08 September 2011

'ಮಾಯಾ'ಜಾಲ...ದೇಶದ ದಿವಾಳ....!

ತನ್ನ ಅಡಾದುಡಿ ಅಹಂಕಾರದ ವಿರುದ್ಧ ಮಾತೆತ್ತಿದರೆ ಅಂತವರನ್ನ "ಮನುವಾದಿ..." ಅನ್ನೂ ಸ್ಟ್ಯಾಂಪ್ ಹಚ್ಚಿ ಚಿತ್ತು ಮಾಡಿಬಿಡುವ ಚಟ ಚಕ್ರವರ್ತಿನಿಯೂ,ಸದ್ಯ ಮುಖ್ಯಮಂತ್ರಿ ಅನ್ನುವ ಹೆಸರಿನಲ್ಲಿ ಸರ್ವಾಧಿಕಾರ ಚಲಾಯಿಸುತ್ತಾ ಇಡಿ ಉತ್ತರಪ್ರದೇಶ ರಾಜ್ಯವನ್ನೆ ತನ್ನ ಮೂರನೆದರ್ಜೆಯ ತೆವಲುಗಳಿಗಾಗಿ ಖಾಸಗಿ ಜಹಗೀರಿನಂತೆ ಅಡ್ಡಡ್ಡ ಹುರಿದು ಮುಕ್ಕುತ್ತಿರುವ ಮಾಯಾವತಿ ಎಂಬ ಸ್ಥ್ರೀರೂಪಿ ಬಫೂನ್ ಈಗ ಮತ್ತೆ 'ಬೋಳಿಸಿದರೂ ಬದಲಾಗದ ಹೀನಸುಳಿಯಂತೆ' ತನ್ನ ಮತ್ತವೆ ಮೂರುಕಾಸಿನ ಗಾಂಚಲಿಗಳಿಂದ ಆಗಬಾರದ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ತನ್ನ ನೇರವಂತಿಕೆಯಿಂದ ಆಷಾಡಭೂತಿ 'ಅಮೇರಿಕ'ದ ದಗಲುಬಾಜಿತನವನ್ನೆ ಸಕಲೆಂಟು ಅಮೇರಿಕ ಪ್ರಾಯೋಜಿತ ಕಿರುಕುಳಗಳಿಗೆ 'ಕ್ಯಾರೆ' ಅನ್ನದೆ ಬಟಾಬಯಲು ಮಾಡಿ ಅಲ್ಲಿನ ಆಳುವವರ ಮಾನವನ್ನ ಅಂತರ್ಜಾಲದ ಸಂತೆಯಲ್ಲಿ ಮುಲಾಜಿಲ್ಲದೆ ಪ್ರತಿನಿತ್ಯ ಹರಾಜು ಹಾಕುತ್ತಿರುವ ಜೂಲಿಯನ್ ಅಸ್ಸಾಂಜ್ ಈಗ 'ಆನೆ'ಬ್ರಾಂಡ್ ಮಾಯಾವತಿಯ ಮುಕುಳಿ ಬಾಯಿಯಿಲ್ಲದ ಬಡಬಡಿಕೆಗೆ ಬಲಿಯಾಗಿರುವ ಪುಣ್ಯಾತ್ಮ. ಸುಖಾಸುಮ್ಮನೆ ವಿಕಿಲಿಕ್ಸ್'ನ ನಿರ್ಲಿಪ್ತ ರಾಜತಾಂತ್ರಿಕ ಮಾಹಿತಿ ಸೋರಿಕೆಗೆ ಮತ್ತದೆ ತನ್ನ ಬುಡಭದ್ರವಿಲ್ಲದ ಹಳೆತರ್ಕದ ತಿರುಗೇಟು ನೀಡಲು ಹೋಗಿ ಮಾಯಾ ಎಂಬ ಕೇವಲ ಕೆಲವೆ ಹಿಂ'ಬಾಲಕ'ರ ಖಾಯಂ ''ಮೇಮ್'ಸಾಬ್'' ಹಾಸ್ಯಾಸ್ಪದವಾಗಿದ್ದಾರೆ.

"ಜೂಲಿಯನ್ ಅಸ್ಸಾಂಜ್ ಒಬ್ಬ ಹುಚ್ಚ ಅವನಿಗೆ ಮಾನಸಿಕ ಅಸ್ವಸ್ಥ್ಯತೆಗೆ ಚಿಕಿತ್ಸೆ ಕೊಡಿಸೋಕೆ ಅಲ್ಲಿನ ಸರಕಾರಕ್ಕೆ ಸಲಹೆ ಕೊಡ್ತೀನಿ!" ಅನ್ನುವ 'ಮಾಯಾ'ಜಾಲದ ತರ್ಕಕ್ಕೆ ಎಲ್ಲಿಂದ ನಗಬೇಕೊ ಯಾರಿಗೂ ಗೊತ್ತಾಗುತ್ತಿಲ್ಲ.ಸಾಲದ್ದಕ್ಕೆ "ಅವನೊಬ್ಬ ದಲಿತ ವಿರೋಧಿ! ಕೆಳವರ್ಗದ ಜನರ ಮಗಳಾದ ತನ್ನ ಏಳ್ಗೆಗೆ ಕುರುಬುವ ವಿರೋಧಪಕ್ಷಗಳ ಜೊತೆ ಶಾಮೀಲಾಗಿ ಮಾಡಿರೊ ಸಂಚಿನಂತೆ ಆತ ವ್ಯಥಾ ಈ ತರದ ಸುಳ್ಳುಗಳನ್ನ ಹಬ್ಬಿಸುತ್ತಿದ್ದಾನೆ! ಬೇಕಿದ್ದರೆ ಅವನನ್ನ 'ಆಗ್ರಾ'ದಲ್ಲಿರೊ ಹುಚ್ಚಾಸ್ಪತ್ರೆಗೆ ನಾನೆ ಸೇರಿಸ್ತೀನಿ!" ಅನ್ನುವ ಈ ಮತಿಭ್ರಾಂತೆಗೆ ಎಲ್ಲರಿಗಿಂತ ಮೊದಲು ಅಲ್ಲಿ ಅಡ್ಮಿಶನ್ ಯಾವತ್ತೂ ಸಿಗಬೇಕಿತ್ತಲ್ಲ(?) ಅಂತ ನಿಮಗೇನಾದರೂ ಅನಿಸುತ್ತಿದ್ದರೆ ಅದು ನಿಮ್ಮ ತಪ್ಪಲ್ಲ! ಆದರೂ ಅದನ್ನ ಬಾಯಿ ಬಿಟ್ಟು ಹೇಳೀರ ಮತ್ತೆ!,'ಮನುವಾದಿ' ಎಂಬ ಪಟ್ಟ ಬಿಟ್ಟಿಯಾಗಿ ನಿಮ್ಮ ತಲೆಗೇರೀತು ಹುಷಾರ್!! ತನ್ನ ಬಿಡುವಿರದ ಕೆಲಸ ಕಾರ್ಯಗಳ ನಡುವೆ ಮಾಯಾವತಿಯೆಂಬ ಚಿಲ್ಲರೆ ಶೋಕಿಯ ಮಹಿಳೆಗೆ ಪ್ರಾಮುಖ್ಯತೆ ಕೊಟ್ಟು ಪಿತೂರಿ ಮಾಡೋವಷ್ಟು ಬಿಡುವೇನಾದರೂ ಅಸ್ಸಂಜ್'ಗೆ ಇದ್ದಿದ್ದರೆ ಅಮೆರಿಕೆಗೆ ಆದ ಹೀನಾಪಮಾನದ ಮೂರುಪಟ್ಟು ಮಂಗಳಾರತಿ ಯಾವತ್ತೂ 'ಮಾಯಾ'ದರ್ಬಾರಿಗೂ ಆಗಿರುತ್ತಿತ್ತು ಅನ್ನೋದು ಬೇರೆಮಾತು!

"ಆಕೆಗೆ ವಿಪರೀತ ಚಪ್ಪಲಿಕೊಳ್ಳುವ ಖಯಾಲಿ ;ಅದಕ್ಕಂತಲೆ ತನ್ನ ಖಾಸಗಿ ವಿಮಾನವನ್ನ (ತನ್ನ ಹನಿ ಬೆವರನ್ನ ಸುರಿಸಿ ಮೂರುಕಾಸು ಸಂಪಾದಿ ಗೊತ್ತಿರದ ಈ ಘಟವಾಣಿ ಖಾಸಗಿ ವಿಮಾನವನ್ನ ಖರೀದಿಸಿದ್ದಾಳೆ ,ಥೇಟ್ ನಮ್ಮ ಹ'ರಾಮಿರೆಡ್ಡಿ' ತರ!) ಖಾಲಿಯಾಗಿ ಮುಂಬೈಗೆ ಕಳಿಸಿದ್ದಳು" "ಹಳೆ ಪಾಳೆಗಾರರ ತರಹ ಮನೆಯಲ್ಲಿ ಒಂಬತ್ತು (ಒಂಬತ್ತೆ ಏಕೊ? ಬಹುಷಃ 'ನ್ಯೂಮರಾಲಜಿ' ಇದ್ದೀತು!) ಅಡುಗೆ ಸಿಬ್ಬಂದಿ ಹೊಂದಿದ್ದಾಳೆ,ತಯಾರಾದ ಅಡುಗೆಯನ್ನ ಮೊದಲು ಅವರಲ್ಲೆ ಇಬ್ಬರಿಗೆ ತಿನ್ನಿಸಿ ಅದರಲ್ಲೇನೂ 'ವಿಷ' ಹಾಕಿಲ್ಲ(!) ಅನ್ನೋದನ್ನ ಖಚಿತಪಡಿಸಿಕೊಂಡು ಅನಂತರವಷ್ಟೆ ನಿತ್ಯ ಉಣ್ಣುತ್ತಾಳೆ" ಅಂತ ಆಕೆಯನ್ನ ಕಳೆದಬಾರಿ ತನ್ನ 'ಬ್ರಾಮಣ್-ಬನಿಯ-ದಲಿತ್' ಸೂತ್ರದ ಏರೇಣಿ ಹಾಕಿ ಅಧಿಕಾರದ ಅಟ್ಟ ಏರಿಸಿದ್ದ ಸತೀಶ್ ಮಿಶ್ರಾ ಅಮೇರಿಕದ ರಾಜತಾಂತ್ರಿಕರ ಹತ್ತಿರ ಖಾಸಗಿಯಾಗಿ ಬಾಯಿ ಬಿಟ್ಟದ್ದು,ಆ ಮಾಹಿತಿ ಯಥಾವತ್ ಕೇಬಲ್ ಮೂಲಕ ಹಿಲರಿ ಕ್ಲಿಂಟನ್ ಟೇಬಲ್ ತಲುಪಿತ್ತು.ಅದೆ ಈಗ ಅಸ್ಸಾಂಜ್ ಕೃಪೆಯಿಂದ ಜಗಜ್ಜಾಹೀರಾಗಿದೆ ಅಷ್ಟೆ! ಇದರಲ್ಲಿ ವಿಶೇಷವಾದರೂ ಏನಿದೆ?



ಉತ್ತರಪ್ರದೇಶದ ಮೂರುರಸ್ತೆ ಕೂಡುವಲ್ಲೆಲ್ಲ ತನ್ನ ಹಾಗು ತನ್ನ "ತಂದೆ ಸಮಾನ"ರಾದ (ಈ "ಸಮಾನ ಮನಸ್ಕ" ರೋಗ ಕರ್ನಾಟಕದಲ್ಲಷ್ಟೆ ಅಲ್ಲ,ಎಲ್ಲೆಲ್ಲೂ ಸರಿ 'ಸಮಾ'ನಾಗಿದೆ ಅನ್ನೋದು ನಿಮ್ಮ ಗಮನಕ್ಕೆ!) ಕಾನ್ಶಿರಾಮರ ಕಲ್ಲಿನ ಪ್ರತಿಮೆಗಳನ್ನ ನಾಚಿಕೆಯಿಲ್ಲದೆ ರಾಜ್ಯದ ಖಜಾನೆ ಖರ್ಚಿನಲ್ಲಿ ನಿಲ್ಲಿಸಿಕೊಂಡಿರುವ ಮಾಯಾವತಿಗೆ ಮೇಲಿನ ದೌಲತ್ತು ಕೂಡ ಇದೆ ಅನ್ನೋದು ಎಲ್ಲರಿಗೂ ಈಗಾಗಲೆ ಗೊತ್ತಿದೆ (ಈ 'ಮೂರ್ತಿ' ಮಹಾತ್ಮೆಯ ಸ್ಯಾಂಪಲ್ ನೋಡೋಕೆ ನೀವು ದೆಹಲಿ ಸಮೀಪದ ನೋಯ್ಡಾ ಹಾಗು ಘಾಜಿಯಾಬಾದ್'ಗಳಿಗೆ ಸಂಜೆ ತಂಪುಹೊತ್ತಲ್ಲಿ 'ತೀರ್ಥ'ಯಾತ್ರೆ ಮಾಡಿದರೂ ಸಾಕೆಸಾಕು!).ತನ್ನ ಪಕ್ಷದ ಬಹಿರಂಗಸಭೆಯಲ್ಲಿ ಭರ್ಜರಿ ನೋಟಿನ ಹಾರವನ್ನೆ ಹಾಕಿಕೊಂಡು ಮೆರದಾಡಿದ್ದ (ಆ ಹಾರದಲ್ಲಿ ಒತ್ತೊತ್ತಾಗಿದ್ದ ನೋಟುಗಳ ಒಟ್ಟು ಮೌಲ್ಯ ಕೇವಲ ಇಪ್ಪತ್ತೆ ಕೋಟಿಗಳು!) ಹಾಗು ಅದನ್ನ ಮೂರೂ ಬಿಟ್ಟವರಂತೆ 'ಅಭಿಮಾನಿಗಳು ಕೊಟ್ಟದ್ದು' ಎಂದು ಸಮರ್ಥಿಸಿಕೊಂಡಿದ್ದ (ಹಾಗೆ ನೋಡಿದರೆ ಅವರಿರೊ ಮನೆ-ಕಾರು-ವಿಮಾನ ಎಲ್ಲಾ ಅವರ ಅಭಿಮಾನಿಗಳೆ ಕೊಟ್ಟದ್ದಂತೆ! ಮೇಡಂ ಹೆಸರಿನಲ್ಲಿ ಚಿಕ್ಕಾಸು ಇಲ್ಲವಂತೆ ಎಲ್ಲಾ ಪಕ್ಷದ್ದೇ ಅಂತೆ!! ಹಾಗೆಂದರೆ ಏನು ಅಂತ ತಲೆತುರಿಸಿಕೊಳ್ಳಬೇಡಿ ಬಿಡಿ ಅತ್ಲಾಗೆ!) 'ಮಾಯಾ'ಬಜಾರಿನಲ್ಲಿ ಮೇಲಿನದ್ದು ನಡೆದಿದ್ದರೆ ಅದನ್ನ ಮುಕ್ತಾರ್ ಅಬ್ಬಾಸ್ ನಕ್ವಿಯಾಗಲಿ-ಸತೀಶ್ ಮಿಶ್ರಾ ಆಗಲಿ ಆಡಿಕೊಂಡಿದ್ದರೆ ಅತಿಶಯೋಕ್ತಿಯಾದರೂ ಏನಿದೆ?


"ಚಪ್ಲಿ ತರೋಕೆ ವಿಮಾನ ಕಳಿಸಿದ್ದು ನನಗಂತೂ ಗೊತ್ತಿಲ್ಲ! ಬಹುಷಃ ನಕ್ವಿ ಹಾಗು ಅಸ್ಸಾಂಜ್ ಅದರಲ್ಲೆ ಹೋಗಿದ್ರೇನೋ!" "ಇನ್ನು ನನ್ ಅಡುಗೆ ಮನೇಲೂ ಅಷ್ಟ್ ಜನ ಇರೋದು ಗೊತ್ತೇ ಇಲ್ಲ!! ಬಹುಷಃ ಅವರಿಬ್ರೂ ಅಲ್ಲೆ ಮೂಲೆಲೆಲ್ಲೊ ಪಾತ್ರೆ ಉಜ್ಕೊಂಡು ಬಿದ್ದಿದ್ರೇನೋ" ಎಂಬ 'ಮಾಯಾ'ಪ್ರಲಾಪ ಆಕೆಯ ಬಗ್ಗೆ ಅನುಕಂಪವನ್ನಷ್ಟೆ ಹುಟ್ಟಿಸೀತು ಅಷ್ಟೆ.

ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಕನ್ನಡ ಹಾಗು ಕನ್ನಡನಾಡಿನಿಂದ ಪ್ರಕಾಶಿತವಾಗುವ ಇತರ ಭಾಷೆಗಳ ದಿನಪತ್ರಿಕೆ ಹಾಗು ನಿಯತಕಾಲಿಕೆಗಳಲ್ಲಿ "ಮಾನ್ಯವರ ಕಾನ್ಶಿರಾಂ ಜಯಂತಿ'ಯ ನೆಪದಿಂದಲೊ ಇಲ್ಲವೆ "ಶಾಹು ಮಹಾರಾಜ್" ಅಥವಾ "ಬಾಬಾ ಸಾಹೇಬ್ ಅಂಬೇಡ್ಕರರ ಜನ್ಮದಿನ"ದ ನೆಪದಲ್ಲಿಯೊ ಮಾಯಾವತಿ ಪುಟಗಟ್ಟಲೆ ಜಾಹಿರಾತು ನೀಡುತ್ತಿರೋದು ನಿಮ್ಮ ಗಮನಕ್ಕೆ ಬಂದಿರಲಿಕ್ಕೆ ಸಾಕು.ಉತ್ತರಪ್ರದೇಶ ಸರಕಾರದ ಸಾಧನೆಗಳ ಶಂಖ ಊದುವ ಸದರಿ ಜಯಂತಿ ಮಾರುವೇಷದ ಜಾಹಿರಾತಿನ ತುಂಬಾ "ಬಹುಜನ ಸಮಾಜಪಕ್ಷ"ದ ಬಡಾಯಿಯೆ ತುಂಬಿರುತ್ತದೆ.ಕರುನಾಡಲ್ಲೂ ತನ್ನ ಕ್ಯಾಕ್ಟಸ್ ಹಬ್ಬಿಸುವ ಹುನ್ನಾರವಿದು.ಅಚ್ಚರಿಯೆಂದರೆ ಇದಕ್ಕೆ ಪಾವತಿಯಾಗೋದು ಮಾತ್ರ ಮಾಯಾವತಿಯ "ಆನೆ"ಪಕ್ಷದ 'ಅಭಿಮಾನಿ'ಗಳು ಕೊಡೊ ರೋಖಡಾ ಅಲ್ಲ ಬದಲಾಗಿ ಬಡತೆರಿಗೆದಾರ ಪಾವತಿಸಿದ ಆ ರಾಜ್ಯದ ಖಜಾನೆಯ ಬಾಬ್ತಿನಿಂದ!


ಅಷ್ಟಕ್ಕೂ ಎಲ್ಲಾ ರಾಜಕಾರಣಿಗಳಂತೆ ಸಮಯಸಾಧಕತನದಲ್ಲಿ ಮುಂಚೂಣಿಯಲ್ಲಿರುವ ಈ ಲೇಟೆಸ್ಟ್ ಹಿಡಿಂಬಿ ಮೊದಲು ಅಧಿಕಾರದ ಸವಿ ಉಂಡದ್ದು ಅದೆ ಮನುವಾದಿಗಳೊಂದಿಗಿನ 'ಅನೈತಿಕ ಸಂಬಂಧ'ದಿಂದ ಅನ್ನೋದು ಸ್ವತಃ ಅಕೆಗಾದರೂ ನೆನಪಿದೆಯೊ ಇಲ್ಲವೊ? ಅದತ್ಲಾಗಿರಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಹ'ರಾಮ'ರ ಕಪಿಪಕ್ಷಕ್ಕೆ ಬಲಿಯಾಗಿ ನರಳುತ್ತಿರೋದರಲ್ಲಿ ಮಾಯಾ ಪಾತ್ರವಿದೆ ಅನ್ನೋದಾದರೂ ನಿಮಗೆ ಗೊತ್ತ? ಸುಲಭವಾಗಿ ಜಾತ್ಯತೀತ ಶಕ್ತಿಗಳು ಗೆಲ್ಲಬಹುದಾಗಿದಾ 64 ಕ್ಷೇತ್ರಗಳಲ್ಲಿ ತನ್ನ ಚಿಲ್ಲರೆ ರಾಜಕೀಯ ಆಟ ಆಡಿ 'ಮನುವಾದಿ' ಪಕ್ಷದ ಕ'ಮಲ'ವನ್ನ ಕರ್ನಾಟಕಕ್ಕೆ ಅಭಿಷೇಕಮಾಡಿಸಿದ ಪುಣ್ಯ 'ಮಾಯಾ'ಮಂಗಾಟಕ್ಕೆ ಸಲ್ಲಬೇಕು.ಅವಷ್ಟೂ ಕ್ಷೇತ್ರಗಳಲ್ಲಿ ತಾನು ಕಸಿದ ಮತಗಳು ಕಡೇಪಕ್ಷ 'ಕೈ' ಕೊಡೋವವರಿಗೊ.ಇಲ್ಲ'ತೆನೆಹೊತ್ತ ರೈತ ಮಹಿಳೆಗೂ' ಬಿದ್ದಿದ್ದರೆ ಬಹುಷಃ ಕರ್ನಾಟಕದ ಭವಿಷ್ಯ ಈಗಿನಷ್ಟು ಕೆಟ್ಟು ಕೆರ ಹಿಡೀತಿರ್ಲಿಲ್ಲ ಅನ್ನಿಸುತ್ತೆ.ಕನಿಷ್ಠ ಮುಂಬರುವ ಚುನಾವಣೆಗಳಲ್ಲಂತೂ ನಾವು ಕನ್ನಡಿಗರು ಇಂತಹ ಪೀಡೆಗಳ 'ರಹಸ್ಯ' ಹುನ್ನಾರದ ಬಗ್ಗೆ ಎಚ್ಚರವಹಿಸಿ ಅವರ "ಆನೆ ಮಾರ್ಕ್" ನೀಲಿಚಿತ್ರದ(?) ಪಾರ್ಟಿಯನ್ನ ಒಂದೂ ಮತ ಹಾಕದೆ ಒದ್ದೋಡಿಸಬೇಕು.ಇಲ್ಲದಿದ್ದರೆ ಖಂಡಿತ ರಾಜ್ಯಕ್ಕೆ ಉಳಿಗಾಲವಿಲ್ಲ ಅನ್ನೋದು ನೆನಪಿನಲ್ಲಿರಲಿ,ಅಪ್ಪಿತಪ್ಪಿ ಅವರ ಕೈಗೆನಾದರೂ ಅಧಿಕಾರ ಸಿಕ್ಕರೆ ನಾಳೆ ನಮ್ಮ ಹಣವನ್ನು ಇನ್ಯಾವುದೊ ಕಂಡು ಕೇಳರಿಯದ ರಾಜ್ಯದಲ್ಲಿ ತಮ್ಮ ಬೊಂಬಡಾ ಬಜಾಯಿಸುವ ಶೋಕಿಗೆ ಮರ್ಯಾದೆ ಇಲ್ಲದೆ ನಮ್ಮ ಸರಕಾರಿ ಖಜಾನೆಯನ್ನೂ ದೋಚಿ ಖರ್ಚು ಮಾಡೋಕೂ ಹೇಸುವ ಜನ ಅವರಲ್ಲ.ಇಷ್ಟು ಸಾಲದು ಅಂತ 'ಮಾಯಾ'ಮ್ಮನ ಕಾಲು ಹಿಡಿದು ಅಸ್ಸಾಂಜ್ ಕ್ಷಮೆ ಬೇರೆ ಕೋರಬೇಕು ಅಂತ ಸ್ವತಹ ಶಾಹಿ ಇಮಾಂ ಬುಕಾರಿಯ ಪಡಿಯಚ್ಚಿನಂತೆ 'ಮಾಯಾ'ಜ್ಞೆ ಬೇರೆ ಹೊರಡಿಸಲಾಗಿದೆ ( ಅಸ್ಸಾಂಜ್ ಇದಕ್ಕೆ ಸೊಪ್ಪು ಹಾಕದೆ ಇನ್ನಷ್ಟು ಗೇಲಿ ಮಾಡಿದ್ದಾನೆ ಅನ್ನೋದು ಬೇರೆಮಾತು!) ಹಾಗೆಲ್ಲ "ಮಾಯಾ"ಸ್ಥಾನದಲ್ಲಿ ಬಂದು ಉರುಳುಸೇವೆ ಮಾಡಿ ಹೇಳುವ ಮೊದಲೆ ಮುಜುರೆಯೊಪ್ಪಿಸಿ ದೊರೆಸಾನಿ ಕಾಲು ನೆಕ್ಕೋಕೆ ಜೂಲಿಯನ್ ಅಸ್ಸಾಂಜ್ ಏನು ಮಾರಸಂದ್ರ ಮುನಿಯಪ್ಪನ? ಈ 'ಕಾಮಿಡಿ ಟೈಮ್ ಲೇಡಿ'ಯನ್ನ ಯಾವ ಹುಚ್ಚಾಸ್ಪತ್ರೆಗೆ ಸೇರಿಸೋದು ಕಾನ್ಷಿ'ರಾಮಾ'?!

No comments: