15 September 2011

ಬೋಳಿಸಿದರೂ ಬಿಟ್ಟು ಹೋಗದ ಬಹಿಷ್ಕಾರದ ಮಾರಿ...ಇದು ಮುನಿಯನ'ಮಾದರಿ'!....

'ವಿಜಯಲಕ್ಷ್ಮಿ ಮುಂದಿನ ಜನ್ಮದಲ್ಲಿ ನನ್ನ ತಂಗಿಯಾಗಿ ಉಟ್ಟಲಿ!" ಅಂತ ನಿರ್ಮಾ'ಪೆಕರರ' ಸಂಘದ ಅಧ್ಯಕ್ಷ 'ಮನಿ'ರತ್ನ ಅಲಿಯಾಸ್ ಕಾರ್ಪೊರೇಟರ್ ಕಂ ಮುನ್ಸಿಪಾಲ್ಟಿ ಮೆಂಬರ್ ಮುನಿರತ್ನಂ ನಾಯ್ಡು ಅಂದದ್ದು ಥೇಟ್ ಅಳಿದೂರಿಗೆ ತೆನೆ ಹೊರೋಕೆ ಉಳಿದ "ಪಿತೃಪಕ್ಷ"ದ ದೇವೇಗೌಡರ 'ಮುಂದಿನ ಜನ್ಮದಲ್ಲಾದರೂ ನಾನು ಮುಸ್ಲೀಮನಾಗಿ ಹುಟ್ಟಬೇಕು' ಎನ್ನುವ ಇಫ್ತಿಹಾರ್'ಕೂಟದ ಇನ್ಸ್ಟೆಂಟ್ ಉದ್ಗಾರದ ಪ್ರತಿಧ್ವನಿಯೇ ಕೇಳಿ ಬಂದಂತಾಗಿ ಕನ್ನಡಕುಲಕೋಟಿ ಈ ಕೋತಿಗಳ ದಿನಕ್ಕೊಂದು ಮಂಗ್ಯಾಟ ನೋಡಿ ಪಕಪಕನೆ ನಗುವ ಜೊತೆಜೊತೆಗೆ,ಈ ಮೇಲಿನ ಮಾತಿನಷ್ಟೆ ಅಸ್ಪಷ್ಟವಾಗಿ ಸರಿಯಾದ ಅಡ್ರಸ್ಸೆ ಇಲ್ಲದ-ಯಾರಿಗೆಂದು ತಿಳಿಯದಂತೆ ಈ ಅಧ್ಯಕ್ಷರು ಬರೆದು ಮಾಧ್ಯಮಗಳ ಮುಂದೆ ಬಿಸಾಕಿರುವ ಕ್ಷಮಾಪಣೆ ಪತ್ರದಲ್ಲಿ ಆಗಿರುವ ಕಸ್ತೂರಿ ಕನ್ನಡದ ಕಗ್ಗೊಲೆಯನ್ನ ನೋಡಿ ಕಂಗಾಲಾಗಿದ್ದಾರೆ!


'ಇದು ದರ್ಮಸ್ತಳ ಮಂಜು'ನಾತ'ಸ್ವಾಮಿ ನೆನ್ನೆ ನನ್ನ ಕನಸಿನಲ್ಲಿ ಬಂದು ಏಳಿದ್ದು...' ಎಂದು ಆರಂಭವಾಗಿ '...ಇದೆ ರೀತಿ ನೂರು ಜನರಿಗೆ ನಾಳೆಯೆ ಕಾಗಜ ಬರೆದು ಆಕದಿದ್ದರೆ ರಕ್ತಕಾರಿ ಸಾಯುತ್ತಿರಿ....!' (ಇರಬೇಕಾದ ಕಡೆ ಅಲ್ಪವಿರಾಮ,ಒತ್ತಕ್ಷರ,ಪೂರ್ಣವಿರಾಮ ಇವ್ಯಾವುದರ ಹಂಗೂ ಇಲ್ಲದೆ ಓತಪ್ರೋತವಾಗಿ ಬರೆದ ಇಂತಹ ಪತ್ರವನ್ನ ಮೊದಲ ಬಾರಿಗೆ ಓದುವಾಗಲೆ ;ಅದನ್ನೋದಿದ ನಾವು ಅನೇಕ ಬಾರಿ ರಕ್ತಕಾರುವ ಸ್ಥಿತಿಗೆ ತಲುಪಿ ಬಹಳ ಕಷ್ಟದಿಂದ ಬದುಕಿ ಬಂದಿರುತ್ತೇವೆ! ಅಂತದ್ದರಲ್ಲಿ ದಿನಾ ಇಂತದ್ದೆ ನೂರು ಜನರನ್ನ ಹಿಡಿದು ಬಲಿ ಹಾಕುತ್ತ ನಿರಂತರ ರಕ್ತಕಾರಿ ಸಾಯುತ್ತಿರಿ" ಎಂಬ ಕೊನೆ ಸಾಲಿನ ಶಾಪ ಬೇರೆ ಕೇಡು!) ಹೀಗೆ ತಪ್ಪುತಪ್ಪು ಕನ್ನಡದಲ್ಲಿ ಅದೆಲ್ಲಿಂದಲೊ ಬರುವ ಆಕಾಶ(ಹ)ರಾಮರ ಬೆಂಬಿಡದ ಬೆದರಿಕೆ ಪತ್ರಗಳ ಪಡಿಯಚ್ಚಿನಂತಿದ್ದ 'ಕನ್ನಡೆಮ್ಮೆಯ ಪುರಾತನ ಕರು' ಮುನಿಯನ ಅದೆ ಮಾದರಿ ಪತ್ರದ ಸಾರಾಮೃತ ಇಷ್ಟು.


"ಕನ್ನಡದ ಉತ್ತಮ ಸಂಪ್ರದಾಯಸ್ತ ,ಗೌರವಸ್ತ,ಸಾದ್ವಿ,ಸದ್ಗುಣ ಸಂಪನ್ನೆ,ಕಳಂಕ ರಹಿತೆ,ಹಾಲಿನಂತ ಮನಸ್ಸುಳ್ಳವರ ಸಮಾನರಾದ ಬಾರತದ ಬಹು ಬಾಷಾ ನಟಿ ನಿಕಿತಾ ರವರಿಗೆ ಕನ್ನಡ ಚಿತ್ರದಲ್ಲಿ 3 ವರ್ಷ ನಟಿಸಬಾರದು ಎಂದು ಅಂದದ್ದು ನಮ್ಮ ಮೂರ್ಕತನ.
ಇಷ್ಟು ಒಳ್ಳೆಯ ಹೆಣ್ಣು ಮಗಳಿಗೆ ನಿಷೇದ ಏರಿರುವುದು ತಪ್ಪು ಎಂದು ನಮಗೆ ಅರಿವಾಗಿದೆ.
ಕಾರಣ ಏನೆಂದರೆ ಹಲವಾರು ಬುದ್ದಿ-ಜೀವಿಗಳು ನಿಷೇದ ಏರಿರುವುದು ತಪ್ಪು,
ಹಿಂತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿರುತ್ತಾರೆ.
ಇದು ಸ್ವತಂತ್ರ ಬಾರತ,ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು.ಬರ ಬಹುದು ಅದನ್ನು ತಡೆಯಲು ನಾವು ಯಾರು?
ಇನ್ನುಮುಂದೆ ನಟಿ ನಿಕಿತಾ ರವರು ಕರ್ನಾಟಕದಲ್ಲಿ ಎಲ್ಲಿಗೆ ಬೇಕಾದರೂ ಹೋಗ ಬಹುದು,
ಯಾವ ಚಿತ್ರದಲ್ಲಿ ಬೇಕಾದರೂ ನಟಿಸಬಹುದು ನಮ್ಮ ಅಬ್ಯಂತರವಿರುವುದಿಲ್ಲ.
ಹಿರಿಯ ನಿರ್ಮಾಪಕರು ಹಾಗು ನಮ್ಮ ತಾಯಿಯ ಸಮಾನರಾದ ಶ್ರೀಮತಿ ಪಾರ್ವತಮ್ಮ ರಾಜ್'ಕುಮಾರ್'ರವರು ಕೆಲ ಕಿವಿಮಾತು ಹೇಳಿರುತ್ತಾರೆ.
ಮಕ್ಕಳು ತಪ್ಪು ಮಾಡುವುದು ಸಹಜ ಅದನ್ನು ತಿದ್ದುವುದು ತಾಯಿಯ ಕರ್ತವ್ಯ,ನಾವು ದುಡುಕಿರುವುದು ತಪ್ಪು ಎಂದು ಅಮ್ಮ ಕಿವಿ ಹಿಂಡಿ ಹೇಳಿದ್ದಾರೆ.ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿ ಬ್ಯಾನ್ ಎಂಬ ಪದಕ್ಕೆ ಇಂದಿನಿಂದ ಬ್ಯಾನ್ ಮಾಡಲಾಗಿದೆ.
ಕೆಲ ಗಾಂಬೀರವಾದ ವಿಷಯಗಳನ್ನು ಕಲಾವಿದರಾ ಸಂಗದಲ್ಲಿ ಚರ್ಚಿಸಿ, ಬಗೆಹರಿಸಿಕೊಳ್ಳಲಾಗುತ್ತದೆ.
ಮುಂದಿನ ಜನ್ಮವೆಂಬುದು ಇದ್ದರೆ, ಶ್ರೀಮತಿ ವಿಜಯಲಕ್ಷ್ಮಿ ನನ್ನ ತಂಗಿಯಾಗಿ ಹುಟ್ಟಿ ಬರಲಿ ಎಂದು ನಾನು ಆ ಬಗವಂತನಲ್ಲಿ ಪ್ರಾರ್ತಿಸುತ್ತೇನೆ"
ಹೀಗೆ ಲಂಗುಲಾಗಮಿಲ್ಲದ ತಮ್ಮ 'ನಡು'ಗನ್ನಡದಲ್ಲಿ 'ಉಟ್ಟು' ಉಗ್ರ'ಖನ್ನಡ ಓರಾಟ'ಗಾರರಿಗೆ ಸವಾಲೆಸೆಯುವಂತೆ ಪತ್ರ ಬರೆದ ಮುನಿರತ್ನಂರಿಗೆ ಅವರೆ ಹಾಲಿ ಸದಸ್ಯರಾಗಿರುವ ಬೆಂಗಳೂರು ಮುನಿಸಿಪಾಲ್ಟಿಯ 'ಕೆಂಪೇಗೌಡ' ಪ್ರಶಸ್ತಿಗೆ ಅವರ ಈ ಪತ್ರವನ್ನೋದಿದ ಮಹನೀಯರೆಲ್ಲ ಶಿಫಾರಸ್ಸು ಮಾಡಬಹುದು.


ಮಾತೆತ್ತಿದರೆ ಕಟ್ಟೆ ಪಂಚಾಯತಿ 'ಖೊಮೇನಿ'ಗಳ ಹಾಗೆ ತಮ್ಮ ಅರೆಬೆಂದ ತೀರ್ಪಿಗೆ ಎದುರಾಡಿದವರನ್ನೆಲ್ಲ ನೈಟಲ್ಲಿ ನೈಂಟಿ ಏರಿಸಿದಷ್ಟೆ ಸಹಜವಾಗಿ ಬ್ಯಾನ್ ಮಾಡಿ ಬಿಸಾಕುತ್ತಿದ್ದ ನಿರ್ಮಾಪಕರ ಸಂಘ ಈ ಹಿಂದೆಯೂ ಈ ತರಹದ ನಿಷೇಧಗಳನ್ನ ಹೇರಿ ಹೆಸರು ಕೆಡಿಸಿಕೊಂಡಿದೆ.ಈ ಬಾರಿಯ "ನಿಖಿತಾ ನಿಷೇಧ ಪ್ರಕರಣ"ದ ನಂತರ ರಟ್ಟೆಗಾತ್ರದ ಮೀಸೆಬಿಟ್ಟ 'ರೆಬೆಲ್'ರಿಂದ ಹಿಡಿದು ಬೆಲ್ಲೇ ಆಡಿಸಲಾಗದ ಚಿಲ್ಲರೆಪಲ್ಲರೆ ಸ್ಟಾರ್'ಗಳವರೆಗೂ ಎಲ್ಲರೂ ಬಾಯಿಗೆ ಬೆರಳಿಟ್ಟುಕೊಂಡು ಚೀಪುತ್ತಾ ಚಂದ ನೋಡುತ್ತಿದ್ದಾಗ ಮೊತ್ತಮೊದಲಿಗೆ "ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಡುತ್ತೆ ಅಂತಾರೆ,ಹೀಗೆ ಆಗಿದೆ ಈ ನಿರ್ಮಾಪಕರ ದೌಲತ್ತು!" ಎಂದು "ಎತ್ತಿಗೆ ಜ್ವರಬಂದರೆ ಎಮ್ಮೆಗೆ ಬರೆಯಿಡು"ವಂತಿದ್ದ ಈ ಅಂಧಾದರ್ಬಾರಿನ ವಿರುದ್ಧ ಧ್ವನಿ ಎತ್ತಿದ್ದವರು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಡಾ,ಜಯಮಾಲ ಮಾತ್ರ,

ನಂತರ ನಿಖಿತ ಪರವಾಗಿ ಅವರ ಹೇಳಿಕೆಗೆ ಬೆಂಬಲದ ದನಿಗೂಡಿಸಿದವರು ನಟಿ ಪ್ರಿಯಾಹಾಸನ.ರಾಜ್ಯದಾದ್ಯಂತ ಸ್ತ್ರೀಪರ ಸಂಘಟನೆಗಳು ಈ ದಬ್ಬಾಳಿಕೆಗೆ ವಿರೋಧ ವ್ಯಕ್ತಪಡಿಸಿದವು,ಸ್ತ್ರೀವಾದಿಗಳು ಇದನ್ನ ಅನ್ಯಾಯವೆಂದು ಸಾರ್ವಜನಿಕವಾಗಿ ಜರೆದರು ಇಷ್ಟಾದರೂ ತಮ್ಮ ಸಹುದ್ಯೋಗಿಯ ಆದ ಈ ಅನ್ಯಾಯಕ್ಕೆ ಚಿತ್ರರಂಗಕ್ಕೆ ಸಂಬಂಧಿಸಿದ ಯಾವೊಬ್ಬ ಮಹಿಳಾಮಣಿಯೂ ನ್ಯಾಯ ಕೇಳುವ ಮಾತನಾಡುವ ಧೈರ್ಯ ಪ್ರಕಟಿಸಲೆ ಇಲ್ಲ.ಕಡೆಗೂ 'ಹೆಡ್ದಾಫೀಸಿನ' ಕೆಂಪು ಸಿಗ್ನಲ್ ಕಾಣಸಿಕ್ಕಿದ್ದೆ ತಡ ನಾಮುಂದು ತಾಮುಂದು ಅಂತಾ ತಾರಾ,ರಮ್ಯ ಹೀಗೆ ಪ್ರತಿಯೊಬ್ಬರೂ ತಮ್ಮ "ಬೆಂಬಲ ಬೆಲೆ" ಏರಿಸತೊಡಗಿದರಲ್ಲ ಚಿತ್ರಣ ಕೊಂಚಕೊಂಚವೆ ಬದಲಾಗತೊಡಗಿತು.

ಹೀಗೆ ಬ್ಯಾನ್ ಮಾಡೋದನ್ನೆ ಕುಲಕಸುಬು ಮಾಡಿಕೊಂಡಿರುವ ಜಾಮಿಯ ಮಸೀದಿಯ 'ಫತ್ವಾ ಪ್ರಿಯ' ಶಾಹಿ-ಇಮಾಂ-ಬುಖಾರಿಗೆ 'ಬ್ಯಾನ್'ಮಾಡೋದರಲ್ಲಿ ,ನಿಷೇಧ ಹೇರೋದರಲ್ಲಿ ಯಾರಾದರೂ ಪ್ರಬಲ ಸ್ಪರ್ಧಿಗಳಿದ್ದರೆ ಅದು ಕನ್ನಡ ಚಿತ್ರರಂಗದ ಪಟ್ಟಭಧ್ರರು ಮಾತ್ರ ಅನ್ನಿಸುತ್ತದೆ.ಅಷ್ಟರ ಮಟ್ಟಿಗೆ ಇವರ ಬಹಿಷ್ಕಾರ ಪುರಾಣಕ್ಕೆ ದೊಡ್ಡ ಇತಿಹಾಸವೆ ಇದೆ.ಸುನಿಲ್'ಕುಮಾರ್ ದೇಸಾಯಿ,ಉಪೇಂದ್ರ,ಎಸ್ ವಿ ರಾಜೇಂದ್ರಸಿಂಗ್ ಬಾಬು,ವಿ ಮನೋಹರ್,ಮಹೇಂದರ್,ದಿನೇಶ್ ಬಾಬು,ದುನಿಯಾ ವಿಜಯ್,ಯೋಗರಾಜ್ ಭಟ್,ಪ್ರೇಮಾ,ಭಾವನ,ಕೋಡ್ಲು ರಾಮಕೃಷ್ಣ,ಆನಂದ್ ಪಿ ರಾಜು,ರಮ್ಯ ಹೀಗೆ ಹಲವಾರು ಮಂದಿ ಈ ಬಹಿಷ್ಕಾರದ ಕುಣಿಕೆಗೆ ಒಂದೋ ಬಲಿಯಾದವರು ಅಥವಾ ಬಲಿಯಾಗೋದರಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಬಚಾವಾದವರು.

ಕಲಾವಿದರಿಗೊಂದು ಸಂಘ,ಕಾರ್ಮಿಕರಿಗೊಂದು ಸಂಘ ಹೀಗೆ ಪ್ರತಿ ವಿಭಾಗಗಳಿಗೊಂದು ಸಂಘ ಕಟ್ಟಿಕೊಂಡು (ಕೆಲವು ಬೆರಳೆಣಿಕೆಯ ವಿಭಾಗಗಳಿಗಷ್ಟೆ ಸಂಘಟನೆ ಬಲವಿಲ್ಲ!) ಗುಂಪುಗಾರಿಕೆ ನಡೆಸುತ್ತ ಇರುವವರ ನಿಜವಾದ ನಾಯಕತ್ವ ಯಾರ ಕೈಯಲ್ಲಿ ಇದೆ ಅನ್ನೋದು ಇನ್ನೂ ಗೊಂದಲದಲ್ಲಿದೆ.ರಾಜ್'ಕುಮಾರ್'ರಂತಹ ಮೇರುನಟರು ಬದುಕಿದ್ದ ತನಕ ಸದಾಶಿವನಗರದ ಹೆಡ್ದಾಫೀಸ್ ಹೇಳಿದ್ದೆ ಕಟ್ಟಳೆಯಾಗಿತ್ತು.ಅವರ ಕಾಲಾನಂತರ ಜಯನಗರದ 'ಸಿಂಹ' ಕೆಲಕಾಲ ಗರ್ಜಿಸಿ ಕೊನೆಗೊಮ್ಮೆ ಶಾಶ್ವತವಾಗಿ ಸುಮ್ಮನಾಯಿತು.ರಾಜಾಜಿನಗರದ 'ಹೃದಯ'ವಂತ ಯಾರಿಗೂ ಕೇರ್ ಮಾಡದೆ ಊರಮೇಲೆ ಊರು ಬಿದ್ದರೂ 'ಮಲ್ಲ'ನಂತೆ ತನ್ನ ಏಕೋಪಾಧ್ಯಾಯ ಶಾಲೆಯ "ಹಳ್ಳಿಮೇಷ್ಟ್ರು" ಆಗಿಯೆ ಇದ್ದರು-ಇದ್ದಾರೆ.ಇದೀಗ ಜೆಪಿನಗರದ 'ರೆಬೆಲ್'ಗಳು ತಮ್ಮ ಖದರು ತೋರುತ್ತಿದ್ದಾರೆ.ಇವೆಲ್ಲದರ ನಡುವೆ ನಾಮ್-ಕೆ-ವಾಸ್ತೆ ಅದೊಂದು ಮಾತೃಸಂಸ್ಥೆ ಎಂಬ ಆರೋಪ ಹೊತ್ತ "ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ"ಎಂಬ ಬೀಜವಿಲ್ಲದ ಹೋರಿ ತನ್ನ ಮಾತನ್ನೆ ಕೇಳದೆ ಕಂಡಕಂಡವರೆಲ್ಲ 'ಬ್ಯಾನ್' ಗೇಮ್ ಆಡೋದನ್ನ ನೋಡಿ ಕಣ್ಣು ಪಿಳಿಕಿಸುತ್ತ ಯಾರಿಗೂ ಬೇಡದ ಅನಾಥ ಮಗುವಿನಂತೆ ನಿಂತಿದೆ.


ಇಷ್ಟಾಗಿಯೂ ತೆರೆಯಮೇಲೆ ಮಾತ್ರ ಆಚಾರ ಭೋದಿಸಿ ಒಳಗೊಳಗೆ ಬದನೇಕಾಯಿ ತಿನ್ನುವ ಈ ಕೋಡಂಗಿಗಳ ವಿರುದ್ಧ ಸ್ತ್ರೀವಾದಿ ಸಂಘಟನೆಗಳು,ಸ್ತ್ರೀವಾದಿ ಚಿಂತಕರು ನಿಖಿತಾಳನ್ನ ಬೆಂಬಲಿಸಿ ಮಾತನಾಡಿದರೂ ಎಮ್ಮೆ ಮೇಲೆ ಮಳೆ ಬಂದಂತೆ ಬಂಡವಾಳಶಾಹಿ ಚಿತ್ರೋದ್ಯಮ ವರ್ತಿಸಿತು.ನಿಖಿತಾಳ ವರ್ತನೆ ನೈತಿಕತೆಗೆ ಸಂಬಂಧಿಸಿದ್ದು ಅನ್ನುವ ಅರಿವಿಲ್ಲದ ಅರಿವುಗೇಡಿ ಮುನಿಯ ದರ್ಶನ್ ಮೇಲೆ ಹೂಡಿದ ಕೋಟ್ಯಾಂತರ ರೂಪಾಯಿ ಬಂಡವಾಳದ ರಕ್ಷಣೆಗೆ ಹೆಡೆಬಿಚ್ಚಿ ನಿಂತ ನಾಗನಂತೆ "ಇದೆ ತರದ ಘಟನೆ ನಿಮ್ಮನೆ ಮಕ್ಳಿಗೂ ಆಗಿದ್ರೆ ಎನ್ ಮಾಡ್ತಿದ್ರಿ ಅಂತ ನೀವೆ ನಿಮ್ಮನ್ನೂ ಕೇಳ್ಕೊಳ್ಳಿ!" ಎನ್ನುವ ಯಾವ ಅರ್ಥದಲ್ಲಿ ಈಯಪ್ಪ ಈಮಾತನ್ನ ಹೇಳಿದ್ದಾನೆ ಅಂತಲೂ ಅರ್ಥವಾಗದ ಎಡಬಿಡಂಗಿ ಹೇಳಿಕೆಯನ್ನ ಉದುರಿಸಿದ್ದು ಕೇಳಿ ಕನ್ನಡಿಗರು ಕೆಕರುಮಕರಾದರು.ಆದರೆ ಅವರ ಈ ಉದ್ಗಾರ ಹೊರಬರೋವಾಗ ಅವರು ತಮ್ಮ ಆಪ್ತೇಷ್ಟರ ಪಟಾಲಂನೊಂದಿಗೆ 'ಗುಂಡು' ಮೋಜಿನ ಪರಿಷತ್ ನಡೆಸಿರುವ ಗುಮಾನಿ ಇದ್ದುದ್ದರಿಂದ ಅದು ಅಚಾನಕ್ ಹೊರಬಂದ ಸತ್ಯವಿದ್ದೀತು ಅಂದುಕೊಳ್ಳಲಾಯಿತು.ಇತ್ತ 'ರೆಬೆಲ್'ಗಳೆಲ್ಲ "ಮನೆ ಅಂದಮೇಲೆ ಮಗ ಅಮ್ಮನ್ನ ಚಚ್ಚದು,ಗಂಡ ಹೆಂಡ್ರುನ್ನ ರುಬ್ಬಾಕೋದು ಎಲ್ಲಾ ಕಾಮನ್ ಕಂಡ್ಲಾ! ಇದುನ್ನೆ ದೊಡ್ಹ್ ಮಾಡುದ್ರೆ ಮನೆ ಮುರ್ದೊಯ್ತವೆ ಅಷ್ಟೇಯ!" ಅಂತ ಅಬ್ಬರಿಸಿದರಾದರೂ ಅದನ್ನ ಹೇಳೋವಾಗ ಕೆಂಡದುಂಡೆಯಂತಾಗಿದ್ದ ಅವರ ಕಣ್ಣು ನೋಡಿದ ಮಂಡ್ಯದ ಹೈದ "ಬುಡ್ರುಲಾ ಅಣ್ಣ ಫುಲ್ ಜೂಮಲ್ಲೈತೆ!" ಅನ್ಕೊಂಡು ಕ್ಯಾಕರಿಸಿದ.


ನಟ ಶಿವಣ್ಣ,ರಾಘಣ್ಣ ಆಸಕ್ತಿ ವಹಿಸಿದ ಮೇಲೆ ಮತ್ತೆ ಹಳಿಗೆ ಬಂದ ಹಾಗೆ ಕಂಡ ಪ್ರಕರಣದಲ್ಲಿ ನಿಖಿತಾ ಮೇಲೆ ವಿಧಿಸಿದ್ದ ಬಹಿಷ್ಕಾರವನ್ನಸದ್ಯಕ್ಕೆ ಶರತ್ತಿಲ್ಲದೆ ವಾಪಾಸ್ ಪಡೆದು ಕ್ಷಮೆ ಕೋರಲಾಗಿದೆ.ಆದರೆ ಈ ಡೊಂಕುಬಾಲ ದೊಣ್ಣೆ ಕಟ್ಟಿದರೂ ನೆಟ್ಟಗಾಗುವ ಲಕ್ಷಣಗಳು ದೂರ ದೂರಕ್ಕೂ ಕಾಣಿಸುತ್ತಿಲ್ಲ ಅನ್ನೋದನ್ನ ವಿಷಾದದಿಂದಲೆ ಹೇಳಬೇಕಿದೆ.ನಿಖಿತಾಗೆ ಕೊಟ್ಟ ತಪ್ಪೊಪ್ಪಿಗೆ ಪತ್ರದಲ್ಲೆ ನಮೂದಾಗಿರುವಂತೆ 'ಬ್ಯಾನ್'ಎಂಬ ಪದವನ್ನಷ್ಟೆ ಶಾಶ್ವತವಾಗಿ ಚಿತ್ರೋದ್ಯಮದಿಂದ ಬ್ಯಾನ್ ಮಾಡಲಾಗಿದೆ ಅಂತ ತಿಳಿಸಲಾಗಿದೆ.ಏನಿದರ ಅರ್ಥ? ಮುಂದೆ ಬಹಿಷ್ಕಾರ ಹಾಕೋವಾಗ ಹೊಸ ಪರ್ಯಾಯ ಪದವನ್ನ ಅನ್ವೇಷಿಸಿ ಬಳಸಲಾಗುತ್ತದೆ ಅಂತಲ?!

No comments: