11 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೮.👊


ಸದ್ಯ ಕೇರಳದ ಉತ್ತರದ ಗಡಿ ಪಟ್ಟಣವೆಂದು ಬಿಂಬಿಸಲಾಗುವ ತುಳುನಾಡ ಮಣ್ಣು ಮಂಜೇಶ್ವರದಿಂದ ಮಂಗಳೂರು ನಿಲ್ದಾಣ ಸಂಪರ್ಕಿಸುವ ರೈಲ್ವೆ ಮಾರ್ಗ ಬ್ರಿಟಿಷರು ತಮ್ಮ ನೇರ ಆಡಳಿತದಲ್ಲಿದ್ದ ಮದರಾಸು ಪ್ರಾಂತ್ಯದ ರಾಜಧಾನಿ ಮದರಾಸನ್ನು ಪಶ್ಚಿಮದಲ್ಲಿದ್ದ ಕಾಸರಗೋಡು ತಾಲೂಕನ್ನೂ ಒಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಪಟ್ಟಣ ಮಂಗಳೂರನ್ನ ಸಂಪರ್ಕಿಸಲು ಇಂದಿನ ತಮಿಳುನಾಡು ಹಾಗೂ ಮಲಬಾರು ಮಾರ್ಗವಾಗಿ ಹಾಸಿದ್ದರು. 


ಈಗ ಆ ಮಾರ್ಗಕ್ಕೆ ಕಳೆದ ಶತಮಾನದ ತೊಂಬತ್ತರ ದಶಕದಲ್ಲಿ ಇದೆ ತುಳುನಾಡು ಮೂಲದ ಜಾರ್ಜ್ ಫೆರ್ನಾಂಡಸ್ ಸಚಿವರಾಗಿ ಹೊಂದಿದ್ದ ದೂರದೃಷ್ಟಿಯ ಫಲವಾಗಿ ಹಾಗೂ ಅದಕ್ಕೆ ಒತ್ತಾಸೆಯಾಗಿ ದುಡಿದ ತಂತ್ರಜ್ಞ ವಿ ಶ್ರೀಧರನ್ ಪರಿಶ್ರಮದ ಪರಿಣಾಮವಾಗಿ ಮಂಗಳೂರನ್ನ ನೇರವಾದ ರೈಲ್ವೆ ಮಾರ್ಗದ ಮೂಲಕ ಬೊಂಬಾಯಿಗೆ ಬೆಸೆಯಲು ಹಾಸಲಾಗಿರುವ ತೋಕೂರು - ರೋಹಾ ನಡುವಿನ ರೈಲು ಹಳಿಯೂ ಸೇರಿ ತುಳುನಾಡಿನೊಂದಿಗೆ ಕೇರಳದ ಪಾಲಿಗೂ ಹೊಸ ಸಾಧ್ಯತೆಯೊಂದರ ಬಾಗಿಲನ್ನ ತೆರೆಯಿತು. ವಾಸ್ತವವಾಗಿ ಇಂದು ಕೊಂಕಣ ರೈಲ್ವೆ ಮಾರ್ಗದ ಗರಿಷ್ಠ ಫಲಾನುಭವಿಗಳೆ ಈ ಚತುರ ನಾಯಕರನ್ನ ಆಯ್ಕೆ ಮಾಡಿ ಸಂಸತ್ತಿಗೆ ಕಳಿಸುವ ಕಿಲಾಡಿ ಮಲಯಾಳಿಗಳು.


ಬ್ರಿಟಿಷರ ಕಾಲದಲ್ಲಿಯೆ ಕಳೆದ ಶತಮಾನದ ಆರಂಭದಲ್ಲಿ ತಿರುವಾಂಕೂರಿನ ಮಹಾರಾಜರಾಗಿದ್ದ ಉತ್ತರಮ್ ತಿರುನಾಳ್ ವಹಿಸಿದ ಆಸಕ್ತಿಯ ಫಲವಾಗಿ ಕೊಲ್ಲಂ - ಸೆಂಗೋಟ್ಟೈ - ಮಧುರೈ ಮಾರ್ಗವಾಗಿ ಅವರ ಸಾಮ್ರಾಜ್ಯದ ರಾಜಧಾನಿ ತಿರುವನಂತಪುರಂ ಪಟ್ಟಣವನ್ನ ಮದರಾಸಿನೊಂದಿಗೆ ಬೆಸೆಯುವ ರೈಲು ರಸ್ತೆ ಕಳೆದ ಶತಮಾನದ ಆರಂಭದಲ್ಲಿಯೆ ರಚಿಸಲಾಗಿತ್ತು. ಅನಂತರ ಸ್ವತಂತ್ರ ನಂತರ ಆರಂಭದ ಒಂದೆರಡು ದಶಕದಲ್ಲಿಯೆ ಈ ಮಾರ್ಗವನ್ನ ಉತ್ತರದಲ್ಲಿ ಮಂಗಳೂರು - ಮದರಾಸು ಮಾರ್ಗದ ಜೊತೆ ಬೆಸೆಯಲು ಕೊಲ್ಲಂ - ಶೊರನೂರು ಮಾರ್ಗವಾಗಿಯೂˌ ದಕ್ಷಿಣದಲ್ಲಿ ತಿರುವನಂತಪುರಂನಿಂದ ನಾಗರಕೋಯಿಲ್ - ಕನ್ಯಾಕುಮಾರಿಯವರೆಗೂ ವಿಸ್ತರಿಸಲಾಯಿತು. 


ತೀರ ಇತ್ತೀಚೆಗೆ ಶೊರನೂರಿನಿಂದ ಮಲ್ಲಪುರಂ ಜಿಲ್ಲೆಯ ಮಲೆನಾಡಿನ ಮಡಿಲಲ್ಲಿರುವ ನಿಲಂಬೂರಿಗೂ ಸಹ ಮುಂದೊಮ್ಮೆ ಹೇಗಾದರೂ ಮಾಡಿ ಕರ್ನಾಟಕವನ್ನ ಒತ್ತಾಯದಿಂದಲಾದರೂ ಮಣಿಸಿ ಅದೆ ಮಾರ್ಗವನ್ನ ವಯನಾಡು - ಬಂಡಿಪುರದ ಮಾರ್ಗವಾಗಿ ಮೈಸೂರಿನವರೆಗೂ ಪಶ್ಚಿಮಘಟ್ಟದ ಬೆಟ್ಟಸಾಲಿಗೆ ತೂತು ಕೊರೆದು ಸುರಂಗ ಮಾರ್ಗದ ಮೂಲಕವಾದರೂ ಸರಿ ವಿಸ್ತರಿಸಿಯೆ ತೀರುವ ಹುನ್ನಾರ ಹೊತ್ತೆ ರೈಲು ಸೇವೆ ಒದಗಿಸಲಾಗಿದೆ. ಇದೊಂದೆ ಅನಾಹುತಕಾರಿ ಯೋಜನೆ ಸಾಲದು ಅಂತ ಮಲಬಾರಿನ ಕಣ್ಣೂರು ಜಿಲ್ಲೆಯ ತಲಚ್ಚೇರಿಯಿಂದ ಪಶ್ಚಿಮ ಘಟ್ಟವನ್ನೇರಿ ಕೊಡಗಿನ ಭಾಗಮಂಡಲ - ವಿರಾಜಪೇಟೆ - ಪಿರಿಯಾಪಟ್ಟಣ ಮಾರ್ಗವಾಗಿ ಮೈಸೂರಿಗೆ ರೈಲ್ವೆ ಮಾರ್ಗ ಮಾಡಿಸುವ ಭಯಂಕರ ಅನಾಹುತಕಾರಿ ಯೋಜನೆಯು ಸಹ ಮಲಯಾಳಿಗಳ ಮಂಡೆಯೊಳಗಿದೆ. 


ಇದರೊಂದಿಗೆ ಉತ್ತರದ ಎರಣಾಕುಳಂ ಜಂಕ್ಷನ್ನಿಂದ ಪಶ್ಟಿಮಕ್ಕೆ ಅಲಪ್ಪುಳ - ಹರಿಪಾದ್ - ಅಂಬಲಪುಳ ಮಾರ್ಗವಾಗಿಯೂˌ ಪೂರ್ವಕ್ಕೆ ಚಂಗನ್ನಸ್ಸೇರಿ - ಮಾವೇಲಿಕ್ಕರ - ಕೊಟ್ಟಾಯಂ ಮಾರ್ಗವಾಗಿ ಅಂಡಾಕೃತಿಯಲ್ಲಿ ದಕ್ಷಿಣದ ಕಾಯಾಕುಳಂ ಜಂಕ್ಷನ್ ಸಂಪರ್ಕಿಸುವ ಮಾರ್ಗವೂ ರಚನೆಯಾಗಿದ್ದುˌ ಮಲಯಾಳಿಗಳ ಭಾಗ್ಯಕ್ಕೆ ಎಣೆಯೆ ಇಲ್ಲದಂತಾಗಿದೆ. ಮೊದಲೆ ಹೇಳಿರುವಂತೆ ಇದಕ್ಕೆಲ್ಲ ಮಿಗಿಲಾಗಿ ತನ್ನದೆ ಮಾಲಕತ್ವದಲ್ಲಿ ಕಾಸರಗೋಡಿನಿಂದ - ತಿರುವನಂತಪುರದ ತನಕ ಅತಿವೇಗದ ರೈಲ್ವೆ ಸೇವೆಯನ್ನ ಒದಗಿಸಲು ಹೊಸತಾದ "ಸಿಲ್ವರ್ ಲೈನ್" ರೈಲ್ವೆ ಯೋಜನೆಯನ್ನ ಬೇರೆ ಇಲ್ಲಿನ ರಾಜ್ಯ ಸರಕಾರ ಪ್ರಕಟಿಸಿˌ ಅದರ ಸರ್ವೆ ಕೆಲಸವನ್ನೂ ಸಹ ಈಗಾಗಲೆ ಆರಂಭಿಸಿಯೂ ಆಗಿದೆ.


ಈ ಮೂಲಕ ಮಲೆನಾಡಿನ ಅಂಚಿನ ಉತ್ತರದ ಮಲಬಾರ್ ವಲಯದ ವಯನಾಡು ಹಾಗೂ ದಕ್ಷಿಣದ ಟ್ರಾವಂಕೂರು ವಲಯದ ಇಡುಕ್ಕಿಯ ಹೊರತು ಸಂಪೂರ್ಣ ಕೇರಳದ ಸಣ್ಣಪುಟ್ಟ ಗ್ರಾಮೀಣ ಮೂಲೆ ಮೂಲೆಗೂ ರೈಲು ಸೇವೆಯ ಸಂಪೂರ್ಣ ಲಾಭ ಕಾಲಾಂತರದಲ್ಲಿ ದಕ್ಕಲು ಸಾಧ್ಯವಾಯಿತು. ಅಲ್ಲಿ ಗೆದ್ದು ಬಂದ ಪ್ರತಿಯೊಬ್ದ ಸ್ಥಳಿಯ ಜನಪ್ರತಿನಿಧಿಯೂ ಶ್ರಮಿಸಿದ ಕಾರಣ ಇಂದು ಕೇರಳದ ಉದ್ದಗಲ ರೈಲುಗಳ ಸಂಖ್ಯೆ ವಿಪರೀತ ಅನ್ನುವಷ್ಟು ಹಚ್ಚಿದೆ. ರೈಲ್ವೆ ಸೇವೆಯಲ್ಲಿ ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸುವ ಪ್ರಸ್ತಾವವಿರಲಿ ಅಥವಾ ಹೊಸ ಮಾರ್ಗಗಳಲ್ಲಿ ಪ್ರಯಾಣಿಕರ ಹಾಗೂ ಸರಕು ಸಾಗಣೆಯ ರೈಲುಬಂಡಿಗಳ ಕಾರ್ಯಾಚರಣೆಗೆ ಇಳಿಸುವ ಯೋಜನೆಯೆ ಆಗಿರಲಿ. ಕೇಂದ್ರ ಸರಕಾರ ತನ್ನ ರೈಲ್ವೆ ಇಲಾಖೆಯ ಮೂಲಕ ಪರಿಚಯಿಸುವ ಪ್ರತಿಯೊಂದು ಹೊಚ್ಚ ಹೊಸ ಯೋಜನೆ ಪ್ರಕಟವಾದದ್ದೆ ತಡ ಕೇರಳದ ಸಂಸದರು ಅದರ ಗರಿಷ್ಠ ಪ್ರಯೋಜನವನ್ನು ಮಲಯಾಳಿಗಳಿಗೆ ಮುಟ್ಟಿಸಲು ಸಚಿವಾಲಯವನ್ನ ಎಡೆಬಿಡದೆ ಎಡತಾಕುತ್ತಾನೆ. 


ಇದರ ಪರಿಣಾಮವಾಗಿ ಊರೂರು ನಡುವಿನ ದಟ್ಚ ಕಾಡು ಕಳೆದುಕೊಂಡು ಒಂಥರಾ ಇಡಿ ರಾಜ್ಯವೆ ಅತಿದೊಡ್ಡ ಉಪನಗರವಾಗಿರುವ ಕೇರಳದಾದ್ಯಂತ ಇವತ್ತು ನಗರ ಸಾರಿಗೆಯಂತೆ ರೈಲುಗಳು ಓಡಾಡುತ್ತಿವೆ. ತನ್ನ ಮನೆಯ ಹಿತ್ತಲಲ್ಲೆ ಹಾದು ಹೋಗುವ ರೈಲು ಒಂದು ವೇಳೆ ತಪ್ಪಿ ಹೋದರೆ ಮಾತ್ರ ಮಲಯಾಳಿ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಬಸ್ಸೇರುತ್ತಾನೆ ಅನ್ನುವ ಜೋಕು ಹೀಗಾಗಿಯೆ ಚಾಲ್ತಿಯಲ್ಲಿದೆ. ಆದ್ದರಿಂದಲೆ ತೆಂಗಿನ ಮರಗಳ ದಟ್ಟ ಸಾಲು ಹೊಂದಿರುವ ಗ್ರಾಮೀಣ ಕೇರಳದ ಹಸುರಿನ ಗದ್ದೆ ಬಯಲಿನ ಕೋಗಿನಲ್ಲಿ ಹರಡಿಕೊಂಡಿರುವ ಹಳಿಗಳ ಮೇಲೆ ಅತ್ತಿಂದಿತ್ತ ಭಾರಿ ಸದ್ದಿನೊಂದಿಗೆ ಓಡುವ ರೈಲುಬಂಡಿಗಳ ಗಡಗಡ ಶಬ್ದಮಾಲಿನ್ಯಕ್ಕೆ ಬೆದರಿದ ಬೆಳ್ಳಕ್ಕಿಗಳ ಸಾಲು ಇದ್ದಕ್ಕಿದ್ದಂತೆ ಮುಗಿಲಿಗೆ ಚಿಮ್ಮಿ ಸಾಮೂಹಿಕವಾಗಿ ಹಾರುವ ದೃಶ್ಯ ವೈಭವವನ್ನು ಕಾಣುವುದಿಲ್ಲಿ ಅಪರೂಪವೇನಲ್ಲ.


*******

ಮುತ್ತಪ್ಪನ ಕೋಲ ಇವರಿಗೆ ಹೆಚ್ಚು ನೋಡಲು ಅವಕಾಶವಾಗಿರಲಿಲ್ಲ. ಸುಭಾಶನೂˌ ಇವನೂ ದಣಪೆ ದಾಟಿ ಕೆಳಬೆಟ್ಟು ತರವಾಡಿನ ಅಂಗಳಕ್ಕೆ ಇಳಿಯುವ ಹೊತ್ತಿಗೆಲ್ಲಾ ಅಲ್ಲಿನ ತರವಾಡು ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಹಾಕಲಾಗಿದ್ದ ಹಣೆದ ತೆಂಗಿನಗರಿ ಹೊದಿಸಿದ್ದ ಚಪ್ಪರದಡಿ ಬಹುತೇಕ ಮುತ್ತಪ್ಪ ದೈವದ ಕೋಲ ಸಂಪನ್ನವಾಗಿತ್ತು. ಇವರು ಹೋಗಿ ಮುಟ್ಟಿದ್ದ ಹೊತ್ತಿಗಾಗಲೆ ಭೂತ ತನ್ನನ್ನ ನಂಬಿ ಬಂದಿದ್ದ ನೊಂದ ಭಕ್ತಾದಿಗಳಿಗೆ ತನ್ನಿಂದಾದ ಸಾಂತ್ವಾನದ ನುಡಿಗಳನ್ನ ಹೇಳುತ್ತಾ ಅಭಯದಾನ ನೀಡುವ ಪ್ರಕ್ರಿಯೆಯಲ್ಲಿತ್ತು. ಹೀಗಾಗಿ ಅವನಿಗೆ ಮುತ್ತಪ್ಪ ದೈವ ಕೋಲದ ವಿವರವಾದ ಪ್ರಕ್ರಿಯೆಯನ್ನ ಕಣ್ತುಂಬಿಸಿಕೊಳ್ಳುವುದು ಅಸಾಧ್ಯವಾಯ್ತು. ಆದರೂ ಹೋದ ನಂತರ ನಡೆದ ಘಟನಾವಳಿಗಳನ್ನ ಅವನು ಅತಿ ಶ್ರದ್ಧೆಯಿಂದ ತನ್ನ ಕ್ಯಾಮೆರಾ ಕಣ್ಣಿನಲ್ಲಿ ವಿವರವಾಗಿ ಸೆರೆ ಹಿಡಿದ. 


ಅವನು ಮುತ್ತಪ್ಪನ ಕೋಲದಲ್ಲಿ ಗಮನಿಸಿದ್ದ ಮಹತ್ತರ ವಿಷಯವೆಂದರೆˌ ಅಲ್ಲಿ ಮತಾತೀತವಾಗಿ ಮುತ್ತಪ್ಪನ ಭಕ್ತಾದಿಗಳು ನೆರೆದಿದ್ದದ್ದು. ಮುತ್ತಪ್ಪ ಹಿಂದೂಗಳಲ್ಲಷ್ಟೆ ಅಲ್ಲದೆ ಮುಸಲ್ಮಾನ ಹಾಗೂ ಕ್ರೈಸ್ತ ಮತಾವಲಂಭಿಗಳಲ್ಲೂ ಭಕ್ತ ಪಡೆ ಹೊಂದಿರುವುದು ಸ್ಪಷ್ಟವಾಗಿತ್ತು. ಅಂಜುತ್ತಾ ಅಳುಕುತ್ತಾ ಗುಂಪಿನಲ್ಲೊಂದಾಗಿ ಹಿಂದೆಯೆ ನಿಂತು ಕುತ್ತಿಗೆಯುದ್ದ ಮಾಡಿ ತನ್ನ ಅಭಯ ದಾನವನ್ನ ಆಲಿಸುತ್ತಿದ್ದ ಬೂಬಮ್ಮಂದಿರಿಬ್ಬರನ್ನು ಆ ಅರೆಕತ್ತಲಲ್ಲೂ ಗುರುತಿಸಿದ ಮುತ್ತಪ್ಪ ದೈವ ಪಾತ್ರಿಯೆ ಅವರನ್ನ ಮುಂದೆ ಕರೆದು ಅವರ ಮನೋಕ್ಲೇಶವನ್ನ ಗಮನವಿಟ್ಟು ಆಲಿಸಿತು. ಬದುಕಿನ ದುಗುಡ ಹೇಳಿಕೊಳ್ಳುವಾಗ ಚಿಮ್ಮಿದ ಅವರ ಕಣ್ಣೀರನ್ನ ತಾನೆ ಒರೆಸಿ ನೀವೂ ನನ್ನ ಮಕ್ಕಳೆ. ನಾನು ನಿಮ್ಮನ್ನೂ ಸಹ ಕಾಯವ ದೈವ. ಚಿಂತೆ ಬಿಡಿ ನಾನಿದ್ದೇನೆ ಎಲ್ಲಾ ನೋಡಿಕೊಳ್ಳಲು ಅನ್ನುವ ಆಶ್ವಾಸನೆ ಕೊಟ್ಟಿತು. 


ಹೀಗೆಯೆ ನೀರುದೋಸೆ ಟೋಪಿ ಹಾಕಿದ್ದ ಇಬ್ಬರು ಮಾಪಿಳ್ಳೆ ಕಾಕಾಗಳಿಗೂ ಮುತ್ತಪ್ಪ ಕರೆದು ಕೇಪಳದ ಹೂವು - ಗೋಡಡಿಕೆಯ ಪ್ರಸಾದ ನೀಡಿ ಹರಸಿತು. ಅವರ ವಯಕ್ತಿಕ ಸಮಸ್ಯೆಗಳಿಗೂ ಮುತ್ತಪ್ಪನ ಪರಿಹಾರದ ಆಶ್ವಾಸನೆ ಸಿಕ್ಕಿತು.

https://youtu.be/5aqbmtg68dE


( ಇನ್ನೂ ಇದೆ.)

No comments: