12 September 2012
ಊರು ಬಿಟ್ಟ ಆ ಕ್ಷಣ....
ಶಾಲೆಗೆ ಸೇರಿದ್ದ ಆರಂಭದ ದಿನಗಳಲ್ಲಿ ನನ್ನ ಬುದ್ದಿಮಟ್ಟ ವಿಶೇಷವೆಂದು ಯಾರಿಗೂ ಅನಿಸಿರಲಿಲ್ಲ. ಕಲಿಕೆಯಲ್ಲಿ ಏನಾದರೂ ವಿಶೇಷವಿದ್ದಿರಬಹುದು ಎಂದು ನನಗೂ ಅನಿಸಿರಲಿಲ್ಲ. ಆದರೆ ಬರುಬರುತ್ತಾ ಓದಿನ ವಿಷಯದಲ್ಲಿ ನನ್ನ ಸಾಮರ್ಥ್ಯ ಇನ್ನುಳಿದವರಿಗಿಂತ ಸ್ವಲ್ಪ ಹೆಚ್ಚೇ ಇರುವುದು ನನಗೆ ಅರಿವಾದಂತೆ ನನ್ನ ಶಿಕ್ಷಕರಿಗೂ ಅರಿವಾಗಿತ್ತು. ಆದರೆ ಪ್ರೋತ್ಸಾಹದ ವಿಷಯದಲ್ಲಿ ಮಾತ್ರ ನಾನು ನಿರಾಶ್ರಿತನಾದೆ. ಕಾರಣಗಳನ್ನು ಉಹಿಸುವ ದ್ರಾಷ್ಟ್ಯಕ್ಕೆ ಖಂಡಿತಾ ಇಳಿಯಲಾರೆ, ಆದರೆ ನನ್ನ ಪ್ರತಿಭೆಯ ಪ್ರದರ್ಶನದ ವಿಷಯ ಬಂದಾಗ ಕೇವಲ ಹಣವಂತರಾಗಿದ್ದ ಅಲ್ಪ ಮಟ್ಟದ ಬುದ್ದಿವಂತ ಸಹಪಾಠಿಗಳ ನಂತರದ ಸ್ಥಾನ ನನ್ನದಾಗಿತ್ತು ಎಂಬುದಷ್ಟೇ ನನ್ನ ನೋವಿಗೆ ಕಾರಣ. ಈಗ ನನಗಿರುವ ನ್ಯಾಯಪರತೆಯ ಅರಿವಿನ ಪರಿಧಿಯಲ್ಲೆ ಹೇಳುವದಾದರೆ ಅಷ್ಟು ಅಸಡ್ಡೆ ಹಾಗು ಎರಡನೇ ದರ್ಜೆಯ ಆದರಕ್ಕೆ ಖಂಡಿತಾ ನಾನು ಅರ್ಹನಾಗಿರಲಿಲ್ಲ. ಅಲ್ಲದೆ ತಾರತಮ್ಯದ ಮೂಲಕ ಮಕ್ಕಳ ಎಳೆ ಮನಸಸಿನಲ್ಲಿ ಖೇದದ ಬೀಜ ಬಿತ್ತಿ ಆ ವಯಸಿನಲ್ಲಿಯೆ ಅವರನ್ನು ಸಿನಿಕರನ್ನಾಗಿಸುವ ತಮ್ಮ ನಡುವಳಿಕೆಗಳ ಬಗ್ಗೆ ಶಿಕ್ಷಕರಿಗೂ ಅರಿವಿಲ್ಲದಿರುವುದು ವಿಷಾದದ ಸಂಗತಿ.
ನನ್ನ ಹೆತ್ತಮ್ಮನಿಗೆ ಅದೇನೋ ದುರಾಸೆ, ಮಗ ಒಂದು ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಉತ್ತಮ ನಾಗರೀಕನಾಗಬಲ್ಲ ಎಂಬ ಗೊಡ್ಡು ಭ್ರಮೆ. ಹೀಗಾಗಿ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯೊಂದಕ್ಕೆ ನಾನು ಸೇರಿಸಲ್ಪಟ್ಟೆ. ಅವರೇನೋ ಪಿಗ್ಮಿ ಸಂಗ್ರಹ ಮಾಡಿ, ಹೂವಿನಂಗಡಿಗೆ ಹೂ ಕಟ್ಟಿಕೊಟ್ಟು ನಾಲ್ಕಾರು ಕಾಸು ಸಂಪಾದಿಸಿ ಶಾಲೆಗೂ ಕಳಿಸುವ ನಿರ್ಧಾರ ಮಾಡಿದ್ಧರು ನಿಜ ಆದರೆ ವಾಸ್ತವದಲ್ಲಿ ಅವರ ದುಡಿಮೆಯಲ್ಲಿ ಅವರದ್ದೇ ಆದ ಇತರ ಖರ್ಚುಗಳೆಲ್ಲ ಕಳೆದ ನಂತರ ನನ್ನ ಶಾಲೆಯ ಫೀಸಿಗೆ ಸಾಕಷ್ಟು ಹಣ ಉಳಿಯುತ್ತಿರಲಿಲ್ಲ. ಹೀಗಾಗಿ ಪ್ರತಿ ತಿಂಗಳ ಕೊನೆಯಲ್ಲಿ ನನ್ನೊಬ್ಬನ ಹೊರತು ಇನ್ನೆಲ್ಲರೂ ತಮ್ಮ ಫೀಸ್ ಕೊಟ್ಟಿರುತ್ತಿದ್ದು ನಾನೊಬ್ಬ ಮಾತ್ರ ಅಪರಾಧಿ ಪ್ರಜ್ಞೆಯಿಂದ ನರಳುತ್ತಿದ್ದೆ. ಮೇಲಾಗಿ ಡೈರಿಯಲ್ಲಿ ಅಮ್ಮನಿಗೆ ಕರೆ, ಸಕಾಲದಲ್ಲಿ ಹಣ ಸಂದಾಯವಾಗದ ಬಗ್ಗೆ ನನಗೆ ತರಗತಿಯಲ್ಲಿ ಸದಾ ಕರಕರೆ. ಹೀಗಾಗಿ ಶಿಕ್ಷಕರ ದೃಷ್ಟಿ ನನ್ನ ಪ್ರತಿಭೆಯನ್ನು ಗುರುತಿಸುವ ಹೊರತು ಅವರಿಗೆ ತಿಳಿಯದಂತೆ ಭರ್ತ್ಸನೆಗಳಿಂದ ಕಮರಿಸುವುದರತ್ತಲೆ ಸಾಗಿತು.ಈ ಎಲ್ಲ ಮಾನಸಿಕ ಹಿಂಸೆಯಿಂದ ಮುಕ್ತಿ ದೊರಕಿದ್ದು ನಾನು ಐದನೆ ತರಗತಿಗೆ ಸೇರಲು ಚಿಕ್ಕಮ್ಮನೂರಾದ ಕಾರ್ಕಳಕ್ಕೆ ಕಾಲಿಟ್ಟಾಗ.
ಆದರೆ ಅದೊಂದು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವದಂತಾಗಿದ್ದು ಮಾತ್ರ ಬೇರೆಯದೇ ಕಥೆ. ನನ್ನ ಅಪ್ಪ ಅಮ್ಮನಲ್ಲಿದ್ದ ಸಮರಸದ ಕೊರತೆಯಿಂದ ಅವರಿಬ್ಬರೂ ಯಾವಾಗಲೂ ಒಂದಾಗಿರುತ್ತಿದ್ದುದು ಕಡಿಮೆ. ಒಂದು ವೇಳೆ ಹಿರಿಯರ ರಾಜಿ-ಕಬೂಲಿಯಿಂದ ಜೊತೆಯಾದರೂ ಆ ಅಂಕ ಆದಷ್ಟು ಬೇಗ ಸರಿದು ಮತ್ತೊಂದು ರಾಜಿಗೆ ವೇದಿಕೆ ಸಿದ್ಧವಾಗುವ ತನಕ ಬೇರೆಯಾಗಿರುತ್ತಿದ್ದರು. ಅಮ್ಮ ತವರಿನಲ್ಲೇ ಬಿಡಾರ ಹೂಡಿರುತ್ತಿದ್ದರಿಂದ ನಾನು ಅಲ್ಲೆ ಉಳಿಯಬೇಕಾಗುತ್ತಿತ್ತು. ಹೀಗಾಗಿ ನನ್ನ ಹೆತ್ತವರ ಬಗ್ಗೆ ಕುಟುಂಬದಲ್ಲಿ ಅಂತಹ ಆದರವೇನೂ ಇರಲಿಲ್ಲ. ದುರಾದೃಷ್ಟಕ್ಕೆ ಅದಕ್ಕೆ ಬಲಿಯಾದವರು ಮಾತ್ರ ನಾವು ಮಕ್ಕಳು. ಅದೇ ಕಾರಣ ಬೊಟ್ಟು ಮಾಡಿ ಚಿಕ್ಕಮ್ಮ ಊರಿಗೆ ಕರೆಸಿಕೊಂಡರೂ ಮನೆಯಲ್ಲಿ ಇರಗೊಡದೆ ಹಾಸ್ಟೆಲ್ಳಿಗೆ ಸೇರಿಸಿ ಬಿಟ್ಟರು. ಕೂಗಳತೆಯ ದೂರದಲ್ಲಿದ್ದರೂ ಅವರ ಮನೆಗೆ ಬಾರದಂತಹ ವಾತಾವರಣ. ಬಹುಷಃ ಆಗಿನಿಂದಲೇ ಒಂಟಿತನಕ್ಕೆ ನಾನು ಹೊರಳಿಕೊಂಡೆ ದೈಹಿಕವಾಗಿಯೂ...ಮಾನಸಿಕವಾಗಿಯೂ.
ಹುಟ್ಟಿ ಬೆಳೆದ ಊರನ್ನು, ಅದರ ಸೆಳೆಯುವ ನೆನಪುಗಳನ್ನು ಬಿಟ್ಟು ಮತ್ತೊಂದು ಹೊಸ ಪ್ರಪಂಚಕ್ಕೆ ಕಾಲಿಡುವುದು ಅಪಾರ ಯಾತನೆಯ ಸಂಗತಿ. ಅದರಲ್ಲೂ ಇನ್ನು ಈ ಊರಿನ ಋಣ ಹರಿದಂತೆ ಎನ್ನುವ ಅಗೋಚರ ಭಾವವೊಂದು ಮನದೊಳಗೆ ವೇದನೆಯ ಅಲೆ ಎಬ್ಬಿಸುತಿರುವಾಗಲಂತೂ ಯಾತನೆ ಆಡಲೂ ಅನುಭವಿಸಲೂ ಆಗದಂತಾಗಿ ಮನವ ಹಿಂಡುತ್ತದೆ. ನನ್ನ ವಿಷಯದಾಲ್ಲಂತೂ ಆ ಊರಿನ ಋಣ ಅಂದಿಗೆ ಹರಿದಿದ್ದು ವಾಸ್ತವವೂ ಹೌದು. ಮೊದಲ ಬಾರಿಗೆ ತೀರ್ಥಹಳ್ಳಿ ತೊರೆದು ಕಾರ್ಕಳದ ಹಾದಿ ಹಿಡಿದಾಗ ನನ್ನೊಳಗೆ ತುಂಬಿದ್ದುದೂ ಅದೆ ಯಾತನೆ.
ನಾನು ಹುಟ್ಟಿ (ಆಗಿನ ಪದ್ದತಿಯಂತೆ ನನ್ನ ಹುಟ್ಟು ಮನೆಯಲ್ಲೇ ಆಗಿತ್ತು) ಬೆಳೆದ ಮನೆ,ಬಾಲ್ಯದಿಂದ ಚಿರಪರಿಚಿತವಾಗಿದ್ದ ನಮ್ಮ ಕೇರಿಯ ಪರಿಸರ. ಮನೆಯ ಹಟ್ಟಿ ತುಂಬಿದ್ದ ಭಾನು, ಲಕ್ಷ್ಮಿ, ಕುರುಡಿ, ಬೂಚ, ತುಂಗೆ, ನೇತ್ರ (ಇವಳೊಬ್ಬಳೆ ನಮ್ಮಲ್ಲಿದ್ದ ಎಮ್ಮೆ), ನಂದಿನಿ ಮತ್ತವರ ಅಸಂಖ್ಯ ಸಂತಾನ, ಚಳಿಯ ದಿನಗಳಲ್ಲಿ ರಾತ್ರೆ ಮನೆಯೊಳಗೆ ಎಳೆಕರುಗಳನ್ನು ಗೋಣಿತಾಟಿನ ಮಲಗಿಸಿ ಕೊಳ್ಳುತ್ತಿದ್ದುದು. ಅದೆಷ್ಟೊ ಬಾರಿ ಅವುಗಳ ಅಭೋದ ಕಣ್ಣುಗಳಿಗೆ ಮನಸೋತು ಹಟಾಮಾಡಿ ಅವು ಮಲಗುವ ಗೋಣಿಯಲ್ಲೇ ಅವುಗಳ ತಬ್ಬಿಕೊಂಡು ಆ ಸಿನಗುವಾಸನೆಯ ಸವಿಯಲ್ಲೇ ನಿದ್ರೆಗೆ ಜಾರುತ್ತಿದ್ದುದು. ಆದರೆ ಬೆಳಗಾಗೆದ್ದು ನೋಡುವಾಗ ಮಾತ್ರ ಅದು ಹೇಗೋ ಅಮ್ಮನ ಕಂಬಳಿಯಿಂದಲೇ ಹೊರಗೆ ಇಣುಕುತ್ತಿದ್ದುದು! ಈ ಎಲ್ಲ ಸವಿನೆನಪುಗಳ ಬಿಟ್ಟು ಮೂಕ ಬಲಿಪಶುವಿನಂತೆ ಇನ್ನೆಲ್ಲಿಗೋ ಒತ್ತಾಯಪೂರ್ವಕವಾಗಿ ಹೋಗುವಂತಿತ್ತು ನನ್ನ ಸ್ಥಿತಿ.
ಆದರೆ ಹೋಗದೆ ವಿಧಿಯಿಲ್ಲ. ಹೆತ್ತವರ ನಿರ್ಲಕ್ಷ್ಯ, ಸುತ್ತಲಿನವರ ಸಸಾರಗಳ ಸಹಿಸಲಾಗದೆ ಇರುವುದಕ್ಕಾದರೂ ಊರು ಬಿಡಲೇಬೇಕಿತ್ತು. ಆದೆ ನನ್ನ ವಿಧಿ. ಹೀಗಾಗಿ ನಾನು ನನ್ನ ನಾಲು ಜೊತೆ ಅಂಗಿ-ಚಡ್ಡಿಗಳ ಜೊತೆ ಬೈರಾಸು ಒಂದೆರಡು ಬಹುಮಾನವಾಗಿ ಬಂದಿದ್ದ ಪುಸ್ತಕಗಳನ್ನು ಜತನವಾಗಿ ಬಟ್ಟೆಯ ಚೀಲದಲ್ಲಿಟ್ಟುಕೊಂಡು, ಕಿತ್ತುಹೋಗಿದ್ದ ಬಾರನ್ನು ಕಳೆದ ವಾರವಷ್ಟೆ ಬದಲಿಸಿದ್ದ ನನ್ನವೆ ಹಳೆಯ ಹವಾಯಿ ಚಪ್ಪಲಿಗಳನ್ನು ಮೆಟ್ಟಿಕೊಂಡು (ನನಗಾಗ ಪದೆಪದೆ ಚಪ್ಪಲಿ ಕೊಡಿಸುವವರ್ಯಾರೂ ಇರಲಿಲ್ಲ, ಹೆಚ್ಚೆಂದರೆ ಹರಿದ ಚಪ್ಪಲಿಗೆ ಬಾರು ಹಾಕಿಸಿ ಕೊಡುತ್ತಿದ್ದರು ಅಷ್ಟೆ!) ಅಜ್ಜನ ಬೆನ್ನು ಹಿಡಿದು ಊರು ಬಿಟ್ಟೆ. ದುರಂತವೆಂದರೆ ಎರಡುದಿನ ಹಿಂದಿನವರೆಗೂ ನನ್ನ ಈ ಗಡಿಪಾರಿನ ವಿಷಯ ಸ್ವತಃ ನನಗೆ ಗೊತ್ತೇ ಇರಲಿಲ್ಲ! ಗೊತ್ತಾದ ನಂತರದ ಕಡೆಯ ಎರಡು ದಿನಗಳು ವಿಪರೀತ ಮಂಕಾಗಿದ್ದೆ ಹಾಗು ಬೆಳಗ್ಗೆ ಮಲಗಿದ್ದವ ಏಳುವಾಗ ದಿಂಬು ಅದು ಏಕೋ ಒದ್ದೆಯಾಗಿರುತಿತ್ತು.
Subscribe to:
Post Comments (Atom)
1 comment:
ಬಾಲ್ಯದ ದಿನಗಳ ಲೇಖನ..ಎಷ್ಟು ಓದಿದರೂ ಮನಸು ತಣಿಯುವುದಿಲ್ಲ..ಸುಂದರ ಲೇಖನ, ಆ ನೋವು, ಹತಾಶೆ, ಬೇಸರ ಎಲ್ಲವು ನಿಮ್ಮ ಲೇಖನದಲ್ಲಿ ಮಾರ್ಧನಿಗಯ್ಯುತ್ತಿದೆ..ಅಭಿನಂದನೆಗಳು
Post a Comment