ಚಿತ್ತ ಕದಡುವ ಮಾತೇಕೆ? ಅದ ಬಿಡು
ಮೌನದ ನಾವೆಯಲ್ಲೆ ಇನ್ನೊಂದು ಸುತ್ತು....
ಸುಮ್ಮನೆ ಸಾಗೋಣ,
ನೀ ನನ್ನ ಹೀಗೆ ನೋಡುತ್ತಿರು....
ನನ್ನ ಕಣ್ಣ ಕನ್ನಡಿಯಲ್ಲಿ ಎಂದಿಗೂ ನೀನೆ ಕಾಣುತ್ತಿರು,
ಮತ್ತೆ ಒಂದಾಗಿ ದೂರ ಸರಿಯೋಣ ಬಾ....!/
ಎದೆಯ ಅಂಗಳದಲ್ಲಿ ಬಿಡಿಸಿದ ಚಿತ್ತಾರಗಳೆಲ್ಲ
ನಿನ್ನೊಂದು ನುಡಿಗೆ ಕದಡಿಹೋದಾಗ....
ನಾನು ನಿಜವಾಗಿಯೂ ಬಾಳಲ್ಲಿ ಸೋತೆ,
ಇನ್ನುಳಿದುದಿರಲಿ ಕನಿಷ್ಠ ನಿನ್ನೊಲವನ್ನೂ ಗಟ್ಟಿ ಮಾಡಿಕೊಳ್ಳುವ ಯೋಗ್ಯತೆಯಿಲ್ಲದೆ
ತಿರುಕನಂತೆ ಕಂಡಿದ್ದ ಕನಸುಗಳನ್ನೆಲ್ಲ ನೋವಿನ ಜೊತೆ ಗತದ ಗೋರಿಯಲ್ಲಿ ನಗುತಲೆ ಹೂತೆ....!//
ಮೌನವ ತೋಯಿಸುವ ನೆನಪುಗಳ ಸಿಂಚನಕ್ಕೆ
ಒಡ್ಡಿಕೊಂಡ ಮನದ ಮಾಡಿನಿಂದ ....
ಎದೆಯಂಗಳಕ್ಕೆ ಇಳಿಯುತ್ತಿರುವ ಪ್ರತಿ ಹನಿಯಲ್ಲೂ,
ಆಳದಲ್ಲಿ ನಿನ್ನದೇ ಪಿಸುದನಿಯಿದೆ/
ಅದೇನೆ ಮರೆತೆನೆಂದು ಕಳ್ಳ ಸಮಾಧಾನ ನನಗೆ ನಾನೆ ಹೇಳಿಕೊಂಡರೂ...
ನಿನ್ನೊಲವ ಮಳೆ ನಿಂತಿದ್ದರೂನು,
ಅದೆಲ್ಲೊ ಕಣ್ಣಿನಾಳದಲ್ಲಿ ಕನಸ ಸೂರಿನಿಂದ ತೊಟ್ಟಿಕ್ಕುತ್ತಿರುವ
ಕಡೆಯದೊಂದು ನಿರೀಕ್ಷೆಯ ಹನಿಯಿದೆ//
ಸತ್ತ ಭಾವಗಳ ಗೋರಿ ಕಾಯುತ
ಅವ್ಯಕ್ತ ವಾಂಛೆಗಳ ಬಚ್ಚಿಟ್ಟುಕೊಂಡ....
ನನ್ನ ನಿರ್ಜೀವ ಕಂಗಳಲ್ಲಿ ನೀನೊಂದು ಹೊಳಪು ಮಾತ್ರ,
ನಾ ಬಯಸಿದರೂ ಅಳಿಸಿ ಹಾಕಲಾಗದ ನಮ್ಮಿಬ್ಬರ ಗತದ ನೆನಪುಗಳಲ್ಲಿ
ಹುದುಗಿರುವ ನೀನು ಈ ಬಾಳಲ್ಲಿ ಅಚ್ಚಳಿಯದ ಒಂದು ಪಾತ್ರ/
ನಿರೀಕ್ಷೆ ಸತ್ತ ಖಾಲಿ ಕನಸಿನ ಹಾದಿಯಲ್ಲಿ....
ನೀನಿಲ್ಲದೆ ನನ್ನದು ಕುರುಡು ಪಯಣ,
ನೋವಂತೂ ವಿವರಿಸಲಾಗದಷ್ಟು ಭೀಕರ
ಒಡೆದಿದೆ ಹೃದಯದಲ್ಲಿ ನೀ ಮೊಳಕೆಯೊಡೆಸಿದ್ದ....
ಒಂಟಿತನ ಮಾಗಿಸಿರುವ ನೋವಿನ ವೃಣ//
ಕನಸುಗಳ ಸಾಲ ನೀ ಕೊಟ್ಟಿದ್ದೆ
ಅದರ ಬಡ್ಡಿಯನ್ನೂ ಕಟ್ಟಲಾಗದೆ....
ನಾನಾದೆ ವಿಫಲ ಸಾಲಗಾರ,
ಮೌನದ ಹೆಣ ಕಾಯುವ ವೀರಬಾಹುವಿನ ನೌಕರಿ ಸಾಕು ಸಾಕಾಗಿದೆ....
ಬೇಕಿದೆ ಇನ್ನಷ್ಟು ನಿನ್ನ ಪ್ರೀತಿಯ ಪಗಾರ/
ಕನಸ ಕೊಲೆಯಾದ ನಂತರವೂ
ಮನಸು ಅರಳೋದು ತಾನೆ ಹೇಗೆ?,
ನಿರಂತರ ನಿರೀಕ್ಷೆಗಳ ಸುಡುತ್ತಿರುವಾಗ ಬಾಳಿನುದ್ದ
ನೀನಿಲ್ಲದ ವಿರಹದ ಬೇಗೆ//
20 October 2011
Subscribe to:
Post Comments (Atom)
1 comment:
ಕಡೆಯ ನಿರೀಕ್ಷೆಯನ್ನು ಹನಿಯು ಸೊಗಸಾಗಿ ಮೂಡಿ ಬಂದಿದೆ..
ಕನಸ ಕೊಲೆಯಾದ ನಂತರವೂ ಬದುಕ ಬಹುದು....ಕತ್ತಲೆಯ ನಂತರ ಬೆಳಕಿಹುದು...ನವ ವಸಂತಕ್ಕೆ ತಾಜಾ ಕನಸುಗಳು ಚಿಗುರಬೇಕು ಅರಳಬೇಕು....
Post a Comment