24 September 2011

ಕನಸುಗಳಿಗೀಗ ಹದಿಹರೆಯ......

ನಿನ್ನ ಕಣ್ಣು ಹೆಣೆದ ಸಂಚಿನ ಬಲೆಯಲ್ಲಿ.....
ಬಯಸಿ ಬಯಸಿ ಸಿಕ್ಕು ಸೆರೆಯಾದ
ನನ್ನ ಕನಸುಗಳಿಗೀಗ ಹದಿಹರೆಯ,
ಮೌನದಾಳದಲ್ಲಿ ಅಡಗಿದ್ದ ನನ್ನ ಆಕ್ಷಾಂಶೆಗಳು
ನಿನ್ನ ನಗುವಿನ ಗಾಳಕ್ಕೆ ಸಿಲುಕಿ ಮೇಲೆದ್ದು ಬಂದವು...
ಬಾಳಲ್ಲಿ ಕೊನೆಗೂ ಒಲವ ಬೆಳಕ ಕಂಡವು/
ಸಂಜೆ ಕಾಲದ ಸಂಕಟದ ಕ್ಷಣಗಳು ಕಾಡಿಸಿದ ಮೌನದುದ್ದಕ್ಕೂ....
ಕಣ್ಣಿನಿಂದ ಜಾರಿದ ಪ್ರತಿಯೊಂದು ಹನಿಗಳೂ
ನಿನ್ನನ್ನೆ ನೆನಪಿಸಿ ಹರಿದುಹೋದವು,
ನನ್ನೆದೆಯ ರಾಗಕೆ ನಿನ್ನುಸಿರ ತಾಳದ ಜೊತೆ ಸಿಕ್ಕಿದ್ದಿದ್ದರೆ
ಬಾಳಿನಲಿ ಎಂದೆಂದೂ ಮರೆಯಲಾಗದ ಗಾನವೊಂದು ಅರಳಿ ನಿರಂತರವಾಗಿ ಹರಿಯುತ್ತಿತ್ತು//


ನೆನಪಿನ ಹನಿಗಳನ್ನೂ ಸುರಿವ ಮಳೆಯಲಿ ನಿತ್ಯ ಲೀನ ಮನಸು...
ಹಗಲಲ್ಲೂ ನನಗೆ ನಿನ್ನೆದೆಯಲ್ಲೇ ಕರಗಿ ಹೋದಂತ ಕನಸು,
ವಾಸ್ತವವಲ್ಲ...ಗೊತ್ತಿದೆ ಇದು ಭ್ರಮೆಯೆಂದು
ನನಗೆ ನಾನೆ ನಿವೇದಿಸಿಕೊಳ್ಳುವ ಹಿತವಾದ ಕ್ಷಮೆಯೆಂದು/
ನಿನ್ನ ಕಣ್ಣ ಚಿಟ್ಟೆ ಆಹ್ವಾದಿಸಿದ ಹೂವು ನನ್ನ ಮನ....
ನಿನ್ನ ತುಟಿ ದುಂಬಿ ಒಲವನ್ನೆಲ್ಲ ಹೀರಿದ ಪುಷ್ಪ ನನ್ನೆದೆ
ಇನ್ನು ನೀನಿಲ್ಲದೆ ಬಾಳೆಲ್ಲ ಬರಿದೆ....ಬರಿ ಬರಿದೆ//


ನೆನ್ನೆಗಳನ್ನ ಗುಣಿಸಿ...
ನಾಳೆಗಳಷ್ಟನ್ನು ಅವಕ್ಕೆ ಕೂಡುವ
ನನ್ನೊಳಗಿನ ಆಸೆಗಳನ್ನೆಲ್ಲ ಭೀಕರವಾಗಿ ಭಾಗಿಸಿ,
ಹೇಳದೆಯೆ ನೀ ಹೊರಟುಹೋದ ನಂತರ
ಕನಸುಗಳು ಅವೆಲ್ಲೋ ಕಳೆದೇಹೋದವು/
ಎಲ್ಲೋ ಅರಳಿದ ಮೊಗ್ಗು....
ಇನ್ನೆಲ್ಲೊ ಅರಳಿ ಹೂವಾಗಿ
ಕಂಪು ಚಲ್ಲಿದ ಹಾಗೆ,
ನನಸಿನಲ್ಲಿ ಮರೀಚಿಕೆಯಾದ ನಿನ್ನ ಹೂನಗೆ ನನ್ನ ಕನಸಿನಲ್ಲಿ//


ಮೌನ ಮಾತಾಗಿ...ಏಕಾಂತ ಎದೆತುಂಬಿ
ಮನದಂಗಳದಲ್ಲಿ ಅರಳಿದ ಹೂವು
ಹೊತ್ತಿರೋದು ನಿನ್ನುಸಿರ ಕಂಪು,
ನಿನ್ನ ಕೆನ್ನೆ ಕಡಕೊಟ್ಟ ಕೆಂಪು/
ನೆನೆದಷ್ಟೂ ಮಧುರ...
ನುಡಿದಷ್ಟೂ ಸಾಲದದರ ಸಾರ,
ಮೋಹವೆಂದರೆ ಇದೇನಾ?
ಪ್ರೀತಿಯೆಂದು ಕರೆಯೋದು ಇದನ್ನೇನ?//

No comments: