10 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೬.👊಼

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೬.👊


ಕುಡಿತದ ಚಟದಲ್ಲಂತೂ ಈ ಚಟಗ್ರೇಸರ ಮಲಯಾಳಿಗಳನ್ನ ಬಿಟ್ಟರಿಲ್ಲ! ಹೆಂಡದಲ್ಲೆ ಮುಳುಗೆದ್ದು ಮಿಂದು ತೇಲುವ ಕು"ಖ್ಯಾತಿ"ಯ ಪಂಜಾಬಿಗಳ ನಂತರ ಈ ದೇಶದಲ್ಲೇ ದೊಡ್ಡ ಕುಡಿತದ ಪೀಪಾಯಿಗಳಿವರು. ಹೀಗಾಗಿ ಶೇಂದಿ - ಹೆಂಡ - ಕಳ್ಳಿನ ಜೊತೆಗೆ ಸರಕಾರಿ ಪಾಕೀಟು ಸರಾಯಿಯ ಸ್ವ ಉತ್ಪಾದನೆಯೂ ಸಹ ಸ್ವಲ್ಪವೂ ಸಾಲದೆ ಪರ ರಾಜ್ಯ - ಪರದೇಶಗಳಿಂದೆಲ್ಲಾ ತರಿಸಿಕೊಂಡು ಕಂಠಮಟ್ಟ ಕುಡಿಯುವಷ್ಟು ಚಪಲಚಿತ್ತರು. ಭಾರತದ ತೆರಿಗೆ ರಹಿತ ಏರುಪೋರ್ಟಿನ ಅಮದು ಸರಾಯಿಗಳ ದೊಡ್ಡ ವ್ಯಾಪಾರ ಇಲ್ಲಿನ ವಿಮಾನ ನಿಲ್ದಾಣಗಳಲ್ಲಾಗುವಷ್ಟು ಬೇರೆ ಇನ್ಯಾವ ರಾಜ್ಯಗಳಲ್ಲೂ ಆದ ದಾಖಲೆಯಿಲ್ಲ. ಖುಷಿಗೆ ಬೇಜಾರಿಗೆ ಸಂತೋಷಕೂಟಕ್ಕಷ್ಟೆ ಅಲ್ಲ ಸಾಮಾನ್ಯ ಮೀನೂಟಕ್ಕೂ ಮಲಯಾಳಿಗಳಿಗೆ ಕುಡಿಯಲೊಂದು ಕುಪ್ಪಿ ಇದ್ದರೇನೆ ತೃಪ್ತಿ ಅನಿಸುವಷ್ಟು ಇಲ್ಲಿನ ಬಹುಸಂಖ್ಯಾತರು ಮದ್ಯ ಪ್ರಿಯರು.


ನೈಸರ್ಗಿಕ ವಿಕೋಪಗಳಿಂದ ನೊಂದು ಬೆಂದಿದ್ದ ವರ್ಷಗಳಲ್ಲೂˌ ಕರೋನಾ ಮಾರಿಯಾಗಿ ಕಾಡಿ ಇಡಿ ದೇಶವೆ ಬೀಗ ಬಿಗಿಸಿಕೊಂಡು ಕಂಗಾಲಾಗಿ ಕೂತಿದ್ದ ಕ್ಷಣದಲ್ಲೂ ಸಹ ಈ ಸಣ್ಣ ರಾಜ್ಯದಲ್ಲಿ ಆರುನೂರರಿಂದ ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ಮದ್ಯದ ಧಾರಾಳ ಸಮಾರಾಧನೆ ಇಲ್ಲಿ ನಡೆದು ( ಇದರಲ್ಲಿ ಸ್ಥಳಿಯ ಶೇಂದಿ ಹಾಗೂ ಕಳ್ಳು ಉತ್ಪಾದನೆಯ ವ್ಯಾಪಾರದ ಲೆಕ್ಖ ಸೇರಿಲ್ಲ ಮತ್ತೇ!)ˌ ಅಷ್ಟನ್ನೂ ಕುಡಿದು ಮಲಯಾಳಿಗಳು ಉಚ್ಛೆ ಹೊಯ್ಡಿದ್ದರು! ಇವರಿಗೆ ನೈಸರ್ಗಿಕ ವಿಕೋಪಕ್ಕೆ ಕೇಂದ್ರ ಸರಕಾರ ಅರೆಕಾಸಿನ ಮಜ್ಜಿಗೆಯಷ್ಟು ಪರಿಹಾರ ಕೊಟ್ಟಿದ್ದರೆˌ ಅದರ ಮೂರನೆ ಒಂದು ಭಾಗದಷ್ಟು ಅಗಾಧ ಮೊತ್ತ ಅನಂತರದ ವರ್ಷದ ಹಂಗಾಮಿನಲ್ಲೆ ಕೇರಳದಾದ್ಯಂತ ವ್ಯಾಪಾರವಾಗಿ ಈ ಮಲಯಾಳಿಗಳ ನಶಾಪ್ರೀತಿ ಗೇಲಿಗೊಳಗಾಗಿತ್ತು. 


ಇಲ್ಲಿ ಸಾಮಾನ್ಯ ಶೇಂದಿಯಂಗಡಿಗಳಿಗೆ ಹಾಗೂ ಕಳ್ಳಂಗಡಿಗಳಿಗೆ ಅಬಕಾರಿ ಕಾನೂನು ಮುಕ್ತ ಅವಕಾಶ ಬೇರೆ ನೀಡುತ್ತದೆ. ಆದ್ದರಿಂದ ಇವರ ಸ್ಥಾನಿಕ ಉತ್ಪಾದನೆಗಳಿಗೆ ಇವರೆ ಅತಿದೊಡ್ಡ ಗ್ರಾಹಕರು ಸಹ!
ಹೀಗಾಗಿ ಈ ಉತ್ಪಾದನೆಗಳೆಲ್ಲ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹೊಯ್ದಂತೆ. ಇವರ ಅಗತ್ಯಗಳೆಲ್ಲ ತೀರಿ ಉಳಿದ ಅಲ್ಪಸ್ವಲ್ಪಕ್ಕಷ್ಟೆ ರಫ್ತಾಗುವ ಭಾಗ್ಯ ಅಷ್ಟೆ. ಕಾಡುತ್ಪತ್ತಿˌ ಗೇರುಬೀಜ ಹಾಗೂ ಸಾಂಬಾರ ಪದಾರ್ಥಗಳಷ್ಟೆ ಸದ್ಯ ಹೇಳಿಕೊಳ್ಳುವಂತಹ ವ್ಯವಹಾರ ನಡೆಸುತ್ತಿರೋದು ಬಹುಶಃ.



*******


ಅದು ಬಿಟ್ಟರೆ ಇಲ್ಲಿಗೆ ದೊಡ್ಡ ಆದಾಯ ಬರೋದು ಪ್ರವಾಸೋದ್ಯಮದಿಂದ. ಈ ಪ್ರವಾಸೋದ್ಯಮದಲ್ಲೂ ಸ್ಥಳ ವೀಕ್ಷಣೆಗೆ ಬರುವವರು ಶೇಕಡಾ ಐವತ್ತರಷ್ಟಿದ್ದರೆ ಉಳಿದಂತೆ ಬರೋರೆಲ್ಲ ಇಲ್ಲಿ ನೆಲೆ ನಿಂತ ಥರೇವಾರಿ ದೇಗುಲಗಳಲ್ಲಿ ನೆಲೆಸಿರುವ ದೇವಾನುದೇವತೆಗಳ ಭಕ್ತಗಣವೆ. 


ಶಬರಿಮಲೆಯ ಅಯ್ಯಪ್ಪನ್ ದರ್ಶನಕ್ಕೆ ಬರುವವರೆ ಅತ್ಯಧಿಕ. ತಿರುವನಂತಪುರದ ಅನಂತಪದ್ಮನಾಭನ್ˌ ಗುರುವಾಯೂರಿನ ಗುರುವಾಯೂರಪ್ಪನ್ˌ ಚೊಟ್ಟನಿಕ್ಕಾರದ ಭಗವತಿˌ ಕಡಂಬುಳದ ಪಾರ್ವತಿˌ  ತಳಿಪರಂಬದ ರಾಜರಾಜೇಶ್ವರನ್, ಇರಿಙಾಲಕುಡದಲ್ಲಿರುವ ಕೂಡಲ ಮಾಣಿಕ್ಯಂನ ರಾಮಾಯಣದ ಭರತನ್ ಹಾಗೂ ತೃಶೂರಿನ ವಡಕ್ಕುನಾಥನ್ ಕ್ರಮವಾಗಿ ಅನಂತರದ ಬೇಡಿಕೆಯ ಸ್ಥಾನಗಳಲ್ಲಿದ್ದಾರೆ.


ˌಇಲ್ಲಿನ ಆಡಳಿತ ಸೂತ್ರ ಹಿಡಿದು ಸರಕಾರ ನಡೆಸುವವರು ಸ್ವತಃ ತಾವ್ಯಾರೂ ದೇವರನ್ನ ನಂಬದ ನಾಸ್ತಿಕ ಕಮ್ಯುನಿಸ್ಟರೆ ಆಗಿದ್ದರೂˌ ರಾಜ್ಯದ ಖಜಾನೆಗೆ ಅಪಾರ ಆದಾಯ ತರುವ ಆಸ್ತಿಕತೆಗೆ ಪೂರಕವಾಗುವ ಎಲ್ಲಾ ಆಟಗಳಿಗೂ ಬಹಿರಂಗ ಬೆಂಬಲ ಇವರಿಂದ ಸಲ್ಲುತ್ತದೆ. ಹೀಗಾಗಿಯೆ ಮಲಬಾರು ದೈವಸ್ವಂ ಬೋರ್ಡುˌ ಕೊಚ್ಚಿನ್ ದೈವಸ್ವಂ ಬೋರ್ಡು ಹಾಗೂ ಟ್ರಾವಂಕೂರು ದೈವಸ್ವಂ ಬೋರ್ಡುಗಳಿಗೆ ಸ್ಥಳಿಯ ವಲಯಗಳ ಎಲ್ಲಾ ದೇವಾಲಯಗಳ ಮೇಲೆ ಅಧಿಕಾರ ಕೊಟ್ಟಿದ್ದರೂˌ ಕೃಷ್ಣನ ನೆಲೆ ಗುರುವಾಯೂರು ದೈವಸ್ವಂ ಬೋರ್ಡು ಹಾಗೂ ವಿಷ್ಣುವಿನ ನೆಲೆ ಕೂಡಲಮಾಣಿಕ್ಯಂ ದೇವಸ್ಥಾನದ ಅಪಾರ ಆದಾಯವನ್ನು ಪರಿಗಣಿಸಿ ಈ ಎರಡು ದೇವಸ್ಥಾನಗಳಿಗೆ ಅವರವರವೆ ದೈವಸ್ವಂ ಬೋರ್ಡು ರಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.


*******


ಇಷ್ಟೆಲ್ಲಾ ವೈರುಧ್ಯಗಳಿರುವ ಕೇರಳದ ಸಾಮಾಜಿಕ ಬದುಕಿನ ಕೊನೆ ಮೊದಲಿಲ್ಲದ ಸಿಕ್ಕುಗಳನ್ನ ಯೋಚಿಸಿದರೇನೆ ಅವನಿಗೆ ತಲೆ ಕೆಡುತ್ತದೆ. ಅಷ್ಟು ಗೋಜಲು ಗೋಜಲಾಗಿರುವ ಮಲಯಾಳಿಗಳಲ್ಲಿ ಅವನಿಗೆ ಇಷ್ಟವಾಗುವುದು ಅವರಲ್ಲಿನ ಕಲಾಭಿವ್ಯಕ್ತಿಯ ವಿಭಿನ್ನ ಪ್ರಕಾರಗಳು ಮಾತ್ರ. ಪಾರಂಪರಿಕ ಕಲೆಯಲ್ಲಿರಲಿˌ ಜಾನಪದ ಕಲೆಯಲ್ಲಾಗಿರಲಿ ಅಥವಾ ಸಮಕಾಲೀನ ಕಲಾ ಪ್ರದರ್ಶನಗಳಲ್ಲಿಯೇ ಆಗಿರಲಿ ಮಲಯಾಳಿಗಳು ಯಾವಾಗಲೂ ವಿಭಿನ್ನತೆಯನ್ನ ಕಾಯ್ದುಕೊಂಡು ಸದಾ ಉಳಿದವರಿಗಿಂತ ಒಂದೆರಡು ಹೆಜ್ಜೆ ಮಂದಿರುತ್ತಾರೆ. ಪಾರಂಪರಿಕ ಕಲೆಗಳಲ್ಲಿ ತುಳನಾಡ ಕಲಾ ವೈವಿಧ್ಯತೆಗಳ ನೇರ ಅನುಕರಣೆಯಿರೋದು ಸತ್ಯವಾದರೂ ಕೂಡˌ ಜನಪದ ಕಲೆಗಳಲ್ಲಿ ಸ್ಥಳಿಯ ಮಣ್ಣಿನ ವಾಸನೆ ದಟ್ಟವಾಗಿದೆ.


ತುಳುನಾಡಿನ ಯಕ್ಷಗಾನದಿಂದ ಸೃಜಿಸಿದ ಕಥಕ್ಕಳಿಯಲ್ಲಿ ಪಾತ್ರ ಭಾವಾಭಿನಯ ತೋರುತ್ತೆ ಬಿಟ್ಟರೆ ಆಟದ ವೇಷಧಾರಿಗಳಂತೆ ಮಾತಾಡದು. ಆದರೆ ಅದನ್ನೆ ಹೋಲುವ ಕಥಕ್ಕಳಿ ಪಾತ್ರಧಾರಿಗಳಿಗೂ ಸಂಭಾಷಣೆ ಕೊಟ್ಟಂತಿರುವ ಕೊಡಿಯಾಟ್ಟಂ. ತೌಳುವರ ಹುಲಿವೇಷದ ಪಡಿಯಚ್ಚು ಇಲ್ಲಿನ ಪುಲಿಕ್ಕಳಿˌ ತುಳು ಮಣ್ಣಿನ ಜಾನಪದ ಕಲೆ ಆಟಿಕಳಿಂಙನ ಅಪರಾವತಾರ ಓಣಪೊಟ್ಟಾನ್ ಓಣಂ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಾಂತರ ಪ್ರದೇಶದಲ್ಲಿ ಇಬ್ಬರು ಚಂಡೆ ವಾದ್ಯದವರನ್ನ ಕೂಡಿಕೊಂಡು ಮನೆ ಮನೆಗೂ ಭೇಟಿ ಕೊಡುತ್ತಾನೆ. ಮಲಬಾರಿನ ಥಯ್ಯಂ ಅಂತೂ ನೇರಾ ನೇರಾ ತುಳು ಮಣ್ಣಿನ ಭೂತದ ಕೋಲದ ಅನುಸರಣೆ. ಇದರಂತದ್ದೆ ಇನ್ನೊಂದು ಕಲಾಪ್ರಕಾರ ಭೂತದ ಕೋಲದ ಮತ್ತೊಂದು ಅನುಕರಣೆ ತಿರಯಾಟ್ಟಂ ಸಹ ಕೇರಳಕ್ಕೆ  ತುಳುನಾಡಿನ ಕಲಾ ಕೊಡುಗೆಯೆ. ಇನ್ನು ತುಳುನಾಡಿನ ಗೆರೋಡಿಗಳಿಂದ ಮಲೆಯಾಳಿಗಳು ಕಲಿತು ಹೋಗಿರುವ ಕಳರಿ ಪಯಟ್ಟು ಸಮರಕಲೆˌ ಅದರಲ್ಲಿಯೂ ಉರುವಿ ಅನ್ನುವ ಬಳುಕುವ ಅಸ್ತ್ರದ ತುಳುನಾಡಿನಿಂದಲೆ ಕದ್ದಿರುವ ತಂತ್ರದ ಬಗ್ಗೆ ಹೆಚ್ಚಿನದೇನನ್ನೂ ಹೇಳುವಂತದ್ದಿಲ್ಲವಲ್ಲ.


ಇವಿಷ್ಟನ್ನ ಬಿಟ್ಟರೆ ಓಟ್ಟನ್ - ಕೋಲಂ - ಸರ್ಪಂ ಹೀಗೆ ವಿಭಿನ್ನ ಬಗೆಯಲ್ಲಿ ಆಡಲಾಗುವ ತುಳ್ಳಾಲ್ ಆಗಲಿˌ ಶಾಸ್ತ್ರೀಯ ನೃತ್ಯ ಮೋಹಿನಿಯಾಟ್ಟಂ ಆಗಿರಲಿˌ ಕರಗ ಹೊರುವಂತಹ ಭಗವತಿ ದೇಗುಲಗಳ ಪದಯಾನಿಯಾಗಿರಲಿˌ ಏಕವ್ಯಕ್ತಿ ಪ್ರಸಂಗ ಪ್ರದರ್ಶನ ಚಾಕ್ಯಾರ್ ಕೂತ್ತು ಆಗಿರಲಿˌ ವಿಧ ವಿಧ ವೇಷದ ಮುಖವಾಡ ಹೊತ್ತ ಮಣ್ಣಿನ ಮಕ್ಕಳ ಪ್ರದರ್ಶನದಾಟ ಕುಮ್ಮಟ್ಟಿಕಳಿ ಆಗಲಿ ಇವೆಲ್ಲವೂ ಇಲ್ಲಿನವರ ಸ್ವಂತದ ಹೆಮ್ಮೆಯ ಕಲಾ ಪ್ರಕಾರಗಳು.


******


ಸಾರಸ್ವತ ಲೋಕದಲ್ಲಿ ದಕ್ಷಿಣ ಭಾರತೀಯ ದ್ರಾವಿಡ ಭಾಷಾ ಸಾಹಿತ್ಯ ಪರಂಪರೆಯಲ್ಲೊಂದಾಗಿ ಮಲಯಾಳಿಗಳ ಹೆಜ್ಜೆಗುರುತು ಸ್ಪಷ್ಟವಾಗಿ ಮೂಡಲಾರಂಭಿಸಿದ್ದು ತೀರಾ ತಡವಾಗಿ. ಸ್ವಂತಕ್ಕೊಂದು ಲಿಪಿ ಮಲಯಾಳಂ ಭಾಷೆ ಹೊಂದಿರದೆ ಇದ್ದದ್ದು ಹಾಗೂ ತುಳು ಲಿಪಿಯನ್ನ ಕಾಲಾಂತರದಲ್ಲಿ ಈ ಕೊರತೆ ತುಂಬಿಕೊಳ್ಳಲು ಬಳಸಲಾರಂಭಿಸಿದ್ದೆ ಬಹುಶಃ ಇದಕ್ಕೆ ನೇರ ಕಾರಣ. ಇದೆ ಕಾರಣದಿಂದ ಮೂಲತಃ ಮಲಯಾಳಿಯಾಗಿದ್ದರೂ ಸಹ ಶ್ರೀಶಂಕರಾಚಾರ್ಯರು ಸಹಜವಾಗಿ ತಾವು ಸುಲಭವಾಗಿ ಯೋಚಿಸ ಬಹುದಾಗಿದ್ದ ತಮ್ಮ ಮಾತೃಭಾಷೆಯಲ್ಲಿ ಒಂದೆ ಒಂದು ಕೃತಿ ಟೀಕೆ ಟಿಪ್ಪಣಿಗಳನ್ನ ರಚಿಸದೆ ಸಂಸ್ಕೃತಕ್ಕೆ ಮೊರೆ ಹೋದರು ಅನ್ನಿಸುತ್ತೆ. 


ವಾಸ್ತವ ಹೀಗಿದ್ದರೂ ಸಹ ನಮ್ಮ ಕೇಂದ್ರ ಸರಕಾರ ಲಿಪಿ ಹಾಗೂ ಸಮೃದ್ಧ ಪಾರಂಪಾರಿಕ ಲಿಖಿತ ಸಾಹಿತ್ಯವಿರುವ ತುಳುವಿಗೆ ಕೊಡಬೇಕಿದ್ದ ಶಾಸ್ತ್ರೀಯ ಭಾಷೆಯ ಪಟ್ಟವನ್ನ ಅದ್ಯಾವುದೂ ಹೊಂದಿರದ ಮಲಯಾಳಂಗೆ ಕಟ್ಟಿರುವುದು ಅಕ್ಷಮ್ಯ. ಜನಸಂಖ್ಯಾ ಬಾಹುಳ್ಯದ ಪ್ರಭಾವ ಹಾಗೂ ಸ್ಥಳಿಯ ರಾಜಕಾರಣಗಳ ಚಾಣಾಕ್ಷತೆಯ ಕರಾಮತ್ತಿಗೆ ಇದೊಂದು ಜೀವಂತ ಉದಾಹರಣೆ. ಬೇರೆ ಅದಿನ್ನೇನೆ ತಕರಾರುಗಳಿದ್ದರೂ ಸಹ ಅವನಿಗೆ ಈ ವಿಷಯದಲ್ಲಿ ಕೇರಳದ ಬಗ್ಗೆ ಅಭಿಮಾನವಿದೆ.




( ಇನ್ನೂ ಇದೆ.)


https://youtu.be/yvd2nsYbl6g

No comments: