24 September 2011

ಮಾತಿನ ನಡುವೆ ಮೌನದಲ್ಲಿ.......

ನಿನ್ನುಸಿರ ಲೋರಿಯಲ್ಲಿ...ನಿನ್ನ ನೆನಪ ಲಾಲಿಯಲ್ಲಿ
ಲೀನವಾದ ನನ್ನ ಭಾವುಕ ಮನಸಿಗೆ,
ನೆನ್ನಿನಿರುಳು ಕಪಟವರಿಯದ ಪುಟ್ಟ ಕಂದನಂತೆ ನೆಮ್ಮದಿಯ ನಿದಿರೆ/
ನಿನ್ನ ನೆನೆಯುವಾಗಲೆಲ್ಲ ಅವರ್ಚನೀಯ ಆನಂದದ ಎಳೆಯೊಂದು
ಎದೆಯನ್ನವಚಿಕೊಂಡಂತೆ,
ಮನದ ಚಾವಡಿಯಿಂದ ಸಂತಸದ ಅಂಗಳಕ್ಕೆ ಮಗುವೊಂದು ಕವಚಿಕೊಂಡಂತೆ
ಸಂಭ್ರಮಿಸುತ್ತದೆ ಭಾವದಲೆಗಳು//


ಸಾಲು ದೀಪಗಳ ಸಾಲಿನಲ್ಲೂ ನಿನ್ನ ಹೊಳೆವ ಕಂಗಳ ಬೆಳಕನ್ನ
ದೂರದಿಂದಲೆ ಸರಿಯಾಗಿ ಗುರುತಿಸಬಲ್ಲೆ,
ಇತ್ತಲ್ಲ ಬಹುಕಾಲ ನನ್ನ ಮನಸು ಪೂರ
ಒಂದೊಮ್ಮೆ ಅಲ್ಲೆ!/
ನೋವು ಖಚಿತ...ನೆನಪುಗಳಷ್ಟೆ ಉಚಿತ
ಎಂಬುದರ ಅರಿವಿದ್ದರೂ ನಿನ್ನನು ಇದೇ ಅವೇಗದಲ್ಲಿ ಪ್ರೀತಿಸಿಯೆ ತೀರುತ್ತಿದ್ದೆ,
ಕ್ಷಣವಾದರೂ ನಿನ್ನವೆರಡು ಕಣ್ಣ ಬೆಳಕನ್ನೆಲ್ಲ
ನನ್ನ ಬಾಳ ಕತ್ತಲು ಕಳೆಯಲು ಹೀರುತ್ತಿದ್ದೆ//



ಕನಸಿಗಿಲ್ಲ ನೋಡು ಸುಂಕ,ಅದಕ್ಕೆ...
ಹೊತ್ತಲ್ಲದಹೊತ್ತಲ್ಲೂ ನಿನ್ನ ಕನವರಿಸಲು ನನಗಿಲ್ಲ ಆತಂಕ,
ಹೀಗೆ ನಿತ್ಯ ನೀ ಬರುವ ಹಾಗಾದರೆ ಸ್ವಪ್ನದೊಳಗೆ
ಬಾಳು ಮರಳಿ ಏರೀತು ಸಂತಸದ ಹಳಿಗೆ/
ಇರುಳಿನ ನೆರಳಿನ್ನೂ ಕನಸಿಂದ ಸರಿದಿಲ್ಲ
ನಿನ್ನ ಮರುಳಿನ್ನೂ ಮನಸಿಂದ ಅಳಿದಿಲ್ಲ,
ಮೌನದಲ್ಲೂ ನಿನ್ನೊಂದಿಗೆ ಮಾತನಾಡುತ್ತೇನೆ
ಮಾತಿನ ನಡುವೆ ಮೌನದಲ್ಲಿ ಲೀನವಾಗುತ್ತೇನೆ//


ದಿನ ಮುಳುಗುವ ಹೊತ್ತು...ನಿನ್ನ ನಿರೀಕ್ಷೆಯ ಮಿಣುಕು ಹಣತೆ ಹೊತ್ತು
ಇರುಳಿಡೀ ಧೀಪದಾರಿಯಾಗಿ....ನೀ ಬರುವ ಹಾದಿಯಲ್ಲೆ ಬೆಳಕುಬೀರುತಿರುತೀನಿ,
ನಿನಗಾಗಿ ರೆಪ್ಪೆಗೂಡಿಸದೆ ಯಾವಾಗಲೂ ಕಾಯುತಿರುತೀನಿ/
ಮುಕ್ತ ಹಾದಿಯಲ್ಲಿ ಕೇವಲ ಕನಸ ಬೆಳಕಿನಾಸರೆಯಲ್ಲಿ
ಮೌನವಾಗಿ ಹೆಜ್ಜೆ ಹಾಕುತ್ತ ಬಾಳಿನುದ್ದಕೂ,
ನಿನ್ನ ನೆನಪನೆ ಗುನುಗುತಿರುತೀನಿ....ನಿನ್ನೊಲವ ಸವಿಯಲ್ಲೆ ನಾನು ನಿರಂತರ ಕರಗುತಿರುತೀನಿ//

No comments: