಿಟವಾಗುತ್ತಿರುವ ಈ ಹೊತ್ತಿಗೆ...ಅಧಿಕಾರದ ಮದ ತಲೆಗೇರಿದ್ದಾಗ ತಾನು ಸ'ಗಣಿ' ತಿಂದು ಗಬರಿದ ಹಣದಲ್ಲೆ ಒಂದು ಪಾಲು ಖರ್ಚು ಮಾಡಿ ಲೋಕಾಯುಕ್ತದ ಕುಣಿಕೆಯಿಂದ ತಲೆತಪ್ಪಿಸಿಕೊಳ್ಳಲು ಕರಿಕೋಟು ಬೃಹಸ್ಪತಿಗಳ ಆಸರೆಗೆ ಈಗ ಬಾಯಿ ಬಿಡುತ್ತಿರೋದು ಕರುಣಾಜನಕವಾಗಿ ಗೋಚರಿಸುತ್ತಿದೆ.ಆದರೆ ಅದೇನೆ ಆಟ ಹೂಡಿದರೂ...ಅದೆಷ್ಟೇ ಬಿಕಾವು ಬಿಳಿಕೋಟಿನ ವೈದ್ಯರಿಂದ ಖೊಟ್ಟಿ ಅನಾರೋಗ್ಯ ಪ್ರಮಾಣಪತ್ರ ಖರೀದಿಸಿದರೂ ಜೈಲೂಟ ಮಾತ್ರ ಗ್ಯಾರೆಂಟಿ! ಅಂತಹ ಭೀಕರ ದಿನ ಬರಲಾರದೆ ಬಂದಲ್ಲಿ ಕಡೇಪಕ್ಷ ಸರಕಾರಿ ಆಸ್ಪತ್ರೆಯಲ್ಲೆ "ಆಪ್ತಮಿತ್ರ" ಕಟ್ಟಾನ ರೂಂಮೇಟ್ ಆಗೋಣ..ಆಗಲಾದರೂ ನಿತ್ಯ 'ಶೋಭಾ'ಯಮಾನವಾಗಿ ಬರೋ ಮನೆ ಬುತ್ತಿ ಮೆಲ್ಲಬಹುದು ಎಂಬ ಕ್ಷೀಣ ಆಸೆಯೂ ಅವರ ಕಂಡ ಕಂಡಲ್ಲಿ ಕಣ್ಣೀರಿಡುವ ಹೃದಯದ ಮೂಲೆಯಲ್ಲಿರಬಹುದು!


ಆದರೆ ಅವರನ್ನೆ ನಂಬಿ ಕೊಂಡಿರುವ ಅಭಿಮಾನಿಗಳ ಸಂಕಟವೆ ಬೇರೆ.ಅವರೇನಾದರೂ ದುರುದ್ದೇಶಪೂರಿತ ಲೋಕಾಯುಕ್ತ ವರದಿಯ ಬಲಿಪಶುವಾಗಿ (?) ಜೈಲು ಸೇರಿದರೆ ರಸಿಕ'ರೇಣು'ವಿನಂತೆ ಅನಾಥರಾಗುವ ಅವರ ಅಸಂಖ್ಯ "ಮಾನಸಿಕ"(ಅಸ್ವಸ್ಥ) ಪುತ್ರರ ಗತಿಯೇನು? ಐದು ತಿಂಗಳ ನಂತರ ಅವರ ಪುನರಾಗಮನಕ್ಕೆ ಕಾತರದಿಂದ ಕಾಯುತ್ತಿರುವ ಕರುನಾಡಿನ ಸಿರಿ ಗದ್ದುಗೆಯ ಕತೆಯೇನು? ಎಲ್ಲಾದರೂ 'ಪರಪ್ಪನ ಅಗ್ರಹಾರ'ದ ಫಲವತ್ತತೆಯೆ (?) ಅದೃಷ್ಟ ಕೆಟ್ಟು ಅವರಿಗೆ ಬಹಳ ಪಸಂದಾಗಿ ಅದನ್ನೆ ಡಿ-ನೋಟಿಫಿಕೇಶನ್ ಮಾಡಿಸಿ ಕೊಂಡು ಅಲ್ಲೇ ಒಂದು "ಇಟಾಸ್ಕ" ಆರಂಭಿಸುವ "ಪ್ರೇರಣಾ" ಅವರಿಗಾಗಿ ಬಿಟ್ಟರೆ ಅಲ್ಲಿರುವ ಸಾಮಾನ್ಯ ಕಳ್ಳ ಖದೀಮರ-ಬಸ್ಸ್ಟ್ಯಾಂಡ್ ಕಿಸೆಗಳ್ಳರ ಕತೆಯೇನು? ಇವರಿಂದ ಪ್ರೇರಿತರಾಗಿ ರಾಘು,ವಿಜಿ,ಸೋಹನನ ಮುಂದಾಳತ್ವದಲ್ಲಿ ಇವರ ಹಿಂದೆಯೆ ಸಾಲಾಗಿ ಎಲ್ಲಾ ಖಾದಿ ಖೂಳರೂ ಸಾಲಾಗಿ ಅಲ್ಲಿನ ಆತಿಥ್ಯಕ್ಕೆ ಮನಸೋತು ಕಾನೂನಿನ ಒತ್ತಾಯಕ್ಕೆ ಬಲಿಯಾಗಿ ಅಲ್ಲಿಗೆ ಬಂದು ಸೇರಿದರೆ ಅಲ್ಲಿರೊ ಅಸಲು ಖೈದಿಗಳ ವ್ಯಥೆಯೇನು?
(ಗಮನಿಸಿ ಇವರು ಕೇವಲ 'ಆರೋಪಿ' ಅಷ್ಟೆ ಇನ್ನೂ 'ಅಪರಾಧಿ' ಅಲ್ಲ!) ಉತ್ತರ ಕಾಣದ ಇಂತಹ ಸಾವಿರ ಪ್ರಶ್ನೆಗಳಿಂದ ತಲೆ ಮೊಸರು ಗಡಿಗೆಯಾಗಿ ಹೋಗಿದೆ,ಹೀಗೆ ಆದ್ರೆ ನಾನೂ 'ಅಪೋಲೊ' ಸೇರಬೇಕಾಗ್ತದೋ ಏನೊ?!

No comments: