09 August 2011

ಉಕ್ಕಿ ಬಂದ ನೆನಪುಗಳೇ...

ಇರುಳು ಕಳೆದರೂ ಕತ್ತಲ ಕನಸು ಕರಗಿಲ್ಲ
ಮುಗಿಲು ಕೆಂಪಾಗಿದ್ದರೂ....
ಮನ ಮುಗಿಲಿನ್ನೂ ಬೆಚ್ಚನೆ ಬೆಳಗಿಗೆ ತೆರೆದಿಲ್ಲ,
ನಿನ್ನ ನಿರೀಕ್ಷೆಯಿದೆ/
ನಿಲ್ಲದ ಸೋನೆ ಮಳೆಯ ಹನಿಗಳ ಗುಂಗಲಿ
ನಿನ್ನ ನೆನಪುಗಳ ಕಂಬಳಿ ಗುಪ್ಪೆ ಬೆಚ್ಚಗೆ ಹೊದ್ದುಕೊಂಡು,
ಬಾಳಹಾದಿಯಲ್ಲಿ ಬರಿಗಾಲಲ್ಲಿ ಹೊರಟಿದೆ ಕನಸು//


ಹಗಲೆಲ್ಲ ನಿನಗಾಗಿ ಕಾದ ಕ್ಷಣಗಳಲ್ಲೆಲ್ಲ
ಉಕ್ಕಿ ಬಂದ ನೆನಪುಗಳೇ...
ಇರುಳಲ್ಲಿ ನೋವಿನ ನಾಲ್ಕು ಸಾಲಾದವು/
ಬಾನಿನಲಿ ಚಂದ್ರನಿಗೂ
ಬೆಳದಿಂಗಳ ಜೊತೆಗೆ ಜಗಳ...
ಭೂಮಿಯಲಿ ನಮ್ಮಿಬ್ಬರ,
ನಡುವೆ ಅದುವೆ ಬಹಳ//


ತುಟಿಗಳ ನಿತ್ಯ ಜಪ ನೀನು
ಎದೆಯ ಮೋಹಕ ರಾಗ....
ಉಸಿರಿನ ಅನುಕ್ಷಣದ ತಪ
ಉರಿಯೇದೆಯಲ್ಲೊಂದು ತಂಪು ಜಾಗ!,
ರೆಪ್ಪೆ ಸೋಕಿದ ಮುಂಗುರಳ ಸರಿಸಿ
ಗಾಳಿಯಲ್ಲೆ ಅದೆನನೋ ಬೆರಳ ಮೊನೆಯಲ್ಲಿ ಬಿಡಿಸಿ....
ಬಂದಾಗಲೆಲ್ಲ ಸಂತಸದಲೆಗಳನ್ನ ಹೊಮ್ಮಿಸುತ್ತಿದ್ದ
ನಿನ್ನ ಅನುಪಸ್ಥಿತಿ ಬಾಳನ್ನ ಗೋಳಾಗಿಸಿದೆ....!/
ಸತ್ತ ಭಾವಗಳ ಸಮಾಧಿಯ ಮೇಲೆ ಕುಳಿತು
ನಿಟ್ಟುಸಿರು ಬಿಡುತ್ತಿರುವ ನನ್ನ ಕಣ್ಣೀರಿಗೆ....
ಅದನ್ನು ಒರೆಸುವ ನೆಪದಲ್ಲಾದರೂ,
ನಿನ್ನ ಕೈಯೊಮ್ಮೆ ಸೋಕಲಿ ಎಂಬ ಈಡೇರದ ಆಸೆ!//

No comments: