12 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೯.👊

ಇದಿಷ್ಟೆ ವಿಶೇಷ ಸಾಲದೇನೋ ಅನ್ನುವ ಹಾಗೆ ವಿನ್ಸೆಂಟ್ ಕುರಿಯಕ್ಕೋಸ್ ಪಾಲತ್ತಿಲ್ ಹಾಗೂ ಜಾರ್ಜ್ ಅಂಬ್ರಸ್ ಚೆಲ್ಲಚ್ಚೇರಿ ಅನ್ನುವ ಪರ್ಬುಗಳ ಜೋಡಿಯೂ ಅವನಿಗೆ ಶರಣು ಬಂದಿದ್ದ ವಿಚಾರ ಅವನಿಗೆ ತಿಳಿದು ಬಂದದ್ದೆ ಮುತ್ತಪ್ಪ ದೈವ ದೊಡ್ಡ ದೊಂಡೆಯಲ್ಲಿ ಅಭಯದಾನ ನೀಡುವ ಹೊತ್ತಲ್ಲಿ ಅವರೆಲ್ಲರ ಹೆಸರನ್ನ ಅಡಿಗಡಿಗೆ ಗಟ್ಟಿ ಧ್ವನಿಯಲ್ಲಿ ಉಚ್ಛರಿಸದಾಗಲೆ. ವ್ಯಾಪಾರವೊಂದರಲ್ಲಿ ಕೈ ಹಾಕಿ ಅಪಾರ ನಷ್ಟ ಎದುರಿಸಿದ್ದ ಅವರಿಬ್ಬರೂ ಮುತ್ತಪ್ಪನ ಮಹಿಮೆಯನ್ನ ಸಣ್ಣಂದಿಲಿನಿಂದ ಕಾಣುತ್ತಾ ಬೆಳೆದಿದ್ದವರೆ. ಇಂದು ಸಂಕಟ ಬಂದಾಗ ಈ ಮುತ್ತಪ್ಪನೆನ್ನುವ ವೆಂಕಟರಮಣನ ಪಾದವೆ ಗತಿ ಅಂತ ಒಂದೆ ಬಾಬ್ತಿನ ವ್ಯವಹಾರದಲ್ಲಿ ಪರಸ್ಪರ ಪಾಲುದಾರರಾಗಿದ್ದ ಇಬ್ಬರೂ "ಅನ್ಯಥಾ ಶರಣಂ ನಾಸ್ತಿ" ಎನ್ನುವ ಮುಖಭಾವ ಹೊತ್ತುಕೊಂಡು ಕಾಣದ ದೇವರಿಗೆ ಹರಕೆ ಹೊರುವುದಕ್ಕಿಂತ ಕಾಣುವ ದೈವ ಮುತ್ತಪ್ಪನ ಅಡಿಗೆರಗುವುದೆ ವಾಸಿ ಅಂತ ಮಣಿದು ಬಂದಿದ್ದರು.

ಅಂತೂ ಈ ಭೂತದ ಕೋಲˌ ಅದರ ಅನುಕರಣೆಯ ಥಯ್ಯಂ ಅಥವಾ ತಿರಯಾಟ್ಟಂ ಇವೆಲ್ಲ ಈ ಮಣ್ಣಿಗೆ ಸಂಬಂಧಿಸಿದ ದೈವಾರಾಧನೆಯ ಆಚರಣೆಗಳು. ಇದೆ ನಾಡಿನವರ ಯಾವ ಮತ ಪರಿವರ್ತನೆಯೂ - ನವ ಧರ್ಮಗಳ ನಂಬುಗೆಯ ಬೇಲಿಯೂ ಸಹ ಸ್ಥಳಿಯ ಸಂಸ್ಕೃತಿಯ ಜೊತೆ ನೆಲದ ಮಣ್ಣಿನ ಮಕ್ಕಳು ಹೊಂದಿರುವ ಅನುಗಾಲದ ಅನುಬಂಧವನ್ನು ಅಳಿಸಿ ಹಾಕಲಾರವು ಎನ್ನುವ ಸತ್ಯ ಮತ್ತೊಮ್ಮೆ ಅವನ ಮುಂದೆ ಈ ರೂಪದಲ್ಲಿ ಸಾಕ್ಷಾತ್ಕಾರಗೊಂಡಿತ್ತು ಅಷ್ಟೆ.

ಅವತ್ತು ಮುತ್ತಪ್ಪನ ಆರಾಧನೆ ಹರಕೆ ಕೋಳಿಗಳ ಬಲಿಯ ನಂತರ ಮುಗಿದದ್ದೆ ವಿಷ್ಣುಮೂರ್ತಿಯ ಕೋಲವನ್ನ ಕಾಣಲು ಕುತೂಹಲಭರಿತನಾಗಿ ಅವನು ಕಾದ. ಕೋಲದ ಕೊನೆಯ ಹಂತದಲ್ಲಿ ಭೂತ ಕಟ್ಟಿದವರು ಬೆಂಕಿಯಲ್ಲಿ ಬಿದ್ದೇಳುವ ಒತ್ತೆಕೋಲಗಳು ಸಾಮಾನ್ಯವಾಗಿ ನಡುರಾತ್ರಿಯಲ್ಲೆ ನಡೆಯುವುದು ವಾಡಿಕೆ. ಅವನಿಗಿದೇನೂ ಮೊದಲ ಒತ್ತೆಕೋಲದ ಪ್ರದರ್ಶನ ಕಾಣುವ ಕ್ಷಣವೂ ಅಗಿರಲಿಲ್ಲ. ಆದರೆ ಪ್ರತಿ ಹತ್ತಿಪ್ಪತ್ತು ಮೈಲು ಅಂತರದಲ್ಲೂ ಸಹ ಕೋಲದ ಆಚರಣೆಯಲ್ಲಿˌ ಅನುಸರಿಸುವ ಸಂಸ್ಕಾರದಲ್ಲಿ ಅಷ್ಟಿಷ್ಟು ಬದಲಾವಣೆಯ ಅಂಶಗಳಿರೋದು ಅತಿ ಸಹಜ. ಹೀಗಾಗಿ ಅವ ಇಲ್ಲಿನ ಆಚರಣೆಯಲ್ಲಿರಬಹುದಾದ ಆ ಸಣ್ಣಪುಟ್ಟ ವಿಚಾರಗಳನ್ನ ಗಮನಿಸುವ ಹಾಗೂ ಅರಿತುಕೊಳ್ಳುವ ಉಮೇದಿನಲ್ಲಿದ್ದ.

ಗುಳಿಗˌ ಲಕ್ಕೆಸಿರಿಯಂತಹ ಉಗ್ರದೈವಗಳೂ ಸಹ ಕೆಂಡ ಮೀಯುವುದಿದೆ. ಚೆನ್ನಾಗಿ ಉರಿದು ನಿಗಿ ನಿಗಿ ಕೆಂಡವಾಗಿ ಕೆಂಪಗೆ ವೈಡೂರ್ಯದ ರಾಶಿಯಂತೆ ಕಂಗೊಳಿಸುವ ರಕ್ತವರ್ಣದ ಉರಿಯ ಹಾಸಿಗೆಯ ಮೇಲೆ ಅದ್ಯಾವ ಆವೇಶ ಬಿದ್ದು ಹೊಡಕಾಡುವಂತೆ ಮಾಡುತ್ತದೆ! ಅನ್ನುವ ಅಚ್ಚರಿ ಅನುಗಾಲದಿಂದ ಅವನ ಮನಸೊಳಗೆ ಪ್ರಶ್ನೆಯಾಗಿ ಕಾಡುತ್ತಿದೆ. ಮೈಮೇಲೆ ದೈವದ ಆವಾಹನೆ ಆ ಹೊತ್ತಿನಲ್ಲಿ ಆಗಿರೋದು ಹೌದಾದರೂ ಸುಡೋದು ಮಾತ್ರ ಭೂತ ಕಟ್ಟಿದ ನಲಿಕೆಯ ಪಂಬದನ ದೇಹ ತಾನೆ? ನಾಲ್ಕಾರು ಗಟ್ಟಿಮುಟ್ಟಾದ ತರುಣರು ಕೆಂಡದ ಹಾಸಿಗೆಯ ಧಗೆಯನ್ನ ಎದುರಿಸಿ ಕಷ್ಟಪಟ್ಟು ಭೂತವನ್ನ ಸೆಳೆದು ಬೆಂಕಿಯಿಂದ ಹೊರಗೆಳೆದರೂˌ ಅವರ ಬಲಕ್ಕೆ ಸವಾಲು ಹಾಕುವಂತೆ ಮತ್ತೆ ಮತ್ತೆ ಅವರ ಹಿಡಿತ ತಪ್ಪಿಸಿಕೊಂಡು ಕೆಂಡದ ಹಾಸಿಗೆಯ ಮೇಲೆ ಹೊರಳಾಡುವಾಗಿನ ಭೂತ ಕಟ್ಟಿದವನ ಮನಸ್ಥಿತಿಯಾದರೂ ಎಂಥಾದ್ದು! ಅನ್ನುವ ವಿಷಯ ಇನ್ನೂ ಸರಿಯಾಗಿ ಅವನಿಗೆ ಅರ್ಥವಾಗಿರಲಿಲ್ಲ.

ಯಾವುದೆ ತರ್ಕಕ್ಕೆ ತಲೆ ಕೊಡದೆ ಕೇವಲ ಅಪ್ಪ ಹಾಕಿದ ಆಲದ ಮರಕ್ಕೆ ಅದರದೆ ಬಿಳಲುಗಳಲ್ಲಿ ನೇಣು ಹಾಕಿಕೊಳ್ಳುವ ಅಂಧಶ್ರದ್ಧೆಯಿಂದಷ್ಟೆ ಆರಾಧನೆಗೆ ಇಳಿವ ಸಾದಾಸೀದ ಭಕ್ತಾದಿಗಳು ಭೂತ ಕಟ್ಟಿದವನಿಗೆ ಒಂಚೂರೂ ಬೆಂಕಿ ಸೋಕಿ ಅವನ ಮೈ ಕೊಂಚ ಕೂಡ ಸುಟ್ಟಿರದು ಎಂದೆ ನಂಬಿ ದೈವದ ಮಹಿಮೆಗೆ ಬೆರಗಾಗಿ ಸಂಪೂರ್ಣ ಅದರ ಪಾದದಡಿ ಶರಣಾಗುತ್ತಾರೆ. ಆದರೆ ಅದನ್ನೆ ಅವರಿಗೂ ಮಾಡಿ ನೋಡಿ ಅಂದಾಗ ಮಾತ್ರ ಹೌಹಾರುತ್ತಾರೆ. ಆ ಭೂತ ಕಟ್ಟುವವರ ಮನೋಬಲˌ ಅಪಾಯವನ್ನ ಬಹಿರಂಗವಾಗಿ ಆಹ್ವಾನಿಸಿಕೊಳ್ಳುವ ಧೈರ್ಯ ಅದ್ಯಾವ ಪ್ರೇರಣೆಯಿಂದ ಅವರೊಳಗೆ ಹುಟ್ಟುತ್ತದೆ ಅನ್ನುವುದನ್ನೆ ಆತ ಯೋಚಿಸುತ್ತಾ ಅಲ್ಲೆ ಚಪ್ಪರದಡಿಯಲ್ಲಿನ ಕುರ್ಚಿಯೊಂದರಲ್ಲಿ ಕುಸಿದು ಕುಳಿತ. ಯಾರೋ ಎಲ್ಲರಿಗೂ ಚಹಾ ತಂದು ಹಂಚುತಿದ್ದರು. ಆಗೀಗ ಗದ್ದೆ ಕೋಗಿನ ಅಂಚಿನಿಂದ ಬೀಸಿ ಬರುತ್ತಿದ್ದ ನಡುರಾತ್ರಿಯ ಕುಳಿರ್ಗಾಳಿಯ ತಂಪಿಗೆ ಚಹದ ಆ ಬೆಚ್ಚನೆ ಸ್ವಾದ ಮೈಮನಕ್ಕೆ ಹಿತಕಾರಿಯಾಗಿತ್ತು. ಕೋಲದ ಚಂಡೆ ವಾಲಗದವರು ವಿರಾಮ ಪಡೆದದ್ದಕ್ಕೋ ಏನೋ ಸ್ವಲ್ಪ ಹೊತ್ತು ಗಲಾಟೆ ಕಡಿಮೆಯಾಗಿತ್ತು. ದೂರದಲ್ಲಿ ಅದ್ಯಾವುದೋ ಅರಿಯದ ಊರಿನತ್ತ ಏದುಸಿರು ಬಿಡುತ್ತಾ ಓಡಲು ತಯಾರಾಗುತ್ತಿದ್ದ ರೈಲು ಬಂಡಿ ಕಾಂಙನಗಾಡು ನಿಲ್ದಾಣ ಬಿಡುವ ಸೂಚನೆ ನೀಡಲು ಹೊಡೆದ ಸೀಟಿಯ ಸದ್ದು ಅಲೆಯಲೆಯಾಗಿ ಅದೆ ಗಾಳಿಯಲೆಯಲ್ಲಿ ಇವನ ಕರ್ಣಪಟಲದವರೆಗೂ ತೇಲಿ ಬಂತು.

*****

ತಾವೇನೊ ಈ ಜಗತ್ತಿನಲ್ಲಿ ಅಜರಾಮರರೆಂಬಂತೆ ಮನುಷ್ಯ ರೂಪಿ ಮೃಗಗಳು ಪ್ರಪಂಚದ ಎಲ್ಲೆಡೆಯೂ ತೋರುವ ಠಕ್ಕುˌ ವಿನಾಃಕಾರಣದ ದ್ವೇಷˌ ಅನಗತ್ಯ ಹಗೆ ಸಾಧಿಸುವ ಹಟˌ ಸಮಯಸಾಧಕತನಗಳನ್ನೆಲ್ಲ ಕಂಡು ರೋಸಿ ಹೋಗಿರುವ ಅವನಿಗೆ ಈ ಆಶಾಢಭೂತಿ ಸಮಾಜದಲ್ಲಿ ಇನ್ನೂ ಈ ನಯವಂಚನೆಗಳಲ್ಲಿ ಪಳಗಿ ನಿಪುಣರಾಗಿದ್ದಿರದ ಸುಭಾಶನಂತಹ ಎಳೆಯರ ತಲೆ ಕಾಯಲಾದರೂ ಒಂದು ದೈವ ಅಂತ ನಿಜವಾಗಿಯೂ ಸರ್ವಸ್ವವನ್ನೂ ನಿಯಂತ್ರಿಸುವ ಶಕ್ತಿಶಾಲಿಯಾಗಿ ಅಗೋಚರ ನಿಯಾಮಕನೊಬ್ಬ ಇದ್ದಿದ್ದರೆ ಅದೆಷ್ಟೋ ಒಳ್ಳೆಯದಿತ್ತು ಅಂತ ಅನೇಕ ಸಲ ಅನಿಸುತ್ತಿದ್ದದ್ದಿದೆ.

ಅವನನ್ನ ಅವ ನಾಸ್ತಿಕನೆಂದೇನೂ ತಮಟೆ ಹೊಡೆದುಕೊಂಡಿಲ್ಲ ಆದರೆ ಆಸ್ತಿಕನಾಗಿರುವುದು ಅಂದರೆ ತೋರಿಕೆಯ ಆಚರಣೆಗೆ ಕಟ್ಟುಬಿದ್ದು ಇನ್ಯಾರನ್ನೋ ಮೆಚ್ಚಿಸಲು ತಾನು ಛದ್ಮವೇಷ ಹಾಕುವುದು ಅನ್ನುವ ಶೈಲಿಯ ಆಸ್ತಿಕತೆಯಿಂದ ಮಾತ್ರ ಅವನು ದೂರಾದೂರ. ಅನುಭವ ಜನ್ಯವಲ್ಲದ ಯಾವುದನ್ನೂ ಸಹ ಅವ ಆರಾಧಿಸಲರಿಯ. ಒಳಿತೋ ಕೆಡಕೋ ಕಂಡು ಅನುಭವಿಸಿ ಅರಿತಾದ ಮೇಲಷ್ಟೆ ಆ ಬಗ್ಗೆ ಸ್ವಂತ ಅಭಿಪ್ರಾಯ ರೂಪಿಸಿಕೊಳ್ಳಲು ಶಕ್ತನಾಗಿರುವ ಅವನುˌ ಕೇವಲ ಅದೆ ಸಂಗತಿ ಬಗ್ಗೆ ಅನ್ಯರಿಗೆ ಅನಿಸಿದ್ದರ ಆಧಾರದ ಮೇಲೆ ಎಂದಿಗೂ ಒಂದು ನಿಲುವು ತಳೆದವನಲ್ಲ. ಆದರೆˌ ಯಾವುದಾದರೂ ವಿಷಯ ತನಗೆ ವಿಷ ಅಂತನ್ನಿಸಿದರೆˌ ತನ್ನಂತವರ ಪಾಲಿಗೂ ಅದು ವಿಷಕಾರಿಯೆ ಅನ್ನುವ ಸರ್ವ ಸಮಾನತೆಯ ಮನಸ್ಥಿತಿ ಆತನದ್ದು. ತಾನು ಅಮೃತ ಅಂತ ಭಾವಿಸಿದ್ದರ ಸವಿ ಅನ್ಯರಿಗೂ ತಲುಪಲಿ ಅನ್ನುವ ವಿಶಾಲ ಹೃದಯಿ ಸಹ ಹೌದು.

ಆದರೆ ಭಾವನೆಗಳಿಗೂ ಬೆಲೆ ಕಟ್ಟುವ ಕೆಟ್ಟ ಚಾಳಿಗಿಳಿದಿರುವ ಕೆಟ್ಟ ಪ್ರಪಂಚದಲ್ಲಿ ಅನಿವಾರ್ಯವಾಗಿ ಬಾಳುತ್ತಾ ಕಾಲ ಹಾಕಲೆ ಬೇಕಾದ ದುಸ್ಥಿತಿಗೆ ಅವನ ಮೇಲೆ ಅವನಿಗೇನೆ ಪಿಚ್ಚೆನಿಸುತ್ತೆ. ಇಲ್ಲಿರಲು ಇಷ್ಟವಾಗದವರಿಗೆ ಎಲ್ಲಾದರೂ ಅಕ್ಕಪಕ್ಕದ ಗ್ರಹಗಳಲ್ಲಿ ಯಾವುದಕ್ಕಾದರೂ ಶಾಶ್ವತವಾಗಿ ತುರ್ತು ವರ್ಗಾವಣೆ ಬಯಸಿಕೊಂಡು ಏಕಾಂತ ವಾಸ ಅಪೇಕ್ಷಿಸಿ ಹೊರಡಲು ಸಾಧ್ಯವಿರುತ್ತಿದ್ದರೆˌ ಈ ಕ್ಷುಲ್ಲಕ ಪ್ರಾಪಂಚಿಕತೆಯ ಜಂಜಡಗಳಿಂದ ಪಾರಾಗಿ ಅದೆಂದೋ ಇಲ್ಲಿಂದ ತಲೆಮರೆಸಿಕೊಂಡು ಪರಾರಿಯಾಗಿ ಸಲ್ಲದ ಅಸಂಖ್ಯ ಅಪವಾದಗಳಿಂದ ಖಂಡಿತವಾಗಿ ಪಾರಾಗುತ್ತಿದ್ದ.

*****

ಅಲ್ಲೆ ಕಂಭಕ್ಕೆ ಒರಗಿಕೊಂಡು ಒಂದೂವರೆ ಕಾಲಿನಲ್ಲಿ ನಿಂತಿದ್ದ ಸುಭಾಶನನ್ನ ತಟ್ಟಿ ಹತ್ತಿರ ಕರೆದು ಕೂರಿಸಿಕೊಂಡು ಅವನಿಗೂ ಚಹ ಕೊಟ್ಟು ಕುಡಿಯುವಂತೆ ಪುಸಲಾಯಿಸಿದ. ತನ್ನ ಕಳ್ಳನಿದ್ದೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದದ್ದಕ್ಕೋ ಏನೋ ಮಗು ತೀರಾ ಮುಜುಗರ ಪಟ್ಟುಕೊಂಡು ಸಂಕೋಚದಿಂದಲೆ ಚಹಾ ಹೀರ ತೊಡಗಿತು. ಅವನ ಅಮಾಯಕತೆಗೋ ಅಥವಾ ವಯೋಸಹಜ ಮುಗ್ಧತೆಗೋ ಇವನಲ್ಲಿ ಅರಿಯದ ಒಂದು ಮೃದು ಭಾವ ಹುಟ್ಟಿತ್ತು. "ರಾತ್ರಿ ಎಂತ ಪದಾರ್ಥವ? ಎಂತ ಊಟ ಮಾಡಿ ಬಂದಿದ್ದೆ?" ಅಂದ. ಮತ್ತಷ್ಟು ಸಂಕೋಚದ ಮುದ್ದೆಯಾಗಿ ಅವ "ಗಂಜಿ ಉಪ್ಪಡು" ಅಂದ. "ಬಿಡು ನಾಳೆ ಗಮ್ಮತ್ತು ಕೋಳಿ ಅಲನ" ಅಂತ ಇವ ಕಾಲೆಳೆದ.

( ಇನ್ನೂ ಇದೆ.)

https://youtu.be/GtTX2TZ19Cg

No comments: