04 September 2011

'ಶ್ರೀರಾಮು'ಯಣ.....ಕಾಸಿನ ಋಣ ;ಮರಳಿ ಕೊಡದಿದ್ದರೆ ಹೇಗಣ್ಣಾ?!




"ಮರ್ಯಾದ ರಾಮಣ್ಣ"ನನ್ನು 'ಅನೈಕವಾಗಿ' ಗುತ್ತಿಗೆ ಹಿಡಿದು ಅವನಿಗೆ ಬೇಡದಿದ್ದರೂ ಒತ್ತಾಯದಿಂದ ತಮ್ಮ ಮಂಗಾಟಗಳಿಗೆಲ್ಲ ಅವನನ್ನೆ ಕಾಪಿರೈಟ್ ಮಾಡಿಕೊಂಡಿರುವ ಕ'ಮಲ'ದಪಕ್ಷದಲ್ಲಿ ಈವರೆಗೂ ಇದ್ದು 'ಗಣಿ'ಧೂಳೆಬ್ಬಿಸುತ್ತಿದ್ದ ಕಿಷ್ಕಿಂದೆಯ ಕಪಿವರ್ಯರ ಗುಂಪಿನಲ್ಲೊಂದು ಕೋಡಂಗಿ ಇವತ್ತು ದೃಶ್ಯಮಾಧ್ಯಮಗಳ ಮುಂದೆ ಎಗರೆಗರಿ ಹಾರಿ ರಜೆಯ ಗುಂಗಿನಲ್ಲದ್ದ ಕನ್ನಡಿಗರಿಗೆ ಭರಪೂರ 'ಮಜಾ'ಭೂತಾದ ಬಿಟ್ಟಿ ಮನರಂಜನೆ ಒದಗಿಸಿ ಕೊಟ್ಟಿತು.

"ನಾನು ಎದುಕ್ಕಿಗ ಪತ್ರಿಕಾ ಗೋಸ್ಟಿ ಕರೆದಿದೆನಾಗಿನ! ನಮ್ಮ ಸ್ವಾಭಿಮಾನಕ್ಕೆ ಏನು ಧಕ್ಕೆ ಆಗಿದಾಗಿನ...ಹಾಗೇನು ಒಂದು ಲೋಕಾಯುಕ್ತರ,ಅವರ ಮೇಲೆ ನನಗೆ ತುಂಬಾ ಗೌರವವಿದೆ...ಅವರು ಕೊಟ್ಟ ವರದಿಯಲ್ಲಿ ಆಕ್ರಮ ಗಣಿಗಾರಿಕೆಯಲ್ಲಿ ನನ್ನ ಹೆಸರು ಬಂದಿದಾಗಿನ ಅದಕ್ಕೆ ಒಂದು ಬೆಲೆ ಕೊಟ್ಟು ಈಗ ನನ್ನ ಎಂಎಲ್'ಎ ಪದವಿಗೆ ರಾಜಿನಾಮೆ ಕೊಡುತಿದೀನಿ! ಇನ್ನೇನಿದ್ರೂ ರಾಜ್ಯದ ಜನರ ಮನೆಮನೆಗೂ ಹೋಗಿ ಬೆಂಬಲ ಬೇಡೋದಕ್ಕಾಗಿನ ಈ ಜೀವ ಅರ್ಪಿಸೋಕೆ ನಾನಿರ್ತೀನಿ ಅಂತ ನಿಮ್ಮೆಲ್ಲರ ಮೂಲಕ ಹೇಳ್ತಿದೀನಿ.ಅದಲ್ದೆನ ಮೂವತ್ ವರ್ಷದಾಗಿನ ನಾನು ಕಷ್ಟಪಟ್ಟು ದುಡಿದು ಮೂವತ್ ವರ್ಷ ಜನ ಹೋರಾಟ ಮಾಡಿದ ಶ್ರೀಮಾನ್ ಯಡಿಯೂರಪ್ಪನವರು ಮುಖ್ಯಮಂತ್ರಿ ಮಾಡೋಕೆ ಪ್ರಾಮಾಣಿಕವಾಗಿ ದುಡಿದ ನನ್ನನ್ನ ರಾಜ್ಯದ ಜನರೆಲ್ಲಾ ಗುರುತಿಸಿದ್ದಾರೆ.ನಂಗೆ ತಾಯಿ(!)ಯವರ ಆಶಿರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ ಆಸೆ ಇತ್ತಲದಿಗೆನ ಅಧಿಕಾರದ ಆಸೆ ಚೂರೂ ಇರ್ಲಿಲ್ಲ.ಆದರೊ ನಮ್ ಶ್ರಮ ಗುರ್ತಿಸಿ ಯಡ್ಯೂರಪ್ಪನವರು 'ಶ್ರೀರಾಮುಲು ಅವ್ರೆ ನಿಮಗ್ಯಾ ಕ್ಯಾತೆ(ಹೌದು ಅವರು ಉಚ್ಚರಿಸಿದ್ದು ಹಾಗೆ!) ಬೇಕೊ ಅದನ್ನೆ ತಗೊಳ್ರಿ ಅಂದಾಗಿನ ನಾಡಿನ ಜನರಸೇವೆ ಮಾಡ್ಲಿಕ್ಕಗಿನ ನಾನು ಆರೋಗ್ಯ ಕ್ಯಾತೇನೆ ಕೇಳಿ ಆಕ್ಯಾತೆಲಿ ಜನರಿಗಾಗಿನ ಕೆಲಸ ಮಾಡಕ್ಕೆ ಹೊರಟಿರೋ ಹೊತ್ನಾಗಿ ಈ ಸರಕಾರನಲ್ಲಿ ನಾಮಗ ನಮ್ಮ ಪ್ರಾಮಾಣಿಕತೆಗ ಒಂದೂನು ಅವಕಾಶ ಇಲಾದಾಗಿರೋದು ನಾಡಿನ ಎಲ್ಲಾ ಜನ ನೋಡ್ತಿದಾರೆ! ಹಾಗಾಗಿ ನ್ಯಾಯ ಕೇಳೋಕಾಗಿನ ಇವತ್ತಿನ ದಿನ ಈ ರಾಜಿನಾಮೆ ಅಂತಕಂತದ್ದೆನಿದೆ ಅದನ್ನ ಕೊಟ್ಟು ನಾನು ನಾಡಿನ ಜನರ ಬಳಿ ಹೋಗಬೇಕಂತ ಒಂದು ನಿರ್ಧಾರಕ್ಕೆ ಬಂದಿದೀನಿ! ನಮಗ ಅಧಿಕಾರದ ಆಸೆ ಚೂರೂ ಇಲ್ಲ ಅಂತ ನೊಂದು ಈ ಹೊತ್ತಲ್ಲಿ ಹೇಳ್ತಾ ನನ್ ಮಾತನ್ನ ಮುಗಿಸ್ತಿದೀನಿ!"


ಹೀಗೆ ಫುಲ್'ಸ್ಟಾಪ್,ಕಾಮ,ಒತ್ತಕ್ಷರ ಒಂದೂ ಇಲ್ಲದ ತಮ್ಮ ಎಂದಿನ 'ನಡು'ಗನ್ನಡದಲ್ಲಿ ಪತ್ರಿಕಾಗೋಷ್ಠಿಯುದ್ದಕ್ಕೂ ಅದ್ಭುತವಾಗಿ ಕನ್ನಡದ ಮಾನಾಪಹರಣ ಮಾಡಿದ 'ಸ್ವರಾಜ್'ಯಕ್ಕೆ ಅಡ್ಡ ಹುಟ್ಟಿರೊ ಖಚಿತ ಗುಮಾನಿಯಿರುವ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ಥೇಟ್ ತೊಂಬತ್ತರ ದಶಕದ ಮೂರನೆದರ್ಜೆ ತೆಲುಗು ಪಿಚ್ಚರ್ರಿನ ಖಾಯಂ ರೇಪಿಷ್ಟ್ ಗೆಟಪ್ಪಿನಲ್ಲಿ ಕಂಗೊಳಿಸುತ್ತಿದ್ದರು,for a change ಈ ಬಾರಿ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದು 'ಕಸ್ತೂರಿ ಕನ್ನಡ'!

"ಕೊಪ್ಪಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕಂತಿದ್ರೆ ಯಡಿಯೂರಪ್ಪನವರ ನಾಯಕತ್ವದಲ್ಲೆ ಹೋರಾಡಬೇಕು.ಯಾಕಂದ್ರೆ ಅಲ್ಲಿ ಶಾಸಕರ ರಾಜಿನಾಮೆ ಕೊಡ್ಸಿ ಚುನಾವಣೆ ಆಗೋ ಹಾಗೆ ಮಾಡಿದ್ದೆ ಅವ್ರು!"ಎಂಬ ಅಪರೂಪದ ಸತ್ಯವನ್ನ ನಾಲಗೆತಪ್ಪಿ ನುಡಿದ ಸಂಸದ ಡಿ ಬಿ ಚಂದ್ರೇಗೌಡರು "ಅದೇನು ಆಪರೇಶನ್ ಕ'ಮಲ' ಅಂದರೆ?" ಅಂತಾ ಕೇಳಿದಾಗಲೆಲ್ಲ ತಮ್ಮ ದೊಡ್ಡ ಕಣ್ಣುಬಿಟ್ಟು ಮಾಧ್ಯಮದವರನ್ನೆ ಹೆದರಿಸುತ್ತಿದ್ದ ಮಹಿಷಾಸುರನ 'ಕಸಿನ್ ಬ್ರದರ್' ಕೆ ಎಸ್ ಈಶರಪ್ಪನವರ ಹಳೆಸುಳ್ಳಿಗೆ ಅದೆ ಮಾಧ್ಯಮಗಳಲ್ಲಿ ಸಾಕ್ಷಿ ಹೇಳಿ ಫಜೀತಿ ಹುಟ್ಟಿಸುತ್ತಿರುವ ಹೊತ್ತಲ್ಲೇ ಈ ಶ್ರೀರಾಮಾಯಣವೂ ನಡೆದಿರೋದು ಇನ್ನೂ ಮುಂಬರುವ ಹಾಸ್ಯಾಸ್ಪದ ಕಿಷ್ಕಿಂಧಾ ಪುರಾಣದ ಟ್ರೈಲರ್'ನಂತೆ ಭಾಸವಾಗಿ ಕನ್ನಡಿಗರು ಫುಲ್ ಕನ್'ಫ್ಯೂಜ್ ಆಗಿ ನಗುವುದೋ ;ಅಳುವುದೋ ಅರಿಯದ ಸ್ಥಿತಿಗೆ ಬಂದು ಮುಟ್ಟಿದ್ದಾರೆ?!.

No comments: