15 August 2010

ರೇಡಿಯೊ ಪುರಾಣ..

ನಮ್ಮ ಮನೆಯಲ್ಲಿದ್ದದ್ದು ದೈತ್ಯ ಗಾತ್ರದ ಬುಶ್ ನಿರ್ಮಿತವಾಗಿದ್ದ ರೇಡಿಯೊ.ಆಗಿನ ಕಾಲದಲ್ಲಿ ರೇಡಿಯೊ ಒಂದು ಐಶಾರಾಮದ ಸಲಕರಣೆಯಾಗಿತ್ತು ಹಾಗು ಮನೆಯಲ್ಲಿ ಅದನ್ನಿರಿಸಿ ಕೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿಯಾಗಿತ್ತು.ಸಾಲದ್ದಕ್ಕೆ ರೇಡಿಯೊ ಇರಿಸಿಕೊಳ್ಳ ಬಯಸುವವರು ಸ್ಥಳಿಯಾಡಳಿತಗಳಾದ ಗ್ರಾಮಪಂಚಾಯತ್,ಪುರಸಭೆ,ನಗರಸಭೆ ಯಾವುದಾದರೊಂದರಿಂದ ಪರವಾನಗಿ ಪಡೆಯುವುದು ಖಡ್ಡಾಯವಾಗಿತ್ತು ಅದಕ್ಕಾಗಿ ಪ್ರತಿ ವರ್ಷವೂ ನಿಗದಿತ ಶುಲ್ಕ ಕಟ್ಟಿ ಪರವಾನಗಿಯನ್ನ ನವೀಕರಣ ಮಾಡಿಸಿ ಕೊಳ್ಳಬೇಕಿತ್ತು.( ಅಂತಹದ್ದೊಂದು ಲೈಸನ್ಸ್ ಪ್ರತಿಯನ್ನ ಅಜ್ಜನ ಹಳೆ ಕಡತಗಳಲ್ಲಿ ಕಂಡಿದ್ದೇನೆ).ಆಗೆಲ್ಲ ಬುಶ್,ಮರ್ಫಿ,ಫಿಲಿಪ್ಸ್,ಸೋನಿಗಳದ್ದೆ ರಾಜ್ಯಭಾರ.ದುಬಾರಿಯಾದ ಸೋನಿ-ಫಿಲಿಪ್ ಸುಲಭವಾಗಿ ಸಿಗದ ಕಾರಣ :ರಿಪೇರಿಗೆ ಅಗತ್ಯವಾದ ಬಿಡಿ ಭಾಗಗಳು ಸುಲಭವಾಗಿ ಸಿಗುತ್ತಿದ್ದರಿಂದ ಬುಶ್ ಹಾಗು ಮರ್ಫಿ ಅತಿ ಹೆಚ್ಚು ಜನಪ್ರಿಯವಾಗಿದ್ದವು



.ಈ ರೇಡಿಯೊ ನಮ್ಮ ಮನೆಗೆ ಬಂದ ಹಿನ್ನೆಲೆ ಹೀಗಿದೆ.ವಿಧುರನಾಗಿದ್ದ ನನ್ನಜ್ಜ ಆಗಷ್ಟೇ ನನ್ನಜ್ಜಿಯನ್ನ ಮರು ಮದುವೆಯಾಗಿದ್ದರು.ದಕ್ಷಿಣಕನ್ನಡದ ಮೂಡುಬಿದಿರೆ ಸಮೀಪದ ಸಾಗಿನಬೆಟ್ಟು ನನ್ನಜ್ಜಿಯ ಮನೆ.ಅಲ್ಲಿ ಕೂಡು ಕುಟುಂಬದಲ್ಲಿ ಆಡಿ ಬೆಳೆದಿದ್ದ ಅವರಿಗೆ ಇಲ್ಲಿ ದೂರದ ತೀರ್ಥಹಳ್ಳಿಯಲ್ಲಿ ಹೊಸತಾಗಿ ಸಂಸಾರ ಶುರು ಮಾಡಿದಾಗ ಇನ್ನೂ ಹದಿನೇಳರ ಹರೆಯ.ಇಲ್ಲಿ ವಿಪರೀತ ಒಂಟಿತನ ಕಾಡಿರಬೇಕು.ಅಜ್ಜನಿಗೂ ಡ್ರೈವರ್ ಕೆಲಸದ ಮೇಲೆ ಆಗಾಗ ಹೊರ ಹೋಗಬೇಕಿರುತ್ತಿದ್ದರಿಂದ ಹೊಸ ಹೆಂಡತಿಯ ಒಂಟಿತನ ಕಳೆಯಲು ಅವರು ತಂದುಕೊಟ್ಟದ್ದೆ ಈ ರೇಡಿಯೊ.ಅವರ ಮೊತ್ತ ಮೊದಲ ಪ್ರೇಮದ ಕಾಣಿಕೆಯದು! ಆ ಕಾಲಕ್ಕೆ ದುಬಾರಿಯೂ-ದುಂದುವೆಚ್ಚವೂ ಅನ್ನಿಸಬಹುದಾಗಿದ್ದ ನೂರೈವತ್ತು ರುಪಾಯಿ ಮರುಯೋಚಿಸದೆ ಖರ್ಚು ಮಾಡಿ ಅಜ್ಜ ಆ ರೇಡಿಯೊವನ್ನ ನಮ್ಮ ಮನೆ ತುಂಬಿಸಿದ್ದರು.ಹೀಗೆ ೧೯೬೧ರ ಆಗಷ್ಟ್ ತಿಂಗಳಲ್ಲಿ ನಲವತ್ತೊಂಭತ್ತು ವರ್ಷಗಳ ಹಿಂದೆ ಒಬ್ಬ ಸದಸ್ಯನಾಗಿ ರೇಡಿಯೊ ನಮ್ಮ ಮನೆಯೊಳಗೆ ಅದಕ್ಕಾಗಿಯೇ ಮಾಡಿರಿಸಿದ್ದ ಗೂಡು ಸೇರಿತು.


ಈ ರೇಡಿಯೋಗೊಂದು ಬಾಲಂಗೋಚಿಯಾಗಿ ಜೊತೆಗೊಂದು ಆಂಟೆನ ಕೂಡ ಬಂದಿತ್ತು.ನೋಡಲು ಬಲೆಬಲೆಯ ಎರಡು ಮೀಟರ್ ಉದ್ದದ ಕೊಳವೆಯಂತದ್ದು ಅದು.ಮನೆ ಪಕ್ಕದ ಓಣಿಯಲ್ಲಿ ಬಟ್ಟೆ ಹರವಲು ಕಟ್ಟಿದ್ದ ತಂತಿಗಳಿಂದ ಸ್ವಲ್ಪವೇ ಮೇಲೆ ಅದನ್ನು ಎರಡು ಪಕ್ಕಾಸುಗಳ ನಡುವೆ ಬಿಗಿದು ಕಟ್ಟಲಾಗಿತ್ತು.ಅದರ ಒಂದು ಮೂಲೆಯಿಂದ ಒಂದು ವಯರ್ ಮನೆಯೊಳಗೆ ಸಾಗಿ ರೇಡಿಯೊ ಒಳಗೆಲ್ಲೋ ಅಂತರ್ಧನಾಗುತ್ತಿತ್ತು.ಅದಿಲ್ಲದೆ ರೇಡಿಯೊಗೆ ಸ್ಪಷ್ಟ ಸಿಗ್ನಲ್ ಸಿಗುತ್ತಲೇ ಇರಲಿಲ್ಲ.


ಇನ್ನು ರೇಡಿಯೊದ ದೇಖಾರೇಕಿಯೋ...ವಿಶ್ವಸುಂದರಿಯಷ್ಟೇ ಮುತುವರ್ಜಿ ವಹಿಸಬೇಕು.ಆದರಡಿಗೊಂದು ಮೆತ್ತನೆ ಹಾಸು,ತಲೆ ಮೇಲೆ ಬೆನಜಿರ್ ಭುಟ್ಟೋನಂತೆ ಶಾಲು ಸುತ್ತಿ ಸದಾ ಧೂಳು ಕೂರದಂತೆ ಒರೆಸಿಡಲಾಗುತ್ತಿತ್ತು.ದೊಡ್ಡ ಮರದ ಫ್ರೇಮಿನ ಅದರ ಕೆಳಗಣ ಭಾಗದ ಎರಡೂ ಪಕ್ಕಗಳಲ್ಲಿ ಎರಡು ತಿರುಗಣೆ ಸ್ವಿಚ್ಚುಗಳು,ಅನಂತ್ ಕುಮಾರ್ ತನ್ನ ಉಬ್ಬುಹಲ್ಲು ಕಿರಿದಂತೆ ಅವೆರಡರ ನಡುವೆ ಹಲವಾರು ಅಂಕಿ ಸಂಖ್ಯೆ ಹೊತ್ತ ವಿವಿಧ ಬ್ಯಾಂಡ್ ಸೂಚಿ,ಎಲ್ಲಕ್ಕೂ ಮೇಲೆ ವಿಸ್ತಾರವಾಗಿ ಕಾಣುವ ಸ್ಪೀಕರ್...ಹೀಗೆ ಮೇಲ್ನೋಟಕ್ಕೆ ಇದು ಯಾರೋ ಮೂಲೆಯಲ್ಲಿ ಹಲ್ಲು ಬಿಟ್ಟುಕೊಂಡು ಕೂತಂತೆ ಕಾಣುತ್ತಿತ್ತು..ಇಂತಿದ್ದ ರೇಡಿಯೊ ಮಹಾಶಯನನ್ನ ನಿತ್ಯ ತಟ್ಟಿ ಎಬ್ಬಿಸುವುದು ಒಂದು ಸಾಧನೆಯಂತಿರುತ್ತಿತ್ತು.ಸ್ವಿಚ್ ಅದುಮಿ ಐದು ನಿಮಿಷದ ನಂತರ ಬೇಕೊ ಬೇಡವೋ ಎಂಬ ಸೋಮಾರಿ ಮೈ ಮರೆತು ಏಳುವಂತೆ :ಏನೋ ನಮ್ಮ ಮೇಲೆ ಕೃಪೆ ತೋರುವ ಫೋಜು ಕೊಡುತ್ತಾ ದಿನಚರಿಗೆ ಅದು ತಯಾರಾಗುತ್ತಿತ್ತು.ಮೊತ್ತ ಮೊದಲಿಗೆ ಅದರೊಳಗಿದ್ದ ಬಲ್ಬ್ ಹೊತ್ತಿಕೊಂಡು ಬೆಚ್ಚಗಾಗಬೇಕು.ಅನಂತರವಷ್ಟೇ ಕೊಂಚ ಗೊರಗೊರ ಸದ್ದಿನೊಂದಿಗೆ ಕೆಮ್ಮಿ ಕ್ಯಾಕರಿಸಿ ತನ್ನ ಗಂಟಲನ್ನು ಸರಿಪಡಿಸಿಕೊಂಡು ತುಣುಕು ತುಣುಕಾಗಿ ದೂರದೆಲ್ಲಿಂದಲೋ ಬರುವ ಧ್ವನಿಯನ್ನು ಕೇಳಿಸುತ್ತಿತ್ತು.ಹೀಗೆ ಚೂರು ಸದ್ದು ಕೇಳಿ ಬಂದಾಗ ಭಾರಿ ದಂಡು ಕಡಿದು ಬಂದವರಂತೆ ಬೀಗುತ್ತಿದ್ದೆವು.ಒಮ್ಮೆ ಹೀಗೆ ತಯಾರಾಯ್ತೆಂದರೆ ನಂತರ ಮನೆಯ ದೀಪ ಆರುವ ತನಕವೋ ಇಲ್ಲವೇ ಕರೆಂಟು ಹೊತ್ತಲ್ಲದ ಹೊತ್ತಿನಲ್ಲಿ ಕೈ ಕೊಡುವ ತನಕವೋ ಅದಕ್ಕೆ ಬಿಡುವಿಲ್ಲದ ಕೆಲಸ.ಆರಂಭದ ಅದರ ಬಿಂಕ-ಬಿನ್ನಾಣಗಳಿಗೆಲ್ಲ ಅದರ ಕಿವಿಹಿಂಡಿ ಸರಿಯಾಗಿ ಸೇಡು ತೀರಿಸಿಕೊಳ್ಳುತ್ತಿದ್ದೆವು.


ಆಗಾಗ ಸೂಕ್ಷ್ಮ ಪ್ರಕೃತಿಯ ಈ ರೇಡಿಯೊ ಮಹಾಶಯನ ಆರೋಗ್ಯ ಹದಗೆಡುವುದೂಇತ್ತು.ತೀರ ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಮನೆಮದ್ದೇ ನಡಿಯುತ್ತಿತ್ತು.ಅತಿ ಮಳೆ ಬಂದರೆ-ಚಳಿ ಸ್ವಲ್ಪ ಹೆಚ್ಚಾದರೆ ಅದಕ್ಕೂ ಜ್ವರ,ನೆಗಡಿ ಬಂದು ಅಂತಹ ವಿಪರೀತ ಸಂದರ್ಭಗಳಲ್ಲಿ ಜಪ್ಪಯ್ಯ ಎಂದರೂ ಗೊರಲು ರೋಗದವರಂತೆ ಗೊರಗೊರ ಸದ್ದಿನ ಹೊರತು ಇನ್ಯಾವ ಧ್ವನಿಯೂ ಹೊರ ಬರುತ್ತಿರಲಿಲ್ಲ.ಆಗ ಅದನ್ನು ವಿಶೇಷ ಮುತುವರ್ಜಿಯಿಂದ ಇನ್ನೆರಡು ಮಂದರಿ ಸೇರಿಸಿ ಸುತ್ತಿಟ್ಟು ಬೆಚ್ಚಗೆಗಿರಿಸಿ ಉಪಚಾರ ಮಾಡಲಾಗುತ್ತಿತ್ತು.ನಮ್ಮಿಂದ ಕಿವಿ ಹಿಂಡಿಸಿ ಕೊಂಡ ಕೋಪಕ್ಕೆ ಹೀಗೆ ರಚ್ಚೆ ಹಿಡಿದು ಪ್ರತಿಕಾರ ತೀರಿಸಿಕೊಳ್ಳುತ್ತಿತ್ತದು ಎಂಬ ಗುಮಾನಿ ಆಗೆಲ್ಲ ನನಗಿತ್ತು.ಜೀರಿಗೆ ಕಾಳುಮೆಣಸು ಕಷಾಯವನ್ನೂ ಮಾಡಿ ಕುಡಿಸಿ-ಪಥ್ಯದ ಊಟವನ್ನೂ ಕೆಟ್ಟ ರೇಡಿಯೊಗೆ ಮಾಡಿಸುತ್ತಾರೆ ಅಂತ ಚಿಕ್ಕವನಾಗಿದ್ದಾಗ ಬಲವಾಗಿ ನಂಬಿದ್ದೆ.ಏಕೆಂದರೆ ನನಗೂ ಜ್ವರ-ಶೀತ ಆಗಿದ್ದಾಗ ಹಾಗೆ ಮಾಡಲಾಗುತ್ತಿತ್ತು.
{ನಾಳೆಗೆ ಮುಂದುವರೆಸುವೆ}

No comments: