01 September 2011

ಹೆಸರಿನಲ್ಲೆ ಎಲ್ಲಾ ಇದೆ!....



ಕಟ್ಟಾ-ಕಲ್ಮಾಡಿ-ಕನಿಮೋಳಿ ಮುಂತಾದ 'ಕ' ಅಕ್ಷರಾಧಾರಿತ ನಾಯಕರ ಜೊತೆಜೊತೆಗೆ ರಾಜಾ-ಜಗದೀಶ ಮುಂತಾದ ಅಧಿಕಾರಸ್ಥ ಹೆಸರಿನ ನಾಯಕರೂ ಈ ಬಾರಿ ಕಂಬಿ ಹಿಂದೆಯೆ 2ಜಿ ಹಬ್ಬದಾಚರಣೆಯಲ್ಲಿ (ಇದು 'ಗೌ'ರಿ ಹಾಗು 'ಗ'ಣಪತಿ ಎಂಬ 2ಜಿ ಅನ್ನೋದು ನಿಮ್ಮ ಗಮನಕ್ಕೆ!) ತೊಡಗಬೇಕಾಗಿ ಬಂದಿರೋದು ಅವರ ಅಪಾರ ಅಭಿಮಾನಿಗಳ 'ಕ'ಣ್ಣಲ್ಲಿ ನೀರುಕ್ಕಿಸುವುದರ ಜೊತೆ ಹಬ್ಬದ ಸಂಭ್ರಮದಲ್ಲಿ ಮೈಮರೆತಿದ್ದ ಬಡ ಭಾರತೀಯರ ಹೊಟ್ಟೆಯನ್ನೂ ಚುರುಕ್ಕೆನ್ನಿಸಿದೆ!

ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗಿದ್ದೆ ಆದರೆ ನಾಳೆ ಇವರದ್ದೆ ಮೇಲ್ಪಂಕ್ತಿ ಅನುಸರಿಸಿ ಕುಮಾರಸ್ವಾಮಿ-ಯಡಿಯೂರಪ್ಪ-ರಾಘವೇಂದ್ರ-ವಿಜಯೇಂದ್ರ-ಕೃಷ್ಣಯ್ಯ ಹೀಗೆ 'ಪರಮಾತ್ಮ"ನ ( ರೇಣುಕಾಚಾರ್ಯನದೋ-ಯೋಗರಾಜ ಭಟ್ಟರದೋ 'ಪರಮಾತ್ಮ' ಇವನಲ್ಲ! ) ಸಹಸ್ರ'ನಾಮ'ಗಳಿಟ್ಟುಕೊಂಡ ಹಾಗು ನಾಡಿಗೆಲ್ಲ ನಿರ್ವಂಚನೆಯಿಂದ ಅದನ್ನೆ ಇಡುತ್ತಿರುವ ಪವಿತ್ರಾತ್ಮರೂ ಅಲ್ಲಿಗೆ ದೌಡಾಯಿಸಿ ಇನ್ನೇನು ಸಾಲಾಗಿ ಬರಲಿರುವ ಎಲ್ಲಾ ಹಬ್ಬಗಳಲ್ಲೂ ಈಗಾಗಲೆ 'ಒಳಗಿದ್ದು' ನೊಂದವರ ಕಂಬನಿ ಒರೆಸಿ ;ಅವರೆಲ್ಲರಿಗೂ 'ಕಂಪನಿ' ಕೊಡುವುದರ ಮೂಲಕ ಅವರ ಸಂಭ್ರಮೋಲ್ಲಾಸವನ್ನು ಕಿಂಚಿತ್ ಹೆಚ್ಚಿಸಲು ಪ್ರಯತ್ನಿಸೋದರಲ್ಲಿ ಸಂಶಯವೆ ಇಲ್ಲ!

ನಾಡಿಗಾಗಿ ಸೇವೆ ಸಲ್ಲಿಸಿದ ಮಹಾನೀಯರನ್ನು ನಡೆಸಿಕೊಳ್ಳುವ ಬಗೆಯ ಇದು? ಹೀಗಾಗಿ ಮುಂದೆ ಅವರ ಅನುಪಸ್ಥಿತಿಯಲ್ಲಿ ಈ "ಬಡ ದೇಶ" ಇನ್ನಷ್ಟು ಬರಗೆಟ್ಟು ಹೋದರೂ ಸರಿ ; ಮನಸ್ಸನ್ನು ಕಲ್ಲು ಮಾಡಿಕೊಂಡು ನಾವೆಲ್ಲರೂ ಒಂದು 'ತ್ಯಾಗ'ಕ್ಕೆ (?) ಒಲ್ಲದ ಮನಸ್ಸಿನಿಂದ ಸಿದ್ಧರಾಗಲೆಬೇಕಿದೆ! ದೇಶಕ್ಕೆ ಸಂದ ಅವರ 'ಅಮೂಲ್ಯ ಸೇ(ಶೇ)ವೆಯನ್ನು ಪರಿಗಣಿಸಿ ಕಡೇಪಕ್ಷ ಅವರೆಲ್ಲರನ್ನು ಅವರುಗಳು ತಮ್ಮ ಹರಾಮಿ ಕಮಾಯಿ ಹೂತಿಟ್ಟ ಹೊರದೇಶಗಳಿಗೇ ಗಡಿಪಾರು ಮಾಡಿಯಾದರೂ ಭಾರತದ ಭೂ'ಭಾರ'ವನ್ನ ಇಳಿಸಿಕೊಂಡಿದ್ದಲ್ಲಿ ಅವರಿಗೂ ಕೊಂಚ ನೆಮ್ಮದಿ ಹಾಗು ನಮಗೂ ಭವಿಷ್ಯದಲ್ಲಿ ಅವರೆಲ್ಲರಿಂದ ಪಾರಾದ ಪರಮ ಖುಷಿ ಏಕಕಾಲದಲ್ಲಿ ಲಭ್ಯ ಆಗುತ್ತಿತ್ತೋ ಏನೋ! ಆದರೇನು ಮಾಡೋದು ನಾವದನ್ನು ಪಡಕೊಂಡು ಬಂದಿಲ್ಲವಲ್ಲ!! ಆದರೂ ಮುಂಡೆದು ಈ ದರಿದ್ರ ಮನಸು ಇಂತಹ ಹಗಲು ಕನಸು ಕಾಣೋದನ್ನ ನಿಲ್ಲಿಸುತ್ತಲೆ ಇಲ್ಲ?!

No comments: