12 August 2010

ಸಂಜೆ ಸೂರ್ಯನೇ..

ಮನೆಯಿಂದ ಸುಮಾರು ಒಂದೂವರೆ ಫಾರ್ಲಂಗ್ ದೂರದಲ್ಲಿದ್ದ ನಮ್ಮ ಶಾಲೆ ಬಿಟ್ಟ ತಕ್ಷಣ ಮನೆಯತ್ತ ಓಟ ಹೂಡುವ ನನಗೆ ಮರಳಿ ಮನೆ ಸೇರೋಕೆ ಹೆಚ್ಚೆಂದರೆ ಹತ್ತು ನಿಮಿಷ ಸಾಕಾಗುತ್ತಿತ್ತು.ತೀರಾ ಸಂಪ್ರದಾಯ ಬದ್ಧತೆಯೂ-ಅದೇ ವೇಳೆಗೆ ವಿಶಾಲ ಮನೋಭಾವವೂ ಸಮಾಸಮ ವಾಗಿದ್ದ ಕುಟುಂಬದ ಹಿನ್ನೆಲೆ ನನ್ನದು.ಶಾಲೆ ಮುಗಿಸಿ ಮನೆಗೆ ಬಂದವನಿಗೆ ಮೊದಲು ಮನೆಯ ಸುತ್ತಲೂ ಬೆಳಸಿದ್ದ ಗಿಡಗಳಿಗೆ ನೀರು ಹಾಕುವ ಕೆಲಸವಿರುತ್ತಿತ್ತು.ಬರಿ ಚಡ್ಡಿಯಲ್ಲಿ ಭರಪೂರ ನೀರಾಡುವ ಸುವರ್ಣಾವಕಾಶವಿದು,ಬಿಟ್ಟರೆ ಕೆಟ್ಟಂತೆ! (ಇನ್ನುಳಿದ ದಿನದ ವೇಳೆಯಲ್ಲಿ ಅಪ್ಪಿತಪ್ಪಿ ಸುಮ್ಮನೆ ನೀರಿನಲ್ಲಿ ಕೈ ಬಿಟ್ಟರೂ ಬೆನ್ನ ಮೇಲೆ ಉಚಿತ ಹಾಗು ಖಚಿತವಾದ ಗುದ್ದುಗಳು ತಪ್ಪದೆ ಸಿಗುತ್ತಿದ್ದವು) ನೀರಾಟವಾಡಿದ ನಂತರ ಮನೆಯ ಹಟ್ಟಿಯಲ್ಲಿದ್ದ ಅಸಂಖ್ಯ ದನಗಳ ಹಿಂಡಿನಿಂದ ಅಮ್ಮ ಕರೆದಿಟ್ಟು ಅನಂತರ ಸಮ ಪ್ರಮಾಣದಲ್ಲಿ ನೀರು ಬೆರಿಸಿ ಕೊಟ್ಟ ಹಾಲನ್ನು ಪಾವು,ಕುಡ್ತೆ,ಲೋಟಗಳ ಲೆಕ್ಖದಲ್ಲಿ ವರ್ತನೆ ಮನೆಗಳಿಗೆ ಕೊಟ್ಟು ಬರಬೇಕಿತ್ತು.ಇದೊಂಥರಾ ಕಿರಿಕಿರಿಯ ಬಾಬತ್ತು.ಓಡೋಡುತ್ತ ಈ ಕೆಲಸ ಮಾಡುವಂತಿಲ್ಲ,ಕೊಂಚ ಅಲುಗಾಡಿದರೂ ವಯರಿನ ಚೀಲದಲ್ಲಿ ಜಾಗರೂಕತೆಯಿಂದ ಜೋಡಿಸಿಟ್ಟ ಹಾಲು ಚೆಲ್ಲಿ ಅವಾಂತರ.ಹಾಗೂ ಹೀಗೂ ಈ ಕೆಲಸವನ್ನು ಮುಗಿಸಿ-ಸಂಜೆಯ ಚಹದೊಟ್ಟಿಗೆ ಸಿಗುತ್ತಿದ್ದ ತಿಂಡಿಗೆ ಗತಿ ಕಾಣಿಸಿ ನೋಡುವಾಗ ಸುಮಾರಾಗಿ ಹೊತ್ತು ಕಂತಿರುತ್ತಿತ್ತು.ಆದರೂ ಛಲ ಬಿಡದ ತ್ರಿವಿಕ್ರಮನಂತೆ ನನ್ನ ಸಮ ವಯಸ್ಕರು ಆಡುವ ಮನೆ ಹತ್ತಿರದ ಬಯಲಿಗೆ ಓಡಿದರೂ ಅವರೆಲ್ಲರ ಆಟ ಮುಗಿಯುವ ಕೊನೆಯ ಕೆಲವು ಕ್ಷಣಗಳಷ್ಟೇ ಉಳಿದಿರುತ್ತಿದ್ದವು.ತಥ್ ತೆರಿಕಿ! ಯಾವಾಗಲೂ ನನ್ನದು ಇದೇ ಹಣೆಬರಹ.



ಅಂತೂ ಆಟದ ಶಾಸ್ತ್ರ ಮುಗಿಸಿ ಮನೆಗೆ ಬರುವಾಗ ನಿಚ್ಚಳ ಕತ್ತಲು ಕವಿದಿರುತ್ತಿತ್ತು.ಮನೆಗೆ ಬಂಡವ ಆಗಷ್ಟೇ ನನ್ನ ಚಿಕ್ಕಮ್ಮಂದಿರು ಗುಡಿಸಿ ಒರೆಸಿಟ್ಟಿರುತ್ತಿದ್ದ ನೆಲದ ಮೇಲೆ ಅಪ್ಪಿತಪ್ಪಿ ಕಾಲಿಟ್ಟೆನೋ ಕೆಟ್ಟೆ! ಆಕಾಶ ಭೂಮಿ ಒಂದಾಗಲು ಅಂತಹ ಸಂದರ್ಭದಲ್ಲಿ ಹೆಚ್ಚು ಸಮಯ ಬೇಕಾಗುತ್ತಿರಲಿಲ್ಲ.ತೀರಾ ಸೊಕ್ಕು ಹೆಚ್ಚಿದಾಗ ಇದ್ಯಾವದಕ್ಕೂ ಕೇರ್ ಮಾಡದೆ ಬಿಡುಬೀಸಾಗಿ ಒರೆಸಿದ ನೆಲದ ಮೇಲೆ ಬೇಕಂತಲೆ ಮಣ್ಣು-ಕೆಸರಾದ ಕಾಲುಗಳ ಚಿತ್ತಾರ ಮೂಡಿಸುತ್ತ ಮನೆ ಹೊಕ್ಕುತ್ತಿದ್ದೆ.ತೀರಾ ಕುನ್ನಿಯಂತೆ ನಯವಂಚಕ ನರಿ ಮಾದರಿಯಲ್ಲಿ ಬಾಲ ಮಡಚಿಕೊಂಡು ಮನೆ ಪಕ್ಕದ ಓಣಿಯಿಂದ ಹಿತ್ತಲು ಹೊಕ್ಕು :ಮುಟ್ಟಾದವರಂತೆ ಮೈ-ಕೈ ಕಾಲನ್ನೆಲ್ಲ ಅಗತ್ಯಕ್ಕಿಂತ ಜಾಸ್ತಿ ತಿಕ್ಕೀ ತಿಕ್ಕೀ ತೊಳೆದುಕೊಂಡು ಅತಿ ಮಡಿಯಿಂದ ಒಂದುವೇಳೆ ಹಿಂಬಾಗಿಲ ಪ್ರವೇಶ ಮಾಡುತ್ತಿದ್ದೇನೆಂದರೆ ಅವತ್ತು ನನ್ನಿಂದ ಎಲ್ಲೋ ಏನೋ ಘನಘೋರ ಅಪರಾಧವಾಗಿರೋದು ಖಚಿತ! ಇದರ ಮುಂದಿನ ಭೀಕರ ಪರಿಣಾಮಗಳು,ಮನೆಯ ಹಿರಿಯರ ಕಿವಿಗೆ ನನ್ನ ಪ್ರತಾಪ ಬಿದ್ದು ಬೀಳಬಹುದಾದ ಪೆಟ್ಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದು ಈ ಅತಿವಿನಯದ ನಡವಳಿಕೆಯನ್ನು ನೇರವಾಗಿ ಅವಲಂಬಿಸುತ್ತಿದ್ದುದು ಮಾತ್ರ ಸುಳ್ಳಲ್ಲ.
{ನಾಳೆಗೆ ಮುಂದುವರಿಸುವೆ}

No comments: