11 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೭.👊


ಅತ್ತ ಮಲಯಾಳಂ ವಾಸ್ತವವಾಗಿ ತುಳುವಿಗೆ ಸಲ್ಲಬೇಕಿರುವ ಸರಕಾರಿ ಕೃಪಾಪೋಷಿತ ಪಟ್ಟ ಪದವಿಗಳನ್ನ ಹಿತವಾಗಿ ಕಬಳಿಸಿಕೊಂಡು ಬಲಿಯುತ್ತಿದೆ. ಇತ್ತ ಈ ನಡುವೆ ಮಲಯಾಳಂ ಎನ್ನುವ ಪರಪುಟ್ಟನಿಗೆ ಕಾವು ನೀಡಿದ ಕಾಗೆಯಂತಾಗಿ ಕಂಗಾಲಾಗಿರುವ ತುಳು ಶಾಸ್ತ್ರೀಯ ಭಾಷಾ ಸ್ಥಾನಮಾನ ಅತ್ಲಾಗಿರಲಿˌ ಕನಿಷ್ಠ ತನ್ನ ಅಸ್ತಿತ್ವಕ್ಕೆ ಮನ್ನಣೆ ಕೊಟ್ಟುಕೊಂಡು ಜೀವಂತಿಕೆ ಸಾರುವ ಸಾಂವಿಧಾನಿಕ ಮಾನ್ಯತೆ ಪಡೆಯಲೆ ಇನ್ನೂ ಪರದಾಡುತ್ತಲಿದೆ! 


ಈ ನಡುವೆ ನಮ್ಮ ತುಳುನಾಡಿನ ಬಿಲಾಸು ಬಿಟ್ಟ ಆಳಲು ಕೊಬ್ಬಿಸಿ ಬಿಡಲಾಗಿರುವ ನಾಲಾಯಕರು ಮಾತ್ರ ಹೆದ್ದಾರಿ ದರೋಡೆಕೋರರಂತೆ ಕಳ್ಳ ಟೋಲುಗೇಟಿಟ್ಟು ಸುಲಿದು ದೋಚಿದ ಮಳ್ಳ ಕಾಂಚಣವನ್ನ ಸುಖವಾಗಿ ಎಣಿಸಿಕೊಂಡುˌ ಜೊತೆಜೊತೆಗೆ ಇದ್ದ - ಬದ್ದ ಯೋಜನೆಗಳಲ್ಲೆಲ್ಲಾ ೪೦% ಕಮೀಷನ್ ಹೊಡೆದುಕೊಂಡು ಹುಟ್ಟು ಕಿರಿದಂತಿರುವ ತಮ್ಮ ಉಬ್ಬುಹಲ್ಲು ಬಿಟ್ಟುಕೊಂಡು ಆರಾಮವಾಗಿದ್ದಾರೆ. ಅವರನ್ನ ಆರಿಸಿ ಕಳಿಸಿದ ಅತಿಬುದ್ಧಿವಂತ ಬ್ರಾಂಡಿನ ಕತ್ತೆ ಭಡವರು ಜಾತಿ ಮತ ಹಿಂದೂ ಮುಸ್ಲಿಂ ಅಂತ ಕೆಲಸಕ್ಕೆ ಬಾರದ ವಿಚಾರಗಳನ್ನ ಅನಗತ್ಯವಾಗಿ ಮೈಮೇಲೆ ಎಳೆದುಕೊಂಡುˌ ಪರಸ್ಪರ ರಕ್ತದಾಹದಿಂದ ಹೊಡೆದಾಡಿಕೊಂಡು ಮಾನಗೆಟ್ಟು ತುಳುನಾಡಿನ ರಕ್ತಕಣ್ಣೀರು ಇಳಿಸುತ್ತಿದ್ದಾರೆ. 


ಹಿಂದೆಂದೋ ಎಲ್ಲಾ ಬಗೆಯಲ್ಲೂ ಕೇರಳಕ್ಕೆ ಮಾದರಿಯಾಗಿದ್ದ ತುಳುನಾಡಿನ ಇಂದಿನ ದುಸ್ಥಿತಿ ಇದು. ಇದಕ್ಕೆ ಇಲ್ಲಿನ ಆಳುವ ಜನಪ್ರತಿನಿಧಿಗಳಷ್ಟೆ ಆ ಬಸ್ಟ್ಯಾಂಡಿನಲ್ಲಿ ಕಸ್ತೂರಿ ಮಾತ್ರೆ ನೀಲಗಿರಿ ಎಣ್ಣೆಯ ಕುಪ್ಪಿ ಮಾರಲೂ ನಾಲಾಯಕರಾಗಿರೋ ಅಡ್ಡಕಸುಬಿಗಳನ್ನ ನಾಯಕರನ್ನಾಗಿಸಿ ಆರಿಸಿ ಕಳಿಸಿರುವ ಜನರೂ ಸಹ ಸಮಾನ ಹೊಣೆ. ಕಳ್ಳ ಭಡವರು ಆಳುವ ಅಟ್ಟಣಿಗೆಯನ್ನೇರಿದರೆ ಏನಾಗಬೇಕಿತ್ತೋ ಅದೆ ಇಂದು ತುಳುನಾಡಿಗೂ ಆಗುತ್ತಿದೆ ಅಷ್ಟೆ.

ರಾಜಕೀಯವಾಗಿ ಜಾಗೃತವಾಗಿರುವ ಮಲಯಾಳಿಗಳು ಕೇಂದ್ರದಲ್ಲಿ ಆಳುವ ಅಧಿಕಾರದಲ್ಲಿರುವ ಸರಕಾರದಲ್ಲಿ ತಮ್ಮ ನಾಡಿನಿಂದ ಒಬ್ಬೆ ಒಬ್ಬ ಪ್ರತಿನಿಧಿಯನ್ನ ಗೆಲ್ಲಿಸಿ ಕಳಿಸದೆಯೂ ಸಹ ಒತ್ತಡ ಹಾಕಿ ತಮ್ಮ ನಾಡಿಗೆ ಆಗಲೆ ಬೇಕಾದ ಅಭಿವೃದ್ಧಿಯ ಕೆಲಸ ಮಾಡಿಸಿಕೊಳ್ಳುವಲ್ಲಿ ನಿಸ್ಸೀಮರು. ಹೀಗಿದ್ದರೂ ಅವರು ತೃಣಮಾತ್ರಕ್ಕೂ ಕೇಂದ್ರದಲ್ಲಿ ಆಳುವ ಉತ್ತರ ಭಾರತೀಯರ ಒಣ ಠೇಂಕಾರಕ್ಕೂ ಸೊಪ್ಪು ಹಾಕರು. ತಮ್ಮ ಬಗ್ಗೆ ವಿಶೇಷ ಕಾಳಜಿ ತೋರಿಸಿ ಸಹಕರಿಸಿದರೂ ಸಹ ಅವರ ಯಾವೊಂದು ಪೊಳ್ಳು ಬೆದರಿಕೆಗೂ ಇನಿತೂ ಬಗ್ಗರು.

ಇದರ ಹೋಲಿಕೆಯಲ್ಲಿ ಅದೆ ಆಳುವ ಸರಕಾರಕ್ಕೆ ನಮ್ಮ ನಾಡಿನಲ್ಲಿ ಇರೋ ಬರೋ ಸ್ಥಾನಗಳನ್ನೆಲ್ಲಾ ಗೆದ್ದು ಕೊಟ್ಟು ಸಂಪೂರ್ಣ ಶರಣಾಗತಿಯನ್ನ ಪ್ರದರ್ಶಿಸಿ ಹುಟ್ಟಾ ಬೆನ್ನುಮೂಳೆ ಇಲ್ಲದವರಂತೆ ವರ್ತಿಸುವ ನಮ್ಮ ಜನಪ್ರತಿನಿಧಿಗಳು ಮಾತ್ರ "ಜಿಯಾ ನಿಮ್ಮ ಹಸಾದ" ಅನ್ನುವಂತೆ ಅವರ ಉತ್ತರ ಭಾರತೀಯ ಮಹಾಪ್ರಭುಗಳ ಮುಂದೆ ಮುಜುರೆ ಮಾಡಿ ಕಪ್ಪ ಕಾಣಿಕೆ ಒಪ್ಪಿಸಿ ಅದೆ ಅರನಿಮೀಲಿತ ಕಣ್ಣುಗಳಿಂದ ಅವರ ಪಾದಗಳನ್ನೆ ದಿಟ್ಟಿಸುತ್ತಾ ಹಿಂದೆ ಹಿಂದೆ ಹಜ್ಜೆಯಿಡುತ್ತಾ ಮರಳಿ ಬಂದುˌ ಯಾವ ಮೂರುಕಾಸಿನ ಸಹಾಯ ಅವರಿಂದ ಆಗಿರದಿದ್ದರೂ "ಆ ಜೀಗೆ ಜೈ" "ಈ ಜೀಗೆ ಜೈ ಜೈ" ಅಂತ ತಾವೂ ಭೋಪರಾಕು ಹಾಕುವುದಲ್ಲದೆˌ ತಮ್ಮ ಹಿಂಬಾಲಕ ಅನುನಾಯಿಗಳಿಗೂ ಆ ಮಹಾ ನಾಲಾಯಕನ ಬಗ್ಗೆ ಇಲ್ಲಸಲ್ಲದ ಕಪೋಲಕಲ್ಪಿತ ಕಾಗಕ್ಕ ಗೂಬಕ್ಕನ ಕಥೆಗಳನ್ನ ವಾಟ್ಸಪ್ಪಿನಲ್ಲೆಲ್ಲಾ ರೋಗಾಣುವಿನಂತೆ ಹರಡಿ ಭಕ್ತರ ತಲೆ ತಿಕ್ಕಿ ತಿಕ್ಕಿ ತೊಳೆದು ಅವರೂ ಕಣ್ಮುಚ್ಚಿ ಆ ಆಶಾಢಭೂತಿಗೆ ಜಯಕಾರ ಹಾಕುವಂತೆ ಕುಮ್ಮಕ್ಕು ಕೊಡುತ್ತಿರುತ್ತಾರೆ.


ಉದಾಹರಣೆ ಸಹಿತ ಹೇಳುವುದಾದರೆˌ ಕೇರಳದಲ್ಲಿ ಮೇಘಸ್ಪೋಟವಾಗಿ ಭಾರಿ ಅನಾಹುತವಾಗಿತ್ತಲ್ಲ ಆ ಆಪತ್ತಿನ ದಿನಗಳನ್ನೆ ಕೊಂಚ ಮೆಲುಕು ಹಾಕಬಹುದು. ಸತತ ಎರಡು ವರ್ಷಗಳ ಕಾಲ ಮೇಲಿಂದ ಮೇಲೆ ಎರಗಿ ಬಂದ ಮಹಾಮಳೆ ಹಾಗೂ ಅದು ತಂದಿದ್ದ ಸರಣಿ ಭೂಕುಸಿತದಿಂದ ಕೇವಲ ಕೇರಳದ ಮಲಯಾಳಿಗಳಷ್ಟೇ ಅಲ್ಲˌ ಮಲಬಾರಿನ ಗಡಿಯೀಚೆಗಿರುವ ಕರುನಾಡ ಕೊಡಗಿನಿಂದ ಹಿಡಿದು ಶಿವಮೊಗ್ಗದ ತೀರ್ಥಹಳ್ಳಿಯವರೆಗೂ ಭೂಕುಸಿತದ ಸರಪಳಿ ಕಾಡಿತ್ತು. ಇಲ್ಲಿಯೂ ಜನ ನೊಂದು ಬೆಂದಿದ್ದರು. ವಾಸ್ತವದಲ್ಲಿ ಅಲ್ಲಿಗಿಂತ ಹೆಚ್ಚು ಜನ ಜಾನುವಾರು ಹಾಗೂ ಆಸ್ತಿಪಾಸ್ತಿಯ ನಷ್ಟ ಇಲ್ಲಾಗಿತ್ತು. ಭಾಗಮಂಡಲˌ ಸಕಲೇಶಪುರˌ ಮುಡಿಗೆರೆ ಹಾಗೂ ತೀರ್ಥಹಳ್ಳಿಗಳಂತಹ ಸ್ಥಳಗಳಲ್ಲಂತೂ ಹಳ್ಳಿಯ ಅನೇಕ ಒಂಟಿಮನೆಗಳು ತಮ್ಮ ತೋಟ ಗದ್ದೆಯ ಸಹಿತ ಹಿಮನದಿಯಂತೆ ಕುಸಿದು ಹರಿದು ಬಂದ ಪಶ್ಚಿಮಘಟ್ಟದ ಬೆಟ್ಟಗಳಡಿ ಸಮಾಧಿಯಾಗಿದ್ದವು. ಜರಿದು ಬಂದ ಗುಡ್ಡಗಳು ಕ್ಷಣಾರ್ಧದಲ್ಲಿ ಇಲ್ಲಿಯೂ ಸಹ ಜಾತಿ ಮತ ಅಂತಸ್ತುಗಳನ್ನ ಪರಿಗಣಿಸದೆ ಬಡವ ಬಲ್ಲಿದ ಇಬ್ಬರನ್ನೂ ಉಟ್ಟ ಬಟ್ಟೆಯಲ್ಲೆ ಬೀದಿಗೆ ತಂದು ಭಿಕಾರಿಯನ್ನಾಗಿಸಿ ನಿಲ್ಲಿಸಿದ್ದವು. 


ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕೇಂದ್ರದ ರಕ್ಷಣಾ ತಂಡ ಮೊದಲು ಕೇರಳಕ್ಕೆ ಧಾವಿಸಿ ಬಂದಿತೆ ವಿನಃ ಕರುನಾಡಿಗಲ್ಲ. ಕೂಡಲೆ ಅಲ್ಲಿಗೆ ಮೂರು ಸಾವಿರ ಕೋಟಿ ರೂಪಾಯಿಗಳ ಪರಿಹಾರ ಘೋಷಣೆಯೂ ಆಯಿತು. ಸಾಲದ್ದಕ್ಕೆ ಬಾಯಿ ಬಿಟ್ಟುಕೊಂಡು ತಮ್ಮ ಕಡೆಗೂ ಸರಕಾರದ ಪ್ರಭುಗಳು ತಿರುಗಿ ಕಿರುಗಣ್ಣಲ್ಲಾದರೂ ನೋಡಿಯಾರು ಎಂದು ಕಾಯ್ದುಕೊಂಡಿದ್ದ ಕರ್ನಾಟಕದ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆಯುವಂತೆ ಅದರ ಬೆನ್ನಿಗೆ ಕೇರಳದ ಖಾತೆಗೆ ಹೆಚ್ಚುವರಿ ನೂರು ಕೋಟಿ ರೂಪಾಯಿಗಳನ್ನ ಧಾರೆ ಎರೆಯಲಾಯಿತು. 


ಇಷ್ಟೆ ಅವಮಾನ ಮಾಡಿದ್ದು ಸಾಲದು ಅಂತ ಅದನ್ನೆಲ್ಲಾ ಮುಗಿಸಿಯಾದ ಮೇಲೆ ಕರುನಾಡಿನತ್ತ ಕೃಪಾದೃಷ್ಟಿ ಹರಿಸಿದ ಕೇಂದ್ರ ಸರಕಾರ ಇಲ್ಲಿಯೂ ಪರಿಶೀಲನೆಯ ನಾಟಕ ಮಾಡಿ ಕೇವಲ ಇನ್ನೂರು ಕೋಟಿ ಪರಿಹಾರ ಕೊಟ್ಟು ಕೈ ತೊಳಕೊಂಡಿತು. ರಾಜ್ಯ ಸರಕಾರವೆ ಅನಿವಾರ್ಯವಾಗಿ ಅದಕ್ಕೆ ಸಾಲ ಎತ್ತಿ ತಂದ ಮುನ್ನೂರೈವತ್ತು ಕೋಟಿ ಸೇರಿಸಿ "ನೋಡಿ ಐನೂರೈವತ್ತು ಕೋಟಿ ಪರಿಹಾರ ಮತ್ತೆ! ಇನ್ನೂರಲ್ಲ!! ಜೈ ಜೈ ಮುದಿ ಛೀ" ಅಂತ ತನ್ನ ಅಂಡನ್ನ ತಾನೆ ಬಡಿದುಕೊಂಡು ತನಗೆ ತಾನೆ ಶಹಭಾಸ್ಗಿರಿ ಕೊಟ್ಟುಕೊಂಡಿತು! ಇದು ಇಚ್ಛಾಶಕ್ತಿಯಿರುವ ಕೇರಳದ ರಾಜಕಾರಣಿಗಳಿಗೂ ನರಸತ್ತ ಕರ್ನಾಟಕದ ನಾಯಕಮಣಿಗಳಿಗೂ ಇರುವ ಮೂಲಭೂತ ವ್ಯತ್ಯಾಸ.


********


ಕೇರಳದ ನಾಯಕರ ಆಕ್ರಮಣಕಾರಿ ರಾಜಕೀಯ ನಿಲುವುಗಳಿಗೆ ಮತ್ತೊಂದು ಉದಾಹರಣೆ ಕೊಡಬಹುದಂತಾದರೆˌ ಅದು ಅಲ್ಲಿನ ರೈಲ್ವೆ ಸಂಪರ್ಕ ಜಾಲದ ಬಗ್ಗೆ. ಮಂಗಳೂರಿನವರೆಗೆ ಬೆಂಗಳೂರಿನ ದಿಕ್ಕಿನಿಂದಲೋ - ಇಲ್ಲಾ ಬೊಂಬಾಯಿಯ ದೆಸೆಯಿಂದಲೋ ಮಂಜೂರಾಗುವ ಯಾವುದೆ ರೈಲನ್ನ ಅದೇನಾದರೂ ತಾರಾತಿಗಡಿ ಮಾಡಿಯಾದರೂ ಸರಿ ಮೊದಲಿಗೆ ಮೆಲ್ಲಗೆ ಕಣ್ಣೂರಿಗೆ ವಿಸ್ತರಿಸಿˌ ಅಲ್ಲಿಂದ ಹೊಸತೊಂದು ನೆಪ ಒಡ್ಡಿ ಶೊರನೂರಿಗೂˌ ಮತ್ತೊಂದು ಕಾರಣ ನೀಡಿ ಎರಣಾಕುಳಂಗೂˌ ಮತ್ಯಾವುದಾದರೂ ಸಾಬೂಬು ಹೇಳಿ ಕೊಟ್ಟಾಯಂಗೂˌ ಕಡೆಗೆ ಮುಂದೆ ಆ ಹೊಸ ರೈಲಿನ ಸಂಪೂರ್ಣ ಸೇವೆಯನ್ನ ತಿರುವನಂತಪುರದವರೆಗೂ ವಿಸ್ತರಿಸಿಕೊಳ್ಳುವತನಕ ನೆಮ್ಮದಿಯಿಂದ ನಿದ್ರಿಸರು! 


ಇಂದು ಕೊಂಕಣ ರೈಲ್ವೆಯ ಹಾದಿಯಲ್ಲಿ ಮಂಗಳೂರಿನವರೆಗೆ ಮಂಜೂರಾದ ರೈಲುಗಳಲ್ಲಿ ಒಂದನ್ನಷ್ಟೆ ಬಿಟ್ಟು ಬಾಕಿ ಎಲ್ಲವನ್ನೂ ಕೇರಳ ಇದೆ ತಂತ್ರ ಹೂಡಿ ಕಬಳಿಸಿ ಕೂತಿದೆ. ಅದೆ ನಮ್ಮ ಕೈಲಾಗದ ನಾಲಾಯಕರು ಮಾತ್ರ ತಿಪ್ಪರಲಾಗ ಹಾಕಿದರೂ ಸಹ ಕನಿಷ್ಠ ಮಂಗಳೂರು ರೈಲ್ವೆ ನಿಲ್ದಾಣವನ್ನ ದಕ್ಷಿಣ ರೈಲ್ವೆ ವಲಯದ ಪಾಲ್ಘಾಟ್ ವಿಭಾಗದಿಂದ ಬಿಡಿಸಿಕೊಂಡು ಬಂದು ಕರುನಾಡಿನ ಇತರ ರೈಲು ನಿಲ್ದಾಣಗಳ ಸೇರಿಸಿ ರಚಿಸಲಾಗಿರುವ ನೈರುತ್ಯ ರೈಲ್ವೆ ವಲಯಕ್ಕೆ ಸೇರಿಸಲಾಗದೆˌ ದಿನಕ್ಕೊಂದು ಕಥೆ ಹೇಳಿಕೊಂಡು ತುಳನಾಡಿಗರನ್ನು ಎಂದಿನಂತೆ ಏಮಾರಿಸುತ್ತಿದ್ದಾರೆ.


ಇನ್ನು ಇಲ್ಲಿನ ಸರಕಾರಗಳು ಅನುಗಾಲದಿಂದ ಮಾಡುತ್ತಿರುವ ಪ್ರಯತ್ನದಿಂದಾಗಿˌ ಇಂದು ಮಂಜೇಶ್ವರˌ ವಲಯಾರ್ˌ ಭಗವತಿಪುರಂ ಹಾಗೂ ಪಾರಶಾಲಾದ ಮೂಲಕ ಹೊರರಾಜ್ಯಗಳಿಗೆ ರೈಲ್ವೆ ಸಂಪರ್ಕವಿದೆ.


( ಇನ್ನೂ ಇದೆ.)


https://youtu.be/YafCr_qPJSs

No comments: