07 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೩ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೩ 👊
 

ಕುಗುರುತ್ತಾ ಅರೆನಿದ್ದೆ ಕಣ್ಣಲ್ಲಿ ತನ್ನೊಂದಿಗೆ ತನ್ನನ್ನ ನಂಬಿ ಹೆಜ್ಜೆ ಹಾಕುತ್ತಿದ್ದ ಸುಭಾಶನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಮುನ್ನಡೆಸುತ್ತಿದ್ದ ಅವನ ಮನದಲ್ಲಿ ಮಮತೆ ಉಕ್ಕಿ ಬಂತು. ಮಕ್ಕಳೆಂದರೆ ಅವನಿಗೆ ಮುದ್ದು. ಎಳೆಯರ ಮನ ಗೆಲ್ಲುವ ತಂತ್ರಗಳಲ್ಲಿ ನಿಪುಣನಾಗಿರುವ ಅವನು ಒಬ್ಬ ಒಳ್ಳೆಯ ರಡಿಮೇಡ್ ಫಾದರ್ ಮೆಟೀರಿಯಲ್. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ತಮ್ಮ ಪುಟ್ಟ ಮಕ್ಕಳನ್ನ ನಡೆಸಿಕೊಂಡೋˌ ಇಲ್ಲಾ ಎತ್ತಿಕೊಂಡೋ ಸಾಗುವ ಅವನ ಸಮವಯಸ್ಕ ಅಪ್ಪಂದಿರು ಎದುರಾದಾಗಲೆಲ್ಲಾ ಅವ್ಯಕ್ತವಾದ ಅಸೂಯೆಯೊಂದು ಅವನ ಮನದಲ್ಲಿ ಮೂಡೋದಿದೆ. ತನಗೆ ಆ ಸುಖ ಇನ್ನೂ ಸಿಕ್ಕಿಲ್ಲವಲ್ಲ ಅನ್ನುವ ಕಳವಳ ಹುಟ್ಟಿಸುವ ಆ ಹತಾಶೆ ಜನ್ಯ ಹೊಟ್ಟೆಕಿಚ್ಚು ಕ್ಷಣಭಂಗುರವಷ್ಟೆ. ಈ ಒಂಟಿತನˌ ಒಬ್ಬಂಟಿ ಅವಿವಾಹಿತ ಬಾಳ್ವೆ ತನ್ನದೆ ಆಯ್ಕೆ ಅನ್ನುವ ಅರಿವು ಅವನನ್ನ ವಾಸ್ತವವಾದಿಯಾಗಿಸುತ್ತೆ. 

ಅಷ್ಟಲ್ಲದೆ ಸಾಂಸಾರಿಕ ಬಂಧನದ ಕಟ್ಟುಪಾಡಿಗೆ ಒಳಪಡದೆಯೂ ಒಂದು ಒಳ್ಳೆಯ ಉದ್ದೇಶ ಹೊತ್ತು ಜೈವಿಕವಾಗಿ ತಾನು ಅದಾಗಲೆ "ಅಪ್ಪ" ಆಗಿರುವುದರಿಂದ ಹುಟ್ಟುವ ಹೊಟ್ಟೆಯುರಿಗೆ ಆ ಆತ್ಮಸಂತೃಪ್ತಿ ಕೊಂಚ ತಣ್ಣೀರೆರಚುವುದೂ ಇದೆ. ಅದೊಂದು ಬೇರೆಯೆ ಕಥೆ. ಮುಂದೆಂದಾದರೂ ಅವನೆ ಅದನ್ನ ಬರೆದಾನು.

ಸುಭಾಶ ಇನ್ನೂ ಪುಟ್ಟ ಮಗುವಾಗಿದ್ದರೆ ತೋಳಿನಲ್ಲಿ ಎತ್ತಿಕೊಂಡೆ ಮನೆ ಮುಟ್ಟಿಸುತ್ತಿದ್ದ. ಆದರೆ ಎಳೆ ಹುಡುಗ ಬೆಳೆದು ನಿಂತಿದ್ದಾನೆ. ಎತ್ತಲಾಗದು. ಪಾಪˌ ಅಪ್ಪನಿಲ್ಲದ ಕೂಸು.ಇನ್ನೂ ವಾಸ್ತವ ಪ್ರಪಂಚದ ಕುಟಿಲ ವ್ಯಾವಹಾರಿಕತೆಗೆ ನೇರ ಮುಖಾಮುಖಿ ಆದ ಹಾಗಿಲ್ಲ. ಆದರೆ ಬದುಕಿನ ಅನಿವಾರ್ಯತೆಗಳು ಕುತ್ತಿಗೆ ಹಿಡಿದು ತಳ್ಳಿ ಕುಟಿಲ ಪ್ರಪಂಚದ ನೈಜ ದರ್ಶನ ಮಾಡಿಸುವಾಗ ಅವನ ಮಗು ಮನಸ್ಸು ಅದನ್ನ ಹೇಗೆ ಸ್ವೀಕರಿಸಬಹುದು? ಆಗ ಎದುರಾಗುವ ಕಠಿಣ ವಾಸ್ತವಗಳಿಗೆ ಹೇಗೆ ಪ್ರತಿಸ್ಪಂದಿಸಬಹುದು? ಎಂದು ಆಲೋಚಿಸುತ್ತಲೆ ಹೆಜ್ಜೆ ಮುಂದುವರೆಸಿದ. ಬಯಸಿಯೋ ಬಯಸದೆಯೋ ಅವನದನ್ನ ಎದುರಿಸಿ ಈಜುವುದು ಅನಿವಾರ್ಯ ಕರ್ಮ. ಕಾಲು ಶತಮಾನದ ಹಿಂದೆ ತನ್ನನ್ನೂ ಹೀಗೆ ಸೋರೆ ಬುರುಡೆಯನ್ನೂ ಬೆನ್ನಿಗೆ ಬಿಗಿಯದೆ ಬದುಕಿನ ಉಕ್ಕಿ ಹರಿಯುವ ಹೊಳೆಗೆ ಬಲವಂತವಾಗಿ ದೂಕಿ ಈಜಲು ಒತ್ತಾಯಿಸಲಾಗಿತ್ತು ಅನ್ನುವ ನೆನಪವನಿಗಾಯಿತು. ಇವನಿಗೂ ಎದುರಾಗಬಹುದಾದ ಸಂಭವನೀಯ ಸಂಭವಗಳು ಅವನೂ ಸಹ ಎದುರಿಸಿ ಬೆಳೆದುಬಂದಿದ್ದ.

*****

ಕೇರಳದ ಸಾಮಾಜಿಕ ಬದುಕಿನ ಕೆಲವು ಮನ ಸೆಳೆಯುವ ಅಂಶಗನ್ನ ಆತ ಗಮನಿಸಿ ಬೆರಗಾಗಿದ್ದಾನೆ. ಅಕ್ಷರ ಜ್ಞಾನವನ್ನ ಸಮಾಜದ ವೃದ್ಧಾತಿವೃದ್ಧ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ ಹೆಗ್ಗಳಿಕೆ ಅಲ್ಲಿನ ಆಳುವವರಿಗಿದೆ. ಸರ್ವರಿಗೂ ಆರೋಗ್ಯಭಾಗ್ಯˌ ಗುಣಮಟ್ಟದ ಶಿಕ್ಷಣ ಹಾಗೂ ನೆಮ್ಮದಿಯ ಸೂರು ಇವು ಮೂರನ್ನ ಒದಗಿಸೋದು ಸರಕಾರ ತೋರುವ ಔದಾರ್ಯವೇನಲ್ಲ. ಅದು ಪ್ರಜೆಗಳ ಜನ್ಮಜಾತ ಹಕ್ಕು ಅನ್ನುವ ನಂಬಿಕೆಯಿರುವ ಅನ್ನ ತಿನ್ನುವ ರಾಜಕಾರಣಿಗಳ ರಾಜ್ಯ ಅದು. ಹೀಗಾಗಿ ನಾನು ಪುಗಸಟ್ಟೆ ಪಡಿತರ ಕೊಟ್ಟೆ ಅಂತ ಪಡಿತರ ಸಾಮಗ್ರಿ ಸಂಗ್ರಹ ಮತ್ತು ವಿತರಣೆಯ ಒಟ್ಟು ಖರ್ಚಿನ ಬಾಬ್ತಿನಲ್ಲಿ ದುಪ್ಪಟ್ಟು ಸರಕಾರಿ ಖಜಾನೆಯಿಂದ ವ್ಯಯಿಸಿ ಪ್ರಚಾರ ಸಾಮಗ್ರಿಗಳ ಮೇಲೆ ಖರ್ಚು ಮಾಡುವ ಚಿಲ್ಲರೆ ಶೋಕಿ ಇಲ್ಲಿನ ಆಳುವ ವರ್ಗಕ್ಕಿಲ್ಲ.

ರಾಜಕೀಯವಾಗಿ ಈ ಮಲಯಾಳಿಗಳು ಅದೆಷ್ಟು ಪ್ರಜ್ಞಾವಂತರೋ ಅಷ್ಟೆ ತಿಕ್ಕಲು ಎಡವಟ್ಟರೂ ಸಹ. ಏಕಪಕ್ಷದ ಆಡಳಿತ ಅದೆಂದೋ ಕೊನೆಯಾಗಿರುವ ಈ ಕೇರಳದಲ್ಲೆ ಈ ದೇಶದಲ್ಲೆ ಮೊತ್ತಮೊದಲ ಸಲ ಸಮ್ಮಿಶ್ರ ಸರಕಾರದ ಪ್ರಯೋಗವಾಗಿದ್ದು ಹಾಗೂ ಯಾವುದೆ ಸಮಸ್ಯೆಯಿಲ್ಲದೆ ಈತನಕವೂ ಸರದಿ ಪ್ರಕಾರ ಕಾಂಗ್ರೆಸ್ ಪಕ್ಷದ ನೇತೃತ್ವವಿರೋ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಹಾಗೂ ವಾಮಪಕ್ಷಗಳ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಅಧಿಕಾರ ಹಿಡಿಯುವ ಅದಲು ಬದಲಿನ ಸಂಪ್ರದಾಯವಿದ್ದರೂ ಅಪರೂಪಕ್ಕೆ ಕಳೆದ ಎರಡು ಅವಧಿಯಿಂದ ಎಡಪಕ್ಷಗಳ ಒಕ್ಕೂಟವೆ ಅಧಿಕಾರದಲ್ಲಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಮೊತ್ತಮೊದಲ ಅಧಿಕಾರಕ್ಕೇರಿದ್ದ ಸರಕಾರ ಅನ್ನುವ ಕೊಂಬೂ ಸಹ ಇಲ್ಲಿನ ಎಡಪಕ್ಷಗಳ ಒಕ್ಕೂಟಕ್ಕೆ ಇದೆ.

ಆದರೆ ಅತಿಯಾದರೆ ಅಮೃತವೂ ವಿಷ ಅನ್ನುವಂತೆ ಇಲ್ಲಿನ ಜಮಿನ್ದಾರಿ ಹಾಗೂ ಪಾಳೆಗಾರಿಕೆ ವ್ಯವಸ್ಥೆಯ ವಿರುದ್ಧ ದುಡಿಯುವ ವರ್ಗದ ಹಿತ ಕಾಯಲು ಅಸ್ತಿತ್ವಕ್ಕೆ ಬಂದ ಎಡಪಂಥೀಯ ಹೋರಾಟ ತನ್ನ ವಿಚಾರಧಾರೆಯನ್ನ ಕಂಡ ಕಂಡಲ್ಲೆಲ್ಲಾ ತುಂಬಲು ಹೋಗಿ ಜನಸಾಮಾನ್ಯರ ಮಧ್ಯೆ ಹಾಸ್ಯಾಸ್ಪದವಾಗಿ ಹೋಗಿದೆ. ಉಭಯ ರಂಗಗಳ ಪರಸ್ಪರ ರಾಜಕೀಯ ವೈರತ್ವ ಮಾತು ಮಾತಿನಿಂದ ಆರಂಭವಾಗಿ ದೊಂಬಿ ಗಲಭೆ ಕೊಲೆಯಲ್ಲಿ ಕೊನೆಯಾದದ್ದೂ ಇದೆ. ಕೇವಲ ಕಟ್ಟಂಚಾಯ ಕುಡಿಯಲು ಬರುವ ಗಿರಾಕಿಗಳ ಮಧ್ಯೆ ಪರಸ್ಪರ ಚಿಕ್ಕಪುಟ್ಟ ಮಾತುಗಳ ತಿಕ್ಕಾಟದಿಂದ ಆರಂಭವಾಗಬಹುದಾದ ಸಂಭವನೀಯ ರಾಜಕೀಯ ಚರ್ಚೆಗಳು ವಿಕೋಪಕ್ಕೆ ತಿರುಗಿ ಭೀಕರ ಗಲಭೆ ಹೊಡೆದಾಟ ಕೊಲೆಯಲ್ಲಿ ಕೊನೆಯಾಗುವ ಅಪಾಯದ ಅರಿವಿರುವ ಅತಿ ಸಣ್ಣ ಊರಿನ ತಟ್ಟಿ ಹೊಟೆಲಿನವರೂ ಮುಂಜಾಗ್ರತಾ ಕ್ರಮವಾಗಿ "ರಾಷ್ಟ್ರೀಯಂ ಪಾಡಿಲ್ಲ" ಅಂದರೆ രാഷ്ട്രീയം പാടില്ല = ರಾಜಕೀಯ ಮಾತನಾಡಬಾರದು ಅಂತ ತಮ್ಮ ಗಿರಾಕಿಗಳಿಗೆ ತಾಕೀತು ಮಾಡಿರುವ ಸ್ಲೇಟಿನಲ್ಲಿ ಸೀಮೆಸುಣ್ಣದಿಂದ ಕೈ ಬರಹದಲ್ಲಿ ಬರೆದು ನೇತು ಹಾಕಿರುವುದರಿಂದ ಹಿಡಿದು ಡಿಜಿಟಲ್ ಪ್ರಿಂಟು ತೆಗೆದಂಟಿಸಿರುವ ಥೆರಾವರಿ ಬೋರ್ಡುಗಳನ್ನ ಅವನು ಕಂಡು ಬೆರಗಾಗಿದ್ದಾನೆ. ಈ ಮಟ್ಟಿಗಿನ ರಾಜಕೀಯ ಹುಚ್ಚಾಟಗಳು ಕೇರಳದಲ್ಲಿ ಮಾತ್ರ ನಡೆಯುತಹದ್ದು ಬಹುಶಃ.


*****

ರಸ್ತೆ ಗುಡಿಸುವ ಪೌರ ಕಾರ್ಮಿಕರುˌ ಹೊಟೆಲ್ ಕ್ಲೀನರುಗಳಿಂದ ಹಿಡಿದು ಅಧಿಕಾರಿ ವರ್ಗದವರೆಗೆ ಇಲ್ಲಿನ ಬಹುತೇಕ ಎಲ್ಲಾ ಸರಕಾರಿ ಹಾಗೂ ಖಾಸಗಿ ವಲಯಗಳಲ್ಲೂ "ಟ್ರೇಡ್ ಯೂನಿಯನ್" ಸಂಸ್ಕೃತಿ ನೆಲೆಯಾಗಿದೆ. ತನ್ನ ಪದನಾಮಕ್ಕೆ ತಾನು ದುಡಿಯಬೇಕಿರುವಷ್ಟು ಹೊತ್ತಿನ ನಂತರ ಯಾವ ಮಲಯಾಳಿಯೂ ದುಡಿಯಲಾರ. ಅದು ಎಡಪಕ್ಷಗಳ ಮುಂದಾಳತ್ವದಲ್ಲಿ ಹೋರಾಡಿ ರೂಪಿಸಲಾದ ಕಾರ್ಮಿಕ ಕಾಯ್ದೆಗಳು ಅವನಿಗೆ ಅರಿವು ಮೂಡಿಸಿರುವ ಅವನದೆ ಹಕ್ಕುಗಳ ಪರಿಣಾಮ.

ತನಗೆ ನಿಗದಿ ಪಡಿಸಷ್ಟು ಕೆಲಸದ ಹೊರತು ಮತ್ಯಾವ ಕೆಲಸವನ್ನೂ ಆತ ನಿರ್ವಹಿಸಲಾರ. ಉದಾಹರಣೆಗೆ  ಕಛೇರಿಯೊಂದರಲ್ಲಿ ನೆಲಗುಡಿಸುವ ಮಲಯಾಳಿಯೊಬ್ಬ ನೀವು "ಫ್ಯಾನು ಹಾಕಪ್ಪ" ಅಂದರೆ "ಆಗಲ್ಲ ಅದು ನನ್ನ ಕೆಲಸ ಅಲ್ಲ" ಅಂತೇನಾದರೂ ನಿಮ್ಮ ಮುಖಕ್ಕೆ ಹೊಡೆದಂತೆ ಹೇಳಿದರೆ ಆಶ್ಚರ್ಯವನ್ನೇನೂ ಪಡಬೇಡಿ. ನೀವು ಕೇರಳದಲ್ಲಿದ್ದೀರಿ ಅನ್ನುವುದನ್ನ ಅರಿತುಕೊಂಡು ತೆಪ್ಪಗಿರಿ ಹಾಗೂ ಬೇಕಿದ್ದರೆ ಎದ್ದು ನಾಲ್ಕು ಹೆಜ್ಜೆ ನಡೆದು ಹೋಗಿ ನೀವೆ ಪಂಖದ ಗುಂಡಿ ಅದುಮಿ ಬನ್ನಿ ಅಷ್ಟೆ!

ಇನ್ನು ಅಕ್ಷರ ಕಲಿತ ಮಲಯಾಳಿಗಳ ಓದುವ ಹವ್ಯಾಸ ಸಹ ವರ್ಣಿಸಲಸದಳ. ಸಾಮಾನ್ಯವಾಗಿ ತುಳುನಾಡಿನಲ್ಲಿ ಹಾಗೂ ಕರುನಾಡ ಮಲೆನಾಡಿನಲ್ಲಿ ಹೆಂಗಸರ ಗೃಹಕೃತ್ಯಗಳಲ್ಲೊಂದು ಅಂತನ್ನುವ ಭ್ರಮೆ ಮೂಡಿಸಿರುವ ಬೀಡಿ ಕಟ್ಟುವ ಕೆಲಸ ಇಲ್ಲಿ ಮುಖ್ಯವಾಗಿ ಪುರುಷರ ಕೆಲಸ. ಕರ್ನಾಟಕದಂತೆ ಮನೆಗೆ ತಂದು ಕಟ್ಟಿಕೊಡುವವರಿಗಿಂತ ಕಾರ್ಖಾನೆಗಳಿಗೆ ತೆರಳಿ ಅಲ್ಲೆ ಕಟ್ಟಿಕೊಟ್ಟು ಮನೆಗೆ ಬರುವ ಉದ್ಯೋಗಗಳ ಸಾಲಿನಲ್ಲಿ ಅಲ್ಲದಿದೆ. 

ಬೀಡಿ ಕಟ್ಟುವಲ್ಲೆ ಇರಲಿˌ ಗೋಡಂಬಿ ಕಾರ್ಖಾನೆಯಲ್ಲೆ ಇರಲಿˌ ತೆಂಗಿನನಾರು ಹೊಸೆದು ಹಗ್ಗ ಮಾಡುವಲ್ಲೆ ಆಗಿರಲಿ ಒಬ್ಬ ಮಾತ್ರ ಗಟ್ಟಿಧ್ವನಿಯಲ್ಲಿ ಆ ದಿನದ ಪತ್ರಿಕೆಯ ತಾರೀಕಿನಿಂದ ಹಿಡಿದು ಷೇರುಪೇಟೆ ಸಮಾಚಾರದವರೆಗೆ ಒಂದಕ್ಷರವನ್ನೂ ಬಿಡದೆ ಓದುತ್ತಾ ಇರೋದುˌ ತಮ್ಮ ತಮ್ಮ ಕೆಲಸದಲ್ಲಿ ಯಾಂತ್ರಿಕವಾಗಿ ಮಗ್ನರಾಗಿರುವ ಇತರರು ಮೌನವಾಗಿ ಇದನ್ನ ಆಕಾಶವಾಣಿ ಸಮಾಚಾರದಂತೆ ಕೇಳಿಸಿಕೊಳ್ಳುತ್ತಿರೋದು ಸಾಮಾನ್ಯವಾಗಿ ಕಾಣಬರುವ ದೃಶ್ಯ. ಹಾಗೆ ಪತ್ರಿಕೆ ಓದುವ ಸರದಿ ದಿನಕ್ಕೊಬ್ಬರದು ಹಾಗೂ ಅಂದವರಿಗೆ ಕೆಲಸದಿಂದ ರಜೆ. 

(ಇನ್ನೂ ಇದೆ.)



https://youtu.be/RUvEaWCnwsU

No comments: