'ನೋಡಿ ಅವರು ಇನ್ನೂ ಅಪರಾಧಿಯಲ್ಲ,ಆರೋಪಿಯಷ್ಟೆ" ಎಂಬ ಪರಮ ಸತ್ಯದ ಸಾಕಾರ ತಮಗೊಬ್ಬರಿಗೆ ಆಗಿದೆ ಎಂಬಂತೆ ನೆನ್ನೆದಿನ ಬೆಳಗ್ಗಿನಿಂದ ಕಂಡಕಂಡ ಟಿವಿ ಕ್ಯಾಮರಾಗಳ ಮುಂದೆಲ್ಲ ಹಳೆ ಸವಕಲು ಡೈಲಾಗನ್ನೆ ಮತ್ತೆಮತ್ತೆ ಪ್ರಲಾಪಿಸುತ್ತಿದ್ದ ಭಾಜಪದ ಕುಖ್ಯಾತ ಹಳೆಕಳ್ಳನೂ-ಹಾಲಿ ದೆಹಲಿ ದರೋಡೆಕೋರನೂ ಆಗಿರುವ ವಿ ಧನಂಜಯಕುಮಾರ್ ತಮ್ಮ ಅದೆ ಹರಳೆಣ್ಣೆ ಮುಖದಲ್ಲಿ ನೋಡುಗರಿಗೆ ಬೇಡದಿದ್ದರೂ ಒತ್ತಾಯದ ಧರ್ಮದರ್ಶನ ಕೊಡುತ್ತಿದ್ದ ಹೊತ್ತಿನಲ್ಲೆ, ಅದೆ ಟಿವಿಯ ಮುಂದೆ ಕುಳಿತು ರಾಜ್ಯದ ಮೇಲೆ ಎರಗಿದ್ದ ಮತ್ತೊಂದು ಘೋರ ವಿಪತ್ತನ್ನು ನೋಡಲಾಗದೆ ಬಡಕನ್ನಡಿಗ ತಳಮಳಿಸಿ ಹೋಗುತ್ತಿದ್ದ.ಜೊತೆಜೊತೆಗೆ ತನ್ನ ಕೊನೆಗಾಣದ ಸಂಕಟಗಳಿಗೆ ಒಳಗೊಳಗೆ ಹುಲುಬುತ್ತಿದ್ದ ಅವನ ಅಸಲಿ ಸಂಕಟಕ್ಕೆ ಅಸಲು ಕಾರಣ ಮಾತ್ರ ಬೇರೆಯದೆ ಆಗಿತ್ತು.
ಬೆಳಗಾಗುತ್ತಲೆ ಇತ್ತ ನೇಸರ ಭೂರಮೆಯನ್ನ ನೋಡಿ ಕಣ್ಣು ಹೊಡೆವ ಹೊತ್ತಿಗೆ ಸರಿಯಾಗಿ ಅತ್ತ ಬಳ್ಳಾರಿಯಲ್ಲಿ ಪ್ರಭಾವಿಗಳೂ,ಸ'ಗಣಿ'ಯನ್ನ ತಾವೂ ಕಂಠಮುಟ್ಟ ತಿಂದು-ಇನ್ನಿತರರಿಗೂ ತಿನ್ನಿಸಿದ ಆರೋಪ ಹೊತ್ತ ಅನೇಕರ ಎಡಗಣ್ಣು ಕೂಡ ಅಶುಭದ ಪೂರ್ವಸೂಚನೆ ಕೊಡುತ್ತ ಪಟಪಟನೆ ಹೊಡೆದುಕೊಂಡಿತ್ತಂತೆ! ಅಗೋಚರವಾದ ಆ ದುರಾದೃಷ್ಟ ಬಂದು ವಕ್ಕರಿಸಿಕೊಳ್ಳಲು ಹೆಚ್ಚು ಹೊತ್ತೇನೂ ತಗಲಲಿಲ್ಲ.ಜನತಾ "ಜನಾರ್ಧನ'ರೆಂಬ ಆರೋಪ ಹೊತ್ತ ಜನನಾಯಕರೊಬ್ಬರನ್ನ ಸರ್ವೋಚ್ಚ ನ್ಯಾಯಾಲಯದ ಅಣತಿಯಂತೆ ಕೇಂದ್ರ ಸರಕಾರ ಛೂ ಬಿಟ್ಟಿದ್ದ ಸಿಬಿಐ ಸೀಳುನಾಯಿಗಳು ಅಚ್ಚುಕಟ್ಟಾಗಿ ಬೇಟೆಯಾಡಿ ಹಡೆಮುರಿಗೆಗೆ ಕಟ್ಟಿ ತಮ್ಮೊಂದಿಗೆ ಹೈದರಾಬಾದಿನ ಚುಂಚಲವಾಡ ಅತಿಥಿಗೃಹಕ್ಕೆ ಹೊರಡಿಸುತ್ತಿದ್ದವು.ಕೇವಲ ಮೂವತ್ತೆ ಕೆಜಿ ಚಿನ್ನ,ಆರು ಕೋಟಿ ನಗದು (ಹಾಗೆಲ್ಲ ಸಂಪಾದಿಸಿದ ಸಂಪತ್ತನ್ನ ಹೇಳದೆ-ಕೇಳದೆ ಯಾರ್ಯಾರೊ ಹೊತ್ತುಕೊಂಡು ಹೋದರೆ ಯಾವ 'ಸದಾನಂದ' ಮೂತಿಯೂ ಖಂಡಿತವಾಗಿಯೂ 'ನಗದು'!) ಬಳ್ಳಾರಿಯ ಅವರ 'ಕುಟೀರದ' ಮೇಲೆ ಬಿದ್ದ ರೇಡಿನಲ್ಲಿ ಜಪ್ತಾದ ಕಿಂಚಿತ್ ಸಂಪತ್ತು!
ಇತಿಹಾಸದಲ್ಲಿ ವಿಜಯನಗರದ ರಾಜಧಾನಿ ಹಂಪೆಯ ಮೇಲೆ ಬಹು'ಮನಿ' ತುರುಕರು ಇಟ್ಟಿದ್ದ ದಾಳಿಯ ಪಡಿಯಚ್ಚಿನಂತಿತ್ತು ಈ ಅಚಾನಕ್ ಧಾಳಿ.ಆ ಸಂಪತ್ತಿನ ಜೊತೆಗೆ ಸಿಕ್ಕಿದ ಕೆಲವು ದಾಖಲೆಗಳನ್ನೂ ಒಟ್ಟು ಸೇರಿಸಿ ಅವರದ್ದೆ ಆದ ಬಿಎಂಡಬ್ಲೂ,ಕರೋಲ ಹಾಗು ಬೆಂಜ್ ಕಾರುಗಳಲ್ಲಿ ಅವನ್ನೆಲ್ಲ ಹೇರಿಕೊಂಡು ಸಾಗಿಸಿದ್ದು ಥೇಟ್ ಹಿಂದೊಮ್ಮೆ ಹಾಳು ಹಂಪೆಯಿಂದ ತಿರುಮಲ ತನ್ನ ರಾಜಧಾನಿಯನ್ನ ಪೆನುಗೊಂಡಕ್ಕೆ ಸ್ಥಳಾಂತರಿಸುವಾಗ ಸಾಲು ಆನೆಗಳ ಮೇಲೆ ಸಾಮ್ರಾಜ್ಯದ ಸಂಪತ್ತನ್ನ ಸಾಗಿಸಿದ ಹಾಗೆ ಕಂಗೊಳಿಸುತ್ತಿತ್ತು.ಮುಂಗೋಳಿ ಕೂಗುವ ಮುನ್ನವೆ ನಡೆದ ಈ ಭೀಕರ ಧಾಳಿ ಪಾಪ,ದುಬಾರಿ ಕಾರುಗಳಲ್ಲಿ ಹಾಗು ಹೆಲಿಕಾಪ್ಟರ್'ನಲ್ಲಿ ಮಾತ್ರ ಈ ನಡುವೆ ತೇಲುತ್ತ ಪ್ರಪಂಚಪರ್ಯಟನೆ ಮಾಡುವ ಅಭ್ಯಾಸ ರೂಢಿಸಿಕೊಂಡಿರುವ ಸನ್ಮಾನ್ಯರನ್ನ ಕೊಂಚವೂ ದಯೆತೋರದೆ ತಮ್ಮ ಲಡಕಾಸಿ ಇನ್ನೋವ ಸರ'ಕಾರಿ'ನಲ್ಲಿ ತುರುಕಿಕೊಂಡು ಹೋದದ್ದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲದೆ ಮತ್ತಿನ್ನೇನೂ ಅಲ್ಲ! ಅಕಟಾಕಟಾ! ಅಷ್ಟಲ್ಲದೆ ಹಂಪೆಯ ಮೇಲೆ ತುರುಕರ ಧಾಳಿಯಾಗಿ ಶತಮಾನಗಳೆ ಕಳೆದು ಹೋಗಿದ್ದರೂ ಪರಿಸ್ಥಿತಿ ಚೂರೂ ಬದಲಾಗಿಯೆ ಇಲ್ಲ(?),ಅಲ್ಲಿ ನಡೆದ ದುರುದ್ದೇಶಪೂರಿತ ಧಾಳಿಯಲ್ಲಿ ಪ್ರಮುಖನಾಗಿದ್ದ ಅಧಿಕಾರಿ ಆರ್ ಎಂ ಖಾನ್ ಎಂಬ ಮುಸಲರವ ಅನ್ನುವುದೇ ಇದಕ್ಕೆ ಪುರಾವೆ!
ಇದೆಲ್ಲದರ ನಡುವೆ ಕನ್ನಡಿಗನ ಕಣ್ಣೀರಿನ ಕತೆಯೆ ಬೇರೆ.ಈ ಹಿಂದೊಮ್ಮೆ ತಲೆಹರಟೆ ಲೋಕಾಯುಕ್ತದ ಅಧಿಕಾರಿ ಯು ವಿ ಸಿಂಗ್'ರಿಗೆ ಇದೀಗ ತಾನೇ ಅರೆಷ್ಟ್ ಆಗಿರುವ ಸಜ್ಜನರ "ಭ್ರಾತೃ ವಾಕ್ಯ ಪರಿಪಾಲನೆಯಲ್ಲಿ 'ಭರತ'ನಿಗೆ ಸಮಾನನಾದ" (ಇದನ್ನ "ಬ್ರಾತಲ್ ವಾಕ್ಯ ಪರಿಪಾಲನೆಯಲ್ಲಿ "ಭರತ'ನಿಗೆ ಸಮಾನನಾದ" ಎಂದೆಲ್ಲ ಅಶ್ಲೀಲವಾಗಿ ಓದಿಕೊಳ್ಳಬಾರದಾಗಿ ಸತ್ಪ್ರಜೆಗಳಾದ ತಮ್ಮೆಲ್ಲರಲ್ಲಿ ವಿನಮ್ರ ವಿನಂತಿ!) ಕಿರಿತಮ್ಮ ಸೋಮಶೇಖರರೆಡ್ಡಿಯೆಂಬ ಪುಣ್ಯಾತ್ಮನು ಅವರ 'ಭವಿಷ್ಯದ' ಹಿತದೃಷ್ಟಿಯಿಂದಲೆ "ಬಳ್ಳಾರಿಗೆ ಕಾಲಿಡುವ ಮುನ್ನ 'ಜಿಲ್ಲಾ ಉಸ್ತುವಾರಿ ಸಚಿವ'ರ ಅನುಮತಿ ಪಡೆದು ಬಂದಿದ್ದೀರಾ?! ಎಂದು 'ನಯವಾಗಿ'ಯೆ ಬುದ್ದಿ ಹೇಳಿದ್ದು ಚನ್ನಾಗಿ ನೆನಪಿರುವ ಕಾರಣ ಇನ್ನು ಬಳ್ಳಾರಿಗೆ ತಾನು ಕಾಲಿಡುವುದಾದರೂ ಹೇಗೆ? "ಬಳ್ಳಾರಿ ಸ್ವತಂತ್ರ ಗಣರಾಜ್ಯದ" ಪುರಪ್ರವೇಶಕ್ಕೆ ತಾನಿನ್ನು ಮುಂದೆ ವಿಶೇಷ ಅನುಮತಿಯ ವೀಸಾ ಪಡೆಯಲು ಅಲ್ಲಿನ ಖಾಯಂ ಜಿಲ್ಲಾ ಉಸ್ತುವಾರಿ ಸಚಿವರ (ಅವರು ಅಧಿಕಾರದಲ್ಲಿ ಇಲ್ಲವಲ್ಲ ಎಂಬ ಅಧಿಕಪ್ರಸಂಗದ ಪ್ರಶ್ನೆಗಳನ್ನ ಇಲ್ಲಿ ನೀವು ಕೇಳುವಂತಿಲ್ಲ!) ಅನುಮತಿ ಪಡೆಯಲು ಚುಂಚಲವಾಡದ ಅವರ ನೂತನ ಕಲ್ಲಿನ ಅರಮನೆಯ ಅಂತಪುರಕ್ಕೆ ಹೋಗಬೇಕ?,ಅವರಿಲ್ಲದೆ ಅನಾಥವಾಗುವ ಈ "ಬಳ್ಳಾರಿ ದೇಶದ" ಮುಂದಿನ ಭವಿಷ್ಯವೇನು? ಹೀಗೆ "ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಅದೇನೂ ...ಡನ ಚಿಂತೆ" ಅನ್ನುತ್ತಾರಲ್ಲ ಹಾಗೆ ಇವನದ್ದೊಂದು ಗೋಳು.ನೋಡಿ ಜನಸೇವೆ ಮಾಡುವ ಮಂದಿಗೆ ಎಷ್ಟೆಲ್ಲಾ ಅಡೆತಡೆ!
'ಬರದ ನಾಡು' ಎಂದೆ ಪ್ರಸಿದ್ಧಿ ಪಡೆದಿದ್ದ ಬಳ್ಳಾರಿಯ ಬರಡು ಭೂಮಿಯಲ್ಲೂ ಬಂಗಾರ ಮೊಗೆಯಬಹುದು ಎಂಬ ವಿನೂತನ ಅವಿಷ್ಕಾರ ಮಾಡಿದ್ದಕ್ಕೆ ಕನಿಷ್ಟಪಕ್ಷ ಒಂದೆಒಂದು 'ಕೆಂಪೆಗೌಡ' ಪ್ರಶಸ್ತಿಗಾದರೂ ಭಾಜನವಾಗಲೆ ಬೇಕಿದ್ದ ಸದರಿ ಜನಸೇವಕರನ್ನು ಈಪರಿ ಹೀನಾಮಾನವಾಗಿ ಅವಮಾನಿಸಿ ಸರಳುಗಳ ಹಿಂದೆ ನೂಕುವುದರಲ್ಲಿ ಏಕಕಾಲದಲ್ಲಿ ಕಾಣದ 'ಕೈ'ಯೊಂದರ ಪಿತೂರಿಯೂ-ಅದರ ಸಂಗಡ ಹಿತಶತ್ರುಗಳ ಮೀರ್'ಸಾಧಕ್ ಮಾದರಿಯ ಒಳಸಂಚೂ ಕಂಡಂತಾಗಿ ಅವರ ಖಾಸಾ ಶಾಗಿರ್ದ್ ಶ್ರೀರಾಮುಲು ಕೆರಳಿ ಕೆಂಡವಾಗಿದ್ದಾರೆ.ನೀವೆ ಗಮನಿಸಿ ನೋಡಿ 'ಗಣಿ'ಧೂಳಿನಿಂದ ಮತ್ತೊಮ್ಮೆ ಎದ್ದು ಬಂದು ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿ ಮಾಡುವ ಹುಮ್ಮಸ್ಸಿನಿಂದ ತಮ್ಮ ಎಂದಿನ ನಟ್ಟ'ನಡು'ಗನ್ನಡದಲ್ಲಿ ದೊಡ್ಡ ಗಂಟಲಲ್ಲಿ (ಸಹಜವಾಗಿ ಅವರ ಗಂಟಲು ದೊಡ್ಡದೆ ಆಗಿರೋದರಿಂದ ಈಬಗ್ಗೆ ನೀವು ಆಕ್ಷೇಪಿಸುವಂತಿಲ್ಲ!) ಮಾಧ್ಯಮಗಳ ಮುಂದೆ ಮುಲುಕಿ ನೆನ್ನೆಯಷ್ಟೆ ಲೋಕಕ್ಕೆಲ್ಲ ತನ್ನ 'ನೊಂದ ರಾಜಿನಾಮೆ'ಯನ್ನ ಸಾರಿ ಹೊಸ ಇತಿಹಾಸಕ್ಕೆ ಮುಂದಡಿ ಇಡುವ ಹೊತ್ತಿನಲ್ಲೆ ಅವರಿಗೆ ಈ ಘೋರ ವಿಪತ್ತು ಒದಗಿಬಂದಿದೆ.
ಈ ಬಂಧನದ ಸಮಯವನ್ನಾದರೂ ನೋಡಿ ಹೇಗಿದೆ. ರಾಜ್ಯದ ಜನರ ಹಾಗು ತಮ್ಮ ಹಿತದೃಷ್ಟಿಯಿಂದ ಬಳ್ಳಾರಿ ಗ್ಯಾಂಗಿನ 'ವಿವಿಧೋದ್ಧೇಶ ಪಂಚವರ್ಷೀಯ'ಯೋಜನೆಯ ಅನುಸಾರ ಈ ಹಿಂದೆಲ್ಲ ಡಾ ಯಡ್ಡಿಯವರು ( ಸ್ಯಾನ್'ಫೋರ್ಡ್ ವಿವಿಯವರು ತಮಗೆ ಕೊಡಮಾಡಿರುವ <ಎಷ್ಟಕ್ಕೆ ಎಂಬ ನಿಮ್ಮ ಅಡ್ಡಪ್ರಶ್ನೆ ಇವಾಗ ಬೇಡ!> 'ಡಾಕ್ಟರೇಟ್' ಗೌರವವನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳದಷ್ಟು ವಿನಯ"ಶೀಲ"ರೂ-ಸದ್ಗುಣ ಸಂಪನ್ನರು ಅವರಾಗಿದ್ದರೂ ಸಹ ನಾವು ಅದನ್ನ ಮರೆಯಲಾದೀತೆ?) ವಿಪಕ್ಷದ 'ಉಸಿರುಗಟ್ಟಿಸುವ' ವಾತಾವರಣದ ಕಾಯಿಲೆಯಿಂದ ತೀವ್ರಅಸ್ವಸ್ಥರಾಗಿ ನರಳುತ್ತಿದ್ದ ಶಾಸಕರ ಮೇಲೆಲ್ಲ ಈವರೆಗೆ ನಡೆಸಿದ ಅಷ್ಟೂ 'ಆಪರೇಶನ್'ಗಳಲ್ಲಿ ತಮ್ಮ ತನು-ಮನ ಇವೆಲ್ಲಕ್ಕಿಂತ ಹೆಚ್ಚಾಗಿ 'ಧನ' ಅರ್ಪಿಸಿ ದುಡಿದಿದ್ದರೂ ತಮಗಾದ ಅನ್ಯಾಯವನ್ನ ಪ್ರತಿಭಟಿಸಿ ರಾಜಿನಾಮೆ ಬಿಸಾಕಲು ತಾವು ಸಿದ್ಧರಾಗಿದ್ದರೂ ತಮ್ಮಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಸ್ಪೀಕರ್ ಭೂ(ಬೊ)ಪನನ್ನು ಹುಡುಕಿ ಹೈರಾಣಾಗಿ,ಈ ಹಿಂದೆ ವಿರೋಧಿಬಣದ ಶಾಸಕರು 'ರಾಜಿನಾಮೆ' ಎಂದು ಕನಸಿನಲ್ಲಿ ಕನವರಿಸುವುದೆ ತಡ ಅವರು ಕಾಮೋಡ್ ಮೇಲೆ ಕೂತಿದ್ದರೂ ಬಿಡದೆ ಬೆಂಬತ್ತಿ ಅಲ್ಲಿಯೆ ಅವರಿಗೆ ದರ್ಶನ ಭಾಗ್ಯ ಕರುಣಿಸಿ ಎಂಜಲಗುಳಿಗೆ ಕಾದು ಕೂತ ಬರಗೆಟ್ಟ ಕಾಗೆಯಂತೆ ಅವರು ಕೊಡುವ ಮುನ್ನ ತಾನೆ ರಾಜಿನಾಮೆಪತ್ರ ಕಸಿದುಕೊಂಡು ಸ್ಥಳದಲ್ಲೆ ಅದನ್ನ ಅಂಗೀಕರಿಸುತ್ತಿದ್ದ ಕಿಲಾಡಿ ಸಭಾಧ್ಯಕ್ಷ ಈಗ ಮಾತ್ರ ತನ್ನಿಂದ ಮುಖ ಮರೆಸಿಕೊಂಡು ಮಡಿಕೇರಿಗೆ ಓಡಿಹೋಗಿರುವ ಮಾಹಿತಿ ಖಚಿತವಾಗುತ್ತಿದ್ದಂತೆ 'ಎಲೆಲ ಬೋಪ!" ಎಂದು ಚಕಿತರಾಗಿ ಅವರಿದ್ದಲ್ಲಿಗೆ ಅವರನ್ನ ಥೇಟ್ ತೆಲುಗು ಪಿಚ್ಚರಿನ ಚೇಸಿಂಗ್ ದೃಶ್ಯದಂತೆ ಅಟ್ಟಾಡಿಸಿಕೊಂಡು ಹೋಗಿ ಕಡೆಗೂ ಕಷ್ಟಪಟ್ಟು ರಾಜಿನಾಮೆಯನ್ನ ಅವರ ಕೈಗೆ ಮುಟ್ಟಿಸಿ 'ಉಸ್ಸಪ್ಪ' ಎಂದು ನಿಟ್ಟುಸಿರು ಬಿಟ್ಟು ಹೊಸ ಹೋರಾಟಕ್ಕೆ ಸಿದ್ಧರಾಗುತ್ತಿದ್ದ ಹೊತ್ತಿನಲ್ಲೆ ತಮ್ಮ ಬಂಧುಬಳಗದ ಬೆಂಗಳೂರು-ಬಳ್ಳಾರಿ-ಹೈದರಾಬಾದಿನ ಗುಡಿಸಲುಗಳ ಮೇಲೆಲ್ಲಾ ಏಕಕಾಲದಲ್ಲಿ ಈ ದುರುದ್ದೇಶಪೂರಿತ ಧಾಳಿ ನಡೆದಿರೋದು ಅವರನ್ನ ಎಲ್ಲರ ಮೇಲೂ ಶಂಕೆ ಕಾರುವಂತೆ ಮಾಡಿದೆ! ಶ್ರೀಸಾಮಾನ್ಯರಾದ ನಮಗೇ ಇಲ್ಲಿನ ಒಳಮರ್ಮಗಳು ಅರ್ಥವಾಗುವಾಗ ಇನ್ನು 'ನೊಂದ' ಶ್ರೀರಾಮುಲುವಿಗೆ ಆಗದೆ?
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮರುಚುನಾವಣೆಗೆ ತಮ್ಮ ಅನುಮತಿ ಪಡೆಯದೆ ಕ'ಮಲ' ಸುರಿದುಕೊಳ್ಳಲು 'ಕರಡಿ'ಯೊಂದು ಹೊಂಚು ಹಾಕುತ್ತಿರುವಾಗ,ಅತ್ತ ನಂಬಿದ 'ತಾಯಿ' ಕರೆದು ಮುದ್ದುಮಾಡೋದನ್ನ ಬಿಟ್ಟಿರೋವಾಗ-ಸಾಲದ್ದಕ್ಕೆ ಕಾಣದ 'ಕೈ'ಗಳ ಚಮತ್ಕಾರಕ್ಕೆ ಸ್ವಪಕ್ಷದ 'ಬೂಸಿಯ'ನ್ನೆ ಕಾಯಕ ಮಾಡಿಕೊಂಡ ನಾಯಕರು ಸಾಥ್ ಕೊಟ್ಟಿರುವ ಗುಮಾನಿಯೂ ಹುಟ್ಟುತ್ತಿರುವ ಹೊತ್ತಿನಲ್ಲಿಯೆ-ಇತ್ತ ಆ'ಜಗನ್'ನಿಯಾಮಕನ ಪ್ರೇರಣೆಯಂತೆ ಆಪತ್ತಿನ ಹೊತ್ತಲ್ಲೆ ನಂಬಿದ "ಆಪ್ತಮಿತ್ರ"ರೂ 'ಕೈ' ಕೊಡುತ್ತಿರೊವಾಗ ಶ್ರೀರಾಮುಲು ಮುಲುಕುವುದರಲ್ಲೂ ಒಂದು ಅರ್ಥವಿದೆ! ಆದರೆ ಕನ್ನಡಿಗನ ಕರ್ಮ ಏನು ಕೇಳುತ್ತೀರಾ....ಮತ್ತದೆ ಕಥೆ! ಅದೆ ನಿತ್ಯದ ವ್ಯಥೆ!! ಹೀಗೆ ಪ್ರತಿನಿತ್ಯ 'ಪ್ರಭಾತ'ಫೇರಿಯಲ್ಲಿ ತಾನು ನಂಬಿದ ನಾಯಕರೆಲ್ಲ ಸರಕಾರಿ ರೆಷ್ಟ್'ಹೌಸಿಗೆ ವಲಸೆ ಹೋಗೋದನ್ನ ನೋಡಲಾಗದೆ ಕಣ್ಣೀರಿಡುತ್ತಿರುವ ಆತನದ್ದು ಅವೆ ಹಳೆಯ ಅಹವಾಲುಗಳು.ಗಾದೆ ನೆನಪುಂಟಲ್ಲ "ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಅದೇನೂ ...ಡನ ಚಿಂತೆ"?!
06 September 2011
Subscribe to:
Post Comments (Atom)
1 comment:
super aagi barediddirraa, allalli maatina chati etu ishta aytu
olleya baraha
Post a Comment