22 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊

ಇಷ್ಟಲ್ಲದಿದ್ದರೆ ಇಡಿ ದೇಶವನ್ನೆ ಅದೂ ಹತ್ತು ಹದಿನೈದು ವರ್ಷಗಳಿಂದ ಕೇವಲ ತನ್ನ ಪ್ರಭಾವಳಿಯನ್ನ ಹೆಚ್ಚಿಸಿಕೊಳ್ಳುವ ಪುಂಖಾನುಪುಂಖವಾದ ಹುಸಿ ವದಂತಿಗಳನ್ನ ಹಬ್ಬಿಸಿಯೆ ನಿರಂತರವಾಗಿ ಏಮಾರಿಸಲು ಗಡ್ಡಬಿಟ್ಟ ಒಬ್ಬ ಮಡ್ಡನಿಗೆ ಸಾಧ್ಯವಾಗುತ್ತಿತ್ತಾ ಅಂತ ಯೋಚಿಸಿದವನಿಗೆ ನಗು ಬಂತು.

ನಮ್ಮ ದೇಶದಲ್ಲಿ ಬಾಯಿ ಬಡಾಯಿಕೋರರಿಗೆ ಹಾಗೂ ಛದ್ಮವೇಶಧಾರಿಗಳಿಗೆ ಸಿಗುವಷ್ಟು ಮರ್ಯಾದೆ ಬಹುಶಃ ಇನ್ಯಾವ ಸಭ್ಯಸ್ಥ ಸರಳ ಬದುಕಿನ ನೇರ ನಡೆ ನುಡಿ ಹೊಂದಿರುವವರಿಗೆ ಸಿಗುವುದಿಲ್ಲ ಅನ್ನೋದು ಕರಾಳ ವಾಸ್ತವ. ದೇಶದ ಅಧೋಗತಿಗೂ ಬಹುತೇಕ ಅದೆ ಕಾರಣವೆನ್ನುವ ಸತ್ಯಾಂಶ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದರೂ ಅಯೋಗ್ಯರ ವ್ಯಕ್ತಿಪೂಜೆಗಿಳಿವ ಅತಿಬುದ್ಧಿವಂತರು ತಮ್ಮ ಹುಟ್ಟು ಚಾಳಿಯನ್ನ ಸುಟ್ಟರೂ ಬಿಡಲೊಲ್ಲರು.

ನಿತ್ಯಾನಂದರೇನು ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದವರಲ್ಲ. ಹಾಗಂತ ಅನಕ್ಷರಸ್ಥರೂ ಆಗಿರಲಿಲ್ಲ. ಮಾತೃಭಾಷೆ ಮಲಯಾಳಂ ಜೊತೆಗೆ ಕನ್ನಡˌ ಸ್ವಲ್ಪ ಮಟ್ಟಿಗೆ ಹಿಂದಿ ಹಾಗೂ ಇಂಗ್ಲಿಷ್ ಎರಡನ್ನೂ ಓದಿ ಬರೆಯವಷ್ಟು ಅಕ್ಷರ ಜ್ಞಾನ ಅವರಿಗಿತ್ತು. ಮನೆಭಾಷೆ ಮಲಬಾರಿ ಮಲಯಾಳಂ ಜೊತೆಗೆ ಸರಾಗವಾಗಿ ತುಳುˌ ತುಳುನಾಡಿನ ಧಾಟಿಯ ಕನ್ನಡˌ ಗೋವನಿ ಕೊಂಕಣಿˌ ಗಾಂವಟಿ ಮರಾಠಿˌ ಮುಂಬೈಯಾ ಹಿಂದಿ ಹಾಗೂ ತಕ್ಕ ಮಟ್ಟಿಗೆ ಇಂಗ್ಲೀಷಿನಲ್ಲೂ ಸಂವಹಿಸಲು ಅವರಿಗೆ ಸಾಧ್ಯವಿತ್ತು.

ಇಂದಿನ ಸ್ವಯಂಘೋಷಿತ ದೇವಮಾನವರಂತೆ ಅವರು ಭಕ್ತಾದಿಗಳಲ್ಲಿ ಬೇಧವೆಣಿಸಲಿಲ್ಲˌ ಹೆಸರೆ ಹೇಳಲಂಜುವ ಕಾಙಂನಗಾಡಿನ ಕೊರಗನಿಂದ ಹಿಡಿದುˌ ಮುಂಬೈಯ ಹೊಟೇಲುದ್ಯಮಿˌ ಸೂರತಿನ ಸಿಂಧಿ ವಜ್ರೋದ್ಯಮಿˌ ಆ ಕಾಲದ ದೊಡ್ಡ ಸಾಹುಕಾರ ಲಕ್ಷ್ಮಣ ಸಾ ಖೋಡೆಯವರೆಗೆ ಅವರಿಗೆ ಎಲ್ಲರೂ ಸರಿಸಮಾನರು. ಯಾವುದೆ ತೋರಿಕೆಯ ಆಡಂಬರದಿಂದ ದೂರವಿದ್ದ ಅವರದ್ದು ಕೌಪಿನವೊಂದೆ ಶಾಶ್ವತ ಧಿರಿಸು. ಸುಗಂಧ ಪೂಸಿಕೊಂಡು ಸೌಂದರ್ಯ ಪ್ರಸಾದನಗಳನ್ನ ಬಳಸಿಕೊಂಡು ದೊಡ್ಡಾಟವಾಡುವ ಕಳ್ಳಗುರುಗಳೆಲ್ಲ ಅವರಿಗೆ ಈಡಲ್ಲ. ವಾಸ್ತವದ ಅಧ್ಯಾತ್ಮಿಕತೆಯ ಜಿಜ್ಞಾಸುಗಳು ಹಿಂಬಾಲಿಸಬೇಕಿರೋದು ಅಸಲಿ ಭಗವಾನ್ ನಿತ್ಯಾನಂದರನ್ನೆ ಹೊರತು ಇಂದಿನ ನಕಲಿ ಭಗ"ವಾನರ" ನಿತ್ಯ ಆನಂದಿಗಳನ್ನಂತೂ ಅಲ್ಲವೆ ಅಲ್ಲ.

ತೋರಿಕೆಗೆ ಅವರೆಂದೂ ಢೋಂಗಿ ಇಂದ್ರಜಾಲದ ಕಣ್ಕಟ್ಟು ತೋರಿಸಿ ಜನರನ್ನ ವಂಚಿಸಲಿಲ್ಲ. ನೂರೆಂಟು ಸ್ಕೀಮುಗಳನ್ನ ಹೇಳಿಕೊಂಡು ಬಂದು ಸಂಗ್ರಹಿಸಿದ ದೇಣಿಗೆಯಲ್ಲಿ ಈ ಕಾಲದ ಸತ್ತಕುರುಗಳಂತೆ ಬಿಎಂಡಬ್ಲೂ ಬೈಕು ಖರೀದಿಸಿ ಫೋಸು ಕೊಡಲಿಲ್ಲˌ ಕ್ಯಾರವಾನ್ ಕಾರು ಖರೀದಿಸಿ ಭಾರತದ ಮಣ್ಣು ಉಳಿಸಲು ಅಮೇರಿಕಾದ ಮಣ್ಣಿನಲ್ಲಿ ಜಾಲಿಟ್ರಿಪ್ಪು ಹೊಡೆಯಲಿಲ್ಲ. ಕರಡಿಯಂತೆ ಕೆದರಿದ ಕೂದಲು ಬಿಟ್ಟುಕೊಂಡು ದಿನಕ್ಕೊಂದು ರಂಗುರಂಗಿನ ನೈಟಿ ಹಾಕಿಕೊಂಡು ಬೀದಿ ಬದಿಯ ದೊಂಬರಂತೆ ಅಗ್ಗದ ಜಾದೂ ಮಾಡಿಕೊಂಡು ಜನರ ಮೇಲೆ ಮಂಕು'ಬೂದಿ' ಎರಚಲಿಲ್ಲ. ಮೈಕು ಸಿಕ್ಕ ಕೂಡಲೆ ಲೌಡಿಕದ್ದೆಯ ಕುರುಕುರು ಛೀಗಳಂತೆ ಕನಿಷ್ಠ ಪಕ್ಷ "ಒಂದೆ"ಗೂ "ವಂದೆ"ಗೂ ವ್ಯತ್ಯಾಸವನ್ನರಿಯದೆ ಉದ್ದುದ್ದ ಭಾಷಣ ಚೂಡಿ ಜನರನ್ನ ಏಮಾರಿಸಲಿಲ್ಲ.

ಅದೆಲ್ಲ ಹೋಗಲಿ ತನ್ನನ್ನ ತಾನು ಗುರುವೆಂದೆ ಎಂದೂ ಬೋರ್ಡು ಹಾಕಿಕೊಂಡು ತಿರುಗಲಿಲ್ಲ. ವಾಸ್ತವದಲ್ಲಿ ಜನರಿಂದ ದೂರಕ್ಕೆ ಉಳಿದು ಅಗತ್ಯ ಬಿದ್ದಾಗ ಮಾತ್ರ ಹತ್ತಿರ ಕರೆದು ಅವರ ಸಮಸ್ಯೆಗಳನ್ನ ಆಲಿಸಿದರು. ತನ್ನಿಂದಾಗುವ ಪರಿಹಾರ ಸೂತ್ರವನ್ನ ಬೋಧಿಸಿದರು. ನಿಜವಾದ ಆ ಭಗವಂತ ಈ ಭೂಮಿಯ ಮೇಲೆ ನಡೆದರೆ ಹೇಗಿರಬಹುದೋ ಹಾಗೆ ಬಾಳಿ ತೋರಿಸಿದರು. ಶಿರಡಿಯ ಸಾಯಿಬಾಬಾˌ ಮುಕುಂದೂರು ಸ್ವಾಮಿಗಳುˌ ಹುಬ್ಬಳ್ಳಿಯ ಸಿದ್ಧಾರೂಢರುˌˌ ಶ್ರೀಧರ ಸ್ವಾಮಿಗಳಷ್ಟೆ ಸರಳರು ಪೂಜ್ಯರು ಆಗಿದ್ದವರೆ ಈ ಅವನ ಪಾಲಿನ "ಅಜ್ಜ" ನಿತ್ಯಾನಂದರು.

ಆದರೂ ಅವರಿದ್ದಾಗಲಾಗಲಿˌ ಹೋದ ಮೇಲಾಗಲಿ ಅವರ ಭಕ್ತಾದಿಗಳಾದವರಿಗೆ ಬರವಿಲ್ಲ. ಯಾವುದೆ ಚಿಲ್ಲರೆ ಶೋಕಿ ಮಾಡದೆˌ ಕೇವಲ ಕೌಪೀನ ಮಾತ್ರ ಧರಿಸಿಕೊಂಡಿದ್ದುˌ ಯಾರ ಊಹೆಗೂ ಎಟುಕದೆˌ ನಿತ್ಯ ಪರಿವ್ರಾಜಕರಾಗಿದ್ದುಕೊಂಡು ದೀನ-ದಲಿತರ ಸೇವೆಗೆ ಸಮಾಜವನ್ನ ಹುರಿದುಂಬಿಸಿಕೊಂಡಿದ್ದ ಅವರೆಂದೂ ಇಂದಿನ ತಥಾಕಥಿತ ಗುರೂಜಿಗಳಂತೆ ಧರ್ಮದ ವ್ಯಾಪಾರಕ್ಕೆ ಅಂಗಡಿ ತೆರೆದು ಕೂರಲಿಲ್ಲ.

ಆದರೂˌ ಅವರ ಅಪಾರ ಹಿಂಬಾಲಕರು ಅವರ ಕರ್ಮಭೂಮಿ ಕಾಙಂನಗಾಡಿನಲ್ಲೂˌ ಕೊನೆಯ ಕಾಲ ಕಳೆದ ಸಮಾಧಿ ಸ್ಥಳ ಗಣೇಶಪುರಿಯಲ್ಲೂ ಅವರ ಸ್ಮಾರಕ ಆಶ್ರಮ ತೆರೆದು ಅವರ ಆದರ್ಶದ ಆಶಯಗಳನ್ನ ಅನುಗಾಲವೂ ಜೀವಂತವಾಗಿರಿಸಲು ಶ್ರಮಿಸುತ್ತಿದ್ದಾರೆ. ಕಾಙಂನಗಾಡಿನಲ್ಲಿ ಅವರ ಹೆಸರಿನಲ್ಲಿ ಶಾಲೆ ಹಾಗೂ ಪಾಲಿಟೆಕ್ನಿಕ್ ಕಾಲೇಜೊಂದು ನಡೆಯುತ್ತಿದೆ. ಅದರ ಆದಾಯದಿಂದಲೆ ಆಶ್ರಮದ ಖರ್ಚು ನಿರ್ವಹಿಸುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳಿಗೆ ಊಟ - ವಸತಿ ಉಚಿತ. ಯಾರೂ ಯಾವ ಕಾರಣಕ್ಕೂ ಹಣಕ್ಕಾಗಿ ಒತ್ತಾಯಿಸರು. ಭಕ್ತರೆ ತಾವಾಗಿ ದೇಣಿಗೆ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ. ಅನ್ನದಾನ ಮಾಡಿಸಿದರೆ ಅದಕ್ಕೆ ಪ್ರೋತ್ಸಾಹಿಸುತ್ತಾರೆ. ಉಳಿದಂತೆ ನಿತ್ಯದ ಪೂಜೆ-ಪುನಸ್ಕಾರಗಳು ಅನೂಚಾನಾಗಿ ನಡೆಯುತ್ತವೆ.

ಗುರುವನ ಸಹ ನಿತ್ಯಾನಂದರದ್ದೆ ಸೃಷ್ಟಿ. ಬಹುಶಃ ಕರಾವಳಿ ಮುಗಿದು ದಕ್ಷಿಣ ಕೊಡಗಿನಂಚಿನ ಮಲೆಸೀಮೆ ಆರಂಭವಾಗುವ ಪಶ್ಚಿಮಘಟ್ಟದ ಪಾದದಲ್ಲಿ ಅದಿದೆ. ಸ್ವಚ್ಛ ಸುಂದರ ಪರಿಸರವಿರುವ ಅಲ್ಲಿ ಆಶ್ರಮವಾಸಿಗಳ ವಸತಿ ಹಾಗೂ  ನಿತ್ಯಾನಂದರ ದೇವಸ್ಥಾನವಿದೆ. ಸದಾ ಎಡಬಿಡದೆ ಸುರಿಯುವ ದೇವಗಂಗೆಯೆಂದೆ ನಂಬಲಾಗಿರುವ ಮಲೆನಾಡಿನಿಂದ ಬೆಟ್ಟದ ಒಡಲು ಸೀಳಿ ಉಕ್ಕಿ ಬರುವ ಅನಂತ ಜಲ ತೀರ್ಥವಿದೆ. ಅದರ ಔಷಧೀಯ ಗುಣಗಳ ಬಗ್ಗೆ ದಂತಕಥೆಗಳಿವೆ. ಮೌನವನ್ನೆ ಹೊದ್ದುಕೊಂಡಂತೆ ಇರುವ ಕೇವಲ ಪ್ರಾಕೃತಿಕ ನಿನಾದಗಳಿಗೆ ಕಿವಿಯಾಗಲು ಹೇಳಿ ಮಾಡಿಸಿದ ಹಸಿರ ಕಣಿವೆಯಂತಹ ಆ ಸ್ಥಳಕ್ಕೆ ಭಕ್ತಾದಿಗಳು ಹಗಲಿನಲ್ಲಿ ಮಾತ್ರ ಭೇಟಿ ಕೊಡಬಹುದು. ಆತ್ಮದ ಅವಲೋಕನಕ್ಕೆ ತಕ್ಕದಾಗಿರುವ ಆ ಜಾಗದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಅವನ ಈ ಕಾಙಂನಗಾಡಿನ "ಅಜ್ಜನ ಮನೆ"ಯ ಭೇಟಿ ಯಾವುದೆ ನಿರ್ದಿಷ್ಟ ಯೋಜನೆಗಳನ್ನೆ ಹಾಕಿಕೊಳ್ಳದೆ ಹೊರಟಿದ್ದ ಪ್ರವಾಸವನ್ನ ಚಿರಸ್ಮರಣೀಯವಾಗಿಸಿತ್ತು. ಇಂದಿನಿಂದ ಬೇಸರವಾದಾಗಲೆಲ್ಲ ಹೋಗಿದ್ದು ಬರಲೊಂದು ಅಜ್ಜನ ಮನೆ ತನಗೂ ಇದೆ ಅನ್ನುವ ವಿಷಯ ಅವನಿಗೆ ಖಚಿತವಾಯ್ತು.

*****

ಮಲಯಾಳಿಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗೊಂದಲ ಅವನಿಗೆ ಆಶ್ಚರ್ಯ ಹುಟ್ಟಿಸುತ್ತದೆ. ಥೇಟ್ ತುಳುನಾಡಿಗರಂತೆ ಅಸುರ ಕುಲ ತಿಲಕ ಬಲಿ ಚಕ್ರವರ್ತಿ ಅಥವಾ ಮಹಾಬಲಿ ತಮ್ಮ ನಾಡನ್ನ ಪೌರಾಣಿಕ ಕಾಲದಲ್ಲಿ ಆಳುತ್ತಿದ್ದ ಅಂತ ಬಲವಾಗಿ ನಂಬುವ ಅವರೆಲ್ಲ ಇಂದಿಗೂ ಅವನ ಸಲುವಾಗಿಯೆ ವರ್ಷಕ್ಕೊಮ್ಮೆ ಓಣಂ ಹಬ್ಬವನ್ನ ಜಾತ್ಯತೀತವಾಗಿ - ಮತಾತೀತವಾಗಿ ಆಚರಿಸುತ್ತಾರೆ. ನಮ್ಮ ತುಳುನಾಡಿನಲ್ಲಿ ಬಲಿಯ ಆಗಮನ ಸಾರಿ ದುಷ್ಟಶಕ್ತಿಗಳ ನಿವಾರಣೆಗೆ ಆಟಿ ಕಳಿಂಙ ತುಳುವರ ಮನೆ ಮನೆಗೂ ಭೇಟಿ ಕೊಡುವ ಹಾಗೆˌ ಕೇರಳದಲ್ಲಿ ಅದೆ ಕೆಲಸವನ್ನ 'ಓಣ ಪೊಟ್ಟಾನ್' ಮನೆ ಮನೆಗೆ ಆಗಮಿಸಿ ಮಾಡುತ್ತಾನೆ. ಅವನನ್ನ ಸಂಭ್ರಮಾದರ ಭಯ ಭಕ್ತಿಯಿಂದ ಎದುರುಗೊಳ್ಳುವ ಅದೆ ಜನ ಮಹಾಬಲಿಯ ದುರ್ದೆಸೆಗೆ ಕಾರಣನಾದವನನ್ನೆ ಪರಮದೈವವಾಗಿಸಿ ಇಂದು ಆರಾಧಿಸುತ್ತಿರೋದು ಹಾಗೂ ತಮ್ಮ ಪೂರ್ತಿ ರಾಜ್ಯವನ್ನೆ ತಿರುವಾಂಕೂರಿನ ರಾಜರು ಅವನಿಗೆ ಅರ್ಪಿಸಿರುವುದು ವಿಸ್ಮಯ.

ಮಹಾಬಲಿಯನ್ನ ಮೂರಡಿ ಜಾಗ ಕೇಳಿದ ವಾಮನ ಪಾತಾಳಕ್ಕೆ ತುಳಿದ ಜಾಗ ಮಾವೇಲಿಕ್ಕರದಲ್ಲಿರುವ ಮಹಾದೇವ ದೇವಸ್ಥಾನದಲ್ಲೆ ಅನ್ನುವ ಐತಿಹ್ಯವನ್ನೂ ಇಟ್ಟುಕೊಂಡಿದ್ದಾರೆ. ಆದರೆ ಈಗ ಅವರ ಆರಾಧ್ಯದೈವಗಳಲ್ಲೆ ಅಗ್ರಗಣ್ಯನಾಗಿರುವುದು ಶ್ರೀಅನಂತಪದ್ಮನಾಭ ಹಾಗೂ ಗುರುವಾಯೂರಪ್ಪನ ರೂಪದಲ್ಲಿರುವ ಬಲಿಯ ಹಗೆ ಮಹಾವಿಷ್ಣು! ಒಂಥರಾ ತಮ್ಮವನನ್ನ ತುಳಿದವನನ್ನೆ ಆರಾಧಿಸುವ "ಸ್ಟಾಕ್ ಹೋಂ ಸಿಂಡ್ರೋಮ್" ಬಲಿಪಶುಗಳವರು.

( ಇನ್ನೂ ಇದೆ.)

https://youtu.be/NGjaYHqBAaw

No comments: