ಮುಗಿಯದ ನೆನಪುಗಳ ಜಾತ್ರೆ
ಮನಸಿನ ರಾಜಬೀದಿಯಲ್ಲಿ ಸಾಗುವಾಗ.....
ಕಣ್ಣರಳಿಸಿ ಮಂತ್ರ ಮುಗ್ಧನಾಗಿ ನಿಂತ ನನಗೀಗ
ಮತ್ತೆ ಅದರಲ್ಲಿ ಕರಗಿ ಲೀನವಾಗಿ ಕಳೆದು ಹೋಗುವಾಸೆ/
ಕಣ್ಣಿನ ಕೊಳವನ್ನೆಲ್ಲ ನೋವಿನ ನೀರೆ ಆವರಿಸಿ....
ಮನಸಿನ ತೂಬು ಕಟ್ಟೆಯೊಡೆದು ಹರಿದಾಗ
ನೋಡಿದವರು ಅದನ್ನ ಕಣ್ನೀರೆಂದು ಕರೆದರು,
ದೂರದಲ್ಲೆ ಕಂಡು ನಕ್ಕು ಸನಿಹ ಸುಳಿಯದೆ ಹಾಗೆ ಮುಂದೆ ಸರಿದರು
ಬಂದು ಅದನ್ನೊರೆಸಲು ಎಲ್ಲರೂ ನೀ'ನಲ್ಲ'ವಲ್ಲ....!//
ತಪ್ಪು ಕಣ್ಗಳದಲ್ಲ ....ಅದರ ಅನುಮತಿಗೂ ಕಾಯದೆ
ಮನಸಿನಂಗಳದಲ್ಲಿ ಎಡವಿ ಬಿದ್ದ ಕನಸುಗಳದು,
ಒಲವಲ್ಲೂ ಪ್ರತಿಷ್ಠೆ ಮೆರೆವ ಹುಚ್ಚು ಹಂಬಲದ ಒಣ ಮುನಿಸುಗಳದು/
ಮುಕ್ತಿ ಇಲ್ಲದ ಈ ನಿಶಾಚರ ಯಾನಕ್ಕೆ ಬೇಕಿರೋದು
ನಿನ್ನ ಕಣ್ಣ ಹಣತೆಯ ತಿಳಿಬೆಳಕು....
ದಯವಿಟ್ಟು ನನ್ನ ಮನದ ಇರುಳಲ್ಲಿ ನೀನೊಮ್ಮೆ,
ಹಾಗೆಯೇ ಕಾರಣವಿಲ್ಲದೆ ಇಣುಕು//
ಕನಸ ಹೆಣ ಹೊತ್ತ ಮನದ ಬಂಡಿಯಲ್ಲಿ
ಕ್ಷಣ ಕ್ಷಣಕ್ಕೂ ಮಣದಷ್ಟು ಭಾರ ಹೆಚ್ಚುತ್ತಲೇ ಹೋಗುತ್ತಿದೆ...
ನಿಲ್ದಾಣ ಗೊತ್ತಿಲ್ಲ,
ಕಣ್ಣು ಹಾಯಿಸಿದಷ್ಟು ದೂರವೂ ನೀನೆಲ್ಲೂ ಕಾಣುತ್ತಿಲ್ಲ/
ಮೆಲ್ಲ ನಿನ್ನ ಮೆಲುನಗೆ ಕೇಳಿದಂತಾಯ್ತು...
ನಿನ್ನುಸಿರು ನನ್ನೆದೆಯ ಸವರಿದಂತಾಯ್ತು,
ನೀನಿರಲಿಲ್ಲ...ನಿನ್ನ ನೆನಪ ನೆರಳಿತ್ತು
ಸುತ್ತಲೂ ಮೌನ ಹರಡಿದ ಇರುಳಿತ್ತು//
ಮೌನದಲ್ಲೊಂದು ಕಂಪನ....
ಮಾತು ಹಣೆದ ಸಾಲುಗಳ ಹನಿ ಸಿಂಚನ,
ಅದು ನೀನೇನಾ?
ಇಲ್ಲಾ,ಬರೇ ನಿನ್ನ ನೆನಪುಗಳಷ್ಟೇನ?/
ಮುತ್ತಿನಂತ ಮಳೆಯ ಬಿಂದು...
ಸದ್ದಿಲ್ಲದೆ ಇಳೆಗಿಳಿದು ಬಂದು
ನನ್ನೆದೆಯನ್ನೂ ತೋಯಿಸಿದೆ,
ಸಂತಸದಲೆಯಲ್ಲಿ ಮನಸ ಮೀಯಿಸಿದೆ//
24 September 2011
Subscribe to:
Post Comments (Atom)
No comments:
Post a Comment