03 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೦.👊


ಇದಾದ ಬೆನ್ನಿಗೆ ಒತ್ತಾಯಕ್ಕೆ ಬಲಿಯಾಗಿ ಮತಾಂತರಿತವಾಗಿದ್ದರೂ ಕೇವಲ ಅಂದಾಜು ಹಾಗೂ ಅನುಮಾನದ ಆಧಾರದ ಮೇಲೆ ಮಾತ್ರ ನಡೆಸಲಾದ ಇಂಕ್ವಿಜಿ಼ಷನ್ನುಗಳಂತಹ ಧಾರ್ಮಿಕ ನ್ಯಾಯಾಲಯಗಳ ಪೈಶಾಚಿಕತೆ ಮಿತಿಮೀರಿದಾಗ ನವ ಕ್ಯಾಥೋಲಿಕರಾಗಿದ್ದ ಅದೆ ಹಿಂದೂ ಸಾರಸ್ವತ ಮತ್ತಿತರರ ಎರಡು ಮೂರು ತಲೆಮಾರು ಹಿಂದಿನ ರಕ್ತ ಸಂಬಂಧಿಗಳಾಗಿದ್ದ ಗೋವನ್ನರೂ ಅವರನ್ನ ಅಲ್ಲಿಯವರೆಗೂ ಹಿಂಬಾಲಿಸಿದ್ದಾರೆ. ಎರಡು ವಿಭಿನ್ನ ಕಾಲಘಟ್ಟಗಳಲ್ಲಿ ನಡೆದಿದ್ದ ಈ ಸಾಮೂಹಿಕ ವಲಸೆಗಳಲ್ಲಿ ಕೆಲಕಾಲ ತುಳುನಾಡಲ್ಲಿ ತತ್ಕಾಲಿಕ ನೆಲೆ ಕಂಡುಕೊಂಡಿದ್ದ ಈ ಎರಡೂ ವರ್ಗದ ವಲಸಿಗರೂ ಸಹ ತಮ್ಮೊಂದಿಗೆ ಕೊಂಕಣಿ - ತುಳು ಸಂಸ್ಕೃತಿಗಳನ್ನ ಅಲ್ಲಿಯವರೆಗೂ ಕೊಂಡೊಯ್ದು ಪಸರಿಸಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ದಕ್ಷಿಣ ಕೇರಳದ ಭಾಗಗಳಿಗೂ ಹರಡುವಲ್ಲಿ ಇವರ ಕೊಡುಗೆಯೂ ಇದೆ.

*****

ಇತ್ತೀಚೆಗೆ ಕೇರಳದಿಂದ ತುಳುನಾಡಿಗೆ ಅಷ್ಟಮಂಗಳ ಪ್ರಶ್ನೆ ಹಾಗೂ ತಾಂಬೂಲ ಪ್ರಶ್ನೆಗಳನ್ನ ಇಡಿಸುವ ಅನಾಚಾರ ಆರಂಭವಾಗಿವೆ. ಕೇರಳಕ್ಕೆ ಸಂಸ್ಕಾರಯುತ ತುಳುನಾಡು ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ದೀವಿಟಿಗೆಯೆ ಹೊರತುˌ ಮಾಟ ಮಂತ್ರ ವಾಮಾಚಾರದಂತಹ ದುರ್ವಿದ್ಯಗಳಿಗೆ ತವರೂರಾದ ಕೇರಳದಿಂದ ದುಶ್ಚಟಗಳನ್ನ ತುಳುವರು ಕಲಿತು ಅವನ್ನೆ ಪವಿತ್ರ ಕ್ರಮಗಳಂತೆ ಪ್ರಚಲಿತಗೊಳಿಸುವುದು ಹಾಸ್ಯಾಸ್ಪದ. ಅದರಲ್ಲೂ ಈ ಸಂಘ ಪರಿವಾರದ ಕಮಂಗಿಗಳ ಪುಸಲಾವಣೆಯಿಂದ ಅಷ್ಟಮಂಗಗಳ ಕೊಸ್ನೆˌ ಪಾನ್ ಬೀಡಾ ಪ್ರಶ್ನೆ ಮುಂತಾದ ಮುಂಡಾಮೋಚುವ ಯಾವೊಂದು ಶಾಸ್ತ್ರಾಧಾರಗಳಿಲ್ಲದ ಕೇವಲ ಊಹಾತ್ಮಕವಾದ ಕೌನ್ ಬನೇಗ ಕರೋಡ್ಪತಿ ಶೈಲಿಯ ಕವಡೆ ಶಾಸ್ತ್ರ ಹೇಳಿ ಈ ಮಂಗಗಳು ಕರೆದು ತರುವ ಕೇರಳದ ನಂಬೂದರಿ ನಾಯರಿ ಪಣಿಕ್ಕರ ನಾಯನಾರ ನಾಮಾಂಕಿತ ಸೋಗಿನ ಪೊದುವಾಳರು ಬಂದು ಬಾಯ್ತುಂಬಾ ಬಂಡಲ್ ಬಿಟ್ಟು ನೋಟಿನ ಬಂಡಲ್ ಬಂಡಲ್ಗಳನ್ನೆ ಎಣಿಸಿಕೊಂಡು ತುಳುವರಲ್ಲಿ ಅರಳಿದ ಮೌಢ್ಯದ ಆಸರೆಯಲ್ಲಿ ತಾವು ಬಿಟ್ಟಿ ಬೊಜ್ಜು ಬೆಳೆಸಿಕೊಳ್ಳುತ್ತಾ ಕರೋಡಪತಿಗಳಾಗುತ್ತಿದ್ದಾರೆ ಅನ್ನೋದೆ ಪ್ರತಿಯೊಬ್ಬ ತಥಾಕಥಿತ ಬುದ್ಧಿವಂತರ ಜಿಲ್ಲೆಯ ಬುದ್ಧಿಗೇಡಿ ತುಳುವನೂ ಅವಮಾನದಿಂದ ತಲೆತಗ್ಗಿಸಬೇಕಾದ ವಿಚಾರ.

ಹಾಗಂತˌ ಕೇರಳಕ್ಕೆ ಸ್ವಂತಿಕೆ ಚೂರೂ ಇಲ್ಲ ಅಂತೇನಿಲ್ಲ. ಅಳತೆ ಮೀರಿದ ಜಾತಿಪದ್ಧತಿಯ ಕಟ್ಟಳೆಗಳುˌ ಅನಿರೀಕ್ಷಿತವಾದ ಒತ್ತಾಯದ ಸಾಮೂಹಿಕ ಮತಾಂತರಗಳು ರಾತ್ರೋರಾತ್ರಿ ಸ್ಥಳಿಯ ಧಾರ್ಮಿಕ ಜನಸಂಖ್ಯೆಯ ಅನುಪಾತದಲ್ಲಿ ತಂದಿರುವ ಮಾರ್ಪಾಡು ಒಂಥರಾ ಅಲ್ಲಿನ ಸಮಾಜಕ್ಕೆ ಸಾಮಾಜಿಕ ಶಾಪವಾಗಿ ಪರಿಣಮಿಸಿದ ಕಾರಣ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಕೇರಳ ದಿಕ್ಕುದೆಸೆ ಕಳೆದುಕೊಂಡು ಅನಾಥವಾಯಿತು ಅನ್ನೋದನ್ನ ಬಿಟ್ಟರೆ ಅದೊಂತರಾ ವಿಶಿಷ್ಟವಾದ ಪ್ರಪಂಚ. ಲಿಂಗಾತೀತವಾಗಿ ಮಲಯಾಳಿಗಳು ಧರಿಸುವ ಧಿರಿಸು ಮುಂಡು. ಸ್ತ್ರೀಯರು ಒಂದು ಮುಂಡನ್ನ ಮೊದಲು  ಗಂಡಸರು ಪಂಚೆ ಸುತ್ತಿಕೊಂಡಂತೆ ಕೇವಲ ಸೊಂಟದ ಸುತ್ತ ಸುತ್ತಿಕೊಳ್ಳುತ್ತಿದ್ದವರು ಈಗ ಮತ್ತೊಂದು ಮುಂಡನ್ನ ಸೆರಗಿನಂತೆ ಹೊದ್ದುಕೊಳ್ಳುತ್ತಾರೆ ಅನ್ನೋದಷ್ಟೆ ಇತ್ತೀಚಿನ ದಿನಮಾನಗಳಲ್ಲಾಗಿರುವ ಸಣ್ಣಪುಟ್ಟ ಬದಲಾವಣೆ. ಕುಬುಸ ತೊಡುವ ಪದ್ಧತಿ ಮೊದಲಿರಲಿಲ್ಲˌ ಆದರೆ ಈಗಿದೆ. 


ಮೊದಲೆಲ್ಲಾ ಉದ್ದ ಕೂದಲು ಬೆಳೆಸಿಕೊಳ್ಳುತ್ತಿದ್ದ ಮಲಯಾಳಿಗಳು ವಿಶಿಷ್ಠವಾಗಿ ತಮ್ಮ ತಲೆಯ ಬಲಭಾಗಕ್ಕೆ ಅದನ್ನ ಮುಡಿ ಕಟ್ಟಿಕೊಳ್ಳುತ್ತಿದ್ದ ಶೈಲಿ ಕೇರಳಕ್ಕೆ ವಿಶಿಷ್ಟವಾದುದು. ಇತ್ತೀಚೆಗೆ ಕ್ರಾಪು ಮಾಡಿಸಿಕೊಳ್ಳುವ ಗಂಡಸರು ಹಾಗೂ ಕೂದಲನ್ನ ಕಟ್ಟದೆ ಬೆನ್ನಹಿಂದೆ ಬಿಡಿಸಿ ಹರಡಿಕೊಳ್ಳುವ ಹೆಂಗಸರು ಆ ವಿಭಿನ್ನ ಬಗೆಯಲ್ಲಿ ಮುಡಿ ಕಟ್ಟಿಕೊಳ್ಳುವ ಸಂಸ್ಕೃತಿ ಮರೆಯತ್ತಿದ್ದಾರೆ ಅಷ್ಟೆ. ಕೊಂಚ ಭರತನಾಟ್ಯದ ನಕಲೆನಿಸಿದರೂ ಕೇರಳಿಗರಿಗೆ ಅವರದ್ದೆ ಆದ ಮೋಹಿನಿಯಾಟ್ಟಂ ನೃತ್ಯ ಶೈಲಿಯಿದೆ. ನಮ್ಮ ಸಣ್ಣಾಟದಂತೆ ಏಕವ್ಯಕ್ತಿ ಪ್ರದರ್ಶನದ ಕೂಡಾಟ್ಟಂನ್ನ ಸೀಮಿತ ಪರಿಕರಗಳ ಸಹಿತ ಕನಿಷ್ಠ ಅಲಂಕಾರಗಳನ್ನ ಮಾಡಿಕೊಂಡು ಆಡುವ ಪ್ರವೃತ್ತಿ ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿದೆ. ಹಿಂದೂಗಳ ರಾಮಾಯಣ ಕೃಷ್ಣ ಕಥೆ ಮಹಾಭಾರತಗಳಂತೆ ಜನಮಾನಸದಲ್ಲಿ ಮುಸಲ್ಮಾನರ ಮಾಪಿಳ್ಳೆ ಪಾಟ್ಟು ಸಹ ಅಚ್ಚೊತ್ತಿದೆ.


ಆಹಾರ ಕ್ರಮದಲ್ಲೂ ಅಷ್ಟೆ. ಸಕ್ಕರೆಯ ಬಳಕೆ ಅತಿ ಕಡಿಮೆಯಿರುವ ಮಲಯಾಳಿಗಳು ಬೆಲ್ಲಕ್ಕೆ ಹೆಚ್ಚು ಪ್ರಾಮಖ್ಯತೆ ಕೊಡುತ್ತಾರೆ. ಹಾಗೆ ನೋಡಿದರೆ ಕಳ್ಳು ಇಳಿಸಲು ಹಾಗೂ ಬೆಲ್ಲ ಮಾಡಲು ಆಕರವಾಗಿರುವ ಈಚಲ ಮರ ಅವರ ಪಾಲಿನ ಕಲ್ಪವೃಕ್ಷ. ಇದೆ ಕಳ್ಳು ಬಳಸಿ ಅಪ್ಪಂ ತಯಾರಿಸುತ್ತಾರೆ. ಬಾಳೆಹಣ್ಣೂ ಸಹ ಇಲ್ಲಿ ಬಹುಪಯೋಗಿ. ತರಕಾರಿಯಾಗಿ ಕಾಯಿˌ ಪಣಂಪೂರಿಯಾಗಿ ಹಣ್ಣುˌ ಹಬೆಯಲ್ಲಿ ಬೇಯಿಸಿದ ಅರೆಕಾಯಿˌ ಅದರಿಂದ ಮಾಡಿದ ಶ್ಯಾವಿಗೆ ಇಡಿಯಪ್ಪಂ ಜನರ ಉಪಹಾರ. ಸಿಹಿಭಕ್ಷ್ಯಕ್ಕೆ ಬಾಳೆಎಲೆಯಲ್ಲಿ ಸುತ್ತಿ ಹಬೆಯಲ್ಲಿ ಬೇಯಿಸಿದ ಅಡೈ ಇದೆ. ಬಾಳೆ ದಿಂಡಿನ ಪಲ್ಯˌ ಬಾಳೆ ಹೂವಿನ ಸಾರು ಇಲ್ಲಿ ಜನಪ್ರಿಯ. ಮೀನೊಂಥರಾ ಸಾರ್ವತ್ರಿಕ ಆಹಾರ. 

ಸಾಂಪ್ರದಾಯಿಕವಾಗಿ ಒಂಟಿ ತೂತು ಕೊರೆದ ತೆಂಗಿನ ಗರಟೆಯಲ್ಲಿ ಪದರ ಪದರವಾಗಿ ತುಂಬಿದ ಅಕ್ಕಿ ಹಿಟ್ಟು ಹಾಗೂ ತೆಂಗಿನ ತುರಿಯ ಮಿಶ್ರಣವನ್ನ ಹದವಾಗಿ ಹಬೆಯಲ್ಲಿ ಬೇಯಿಸಿದ ಪುಟ್ಟು ಹಾಗೂ ಕಡಲ ಕರಿ ಅಥವಾ ಮೀನ್ ಕೊಳಂಬು ಇಲ್ಲಿನವರ ಪಾರಂಪಾರಿಕ ಖಾದ್ಯ. ಕಞಿ ಅಥವಾ ಪಾಲಞಿ ಅನ್ನಲಾಗುವ ಅನ್ನದ ಗಂಜಿ ಹಾಗೂ ತೆಂಗಿನ ಹಾಲು ಬೆರೆಸಿ ಬೇಯಿಸಿದ ಅಕ್ಕಿಯ ಗಂಜಿˌ ಹುದುಗು ಬರಿಸಿದ ಅಕ್ಕಿ ಹಿಟ್ಟಿನ ಓಡಪ್ಪಂ ಇಲ್ಲಿ ಜನಪ್ರಿಯ. ಪಾಲ್ ಪಾಯಸಂˌ ದೇವಸ್ಥಾನಗಳಲ್ಲಿ ನೈವೇದ್ಯಕ್ಕಿಡುವ ಕೇವಲ ಅಕ್ಕಿ ಹಾಲು ಬೆಲ್ಲ ಹಾಗೂ ತುಪ್ಪ ಬೆರೆಸಿ ಬೇಯಿಸಿದ ಅರವಣ ಪಾಯಸಂ ಮಲಯಾಳಿಗಳ ಮೆಚ್ಚಿನ ಸಿಹಿ ಖಾದ್ಯಗಳು. 

ಬಹುತೇಕ ಮಾಂಸಾಹಾರಿಗಳಿರುವ ಇವರಲ್ಲಿ ದನದ ಮಾಂಸ ವರ್ಜ್ಯವಲ್ಲ. ಕೊಚ್ಚಿ ವಲಯದಲ್ಲಿ ಬಾತುಕೋಳಿ ಹಾಗೂ ಹಂದಿಮಾಂಸಕ್ಕೆ ಹೆಚ್ಚು ಬೇಡಿಕೆಯಿದೆ. ಹಾಗೆ ನೋಡಿದರೆ ಸ್ಥಳಿಯವಲ್ಲದ ಇಡ್ಲಿˌ ದೋಸೆˌ ಚಟ್ನಿˌ ಸಾಂಬಾರು ತುಳುವರು ಹಾಗೂ ತಮಿಳರಿಂದ ಇವರ ಹೊಟ್ಟೆಯ ಮೇಲಾಗಿರುವ ಪರದೇಸಿ ಖಾದ್ಯಗಳ ಹೇರಿಕೆ. ಇಂದಿಗೂ ಕೆಸುವಿನ ಗೆಡ್ಡೆ ಹಾಗೂ ಹಾಲುಗೆಣಸಿನಿಂದ ಮಾಡಲಾಗುವ ಆಹಾರ ವೈವಿಧ್ಯಗಳು ಈ ಮಲಯಾಳಿಗಳ "ಪ್ರಿಯಂಪೆಟ್ಟ" ತಿನಿಸುಗಳು.

ನಿಜ ಹೇಳಬೇಕೆಂದರೆ ಕೇರಳದ ಸಂಸ್ಕೃತಿಗೆ ಅತಿಹೆಚ್ಚು ಕೊಡಮಾಡಿರುವ ತುಳುನಾಡು ಮಲಯಾಳಿಗಳಿಂದ ಸಾಂಸ್ಕೃತಿಕವಾಗಿ ಪಡಕೊಂಡದ್ದು ಮಾತ್ರ ಅತಿ ಕಡಿಮೆ. ಜನಸಂಖ್ಯೆ ಕಿರು ಕರಾವಳಿ ಪ್ರದೇಶದಲ್ಲಿ ಸಾಂದ್ರವಾಗಿರವ ಕಾರಣ ಊರಿನ ಮೇರೆ ಗುರುತಿಸಲು ಕಷ್ಟವಾಗುವಂತೆ ಊರೂರು ಬೆಸೆದುಕೊಂಡು ಇಡಿ ಕೇರಳವೆ ಉಪನಗರಗಳ ಸರಣಿಯ ಜೇಡರಬಲೆಯಂತೆ ಭಾಸವಾಗುತ್ತದೆ. ಊರೂರ ನಡುವಿನ ಹಸಿರು ವಲಯದ ಗಡಿ ಬೆಟ್ಟಗುಡ್ಡಗಳಿರುವ ನಾಲ್ಕೈದು ಮಲೆನಾಡ ಜಿಲ್ಲೆಗಳ ಹೊರತು ಬಹುತೇಕ ಇಲ್ಲಿ ನಾಪತ್ತೆ. ಇದೊಂತರಾ ಇಡಿ ರಾಜ್ಯವೆ ವಿಶಾಲ ನಗರವಾಗಿ ಬದಲಾದಂತಿರುವ ತಮ್ಮದೆ ವೈಶಿಷ್ಟ್ಯಗಳನ್ನ ಇಟ್ಟುಕೊಂಡಿರುವ ಜನರು ನೆಲೆಸಿರುವ ಸಣ್ಣ ರಾಜ್ಯ.

ವರ್ಷದ ಎಲ್ಲಾ ಹಂಗಾಮಿನಲ್ಲೂ ಅನಿರೀಕ್ಷಿತವಾಗಿ ಸುರಿಯವ ಅತಿ ಮಳೆಯ ಕಾರಣ ಅಡ್ಡಮಾಡು ಇಳಿಸಿದ ಕಿರುಗೋಡೆಗಳ ಮನೆಗಳೆ ಸಾಂಪ್ರದಾಯಿಕವಾಗಿ ಕಟ್ಟಲಾಗುತ್ತಿತ್ತು. ಅಡ್ಡಮಾಡುˌ ಮರಗಳ ರೀಪು ಪಕ್ಕಾಸಿಗಳೆ ಮುಖ್ಯವಾಗಿರುವ ಕಮಾನಾಕೃತಿ ಹಾಗೂ ಮಂಗಳೂರ ಹಂಚು ಹೊದೆಸಿದ ಮಣ್ಣಿನ ಗೋಡೆಯ ಮನೆಗಳಷ್ಟೆ ಅಲ್ಲ ಅರಮನೆಗಳನ್ನೂ ಅರಾಮಾಗಿ ಕಾಣಬಹುದಾದ ನಾಡೆ ಈ ಮಲಯಾಳಿಗಳ "ಸ್ವಂತಂ" ಕೇರಳ. 

ಮೂಲತಃ ಮಲಯಾಳಿ ಶ್ರಮಜೀವಿ. ಹುಟ್ಟು ನಾಡು ಕಿರಿದಾಗಿರುವ ಕಾರಣ ವಲಸೆ ಅವನ ಹುಟ್ಟಿಗಂಟಿರುವ ಶಾಪ. ಆನೆಗಳನ್ನ ಪಳಗಿಸಿ ತಂದು ಅದರಿಂದ ಕಡಿದು ಒಟ್ಟಿದ ಮರದ ದಿಮ್ಮಿಗಳನ್ನ ಎಳೆಸುವುದರಲ್ಲಿ ನಿಷ್ಣಾತ. ಮರದ ಮಾರಣಹೋಮ ಮಲಯಾಳಿಗಳ ಮೆಚ್ಚಿನ ಕಸುಬು!

( ಇನ್ನೂ ಇದೆ.)



https://youtu.be/u7ryjJhlb2w

No comments: