26 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೬.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೬.👊


ಹಾಗಂತ ಹುಟ್ಟುವ ಎಲ್ಲಾ ನಾಯರ್ ಮಕ್ಕಳಿಗೆ ಇದೇನು ಕಡ್ಡಾಯ ಕಟ್ಟಳೆಯೇನಲ್ಲ. ಹಾಗೊಮ್ಮೆ ಸಾಮಾಜಿಕ ಮಾನ್ಯತೆ ದೊರತ ಮೇಲೂ ಸಹ ಸ್ವತಃ ಮಗನಿಗೇನೆ ತನ್ನ ಜೈವಿಕ ತಂದೆಯ ಬಗ್ಗೆ ಗೊಂದಲವಿದ್ದರೆ ಇದ್ಯಾವದನ್ನೂ ಉಪನಾಮವಾಗಿ ಆಯ್ದುಕೊಳ್ಳದೆ ಕೇವಲ ನಾಯರನಾಗೆ ಉಳಿಯುವ ಆಯ್ಕೆಯೂ ಅವನಿಗಿತ್ತು. ಒಂದೊಮ್ಮೆ ವಿಲೋಮ ಸಂಬಂಧದಿಂದ ಹುಟ್ಟಿ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿರುವ ಮಕ್ಕಳಾಗಿದ್ದರೆ ಅವರ ಮೂಲ ತರವಾಡಿನ ಗ್ರಾಮದ ಹೆಸರನ್ನೆ ಉಪನಾಮವಾಗಿ ಇಟ್ಟುಕೊಂಡು ಸಾಮಾಜಿಕ ಗೊಂದಲಗಳಿಗೆ ಇತಿಶ್ರಿ ಹಾಡುತ್ತಾರೆ.


ಕೇರಳದ ಹೊರಗಿನವರಿಗೆ ಈ ಪದ್ಧತಿ ಹಾದರದ ಪರಾಕೇಷ್ಟೆಯಂತೆ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಅಂದಹಾಗೆ ಇತ್ತೀಚಿನ ಬದಲಾವಣೆಯ ಗಾಳಿ ಬೀಸಿರುವ ಸಮಾಜದಲ್ಲಿ ಈ ಹಳೆಯ ಪದ್ಧತಿಯನ್ನ ಬಹುತೇಕ  ಕೈಬಿಡಲಾಗಿದೆಯಾದರೂˌ ಕೇವಲ ಒಂದೆರಡು ತಲೆಮಾರುಗಳ ಹಿಂದೆ ಇದೆ ಸಾರ್ವತ್ರಿಕವಾಗಿತ್ತು ಅನ್ನುವ ಸತ್ಯವನ್ನ ಮರೆಯಲಾಗದು. ಇಂದಿನ ಕೇರಳಕ್ಕೂ ಸಹ ಈ ಬಗ್ಗೆ ಮಡಿವಂತಕೆಯೇನಿಲ್ಲ ಅಂತ ಇಟ್ಕೊಳ್ಳಿ.

*****

ಒಂದೊಮ್ಮೆ ತಕಳಿ ಶಿವಶಂಕರ ಪಿಳ್ಳೆಯವರದ್ದೋˌ ಇಲ್ಲಾ ಎಂ ಟಿ ವಾಸುದೇವನ್ ನಾಯರರದ್ದೋ ಇಲ್ಲವೆ ಮಾಧವಿ ಕುಟ್ಟಿಯದ್ದೋ ಕಾದಂಬರಿಗಳ ವಿವರಣೆಗಳಲ್ಲಿ ಸಹಜವೆಂಬಂತೆ ವರ್ಣಿಸಲಾಗುವ ಈ ವೈವಾಹಿಕ ಸಂಬಂಧಗಳನ್ನ ಓದಿ ಗೊಂದಲಕ್ಕೀಡಾಗುವ ಮಲಯಾಳಿಯೇತರ ಓದುಗರು ಪಾತ್ರಗಳ ನಡುವಿನ ಸಂಬಂಧಗಳ ಗೊಂದಲದಿಂದ ಕಂಗಾಲಾಗುವುದೂ ಇದೆ. ಆದರೆ ಕರ್ನಾಟಕ ಅಥವಾ ತಮಿಳುನಾಡಿನ ಸಾಮಾಜಿಕ ಪದ್ಧತಿಯ ಪರಿಭಾಷೆಯಲ್ಲಿ ಇದನ್ನ ಅಕ್ರಮ ಸಂಬಂಧವೆಂದು ಪರಿಗಣಿಸುವಂತೆಯೆ ಇಲ್ಲ. ಅಲ್ಲಿನವರ ಪಾಲಿಗದು ಪರಂಪರಾಗತ ವ್ಯವಹಾರ. 

ಕರುನಾಡಿಗೆ ಸೀಮಿತಗೊಳಿಸಿ ಹೇಳುವುದಾದರೆ ನಾಯರುಗಳ ಕುಲವನ್ನ ನಮ್ಮ ಒಕ್ಕಲಿಗ ಗೌಡರಿಗೋ ಇಲ್ಲಾ ತುಳುನಾಡಿನ ಒಕ್ಕಲಿಗ ಬಂಟರಿಗೋ ಹೋಲಿಸಬಹುದು ಅಷ್ಟೆ. ಹಾಗೆ ನೋಡಿದರೆˌ ಪಿತೃಮೂಲದ ಪದ್ಧತಿಯ ದಾಸರಾದ ಗೌಡರಿಗಿಂತ ಮಾತೃಮೂಲದ ಕೌಟುಂಬಿಕ ಬಂಟರು ಈ ವಿಷಯದಲ್ಲಿ ನಾಯರರ ಹತ್ತಿರದ ಸಂಬಂಧಿಗಳು. ಆದರೆ ಬಂಟರ ಹಾಗೂ ನಾಯರುಗಳ ವೈವಾಹಿಕ ಪದ್ಧತಿಯಲ್ಲಿ ಮುಖ್ಯ ವ್ಯತ್ಯಾಸಗಳಿವೆ. ಬಂಟರಲ್ಲಿ ಹೆಣ್ಣಿಗೆ ಗಂಡಸಿಗಿಂತ ಹೆಚ್ಚು ಲೈಂಗಿಕ ಸ್ವಾತಂತ್ರ್ಯವಿದ್ದರೂ ಸಹ "ಸಂಬಂಧಂ" ಪದ್ಧತಿ ತುಳನಾಡಿನಲ್ಲೆ ಯಾವತ್ತೂ ಚಾಲ್ತಿಯಲ್ಲಿರಲಿಲ್ಲ. 


ಸಮಾಜದ ಕಟ್ಟಳೆಗಳನ್ನ ಮೀರಿ ಬೆಳೆವ "ಪ್ರೇಮ ವಿವಾಹದ ಸಂಬಂಧ"ದ ಹೊರತು ಯಾವುದೆ ಬಂಟ ಮಹಿಳೆ ಬ್ರಾಹ್ಮಣ ಪತಿಯನ್ನ ಹೊಂದುವುದಿಲ್ಲ. ಒಂದೊಮ್ಮೆ ಮದುವೆಯಾದ ಗಂಡ ಲೈಂಗಿಕ ಅಸಮರ್ಥನಾಗಿದ್ದರೆ - ಅವರಿಗೆ ಬಹುಕಾಲ ಸಂತಾನವಾಗದಿದ್ದರೆ - ಸತ್ತರೆ ಅಥವಾ ಕಾಣೆಯಾದರೆ ಮಾತ್ರ ಆ ಮಹಿಳೆ ಮರು ಕೂಡಿಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ. ಆದರೆ ನಾಯರುಗಳಂತೆ ಒಂದೆ ಸಮಯದಲ್ಲಿ ನಾಲ್ಕಾರು ಗಂಡಂದಿರನ್ನೋ ಅಥವಾ ಹೆಂಡತಿಯರನ್ನೋ ಹೊಂದುವಂತಿಲ್ಲ. ಇರುವವರೆಗೆ ಹೆಣ್ಣಾಗಲಿ ಗಂಡಾಗಲಿ ಏಕವ್ಯಕ್ತಿಯ ಜೊತೆಗಿನ ಲೈಂಗಿಕ ನಿಷ್ಠೆ ತುಳನಾಡಿನ "ಅಳಿಯ ಕಟ್ಟು" ಪದ್ಧತಿಯ ಕಟ್ಟಳೆ. ಇದನ್ನ ಮೀರಿದರೆ ಅದು ಅಕ್ರಮ ಸಂಬಂಧದ ಪರಿಧಿಯಲ್ಲಿ ಬಂದು ಕುಲದಿಂದ ಬಹಿಷ್ಕಾರ ಹಾಕಿಸಿಕೊಳ್ಳುವ ದುರ್ಗತಿ ಎದುರಿಸಲು ಸಿದ್ಧರಾಗಬೇಕು ಅಷ್ಟೆ.

*****

ಬಹುಶಃ ಇದೆಲ್ಲ ಪರಂಪರಾಗತವಾಗಿ ಕೈರಳಿ ಸಮಾಜದಲ್ಲಿ ಅಡಕವಾಗಿದ್ದ ಕಾರಣಕ್ಕೇನೆ ವಯಸ್ಕ ಹಾಗೂ ಲೈಂಗಿಕ ವಿಚಾರಗಳಲ್ಲಿ ಇಲ್ಲಿ ಹೆಚ್ಚಿನ ಮಡಿವಂತಿಕೆ ಇಲ್ಲ. ಲೈಂಗಿಕ ಸಂಬಂಧಿ ವಿಷಯಗಳನ್ನ ಬಾಕಿ ಇನ್ನುಳಿದ ಎಲ್ಲಾ ರಾಜ್ಯಗಳಿಗಿಂತಲೂ ಸುಲಭವಾಗಿ ಮಲಯಾಳಿಗಳು ಮನ್ನಣೆಯಿತ್ತು ಯಾವುದೆ ಮುಜುಗರವಿಲ್ಲದೆ ಮುಖ್ಯಧಾರೆಯಲ್ಲಿ ಒಳಗೊಳ್ಳುವಂತೆ ಮಾಡುತ್ತಾರೆ. ಹೀಗಾಗಿಯೆˌ ಹೆಣ್ಣು ಗಂಡು ಎರಡೂ ಅಲ್ಲದ ಮೂರನೆ ಲಿಂಗದವರನ್ನ ಕೇರಳ ಇನ್ನಿತರ ರಾಜ್ಯಗಳಿಗಿಂತ ಸುಲಭವಾಗಿ ಒಪ್ಪಿಕೊಂಡಿದೆ. ಇಲ್ಲಿ ಪುರುಷರೊಂದಿಗೆ ತೃತಿಯಲಿಂಗಿ ಮಹಿಳೆಯರು ಮದುವೆ ಸಹ ಆಗಿದ್ದಾರೆ ಅದೂ ಯಾವುದೆ ತಂಟೆ ತಕರಾರಿಲ್ಲದೆ. ಲಿಂಗ ಪರಿವರ್ತಿತರು ಪರಸ್ಪರ ಮದುವೆಯಾದದ್ದು ದೇಶದಲ್ಲೆ ಕೇರಳದಲ್ಲೆ ಮೊದಲು. ಇಂದು ಕನಿಷ್ಠ ಅಂತಹ ನೂರು ಜೋಡಿಗಳು ಮುಖ್ಯಧಾರೆಯಲ್ಲಿ ಬೆರತುಕೊಂಡೆ ಆ ತರದ ವೈವಾಹಿಕ ಬಂಧನದಲ್ಲಿ ಬದುಕು ಸವೆಸುತ್ತಿವೆ ಅನ್ನೋದು ಅವನಿಗೆ ಗೊತ್ತು. 


ಇನ್ನು ಸಭ್ಯ ಭಾಷೆಯಲ್ಲಿ ಹೇಳುವುದಾದರೆ ದೇಹದ ವ್ಯಾಪಾರ. ಅದನ್ನೆ ಒರಟಾಗಿ ಹೇಳುವುದಾದರೆ ಸೂಳೆಗಾರಿಕೆ ಮಾಡಿ ಬದುಕುತಿದ್ದ ಹೆಣ್ಣೊಂದು ಮಲಯಾಳಂನ ಅತಿ ಹೆಚ್ಚು ಪ್ರಸಾರ ಕಾಣುತ್ತಿದ್ದ ಪತ್ರಿಕೆಯೊಂದರಲ್ಲಿ ಅಂಕಣಕಾರ್ತಿಯಾಗಿ ತನ್ನ ಜೀವನನುಭವವನ್ನ ಹಂಚಿಕೊಳ್ಳಲು ಇದು ಕೇರಳವಾಗಿದ್ದರಿಂದ ಮಾತ್ರ ಸಾಧ್ಯವಾಗಿತ್ತು. ಲೈಂಗಿಕ ಕಾರ್ಯಕರ್ತೆಗೂ ಒಂದು ಕರಾಳ ನೆನ್ನೆಯಿದೆ. ಅದು ಅವಳ ಆಯ್ಕೆಯ ಬದುಕಾಗಿರಲಿಲ್ಲ ಅನ್ನುವ ಪರಿಪಕ್ವತೆ ಮಲಯಾಳಿಗಳಿಗೆ ಇದ್ದುದರಿಂದಲೆ ಅದು ಸಾಧ್ಯವಾಯ್ತು. 

ಒಟ್ಟಿನಲ್ಲಿ ಕೇರಳದ ಈ ಮುಕ್ತತೆ. ವಿಚಾರ ವಿನಿಮಯಕ್ಕಿರುವ ಸಾರ್ವತ್ರಿಕತೆ. ಹುಸಿ ಸೋಗಿನ ಮಡಿವಂತಿಕೆಯ ಸೋಂಕಿಲ್ಲದ ಅಲ್ಲಿನ ಸಾಮಾಜಿಕತೆ ಅಲ್ಲಿನ ಜನರ ಬದುಕಿನಲ್ಲಿ ಅನಗತ್ಯ ಗೊಂದಲಗಳಲ್ಲಿ ಬಹಳಷ್ಟನ್ನ ಇಲ್ಲವಾಗಿಸಿದೆ ಅನ್ನಲಡ್ಡಿಯಿಲ್ಲ. ಇವರು ಎಷ್ಟು ಧಾರ್ಮಿಕರೋ ಅಷ್ಟೆ ನಿರೀಶ್ವರವಾದಿಗಳು. ಎಷ್ಟು ಕರ್ಮಠರೋ ಅಷ್ಟೆ ಮುಕ್ತ ಸಾಮಾಜಿಕರು. ಹೀಗಾಗಿಯೆ ಕೇರಳ ಹೋಲಿಕೆಯಲ್ಲಿ ಇನ್ನುಳಿದ ಭಾರತೀಯ ರಾಜ್ಯಗಳಿಗಿಂತ ಸಂಪೂರ್ಣ ಭಿನ್ನ.


*****


ಅಂಜಂಜುತ್ತಲೆ ಬಂದ ಸುಭಾಶ ಅವನೊಂದಿಗೆ ಹೊಟೆಲಿನ ಟೇಬಲ್ಲೊಂದರಲ್ಲಿ ಎದುರು ಬದುರಾಗಿ ಕೂತ. ಹೆದರಿದವನಂತೆ ಮುದುಡಿ ಕೂತಿದ್ದವನ್ನ "ಹೆದರಬೇಡನ ಸರಿಯಾಗಿ ಕೂತ್ಕ" ಅಂದ ಇವ. "ಹೆಹೆಹೆ ಹಂಗೇನೂ ಇಲ್ಲಪ್ಪ" ಅಂತ ಸಹಜತೆ ನಟಿಸಿದವ ಇನ್ನಷ್ಟು ಆತ್ಮವಿಶ್ವಾಸದಿಂದ ಕೂರಲು ಯತ್ನಿಸಿದ. ಎರಡು ಮಸಾಲೆದೋಸೆ ಮತ್ತು ಎರಡು ಜಾಮೂನು ಆರ್ಡರ್ ಸರ್ವರಿಗಿತ್ತು ಇವ ಏನೋ ಹೇಳಲು ಅನುವಾಗುತ್ತಿದ್ದ ಎಳೆಯನತ್ತ ದಿಟ್ಟಿಸಿದ. ಅದು ಆ  ಬಟ್ಟೆಯ ಚೀಲದಲ್ಲಿದ್ದ ಮೂರು ಅರೆಗಳ ಬುತ್ತಿಯನ್ನ ಇವನ ಮುಂದು ಮಾಡಿ "ನಿಮಗಂತ ತಂದದ್ದು! ಅಮ್ಮ ಕೊಟ್ರು" ಅಂತ ನಾಚುತ್ತಲೆ ಚೀಲ ಮುಂದೆ ಸರಿಸಿದ. ಅದರಲ್ಲೇನಿರಬಹುದು ಅನ್ನುವ ಕಲ್ಪನೆ ಮನಸಿಗೆ ಬಂದರೂ "ಅದೆಂತದನ?" ಅಂದ. "ನೀವು ಕೋಣೆಗೆ ಹೋದ ನಂತ್ರ ತೆಗ್ದು ನೋಡಿ ಆಯ್ತ? ಈಗ ತೆಗಿಬೇಡಿನಿ" ಅಂತ ಬೇಡಿದ. "ಆಯ್ತು ಮಾರೆಯಾ" ಅಂತ ಇವ ಆ ಚೀಲ ಪಡೆದು ಪಕ್ಕಕ್ಕಿಟ್ಟುಕೊಂಡ.

ದೋಸೆ ಬಂತು. ಸುಭಾಶ ಬಹಳ ಇಷ್ಟ ಪಟ್ಟು ಅವನ ಪಾಲಿಗೆ ಅಮೂಲ್ಯವಾಗಿದ್ದ ಅದನ್ನ ಆಸ್ವಾದಿಸುತ್ತಾ ತಿನ್ನುತ್ತಿರೋದನ್ನ ನೋಡಿ ಅವನಿಗೆ ಅವನದ್ದೆ ಬಾಲ್ಯ ನೆನಪಾಯಿತು. ಆಗವನಿಗೆ ಬಸ್ಟ್ಯಾಂಡಿನ ಕಾರಂತರ ನವಿಲು ಹೊಟೆಲಿನಲ್ಲಿ ಮಸಾಲೆ ದೋಸೆ ಕೊಡಿಸಲು ಡ್ರೈವರ್ ಆಗಿದ್ದ ಅಜ್ಜ ಇದ್ದರು. ಪಾಪ ಇವನಿಗೆ ಯಾರೂ ಇಲ್ಲವಲ್ಲ ಅನಿಸಿ ತನಗೆ ಮಾತ್ರ ಕೇಳುವಂತೆ ಲೊಚಗುಟ್ಟಿದ. ದೋಸೆ ಜಾಮೂನಿನ ನಂತರ ಬಂದ ನೊರೆ ನೊರೆ ಬೈಟೂ ಕಾಫಿ ಸುಭಾಶನಿಗೆ ಬಹಳ ಇಷ್ಟವಾಯ್ತು ಅಂತ ಕಾಣ್ತದೆ. ಅದನ್ನ ನೋಡ್ತ ಜಗತ್ತಿನ ಮಕ್ಕಳೆಲ್ಲರ ಮನಸ್ಥಿತಿ ಈ ಪ್ರಾಯದಲ್ಲಿ ಬಹುತೇಕ ಒಂದೆ ಅನಿಸಿತು ಅವನಿಗೆ. "ಬೇರೆ ಇನ್ನೆಂತಾದ್ರೂ ಬೇಕನ?" ಅಂದರೆ ಆಗಲೆ ಮುಜುಗರದಿಂದ ಮುದ್ದೆಯಾಗಿದ್ದ ಆ ಎಳೆಯ ನಾಚುತ್ತಲೆ "ಬೇಡಯ" ಅಂದ. ಇನ್ನೂ ಮೂರು ಮಸಾಲೆದೋಸೆ ಹಾಗೂ ಮತ್ತೆ ಬಿಸಿ ಬಿಸಿ ಏನಿದೆ? ಬನ್ಸ್.  ಮೂರು ಬನ್ಸ್ ಪಾರ್ಸಲ್ ಮಾಡಲು ಹೇಳಿ ಸರ್ವರಿಗೆ ಟಿಪ್ಸಿಟ್ಟು ಬಿಲ್ ಪಾವತಿಸಿದ.

"ಇದನ್ನ ಮನೆಗೆ ಕೊಂಡು ಹೋಗಿ ಅಮ್ಮನಿಗೆ ಕೊಡು" ಅಂತ ಆ ಕಟ್ಟಿಕೊಟ್ಟ ತಿಂಡಿಯ ಪೊಟ್ಟಣಗಳಿದ್ದ ತೊಟ್ಟೆಯನ್ನ ಅವನಿಗೆ ಕೊಡಹೋದರೆˌ "ಅಯ್ಯಯ್ಯ ಬೇಡನಿಯ! ಅಮ್ಮ ಬೈತಾರೆ" ಅಂದ. "ಎಂತಸ ಆಗಲ್ಲ ತೆಗೊಳ್ಳ" ಅಂತ ಇವ ಒತ್ತಾಯಿಸಿ ಕೊಟ್ಟ.

( ಇನ್ನೂ ಇದೆ.)



https://youtu.be/5GLskRON4gU

No comments: