10 September 2011

ವಿಶ್ವರೂಪ"ದರ್ಶನ"....'ಅಗ್ರಹಾರ'ದಲ್ಲಿ ಇನ್ನೆರಡ್ ದಿನ!

ಎಲ್ಲಿ,ಯಾರಿಗೆ,ಏನಂತ ಚಾಲೆಂಜ್ ಮಾಡಿದ್ದರೊ ಯಾರಿಗೂ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೂ 'ಮೆಜೆಸ್ಟಿಕ್'ನಿಂದ 'ಕಲಾಸಿಪಾಳ್ಯ'ದವರೆಗೆ ಖಾಸಾ ದೋಸ್ತ್'ಗಳಾದ 'ಕರಿಯ'ರೊಂದಿಗೆ ಅಡ್ಡೆ ಹಾಕಿಕೊಂಡು ಅಡ್ಡಾಡುತ್ತಿದ್ದ ತೂಗುದೀಪ ದರ್ಶನ್'ರನ್ನ 'ಚಾಲೆಂಜಿಂಗ್ ಸ್ಟಾರ್'ಅಂತ ಕನ್ನಡಿಗರು ಒಪ್ಪಿಕೊಂಡು ಈಗಾಗಲೆ ದಶಕ ಕಳೆದುಹೋಗಿದೆ.ಕ್ರಮೇಣ 'ಕಾಸು ಕೊಟ್ಟರೆ ಕಾಚ ಹಾಕ್ಕೊಂಡು ನಟಿಸೋಕೂ ನಾನು ತಯಾರ್' ಎಂಬ ಅವರ 'ನಮ್ಮ ಪ್ರೀತಿಯ ಮಾಮು' ಶೈಲಿಯ ಡೈಲಾಗ್ ಕೇಳಿದ ಮೇಲೂ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡದೆ ಅವರನ್ನ ಇವತ್ತೂ 'ನಮ್ಮ ಪ್ರೀತಿಯ ರಾಮು' ಅಂತಲೆ ಆದರಿಸಿ ಅಪ್ಪಿಕೊಂಡಿರೋದಕ್ಕೂ ಈ ಶರತ್ತಿಲ್ಲದ ಅಭಿಮಾನವೆ ಕಾರಣ.ಆದರೆ ಕಳೆದೆರಡು ವರ್ಷಗಳಿಂದ ಅವರ ವಿಶ್ವರೂಪ'ದರ್ಶನ' ಕ್ರಮೇಣ ಆಗಾಗ ಪ್ರಕಟವಾಗೋದಕ್ಕೆ ಆರಂಭವಾದ ಮೇಲೆ ಮಾತ್ರ ಕನ್ನಡ ಚಿತ್ರರಸಿಕ ಒಳಗೊಳಗೆ ಕಂಗಾಲಾಗಿದ್ದ.



ಇತ್ತೀಚಿಗೆ ತೆರೆಯಾಚೆಗೂ ಪಕ್ಕಾ 'ಪೊರ್ಕಿ'ಯಾಗಿ ನಡೆದುಕೊಳ್ಳೋದನ್ನೆ ರೂಢಿ ಮಾಡಿಕೊಂಡಿದ್ದ ಈ ನಟ ಭಯಂಕರ ತನ್ನ ಪತ್ನಿ ವಿಜಯಲಕ್ಷ್ಮಿಯ ನೆಮ್ಮದಿಗೆ ಮಾತ್ರ ಆಗಾಗ 'ಸುಂಟರಗಾಳಿ'ಯಂತೆ ಧಾಳಿಯಿಡುತ್ತಿರೋದು ಮಾತ್ರ ಅಕ್ಷಮ್ಯ.ದರ್ಶನ್ ವಿಕಾರಗಳು ಮೊತ್ತಮೊದಲ ಬಾರಿಗೆ ಬಹಿರಂಗವಾದದ್ದು "ಕನ್ನಡ ಚಲನಚಿತ್ರರಂಗದ ವಜ್ರಮಹೋತ್ಸವ" ಸಮಾರಂಭದ ಹೊತ್ತಿಗೆ.ಅಂದು ಆ ಆಚರಣೆಯ ಹಿನ್ನೆಲೆಯಲ್ಲಿ ವಿವಿಧ ಲೇಖಕರಿಂದ ಚಿತ್ರರಂಗದ ಸಾಧಕರ ಬಗ್ಗೆ ಸುಮಾರು ಎಪ್ಪತೈದು ಪುಸ್ತಕಗಳನ್ನ ಬರೆಸಲಾಗಿತ್ತು.ದುರದೃಷ್ಟವಶಾತ್ ಅದರಲ್ಲಿ ಒಂದುಕಾಲಕ್ಕೆ ತಮ್ಮ ತೆರೆಯ ಮೇಲಿನ ಅಬ್ಬರದಿಂದ ಮಿಂಚಿಮರೆಯಾಗಿದ್ದ ಹಲವಾರು ಖಳನಾಯಕರ ಬಗ್ಗೆ ಒಂದು ಪುಸ್ತಕವೂ ಪ್ರಕಟವಾಗಿರಲಿಲ್ಲ,ವಾಸ್ತವವಾಗಿ ನೋಡಿದಾಗ ಅದೊಂದು ಕ್ರಿಯಾಲೋಪ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.ಆದರೆ ಅದರ ಬಗ್ಗೆ ದರ್ಶನ್ ತೋರಿದ ದುಂಡಾವರ್ತಿ ನಡುವಳಿಕೆ ಮಾತ್ರ ಹೇಸಿಗೆ ಹುಟ್ಟಿಸುವಂತದ್ದಾಗಿತ್ತು."ನಮ್ಮಪ್ಪನ ಬಗ್ಗೆ ಒಂದು ಬುಕ್ ಬರೆಸೊ ಯೋಗ್ಯತೆಯಿಲ್ಲದ ಅವರು ಸತ್ತರೂ ನಾನವತ್ತು ಮೇಕಪ್ ತೆಗೆಯಲ್ಲ ;ಚಿತ್ರೀಕರಣವನ್ನ ರದ್ದುಪಡಿಸಿ ಗೌರವಿಸಲ್ಲ" ಅಂತ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ನಂತರವೂ ಅಂದಿನ "ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿ"ಯ ಅಧ್ಯಕ್ಷ ರಾಗಿದ್ದ ಡಾ.ಜಯಮಾಲ ವಿರುದ್ದ ಈ ಕೇಡುಗಾಲಕ್ಕೆ ಸಿರಿ ಬಂದ ಹಾಗಿದ್ದ ಈ ಮದ'ಗಜ' ಟಿವಿ ಕ್ಯಾಮರಾಗಳ ಮುಂದೆ ಘೀಳಿಟ್ಟಿತ್ತು.ಸಾಲದ್ದಕ್ಕೆ ಕ್ಯಾಮರ ಮರೆಯಲ್ಲಿ ಆಪ್ತೆಷ್ಟರೊಂದಿಗೆ 'ತೀರ್ಥ'ಯಾತ್ರೆ ಮಾಡೋವಾಗ ಜಯಮಾಲರನ್ನ ಗಾಂಧಿನಗರದ ಶುದ್ಧ 'ಮಾತೃ'ಭಾಷೆಯಲ್ಲಿ ಹೀಯಾಳಿಸಿ ಮಾತನಾಡಿದ್ದನ್ನ ಕೇಳಿಸಿಕೊಂಡಿದ್ದರೂ ಸಹ ಅದನ್ನ 'ಆ ಕಿವೀಲಿ ಕೇಳಿ ಈ ಕಿವೀಲಿ ಬಿಟ್ಟು' ಕನ್ನಡಿಗರು ಕ್ಷಮಿಸಿ ತಮ್ಮ ದೊಡ್ಡತನ ಮೆರೆದಿದ್ದರು.



ಇನ್ನೂ ನಟನಾಗಿ ತಮ್ಮ ವೃತ್ತಿಬದುಕಿನ ತರುಣಾವಸ್ಥೆಯಲ್ಲಿದ್ದಾಗಲೆ ತಾವೇ ಪ್ರೀತಿಸಿದ್ದ ಸಂಬಂಧಿಕರ ಹುಡುಗಿ ವಿಜಯಲಕ್ಷ್ಮಿಯನ್ನ ಆಕೆ ಇನ್ನೂ ಬಿಇ ಪದವಿಯ ಆರನೆ ಸೆಮಿಸ್ಟರ್'ನಲ್ಲಿದ್ದಾಗಲೆ ಅವಸರಕ್ಕೆಬಿದ್ದವರಂತೆ ಮದುವೆಯಾಗಿದ್ದ ದರ್ಶನ್ ಸಂಸಾರಿಯೂ ಆಗಿದ್ದರು.ಆದರೆ ಅದಾಗಲೆ ತಲೆಗೇರಿದ್ದ ಖ್ಯಾತಿಯ ಅಮಲು ಹಾಗು 'ಸ್ಟಾರ್' ಪಟ್ಟ ದೊರಕಿಸಿ ಕೊಟ್ಟ ಕಾಸಿನ ಸಮೃದ್ಧತೆ ಅವರನ್ನ ಬಹುಬೇಗ ಅಡ್ಡದಾರಿಗೆ ತಿರುಗಿಸಿದ್ದು ಮಾತ್ರ ವಿಪರ್ಯಾಸ.2001ರ ಮೇ ತಿಂಗಳಲ್ಲಿ ಮದುವೆಯಾದ ನಂತರ ಕೆಲವು ವರ್ಷ ನೆಮ್ಮದಿಯಾಗಿದ್ದ ಅಥವಾ ಕನಿಷ್ಠ ಹಾಗೆ ನಟಿಸುತ್ತಿದ್ದ ವಿಜಯಲಕ್ಷ್ಮಿ ಮಗ 'ವಿನೀತ್' ಹುಟ್ಟಿದ ನಂತರ ಪೂರ್ತಿ ದಿಕ್ಕೆಟ್ಟರು.ಬಾಡಿಗೆ ಮನೆಯಲ್ಲಿದ್ದಾಗಲೆ ಪತ್ನಿಯಲ್ಲದೆ ಇನ್ನಿತರ 'ವನಿತೆ'ಯರನ್ನೂ ಒಲಿಸಿಕೊಂಡು ಅವರೊಂದಿಗೂ ಹೊತ್ತಲ್ಲದ ಹೊತ್ತಲ್ಲಿ ಖುಲ್ಲಂಖುಲ್ಲ 'ಜಾಲಿಹಾಡು' ಹಾಡೋಕೆ ಹೊರಟರೊ ವಿಜಯಲಕ್ಷ್ಮಿಗೆ ಪ್ರತಿಭಟನೆಗೆ ಇಳಿಯೋದು ಅನಿವಾರ್ಯವಾಯ್ತು.ಈ ಮೊದಲು ಬಿಟಿಎಂಲೇಔಟ್'ನಲ್ಲಿ ವಾಸವಾಗಿದ್ದ ದರ್ಶನ್ ರಾಜರಾಜೇಶ್ವರಿನಗರದ ಸ್ವಂತ ಮನೆಗೆ ವಾಸ್ತವ್ಯ ಬದಲಿಸಿದ ನಂತರ ಅವರ ಒಂದೊಂದೆ ವಿಕಾರಗಳು ಸ್ಪಷ್ಟವಾಗಿ ಬೆಳಕಿಗೆ ಬಂದವು.ಸಾಲದ್ದಕ್ಕೆ ಆ ವೇಳೆಗಾಗಲೇ ಪೋಲಿ'ಕಿಟ್ಟಿ'ಯಾಗಿದ್ದ ಮಗನ 'ಈ ಬಂಧನ'ದಿಂದ ಬೇಸತ್ತ ದರ್ಶನ್ ಅಮ್ಮ ಮೀನಾ ತೂಗುದೀಪ ಮರಳಿ ಮೈಸೂರಿಗೆ ವಾಸ್ತವ್ಯ ಬದಲಿಸಿ ತಮ್ಮ ಚಪಲಗಳ 'ದಾಸ'ನಾಗಿದ್ದ ಹಿರಿಮಗನ ನಂಟನ್ನ ಬಹುತೇಕ ಕಡಿದುಕೊಂಡಿದ್ದರು,ಇತ್ತ ತಮ್ಮ ದಿನಕರ್ ಕೂಡ ದರ್ಶನ್ 'ಬಾಸ್' ಇಸಂನಿಂದ ರೋಸತ್ತು ಪ್ರತ್ಯೇಕವಾಗಿದ್ದರು.ಇದೆಲ್ಲ ಒಳಗೊಳಗೆ ಗುಟ್ಟಾಗಿ ನಡೆದಿತ್ತು ಹೊರತಾಗಿ ಎಲ್ಲೂ ಬಹಿರಂಗಕ್ಕೆ ಬಂದಿರಲಿಲ್ಲ.ಹೀಗೆ 'ಅರಸನ ಅಂಕೆಯಿಲ್ಲದೆ ;ದೆವ್ವದ ಕಾಟವೂ ಕಳೆದು' ಸರ್ವತಂತ್ರ ಸ್ವತಂತ್ರನಾಗುತ್ತಿದ್ದಂತೆ ತಮ್ಮ ಚಿಲ್ಲರೆ ಶೋಕಿಗಳ ನಿಜ ದರ್ಶನವನ್ನ ವಿಜಯಲಕ್ಷ್ಮಿಗೆ ತೋರಲಾರಂಭಿಸಿದ ದರ್ಶನ್ ಅದನ್ನ ಪ್ರಶ್ನಿಸಿದಾಗಲೆಲ್ಲ ಮುಖಾಮೂತಿ ನೋಡದೆ ಪತ್ನಿಗೆ ಚೆಚ್ಚುವುದನ್ನು ರೂಢಿಸಿಕೊಂಡಿದ್ದರು.ಅಲ್ಲದೆ ಅದಾಗಲೆ ಅವರ ಬಾಳಿನಲ್ಲಿ 'ನಿಖಿತಾ'ಗಮನವೂ ಆಗಿದ್ದರಿಂದ "ಅಲ್ಲಿ ನಕ್ಕರೆ ನಿಖಿತ ;ಇಲ್ಲಿ ವಿಜಯಲಕ್ಷ್ಮಿಗೆ ಒದೆ ಖಚಿತ" ಎಂಬ ಸ್ಥಿತಿ ಸೃಷ್ಟಿಯಾಗಿ ಹೋಯ್ತು.ಸಾಲದ್ದಕ್ಕೆ ಸದಾ ಒಳಗೆ ಸೇರಿರುತ್ತಿದ್ದ 'ಪರಮಾತ್ಮ'ನ ಆಡಿಸಿದಂತೆ ಆಡುವ ದರ್ಶನ್ ಹೊರಪ್ರಪಂಚಕ್ಕೆ ಜೆಂಟಲ್'ಮ್ಯಾನಾಗಿಯೂ ಮನೆಯೊಳಗೆ ಮೆಂಟಲ್'ಮ್ಯಾನಾಗಿಯೂ ಏಕಕಾಲದಲ್ಲಿ ದ್ವಿಪಾತ್ರಾಭಿನಯದಲ್ಲಿ ಮಿಂಚುತ್ತಿದ್ದರು ಅನ್ನೋದು ಬಹಿರಂಗ ಗುಟ್ಟು!


ಈ ಹಿಂದೆಯೂ ಸಾಯಬಡಿದಿದ್ದ ದರ್ಶನ್'ರ ಕಾಟವನ್ನು ತುಟಿಕಚ್ಚಿ ಸಹಿಸಿಕೊಂಡಿದ್ದ ವಿಜಯಲಕ್ಷ್ಮಿ ಇದೀಗ ಸಿಡಿದು ನಿಂತಿದ್ದರೂ ಅದನ್ನ ಮತ್ತೆ ವ್ಯವಸ್ಥಿತವಾಗಿ ರಾಜಿ ಪಂಚಾಯತಿ ಮಾಡಿ ಮುಚ್ಚಿಹಾಕಲಾಗಿದೆ.ಕಳೆದ ಎಪ್ರಿಲ್ 14ರಂದು ಚಪ್ಪಲಿಯಿಂದ ಭೀಕರವಾಗಿ ನಡುರಾತ್ರಿಯಲ್ಲಿ ದರ್ಶನ್'ರಿಂದ ಹಲ್ಲೆಗೊಳಗಾಗಿ ನಟ್ಟನಡುರಾತ್ರಿಯಲ್ಲಿ ಮಗುವಿನೊಂದಿಗೆ ಮನೆಯಿಂದ ಹೊರ ತಳ್ಳಲ್ಪಟ್ಟಿದ್ದ ವಿಜಯಲಕ್ಷ್ಮಿ ಅದುಹೇಗೊ ಅರೆಪ್ರಜ್ಞಾವಸ್ಥೆಯಲ್ಲಿಯೆ ಆಟೋ ಹಿಡಿದು ನಾಗವಾರದಲ್ಲಿದ್ದ ನಟ ಶಿವರಾಜ್'ಕುಮಾರರ ಬಂಗಲೆ ತಲುಪಿ ಅವರ ಆಶ್ರಯ ಪಡೆದಿದ್ದರು.ಮೊದಲ ದಿನ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ದರ್ಶನ್ ಎರಡು ದಿನವಾದರೂ ಆಕೆಯ ಪತ್ತೆಯಾಗದ್ದರಿಂದ 'ಎಲ್ಲಾದರೂ ಸತ್ತುಗಿತ್ತು ಹೋದಳೇನೊ!' ಎಂದು ಹೆದರಿ ಕಂಗಾಲಾಗಿದ್ದ.ಕಡೆಗೆ ತನಗಿದ್ದ ಎಲ್ಲಾ ಸಂಪರ್ಕ ಬಳಸಿ ಹುಡುಕಾಡಿದಾಗ ಕಡೆಗೂ ಶಿವಣ್ಣನ ಮನೆಯಲ್ಲಿ ಪತ್ನಿ ಹಾಗು ಮಗನನ್ನ ಕಂಡು ಬಚಾವಾದೆ ಅಂತಂದುಕೊಂಡು ಅಂದು ಶಿವಣ್ಣನ ಕಾಲುಹಿಡಿದು ಕಾಡಿಬೇಡಿ ತನ್ನ ತಪ್ಪಿಗೆ ಪಶ್ಚಾತಾಪವಾಗಿರೋವಂತೆ ನಟಿಸಿ (ಎಷ್ಟಾದರೂ ಹುಟ್ಟು ನಟ!) ಅದು ಹೇಗೊ ವಿಜಯಲಕ್ಷ್ಮಿಯನ್ನ ಮರಳಿ ಮನೆಗೆ ಕರೆದುಕೊಂಡು ಬಂದಿದ್ದರು.ಆ ಸಲ ಆದ ಹಲ್ಲೆಯ ಭೀಕರತೆಗೆ ವಿಜಯಲಕ್ಷ್ಮಿ ಕಣ್ಣು ಕಳೆದುಕೊಳ್ಳುವ ಸ್ಥಿತಿಗೆ ತಲುಪಿ ಮರಳಿ ಚೇತರಿಸಿಕೊಂಡಿರುವುದೆ ಸಾಕ್ಷಿ.


ಇದರಲ್ಲೊಂದು ವ್ಯವಹಾರ ಸೂಕ್ಷ್ಮವೂ ಇದೆ.ಎಲ್ಲಾ ಭಾರತೀಯ ತಳಿಯ ಸಾಮಾನ್ಯ ಮನಸ್ಥಿತಿಯಂತೆ ತೆರಿಗೆ ವಂಚಿಸುವ ಘನಂದಾರಿ ಉದ್ದೇಶದಿಂದ ದರ್ಶನ್ ತನ್ನ ರಾಜರಾಜೇಶ್ವರಿ ನಗರದ ಸ್ವಯಾರ್ಜಿತ ಮನೆಯನ್ನೂ ಸೇರಿ ಕೆಲವೊಂದು ಸ್ಥಿರಾಸ್ಥಿಗಳನ್ನ ಪತ್ನಿಯ ಹೆಸರಿನಲ್ಲೆ ಮಾಡಿಟ್ಟಿದ್ದಾನೆ.ಈಗ 'ನಿಖಿತಾ'ಮೋಹದ ಬಲೆಯಲ್ಲಿ ಶಾಶ್ವತವಾಗಿ ಬಂಧಿಯಾಗಲು ಹೊರಟು ವಿಜಯಲಕ್ಷ್ಮಿಗೆ ಸೋಡಾಚೀಟಿ ಕೊಡಲು ಅವನಿಗೆ ಮನಸ್ಸಿದ್ದರೂ ಆಸ್ತಿಪತ್ರಗಳ ಒಡೆತನದ ವರ್ಗಾವಣೆ ಪತ್ರಕ್ಕೆ ವಿಜಯಲಕ್ಷ್ಮಿ ಸಹಿ ಹಾಕಲು ತಯಾರಿಲ್ಲ,ಇದರ ಸರಳಾರ್ಥವೆನೆಂದರೆ ಒಂದು ವೇಳೆ ಈ ಹಂತದಲ್ಲಿ ಕಾನೂನು ಪ್ರಕಾರ ವಿಚ್ಛೇದನ ಪಡೆದುಕೊಂಡರೂ ಅವೆಲ್ಲ ಜೀವಮಾನದ ಗಳಿಕೆಗೆ ಎಳ್ಳುನೀರು ಬಿಡಬೇಕು! ಈ ಸಂಕಟಕ್ಕೆ ದರ್ಶನ್ ಆಗಾಗ ತನ್ನ ಮಾನಸಿಕ ಸ್ತಿಮಿತ ಕಳೆದುಕೊಂಡು ವಿಜಯಲಕ್ಷ್ಮಿಯ ಬೆಂಡೆತ್ತುವುದು ಸಾಮಾನ್ಯ ಸಂಗತಿಯಾಗಿ ಹೋಗಿದೆ.ಜೊತೆಗೆ ಇದಕ್ಕೆ ನಿಕಿತಾಳ ಕುಮ್ಮಕ್ಕಿನ ಪಕ್ಕವಾದ್ಯವೂ ಸೇರಿ ವಿಜಯಲಕ್ಷ್ಮಿಯ ಬಾಳು ನಾಯಿಪಾಡಾಗಿ ಹೋಗಿದೆ.ತಾನು ಹೊಡೆಯೋದಲ್ಲದೆ ನಿಖಿತಾಳಿಂದ ದೂರವಾಣಿ ಕರೆ ಮಾಡಿಸಿ ಪತ್ನಿಯನ್ನ ಅವಾಚ್ಯವಾಗಿ ನಿಂದಿಸುವ ಹಾಗೆ ಮಾಡೋದು ಕೂಡ ದರ್ಶನ್ ಹಾಬಿಯಾಗಿ ಹೋಗಿದೆ.ಹಾಗಾದರೂ ಅವಳು ಮಣಿದು ಆಸ್ತಿ ಬಿಟ್ಟು ಪ್ರತ್ಯೇಕವಾಗಲಿ ಅನ್ನುವ ಒಳ ಆಸೆ.


ಈ ಪ್ರಕಾರವೆ ದೈಹಿಕ ಹಾಗು ಮಾನಸಿಕ ಹಿಂಸೆ ಪರಾಕೇಷ್ಟೆ ತಲುಪಿ ಕಳೆದ ಮೂರುವಾರದ ಹಿಂದೆ ವಿಜಯಲಕ್ಷ್ಮಿ ತಮ್ಮ ಸಹೋದರನ ಮನೆಗೆ ಹೋಗಿ ಈ ಎಲ್ಲಾ ಹಿಂಸೆಗಳಿಂದ ತಾತ್ಕಾಲಿಕವಾಗಿ ಬಚಾವಾಗಿ ನಿಟ್ಟುಸಿರುಬಿಟ್ಟಿದ್ದರು.ಆದರೆ ಈ ಅರಿಭಯಂಕರ ಈಗ ಮತ್ತೆ ಮೊನ್ನೆ ಸೆಪ್ಟೆಂಬರ್ 8ರ ಸಂಜೆ ಅವರ ಗೆಳತಿ ವಿದ್ಯಾರ ಮನೆಯಾಲ್ಲಿದ್ದಾಗ ವಿಜಯಲಕ್ಷ್ಮಿಯನ್ನ ಥೇಟ್ ತಮ್ಮಪ್ಪನ ಕಾಲದ ತೆರೆಯ ಮೇಲಿನ ಖಳಪಾತ್ರಗಳ ಪಡಿಯಚ್ಚಿನಂತೆ ಅಕ್ಷರಶಃ ಎತ್ತಾಕಿಕೊಂಡು ಹೋಗಿ ಗಾಜುಮುಚ್ಚಿದ ಕಾರಿನಲ್ಲಿಯೆ ತಾರಾಮಾರ ಬಾರಿಸಿ ಕಿವಿ ಹರಿದು-ಹಲ್ಲು ಮುರಿದು-ತಲೆಯೊಡೆದು ತಮ್ಮ ಉತ್ತರಕುಮಾರನ 'ಶೌರ್ಯ'ವನ್ನ ತೆರೆಯಾಚೆಗೂ ಪ್ರದರ್ಶಿಸಿದ್ದಾರೆ.ಇನ್ನು ತಾಳಲಾರೆ ಅಂತ ಪೋಲೀಸರ ಮೊರೆಹೊಕ್ಕ ವಿಜಯಲಕ್ಷ್ಮಿ ವಿಜಯನಗರದ "ಗಾಯತ್ರಿ ಆಸ್ಪತ್ರೆಯಲ್ಲಿ" ಚಿಕಿತ್ಸೆ ಪಡೆಯುತ್ತಿದ್ದಾರೆ' ದರ್ಶನ್ ವಿಜಯನಗರ ಪೋಲೀಸರ 'ಪೋಲಿ' ಅತಿಥಿಯಾಗಿ ಈಗ ಪರಪ್ಪನ "ಅಗ್ರಹಾರದಲ್ಲಿ ಮೂರುದಿನ..."ಕ್ಕೆ ಕಾಲ್'ಶೀಟ್ ಕೊಡದೆಯೂ ನಟಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಇದೆಲ್ಲದರ ನಡುವೆ ತಮ್ಮ 'ನವರಸ'ಗಳಿಂದ ತೆರೆಯ ಮೇಲೆ ಆ'ದರ್ಶ'ದ ಪುಕ್ಕಟೆ ಪಾಠ ಹೇಳುವ 'ರೆಬೆಲ್ ಸ್ಟಾರ್'ಗಳೆಲ್ಲ ಈಗ ದರ್ಶನ್ ನನ್ನ ರಿಪೇರಿ ಮಾಡೋದನ್ನ ಬಿಟ್ಟು ಬಲಿಪಶು ವಿಜಯಲಕ್ಷ್ಮಿಯ ತಲೆಯನ್ನೆ ಸವರಿ ಅವಳ ಪೂರ್ವದ ಪೊಲೀಸ್'ದೂರಿನ ಹೇಳಿಕೆ ಬದಲಿಸಲು ಒತ್ತಡತಂದು ಅನಂತರ ಮಾಧ್ಯಮಗಳ ಮುಂದೆ ದೇಶಾವಾರಿ ಹೇಳಿಕೆ ಕೊಟ್ಟು ಜಾಣತನ ಮೆರೆಯುತ್ತಿರೋದನ್ನ ನೋಡುತ್ತಿದ್ದರೆ 'ಆಚಾರ ಇರೋದು ಹೇಳೋದಕ್ಕೆ ;ಬದನೆ ಕಾಯಿ ಇರೋದು ತಿನ್ನೋದಕ್ಕೆ' ಎಂಬ ಹಚ್ಚ ಹಳೆಯ ಗಾದೆ ಮತ್ತೆ ನೆನಪಾಗಿ ಅಸಹ್ಯ ಉಕ್ಕುತ್ತದೆ."ಹ್ಯಾಟ್ರಿಕ್ ಹೀರೊ"ಗಳ ಸಂಭಾವಿತ ನಡುವಳಿಕೆ-ಹೃದಯವಂತಿಕೆಗಳಿಂದ ವಯಸ್ಸಿನಲ್ಲಿ ಮಾತ್ರ ಕೇವಲ ಅವರಿಂದ ಬಲಿತಿರುವ ಈ ಹೆಗ್ಗಣಗಳು ಕಲಿಯೋದು ಬೇಕಾದಷ್ಟಿದೆ.


ದರ್ಶನ್ ಖೈದಿ ನಂ 9000ನಾಗಿ ಗೆಟಪ್ ಚೇಂಜ್ ಮಾಡಿದ ಕುಕ್ಕೂಡಲೆ ಅವರ ಆಪದ್ಬಾಂಧವರಾಗಿ ಲಡಕಾಸಿ 'ಬುಲೆಟ್' ಏರಿ 'ಕರಿ ಚಿರತೆ'ಗಳಂತೆ ಪರಪ್ಪನ ಅಗ್ರಹಾರದ ಅಭಿಮಾನಿಗಳಿಗೆ ಧರ್ಮ'ದರ್ಶನ' ನೀಡಿದ್ದ 'ಲವ್ಲಿ ಸ್ಟಾರ್'ಗಳಿಗೂ ಮೇಲಿನ ಮಾತು ಅನ್ವಯಿಸುತ್ತದೆ ಎನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಯೇನೂ ಇಲ್ಲ. ಮತ್ತದೆ 'ಜೈಲುರೋಗ'ಕ್ಕೆ ದರ್ಶನ್ ಕೂಡ ಬಲಿಯಾಗಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನ ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಅವರಿಗೆ ಜಾಂಡೀಸ್ ಎಂದು ರೋಗ 'ಪತ್ತೆ ಹಚ್ಚಿ' ಹೃದ್ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಮೇಧಾವಿ ವೈದ್ಯರನ್ನ ಮೊದಲು ದರ್ಶನ್'ರನ್ನ ಸೇರಿಸಿದ್ದ 'ನಿಮಾನ್ಸ್'ಗೆ ತುರ್ತಾಗಿ ದಾಖಲಿಸುವ ಅಗತ್ಯವಿದೆ."ಕಾಂಚನಂ ಕಾರ್ಯಸಿದ್ಧಿ!"ಎನ್ನುವ ಇಂತಹ ರೋಗಿಷ್ಟ ಮನಸ್ಸುಗಳು ಕ್ರಿಯಾಶೀಲರಾಗಿರುವ ತನಕ ವಿಜಯಲಕ್ಷ್ಮಿಯಂತಹ ಹೆಣ್ಣುಮಕ್ಕಳು ನಿತ್ಯ ಹೀಗೆಯೆ "ಬಚ್ಚಲು ಮನೆಯಲ್ಲಿ ಕಾಲುಜಾರಿ ಬಿದ್ದು" ಕಿವಿ-ಹಲ್ಲು-ತಲೆ ಹರಿದು-ಮುರಿದು ಒಡೆದುಕೊಳ್ಳುತ್ತಲೆ ಇರುತ್ತಾರೆ,ನಾವೆಲ್ಲರೂ ಇದನ್ನ 'ತೆರೆಯ ಮೇಲೆ' ನೋಡಿ ಆನಂದಿಸುತ್ತಲೆ ಇರುತ್ತೇವೆ?!

No comments: