ಒಂಟೆತ್ತಿನ ಗಾಡಿಯ ಮೇಲೆ ಎರಡೂ ಪಕ್ಕ ಜೋತು ಬಿದ್ದ ಪೋಸ್ಟರ್ ಗಳ ಸಂದಿಯಲ್ಲಿ ಸಿಕ್ಕಿಸಿದ ಡೈನಮೋ ಚಾಲಿತ ಸ್ಪೀಕರಿನಲ್ಲಿ ಫಕೀರನ ಕೀರಲು ಧ್ವನಿ ಮೂರು ದಿಕ್ಕಿಗೂ ಮಾರ್ದನಿಸಿ ಕಿವಿಯ ಮೇಲೆ ಬಿದ್ದಾಗ ಬಾಲ್ಯದಲ್ಲಿ ಚಡ್ಡಿ ಪೈಲ್ವಾನರಾಗಿದ್ದ ನಮಗೆಲ್ಲರಿಗೂ ಇಹಪರದ ಅರಿವು ಕ್ಷಣಕಾಲ ಮರೆತು ಹೋಗುತಿತ್ತು. "ಒಮ್ಮೆ ನೋಡಿದರೆ ಮತ್ತೊಮ್ಮೆ ...ಮತ್ತೆ ನೋಡಿದರೆ ಮಗದೊಮ್ಮೆ..ಹೀಗೆ ಬಾರಿ ಬಾರಿಗೂ ನೋಡಲೇಏಏಏಏಏಏ.... ಬೇಕೆನಿಸುವ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಹೋನ್ನತ {ಅದೆಷ್ಟೇ ಕಳಪೆ ಸೀ-ಗ್ರೇಡಿನದಾಗಿದ್ದರೂ!} ಕನ್ನಡ ಚಲನಚಿತ್ರ ನಿಮ್ಮ ನೆಚ್ಚಿನ (?!) ವೆಂಕಟೇಶ್ವರ ಚಿತ್ರಮಂದಿರದಲ್ಲಿ........ ನೋಡಲು ಮರೆಯದಿರಿ..... ಮರೆತು ನಿರಾಶರಾಗದಿರಿ!" ಎಂಬ ಫುಲ್'ಸ್ಟಾಪ್, ಕಾಮಾ ಒಂದೂ ಇಲ್ಲದ ಉದ್ಘೋಷ ಕಿವಿಯಂಚಿಗೆ ತಲಪುತ್ತಲೇ ಮನಸ್ಸು ಹೆಂಡ ಕುಡುಕನಿಗೆ ಮದ್ಯದಂಗಡಿ ಎದುರಾದಾಗ ಆಗುವಂತೆ ಆಗಿ ಚಡಪಡಿಸಿ ಹೋಗುತ್ತಿತ್ತು! ಯಾವಾಗ ಎದ್ದು ಆ ಬಂಡಿ ಹಿಂದೆ ಓಡಲಿಲ್ಲ. ಒಂಚೂರೂ ಅರ್ಥವಾಗದಿದ್ದರೂ ಫಕೀರ ಎಸೆಯುತ್ತಿದ್ದ "ಮಹೋನ್ನತ ಕನ್ನಡ ಚಲನಚಿತ್ರ"ದ(?) ಹ್ಯಾಂಡ್‍ಬಿಲ್ ಸಂಪಾದಿಸಿ ಹಿಡಿಯಲಿಲ್ಲ.... ಎಂಬ ಉಮೇದು ಅಕಾಲದ ಹುಚ್ಚಿನಂತೆ ಉಕ್ಕೇರಿ ಬಿಡುತ್ತಿತ್ತು. ನನ್ನಂತೆ ಅವನ ಮೋಹಕ(?) ಸ್ವರ ಮಾಧುರ್ಯಕ್ಕೆ ಮನಸೋತ ನನ್ನದೇ ವಯಸ್ಸಿನ ಇನ್ನಿತರ ಪ್ರತಿಸ್ಪರ್ಧಿಗಳ ಪೈಪೋಟಿಯೂ ತಡವಾದಂತೆಲ್ಲ ಹೆಚ್ಚುವ ಸಹಜ ಸಾಧ್ಯತೆಯೂ ಇರುವುದರಿಂದ ಈ ತಹತಹಿಕೆ-ಆತಂಕ ಸಹಜ.
ಹೆಸರಿಗೆ ಫಕೀರ ನಮ್ಮೂರಿನ ಏಕಾಮೆದ್ವಿತೀಯವಾಗಿದ್ದ ಶ್ರೀವೆಂಕಟೇಶ್ವರ ಚಿತ್ರಮಂದಿರದ ಗೇಟ್ ಕೀಪರ್ ಆಗಿದ್ದವ. ಸಮಯಕ್ಕೆ ತಕ್ಕಂತೆ ಟಿಕೆಟ್ ಮಾರಾಟ, ಸಿನೆಮ ಪ್ರಚಾರಕ, ಅಗತ್ಯಬಿದ್ದರೆ ಉದ್ದನೆಕೋಲಿನಿಂದ ಅರ್ಧಕ್ಕೆ ಎದ್ದುನಿಂತು ಸತಾಯಿಸುತ್ತಿದ್ದ ಪರದೆಯನ್ನ ಪೂರ್ತಿ ಎತ್ತಿ ಸರಿಸೋದು ಮಾಡುತ್ತಾ ಒಟ್ಟಾರೆ ಅಲ್ಲಿನ ಮಟ್ಟಿಗೆ ಆಲ್ ಇನ್ ವನ್ ಆಗಿದ್ದ. ಅವನ ಕೀರಲು ಕಂಠದ ಪುಂಗಿಯ ನಾದಕ್ಕೆ ಮನ ಸೋಲುವ ಮಿಡಿನಾಗರಗಳಂತಹ ನನ್ನಂತ ಅನೇಕ ಅಭಿಮಾನಿಗಳೂ ಅವನಿಗಿದ್ದೆವು ಎಂಬುದೂ ಸತ್ಯ. ಅವನ ಗಾಡಿ ಸಿಂಗಾರಗೊಂಡು ಬೀದಿಗಿಳಿದರೆ ನಮ್ಮ ನಿರೀಕ್ಷೆ ಗರಿಗೆದರುತ್ತಿತ್ತು. ಅವನ ವಿವರಣೆ ಹಾಗೂ ಧ್ವನಿಯ ಏರಿಳಿತದ ಗುಣಮಟ್ಟ ಚಿತ್ರಗಳಲ್ಲಿ ನಟಿಸಿರುತ್ತಿದ್ದ ನಟರ ಇಮೇಜಿಗೆ ತಕ್ಕಂತೆ ಏರಿಳಿಯುತ್ತ ಬದಲಾಗುತ್ತಿತ್ತು. ಪದ್ಮಭೂಷಣ ಡಾ,ರಾಜಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಪ್ರಣಯರಾಜ ಶ್ರೀನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಮಿನುಗುತಾರೆ ಕಲ್ಪನಾ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಕನಸಿನ ರಾಣಿ ಮಾಲಾಶ್ರಿ ಇವರೆಲ್ಲ ನನಗೆ ಮೊದಲಿಗೆ ಪರಿಚಿತರಾಗಿದ್ದು ಅದೇ ಫಕೀರಣ್ಣನ ಕೃಪೆಯಿಂದ!
ಅವನೊಂಥರಾ ತೀರ್ಥಹಳ್ಳಿಯ ಸಿನೆಮಾಭಿಮಾನಿಗಳ ಪಾಲಿನ ಕಿಂದರಿಜೋಗಿ. ಹಾಗೆ ನೋಡಿದರೆ ಆಗ ನಮ್ಮೂರಿನಲ್ಲಿ ಇನ್ನೂ ಒಂದು ಟಾಕೀಸು ಎಂಬ ಕಳ್ಳ ಹೆಸರಿನ ಜೈಶಂಕರ್ ಟೆಂಟು ಇತ್ತು. ಆದರೆ ಆಕರ್ಷಣೆಯ ಕೇಂದ್ರ ಮಾತ್ರ ಅವತ್ತೂ ವೆಂಕಟೇಶ್ವರನೇ- ಇವತ್ತೂ ಅವನೇ. ಆದರೆ ಅಂದು ಅದರ ತೂಕ ಇಂದಿಗಿಂತ ಚೂರು ಹೆಚ್ಚೇ ಇತ್ತು, ಏಕೆಂದರೆ ಮೂಗಿನಲ್ಲಿ ಮಾತನಾಡೋ ಫಕೀರ ಅಲ್ಲಿದ್ದ!
ನಮೋ ವೆಂಕಟೇಶಾ.....
ಅಳಿದ ಊರಿಗೆ ಉಳಿದವನೆ ಗೌಡ ಅಂತನ್ನಿ ಅಥವಾ ಕರುಡರೂರಿನಲ್ಲಿ ಒಕ್ಕಣ್ಣನೆ ಹೀರೋ ಎಂತಾದರೂ ಅನ್ನಿ, ಒಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ವೆಂಕಟೇಶ್ವರ ಚಿತ್ರಮಂದಿರಕ್ಕೆ ಎದುರಾಳಿಗಳಂತೂ ಇರಲೇಇಲ್ಲ, ಇಪ್ಪತ್ತೆರಡು ವರ್ಷಗಳ ಹಿಂದೆ ವಿನಾಯಕ ಟಾಕೀಸು ಹುಟ್ಟುವತನಕ! ಸಗಣಿ ಸಾರಿಸಿದ ನೆಲ-ಸರ್ವರಿಗೂ ಸಮಪಾಲು ಎಂಬಂತೆ ಉದ್ದಾನುದ್ದ ಪಟ್ಟಿ ಹೊಡೆದ ಬೆಂಚುಗಳಿದ್ದ ಟಾಕೀಸ್ ಎಂಬ ಆರೋಪ ಹೊತ್ತ ಜೈಶಂಕರ್ ಟೆಂಟ್.ಸಿಮೆಂಟಿನ ನೆಲ-ಎರಡೆರಡು ವರ್ಗ ಜೋತೆಗೆರಡು ಬಾಲ್ಕನಿಯೆಂಬ ಡಬ್ಬಗಳನ್ನು ಹೊಂದಿದ್ದ ವೆಂಕಟೇಶ್ವರದ ಮುಂದೆ ಮಂಕೋಮಂಕು.
ಚಿತ್ರವೊಂದು ಆರಂಭವಾಗುವ ಮುನ್ನ "ನಮೋ ವೆಂಕಟೇಶ"ದ ಹಿನ್ನೆಲೆಯಲ್ಲಿ ಬೆಳ್ಳಿತೆರೆಯ ಮೇಲಿನ ಕೆಂಪು ಮಕಮಲ್ಲಿನ ಪರದೆ ಮೇಲೇರುತ್ತಿತ್ತಾದರೂ ಪರದೆ ತುದಿ ತಲುಪುವಾಗ ಆ ಹಾಡು ಪೂರ್ತಿಯಾಗಿರುತ್ತಿರಲಿಲ್ಲವಾದರೂ ಅರ್ಧಕ್ಕೆ ಅದರ ಗರ್ಭಪಾತವಾಗಿ "ಡಿಸ್ಕೋ ಡ್ಯಾನ್ಸರ್"ನ (ಮಿಥುನ್ ಚಕ್ರವರ್ತಿಯ ಆ ಚಿತ್ರ ಆ ಕಾಲಕ್ಕೆ ಸೂಪರ್ ಹಿಟ್ ಆಗಿದ್ದು ಯುವಕರನ್ನು ಸೆಳೆದಿತ್ತು) "ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ ಆಜಾ..." ನಾಜಿಯ ಹಸನ್ ಧ್ವನಿಯಲ್ಲಿ ತೇಲಿಬರುತ್ತಿದ್ದ ಹಾಗೆ "ಧೂಮಪಾನ ಆರೋಗ್ಯಕ್ಕೆ ಹಾನಿಕರ" "ಬೀಡಿ-ಸಿಗರೇಟು-ಚುಟ್ಟ ವಗೈರೆ ಸೇದುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ" (ಈ ವಗೈರೆ ಅಂದರೆ ಏನು? ಎಂದು ಬಾಲ್ಯದುದ್ದಕ್ಕೂ ನಾವೆಲ್ಲ ಆಗ ತಲೆ ಕೆಡಿಸಿಕೊಳ್ಳುತ್ತಿದ್ದೆವು!) ಮುಂತಾದ ಅಣಿಮುತ್ತುಗಳ ಸ್ಲೈಡ್ ಬಂದು. ಆನಂತರ ಮುಂಬರುವ ಚಿತ್ರಗಳ ಸ್ಲೈಡ್ ಬರುವುದನ್ನೇ ಜಾತಕಪಕ್ಷಿಗಳಂತೆ ಚಿತ್ರ ರಸಿಕರು ಕಾತರದಿಂದ ಕಾಯುತ್ತಿದ್ದೆವು. ಆನಂತರ ಬರುತ್ತಿದ್ದುದೆ ನಾವೆಲ್ಲರೂ ಎಷ್ಟು ರೀಲ್ ಎಂದು ನೋಡಿ ಹೇಳಲು ಕಾಯುತ್ತಿದ್ದ ಸೆನ್ಸಾರ್ ಸರ್ಟಿಫಿಕೆಟ್. ಅದರ ಉದ್ದ ಅಡಿಗಳಲ್ಲೋ ಮಾರುಗಳಲ್ಲೋ ಒಂದೂ ಅರಿವಿಲ್ಲದಿದ್ದರೂ ಪಂಡಿತರಂತೆ ರೀಲಿನ ಸಂಖ್ಯೆ ಓದಿ ಚಿತ್ರದ ಜಾಯಮಾನವನ್ನ ನಿರ್ಧರಿಸುವ ಜ್ಯೋತಿಷ್ಯವನ್ನ ಉದುರಿಸಿ ನಿಸೂರಾಗುತ್ತಿದ್ದೆವು. ಇದೆಲ್ಲ ಆಗುವಾಗಲೇ ಉರಿಯುತ್ತಿದ್ದ ಮೂರು-ಮತ್ತೊಂದು ಲೈಟುಗಳು ಕುಗುರುವವರಂತೆ ಉದಾಸೀನದಿಂದ ಕಣ್ಣು ಮುಚ್ಚುತಿದ್ದವು. ಅಲ್ಲಿಗೆ ನಮ್ಮ ಕಲ್ಪನೆ ಊಹೆ, ಮುಂಬರುವ ಚಿತ್ರಗಳ ನೋಡುವ ಭವಿಷ್ಯದ ಯೋಜನೆಯ ಮನೋವ್ಯಾಪಾರಗಳೆಲ್ಲ ಮುಗಿದು ಕನಸಿನ ಲೋಕಕ್ಕೆ ಾಅಯಾಚಿತವಾಗಿ ಜಾರಿಕೊಳ್ಳುತ್ತಿದ್ದೆವು.
ಹೀಗೆ ಆರಂಭವಾಗಿ ನಮ್ಮನ್ನ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತಿದ್ದ ಚಿತ್ರಗಳಲ್ಲಿ ಇನ್ನೇನು "ರೋಮಾಂಚಕಾರಿ" ಸೀನ್ ಬರಬೇಕು ವಾಡಿಕೆಯಂತೆ ಆಗ ತಟ್ಟನೆ ಕರೆಂಟ್ ಕೈಕೊಟ್ಟು ಬಿಡುತ್ತಿತ್ತು! ಇದು ಯಾವಾಗಲೂ ಹೀಗೆ. ಎಲ್ಲರೂ ಮನಸಿಟ್ಟು ನೋಡುತ್ತಿರುವಾಗಲೆ ರೀಲ್ ಕಟ್ ಆಗೋದೊ ಇಲ್ಲ ಕರೆಂಟ್ ಕೈಕೊಡೋದೊ ಆಗಿ ಟಾಕೀಸ್ ಒಳಗೆ ಕುಳಿತ ಊರಿನ "ಸಭ್ಯ" ಪ್ರೇಕ್ಷಕ ಪ್ರಭುಗಳು ಫಕ್ಕನೆ ನಾಯಿ-ಗೂಬೆಗಳ ಧ್ವನಿಯಲ್ಲಿಯೋ: ಅಪರೂಪಕ್ಕೆ ಕಾಗೆಯ ಕೀರಲಿನಲ್ಲಿಯೋ ಅವಾಚ್ಯವಾಗಿ ಫಕೀರನ ಅಮ್ಮ -ಅಕ್ಕನ್ನನ್ನೂ ಬಿಡದೆ ನಿವಾಳಿಸಿ ಕೂಗೋದು, ಕೂಡಲೆ ರೀಲೋಡಿಸುವುದನ್ನ ಇದ್ದಲ್ಲಿಯೆ ಬಿಟ್ಟು ಅವ ಓಡಿಹೋಗಿ ಜನರೇಟರಿಗೆ ಜೀವ ತುಂಬಿ ಅದರ ರಣ ಭೀಕರ ಹಿನ್ನೆಲೆ ಸದ್ದಿನೊಂದಿಗೆ ಮತ್ತೆ ನಿಂತ ರೀಲೋಡಿಸುವುದು. ಪುನಃ ನಿಂತಲ್ಲಿಂದಲೆ ಶುರುವಾಗೋ ಸೀನಿನಲ್ಲಿ ಅಷ್ಟು ಹೊತ್ತು ತತ್ಕಾಲಿಕವಾಗಿ ಆದಿಮಾನವರಾಗಿರುತ್ತಿದ್ದ ಎಲ್ಲರೂ ಪುಂಗಿಗೆ ಮನಸೋತ ಹಾವಿನಂತೆ ತನ್ಮಯರಾಗೋದು ಇವೆಲ್ಲ ನಿತ್ಯದ ಸಂಪ್ರದಾಯದಂತೆ ನಡೆದುಹೊಗುತಿತ್ತು. ದಿನಾ ನಡೆಯುವ ಈ ಜಂಜಾಟಗಳನ್ನೆಲ್ಲ ಫಕೀರನಾಗಲಿ, ಅವನ "ಮಹೋನ್ನತ ಚಿತ್ರ"ದ ರಸಿಕ ಪ್ರೇಕ್ಷಕರಾಗಲಿ ಎಂದಿನ ಅಭ್ಯಾಸ ಬಲದಿಂದ ಎಂಬಂತೆ ತಲೆಕೆಡಿಸಿಕೊಳ್ಳದೆ ಅನುಭವಿಸುತ್ತಿದ್ದರು!
ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ....
ಕಾಲ ಕಳೆದಂತೆ ಬದಲಾವಣೆಯ ಗಾಳಿ ತೀರ್ಥಹಳ್ಳಿಯಲ್ಲೂ ಬೀಸಿತಲ್ಲ, ಫಕೀರನ ಒಂಟೆತ್ತಿನ ಜಾಗಕ್ಕೆ ಆಟೋರಿಕ್ಷಾ ಆಧುನಿಕತೆಯ ಸ್ಪರ್ಶ ನೀಡಿತು. ಸೋಮವಾರ ತೀರ್ಥಹಳ್ಳಿಯಲ್ಲಿ ಸಂತೆ ಹೀಗಾಗಿ ಬೇರೆಡೆಯಲ್ಲಿ ಶುಕ್ರವಾರ ಸಿನೆಮಾಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇಲ್ಲಿ ಮಾತ್ರ ಸೋಮವಾರ "ಮುಂಬರುವ" ಸಿನೆಮಾಗಳನ್ನು ನೋಡಬಹುದಾಗಿತ್ತು. ಹಾಗಂತ ಹೊಸ ಚಿತ್ರಗಳೇನು ದಾಂಗುಡಿಯಿಟ್ಟು ಬರುತ್ತಿರಲಿಲ್ಲ. ಅಲ್ಲಿಯ ಮಟ್ಟಿಗೆ ಹೊಸತು ಎಂದರೆ ಕೇವಲ ಎರಡು ವರ್ಷದ ಹಿಂದೆ ತೆರೆಕಂಡು ಡಬ್ಬ ಸೇರಿರುತ್ತಿದ್ದವುಗಳಷ್ಟೆ. ಟಿವಿ ಲಭ್ಯತೆ ಮರಳುಗಾಡಿನ ಓಯಸಿಸ್ ಆಗಿದ್ದ ದಿನಗಳಲ್ಲಿ ಮನರಂಜನೆಗೆ ಬರಗೆಟ್ಟವರಂತೆ ಟಾಕೀಸಿನ ಸಿನೆಮಾಗಳನ್ನೆ ನೆಚ್ಚಿಕೊಂಡಿದ್ದ ತೀರ್ಥಹಳ್ಳಿ ಸುತ್ತ-ಮುತ್ತಲಿನವರಿಗೆ ಈ ಹಳಸಲು ಸರಕೆ ಮೃಷ್ಟಾನ್ನವಾಗಿತ್ತು. ಆಟೋ ಬಂದಮೇಲೆ ಫಕೀರನ ಪ್ರಚಾರದ ಖದರ್ರೆ ಬದಲಾಯ್ತು. ಹೊಸ ಸಿನೆಮಾ ಬಂದ ಮೊದಲದಿನ ಪೇಟೆಯಲ್ಲಿ, ಇನ್ನುಳಿದ ದಿನಗಳ ಸುತ್ತಲಿನ ಮಂಡಗದ್ದೆ, ಕೋಣಂದೂರು, ಮೇಗರವಳ್ಳಿ, ದೇವಂಗಿ, ಬಸವಾನಿ, ಹೆದ್ದೂರು, ಕಟ್ಟೆಹಕ್ಕಲು ಸಮೀಪದ ಹಳ್ಳಿಗಳಲ್ಲೂ ಫಕೀರನ "ಪ್ರತೀ ದಿನ ಕೇವಲ ಮೂರು ದೇಖಾವೆಗಳು... ನೋಡಲು ಮರೆಯದಿರಿ,ಮರೆತು ನಿರಾಶರಾಗದಿರಿ" ಎಂಬ ರಿಪಿಟೆಡ್ 'ಅಮೃತವಾಣಿ' ಎಡೆಬಿಡದೆ ಮೊಳಗುವಂತಾಯಿತು.
ಇನ್ನು ಸಂತೆಗೆ ಬಂದ ಜನ ಮರಳಿ ಅವರವರ ಊರಿಗೆ ಮರಳುವ ಮುನ್ನ ಟಿಕೇಟ್ ಇಲ್ಲದ ಇನ್ನೊಂದು ಪುಕ್ಕಟೆ ಮನರಂಜನೆಯೂ ಅವರೆಲ್ಲರಿಗಾಗಿ ಕಾದಿರುತಿತ್ತು. ಊರಿನ ಹೃದಯ ಭಾಗವಾದ ಗಾಂಧಿಚೌಕದಲ್ಲಿ ನಿಂತಿರುತ್ತಿದ್ದ ಖಾದರ್ ಸಾಬರ ಮೂರು ಮಾರ್ಕಿನ ಬೀಡಿಗಳ ಪ್ರಚಾರದ ವ್ಯಾನ್ ಮೇಲೆ ಮಿರಿಮಿರಿ ಮಿಂಚುವ ಸ್ಕರ್ಟ್-ಟೈಟ್ ಪ್ಯಾಂಟ್ ಹಾಕಿದ್ದ ಹೆಣ್ಣು ವೇಷದ ದಿಲೀಪ, ಮತ್ತವನ ಅರ್ಜೆಂಟ್ ಹೀರೋನ ಕಾಂಬಿನೇಶನ್'ನಲ್ಲಿ "ಚಳಿಚಳಿ ತಾಳೆನು ಈ ಚಳಿಯ" (ನಿಜವಾಗಿಯೂ ಆಗ ಚಳಿ ಇರುತ್ತಿತ್ತು!), "ಪ್ರೀತಿಯೇ ನನ್ನುಸಿರೂ" "ಯಾರ್ ಬಿನ ಚೇನ್ ಕಹಾನ್ ರೆ?" "ಡ್ಯಾನ್ಸ್ ವಿತ್ ಮೀ..ಮೇರಿ ಮೇರಿ ಡಿಸ್ಕೋ" "ಮೇರಿ ಮೇರಿ ಮೇರಿ ಐ ಲವ್ ಯೂ" ಮುಂತಾದ ಡಿಸ್ಕೋ ನಂಬರ್‍ಗಳಿಗೆ ಚಳಿಯಲ್ಲೂ ಮೈಬಿಸಿಯೇರಿಸುವ ಸೆನ್ಸಾರ್ ಹಂಗಿಲ್ಲದ ಮಾದಕ ನೃತ್ಯವಿರುತ್ತಿತ್ತು. ಬಪ್ಪಿ ಲಹರಿಯ ಭಕ್ತರನೇಕರು ಆ ಪೀಳಿಗೆಯ ಯುವಕರಾಗಿದ್ದರಿಂದ ಈ ಬಹಿರಂಗ ಲೈವ್ ಬ್ಯಾಂಡ್(!) ನೋಡಲು ಕಲಾರಸಿಕರ(?) ಹಿಂಡೆ ಅಲ್ಲಿ ನೆರೆದಿರುತ್ತಿದ್ದು ಈ ಮಾದಕ ನೃತ್ಯದ ನಡುನಡುವೆ ಅವನ ಮೋಹಕ ಬೆರಳುಗಳು ತಮ್ಮತ್ತ ವಯ್ಯಾರದಿಂದ ಎಸೆಯುತ್ತಿದ್ದ ಮೂರೆಮೂರು ಬೀಡಿಗಳ ಸ್ಯಾಂಪಲ್ ಬೀಡಿಕಟ್ಟಿಗಾಗಿ ಅಕ್ಷರಶಃ ಪ್ರೇಕ್ಷಕ ಪ್ರಭುಗಳ ನಡುವೆ ಹೊಯ್-ಕೈ ಮಟ್ಟಿನ ಲಘು ಕುಸ್ತಿಯ ಪೈಪೋಟಿ ಏರ್ಪಡುತ್ತಿತ್ತು, ಇಂತಹ ಉನ್ಮತ್ತ ಕಲಾರಸಿಕರನ್ನು ನಿಯಂತ್ರಿಸಲು ಒಬ್ಬ ಲಾಠಿಧಾರಿ ಪೊಲೀಸ್ ಪೇದೆ ಅಲ್ಲಿ ಯಾವಾಗಲೂ ಸ್ವಯಂ ಸ್ಪೂರ್ತಿಯಿಂದ ಹಾಜರಿರುತ್ತಿದ್ದ ಹಾಗು ಸುಂದರಿಯರನ್ನೆಲ್ಲ ಮೀರಿಸುವಂತೆ ಮಿಂಚುತ್ತಿದ್ದ ದಿಲೀಪನ ಮಾದಕ(?!) ದೇಹಸಿರಿಯನ್ನ ಹಸಿದ ಕಣ್ಣುಗಳಿಂದ ನೋಡುವುದರಲ್ಲೇ ಅವನೂ ಮೈಮರೆಯುತ್ತಿದ್ದ. ದಿಲೀಪ ಹೆಣ್ಣು ವೇಷದ ಗಂಡು ಎಂಬ ಬಹಿರಂಗ ಸತ್ಯ ಅಲ್ಲಿ ನೆರೆದವರಿಗೆಲ್ಲ ಸ್ಪಷ್ಟವಾಗಿ ಗೊತ್ತಿದ್ದರೂ ಅವನ ಕಲೆಯ(!) ಆಸ್ವಾದನೆಯಲ್ಲಿ ಅಲ್ಲಿ ನೆರೆದವರ್ಯಾರೂ ಹಿಂದೆ ಬೀಳುತ್ತಿರಲಿಲ್ಲ ಹಾಗೂ ಅದೆಷ್ಟೆ ತುರ್ತಿದ್ದರೂ ಸಹ ಕಟ್ಟ ಕಡೆಯ "ಐಯಾಮ್ ಎ ಡಿಸ್ಕೋ ಡ್ಯಾನ್ಸರ್" ಕುಣಿತ ನೋಡದೆ ಜಾಗ ಖಾಲಿ ಮಾಡುತ್ತಲೂ ಇರಲಿಲ್ಲ! ದಿಲೀಪನ ನಶೆ ಹೆಚ್ಚಾದ ಅವನ ಕೆಲವು ಕಟ್ಟಾ ಅಭಿಮಾನಿಗಳು ಅವ ವ್ಯಾನ್‍ನಿಂದಿಳಿದು ಚೌಕದ ಕಟ್ಟೆಯ ಮೇಲೆ ಅದೇ ಮೂರು ಮಾರ್ಕಿನ ಬೀಡಿ ಸೇದುತ್ತ ಕುಳಿತಿರುವುದನ್ನು ಕೂಡ ಕದ್ದುಮುಚ್ಚಿ ಬರಗೆಟ್ಟವರಂತೆ ಆಸೆ ಕಂಗಳಿಂದ ನೋಡುತ್ತಿದ್ದರು!
ಇಂದು ಫಕೀರನೂ ಇಲ್ಲ, ಖಾದರ್ ಸಾಬರೂ ಇಲ್ಲ, ಕಾರ್ಖಾನೆಗೆ ಬೀಗ ಬಿದ್ದು ಮೂರು ಮಾರ್ಕಿನ ಬೀಡಿಗಳೂ ಬದುಕುಳಿದಿಲ್ಲ ಹಾಗು ನೇಣು ಹಾಕಿಕೊಂಡು ಸತ್ತ ಮೇಲೆ ವ್ಯಾನ್ ಮೇಲೆ ದಿಲೀಪನ ಮಾದಕ ನೃತ್ಯವೂ ಇಲ್ಲ. ತೀರ್ಥಹಳ್ಳಿಯ ಇತಿಹಾಸವಾಗಿ ಹಳೆಯ ಪುಟಗಳ ಸಾಲಿಗೆ ಇವೆಲ್ಲವೂ ಸೇರಿ ಹೋಗಿವೆ. ಸಂತೆ ಮಾರ್ಕೆಟ್ಟಿನ ಕೊನೆಯಲ್ಲಿರುವ ಕವಿತಾ ಹೊಟೆಲಿನ ಮಣ್ಣು ಗೋಡೆಯ ಮೇಲೆ ಹೀಗಾಗಿಯೆ ಈಗ ಯಾವ ಕಲಾವಿದನೂ ರಾಜ್‍ಕುಮಾರ್, ಕಮಲಹಾಸನ್, ರಜನಿಕಾಂತ್, ಜಿತೇಂದ್ರ, ಅಮಿತಾಭ್ ಬಚ್ಚನ್ ಹಾಗೂ ಮಿಥುನ್ ಚಕ್ರವರ್ತಿಯ ಕೈಯಲ್ಲಿ ಮೋಟು ಬೀಡಿ ಇರುವಂತಹ ಅವರು ಸುರುಳಿ ಸುರುಳಿ ಹೊಗೆಯುಗುಳುವಂತಹ ಬೀಡಿಯ ಜಾಹಿರಾತನ್ನ ಬಿಡಿಸುವುದೂ ಇಲ್ಲ. ಅಂದಿದ್ದ ಜೀವಂತ ತೀರ್ಥಹಳ್ಳಿ ನಿಜಾರ್ಥದಲ್ಲಿ ಇಂದು ಎಲ್ಲೋ ಕಳೆದು ಹೋಗಿದೆ.
2 comments:
ಹಿಂದಿನ ಕಾಲದ ಆಧುನಿಕತೆಯ ಸ್ಪರ್ಶವಿಲ್ಲದ ಹಳ್ಳಿಗಳು ತುಂಬಾ ಸೊಗಸೆನಿಸಿದ್ದವು..ಪಟ್ಟಣದ ರೋಸು ಹೋದ ದಿನಗಳನ್ನು ಹಳ್ಳಿಯ ವಾತವರಣದಲ್ಲಿ ಕಳೆವುದು ನಿಜಕ್ಕೂ ಆಹ್ಲಾದಕರವಾಗಿರುತಿತ್ತು..ಹಳ್ಳಿಯ ನೈಜ ವಾತಾವರಣವನ್ನು ಕೆಲಕಾಲ ಮುಂದೆ ತಂದಿಟ್ಟ ನಿಮ್ಮ ಲೇಖನ..ನಿಜಕ್ಕೂ ಶ್ಲಾಘನೀಯ...ಸುಂದರ ಲೇಖನ..ಅಭಿನಂದನೆಗಳು..
ಹೂಂ
Post a Comment