05 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೨ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೨ 👊

When we remember the past, often it maks us to feel regret that we lost track of some friends or did not grasp an opportunity that opened up for us. thus, nostalgia always haunts remain very painful.


ಹೀಗಂತ ಅವತ್ತು ಕೋಲ ಮುಗಿಸಿ ಇನ್ನೇನು ಹೊಸ ಹಗಲು  ಹುಟ್ಟುವ ಘಳಿಗೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಕೋಣೆಗೆ ಹಿಂದಿರುಗಿದವ ತನ್ನ ಅನಿಯಮಿತ ದಿನಚರಿ ಪುಸ್ತಕದಲ್ಲಿ ಬರೆದಿಟ್ಟ. 


ರಾತ್ರಿ ವಿಷ್ಣುಮೂರ್ತಿ ಭೂತದ ಕೋಲ ಮುಗಿಯುವಾಗ ಸರಿಸುಮಾರು ಬೆಳಕು ಹರಿಯುವ ಸಮಯವಾಗಿತ್ತು. ಆರಂಭದಲ್ಲಿ ಅತಿ ಉತ್ಸಾಹದಿಂದ ಅದೂ ಇದೂ ಕಿರಿಕಿರಿ ಮಾಡುತ್ತಾ ಕೋಲದ ಪ್ರತಿ ಹಂತದ ವೀಕ್ಷಕ ವಿವರಣೆ ಕೊಡುತ್ತಿದ್ದ ಸುಭಾಶ ಹೊತ್ತು ಏರುತ್ತಿದ್ದ ಹಾಗೆ ನಿದ್ರೆಯ ಸೆಳೆತ ತಾಳಲಾರದೆ ನಿಂತ ನಿಂತಲ್ಲೆ ತೂಕಡಿಸುತ್ತಾ ನಡುವಿನಲ್ಲಿ ಚಂಡೆ ನಾದಸ್ವರಗಳು ಉಚ್ಛ ಧ್ವನಿಯಲ್ಲಿ ಮೊಳಗಿದಾಗ ಬೆಚ್ಚಿ ಬಿದ್ದು ನಿದ್ರೆ ಕಳೆದೆದ್ದು ಅದೇನೋ ಮಹಾಪರಾಧ ಮಾಡಿದ ಮುಖಭಾವ ಹೊತ್ತು ಒಂದರೆಕ್ಷಣ ಸುತ್ತಮುತ್ತ ಕತ್ತು ಹೊರಳಿಸಿ ದೃಷ್ಟಿ ಹರಿಸುತ್ತಿದ್ದ. ಯಾರೂ ತನ್ನ ಕೋಳಿ ನಿದ್ರೆ ಗಮನಿಸಲಿಲ್ಲ ಎನ್ನುವುದು ಖಚಿತ ಪಡಿಸಿಕೊಂಡು ಮತ್ತೆ ನಿಧಾನವಾಗಿ ಅದೆ ಭಂಗಿಯಲ್ಲಿ ಬೆಲ್ಲ ತೂಗಲು ಆರಂಭಿಸುವುದು ಒಂಥರಾ ತಮಾಷೆಯಾಗಿತ್ತು. 

ಸಣ್ಣದರಲ್ಲಿ ರಾತ್ರಿ ಓದಲು ಕೂತುಕೊಳ್ಳುವಾಗ ಅದರಲ್ಲೂ ಊಟ ಮುಗಿಸಿದ ನಂತರ ಪುಸ್ತಕಗಳೆದುರು ಕೂತುಕೊಳ್ಳುತ್ತಿದ್ದ ತನ್ನ ಪರಿಸ್ಥಿತಿಯೂ ಹೆಚ್ಚು-ಕಡಿಮೆ ಹೀಗೆ ಇರುತ್ತಿತ್ತಲ್ಲ ಅಂತನಿಸಿ ಆ ಕ್ಷಣವನ್ನ ಎಂಜಾಯ್ ಮಾಡುವವನಂತೆ ಸ್ವಲ್ಪ ಜೋರಾಗಿಯೆ ನಕ್ಕ. ಆ ಗೌಜಿ ಗದ್ದಲದ ನಡುವೆ ಅಗದು ಹುದುಗಿ ಮರೆಯಾಗಿ ಹೋಯ್ತು.

ಭೂತದ ವೇಷಗಾರಿಕೆˌ ಅದರ ಪ್ರಭಾವಳಿ ಭವ್ಯವಾಗಿತ್ತು. ಭೂತ ಕಟ್ಟಿದವನೊಬ್ಬನಿಂದ ಅವನ್ನೆಲ್ಲ ಭರಿಸಿ ತೂಕವನ್ನ ಸಂಭಾಳಿಸಲಾಗದೆ ಹಿಂದಿನಿಂದ ನಾಲ್ವರು ತಮ್ಮ ಕೈಯಾಸರೆ ಕೊಟ್ಟು ಭೂತ ಕುಣಿಯತ್ತಿರುವಂತೆˌ ಸುತ್ತಿ ಸುತ್ತಿ ಹೆಜ್ಜೆ ಹಾಕಿ ನಲಿಯುತ್ತಿರುವಾಗ ತಾವೂ ಹಿಂದಿನಿಂದ ಅಷ್ಟೆ ರಭಸವಾಗಿ ಸುತ್ತುತ್ತಿದ್ದರು. ವಿಷ್ಣುಮೂರ್ತಿಯಲ್ಲೂ ಬಗೆಬಗೆಯ ವಿಷ್ಣುಮೂರ್ತಿಗಳಿವೆಯಂತೆ. ಕೆಲವು ಸೌಮ್ಯ ಪ್ರಕೃತಿಯವಾದರೆ ಇನ್ನು ಕೆಲವು ಚೂರು ಉಗ್ರವಾದುವೂ ಇದಾವಂತೆ. ಕೆಲವು ವಿಷ್ಣುಮೂರ್ತಿಗಳಂತೂ ಗುಳಿಗನ ಉಗ್ರಾವತಾರಕ್ಕೆ ಪೈಪೋಟಿ ಕೊಡುವಂತೆ ಕೆಂಡದಲ್ಲಿ ಮಿಂದೆ ಕೋಲ ಮುಗಿಸುವ ಜಾಯಮಾನದವುಗಳಂತೆ. 


ಈ ಕೆಳಬೆಟ್ಟು ತರವಾಡು ಬಂಟರದ್ದು. ಕಾಸರಗೋಡು ತಾಲೂಕಿನ ಉತ್ತರಕ್ಕೆ ಬೀಡು ಬರ್ಕೆ ಗುತ್ತು ಮನೆಗಳೆಂದು ಕರೆಸಿಕೊಳ್ಳುವ ಅಧಿಕಾರದ ಸಂಕೇತದ ಇಂತಹ ಮಹಾಮನೆಗಳು ಕಾಸರಗೋಡು ದಾಟಿ ದಕ್ಷಿಣದ ಕೇರಳದ ಗಡಿ ಹತ್ತಿರವಾಗುತ್ತಿದ್ದಂತೆ ತರವಾಡು ಅಂತ ಕರೆಸಿಕೊಳ್ಳುತ್ತದೆ. ಕುಂಬಳೆ ಅರಸರ ಸಾಮಂತ ಮನೆತನವಾಗಿದ್ದ ಕೆಳಬೆಟ್ಟು ಚೌಟರ ಕುಟುಂಬ ಹಳೆಯ ಅರಸೊತ್ತಿಗೆಯ ಅಧಿಕಾರಗಳಿಗೆಲ್ಲ ಕತ್ತರಿ ಬಿದ್ದಿರುವ ಈ ಕಾಲಕ್ಕೂ ಸಹ ಹಿಂದಿನ ಖದರನ್ನ ಕಾಪಿಟ್ಟುಕೊಂಡೆ ಮುಂದುವರೆದಿದೆ. ಸ್ಥಳಿಯರು ಅವರ ಮನೆಯ ಇಂತಹ ಆಚರಣೆಗಳಲ್ಲಿ ಮೊದಲಿನಂತೆಯೆ ಶ್ರದ್ಧಾ ಭಕ್ತಿಯಿಂದ ಭಾಗವಹಿಸುವ ಕ್ರಮ ಹೀಗಾಗಿಯೆ ಇಂದಿಗೂ ಅನೂಚಾನವಾಗಿ ಮುಂದುವರೆದಿದೆ.


ಇತ್ತ ಕೋಲ ತನ್ನ ಉಚ್ಛಘಟ್ಟ ಮುಟ್ಟಿ ತರುವಾಡಿನಾರ್ ಕೈಗೆ ಕೇಪುಳದ ಹೂವು ಹಿಂಗಾರ ವೀಳ್ಯದೆಲೆ ಸಹಿತ ಇಡಿ ಗೋಡಿಕೆಯ ಪ್ರಸಾದ ನೀಡಿದ ಭೂತ ಅವರ ಕಷ್ಟನಷ್ಟ ವಿಚಾರಿಸುತ್ತಾ ದೊಡ್ಡ ಧ್ವನಿಯಲ್ಲಿ ಅಭಯ ಪರಿಹಾರ ನೀಡುತ್ತಿತ್ತು. ಗುತ್ತಿನಾರ್ ಅಹವಾಲು ಮುಗಿದ ಅನಂತರ ಅವರ ಒಕ್ಕಲುಗಳ ಸರದಿ ಆರಂಭವಾಗಿ ಅನಂತರ ಆ ಪರಿಸರದ ಶ್ರೀಸಾಮಾನ್ಯರವರೆಗೂ ಜನರು ಭೂತದ ಮುಂದೆ ತಮ್ಮ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾಗˌ ಇತ್ತ ಅಂಗಳದ ಅಂಚಿನಲ್ಲಿ ಒಂದು ಚಿತೆಗೆ ಸಾಕಾಗುವಷ್ಟು ಕಟ್ಟಿಗೆ ತೆಂಗಿನ ಮಡಿಲು ಕಾಯಿ ಚಿಪ್ಪುಗಳನ್ನ ಒಟ್ಟಿದ್ದ ರಾಶಿಗೆ ಬೆಂಕಿ ಕೊಟ್ಟು ದೊಡ್ಡ ಉರಿ ಎಬ್ಬಿಸಲಾಗಿತ್ತು.

ಭೂತದ ನುಡಿˌ ಅಭಯ ಡೆನ್ನಾನದ ಮಧ್ಯ ಮಧ್ಯದಲ್ಲಿ ಅಷ್ಟಿಷ್ಟು ಕಿವಿಗೆ ಬೀಳುತ್ತಿದ್ದ ಪಾಡ್ದನಗಳೆಲ್ಲ ಸ್ಥಳಿಯರ ತಾಯ್ನುಡಿ ತುಳುವಿನಲ್ಲೆ ಇತ್ತು. ಈ ಎಲ್ಲಾ ಪ್ರಹಸನ ಮುಗಿವ ಹೊತ್ತಿಗೆ ಕೋಲ ಕಟ್ಟಿದವನ ಆವೇಶ ಮತ್ತೆ ಮೇಲೇರಿ ಮೈ ಮರೆತು ಆತ ಕಂಪಿಸತೊಡಗಿದ. ಮಾತುಗಳು ಅಸ್ಪಷ್ಟವಾಗ ಹತ್ತಿತ್ತು. ಆರೇಳು ಬೊಂಡದ ಬಾರಣೆ ಮಾಡಿಸಿˌ ನೆನೆಸಿದ ಕುಚ್ಚಲಕ್ಕಿ ಬೇಯಿಸಿ ಕುಟ್ಟಿ ಮಾಡಿಸಿದ ಕುಡು ಬೆಲ್ಲ ನುಂಗಿಸಿದ ನಂತರವೂ ಆವೇಶ ಒಂದಿನಿತೂ ಕಡಿಮೆಯಾಗುವ ಲಕ್ಷಣಗಳು ಕಂಡು ಬರಲಿಲ್ಲ. 

ಈ ವಿಷ್ಣುಮೂರ್ತಿ ತರವಾಡಿನವರ ಮನೆಯೊಳಗಿನ ದೈವ. ಹೀಗಾಗಿ ಅವರು ಮತ್ತವರ ಒಕ್ಕಲುಗಳ ಹೊರತು ಹೊರಗಿನವರು ಹರಕೆ ಕಟ್ಟಿ ಅವನಿಗೆ ಕೋಳಿ ಕೊಡುವಂತಿರಲಿಲ್ಲ. ನಾಲ್ಕೈದು ಕೋಳಿಗಳ ಕುತ್ತಿಗೆಯನ್ನ ಭೂತವೆ ಲಟ ಲಟ  ಮುರಿದು ಅವುಗಳ ನೆತ್ತರು ಪ್ರೋಕ್ಷಿಸಿದ ಅನ್ನವನ್ನ ಮುಕ್ಕಿಮುಕ್ಕಿ ತಿಂದ ನಂತರ ಆ ತನಕ ಹಳದಿಯಾಗಿದ್ದ ಭೂತದ ಮುಖವರ್ಣಿಕೆಗೆ ಈಗ ರಕ್ತದ ಕೆಂಪುˌ ಅರಳುˌ ಅನ್ನದಗಳಿನ ಅಲಂಕಾರಗಳೆಲ್ಲ ಸೇರಿ ವಿಚಿತ್ರ ಭೀಭತ್ಸತೆಯ ದರ್ಶನ ಅವನಿಗಾದಂತಾಯಿತು. ಎಡೆಬಿಡದೆ ಕ್ಯಾಮೆರಾದ ಪ್ರತಿಯೊಂದು ಫ್ರೇಮಿನಲ್ಲೂ ಈ ಅತಿಮಾನುಷ ಪ್ರದರ್ಶನದ ಘಟನಾವಳಿಗಳನ್ನ ಶ್ರದ್ಧೆಯಿಂದ ಸೆರೆ ಹಿಡಿದ. ಬಾರಣೆ ಮುಗಿದರೂ ತಣಿಯದ ಭೂತದ ಬವಣೆ ಇನ್ನೇನು ಬೆಂಕಿಯುರಿದು ನಿಗಿ ನಿಗಿ ಕೆಂಡದ ರಾಶಿಯಾಗಿದ್ದ ಅಂಗಳದಂಚಿನಲ್ಲಿ ಅಂತ್ಯವಾಗಲಿತ್ತು. 


*****

ಇದ್ದಕ್ಕಿದ್ದಂತೆ ಒಮ್ಮೆಲೆ ಮಿಂಚಿನ ವೇಗದಲ್ಲಿ ಎದ್ದು ನಿಂತು ಕೂಗು ಹಾಕಿದ ಪ್ರಭಾವಳಿ ಕಳಚಿದ್ದ ಭೂತ ಎಲ್ಲರ ನಡುವಿನಿಂದ ಓಡಿ ಹೋಗಿ ಆ ಕೆಂಡದ ರಾಶಿಯಲ್ಲಿ ಬಿದ್ದು ಹೊಡಕಾಡ ತೊಡಗಿತು. ಅಲ್ಲಿಯೆ ಅಕ್ಕಪಕ್ಕದಲ್ಲಿ ಇದರ ಸುಳಿವರಿತು ತಯಾರಾಗಿ ನಿಂತಿದ್ದ ನಾಲ್ಕಾರು ಕಟ್ಟುಮಸ್ತಾಗಿದ್ದ ಜವಾನರು ಭೂತದ ಕುಚ್ಚುಗಳನ್ನ ಎಳದೆಳೆದು ಅದನ್ನ ಬೆಂಕಿಯ ಮಡಿಲಿನಿಂದ ಆಚೆಗೆ ಅಳೆಯಲು ಶ್ರಮಿಸುತ್ತಿದ್ದರು. ಅವರು ಹೊರಗೆಳೆದ ಮರುಕ್ಷಣ ಭೂತ ಮರಳಿ ಕೆಂಡದ ಹಾಸಿಗೆ ಮೇಲೆ ಮಲಗಿ ಮತ್ತೆ ಮತ್ತೊಂದಷ್ಟು ಆವೇಶದಿಂದ ಹೊರಳಾಡಲು ಆರಂಭಿಸುತ್ತಿತ್ತು. ಇವರು ಎಳೆಯೋದು ಅದು ಹೋಗಿ ಮತ್ತೆ ಕೆಂಡ ಮೀಯೋದು ಇದೆ ನಾಟಕ ಸ್ವಲ್ಪ  ಕಾಲ ಮುಂದುವರೆದು ಕಡೆಗೂ ಭೂತ ಕಟ್ಟಿದ್ದ ನಲಿಕೆಯವನ ಆವೇಶ ಪೂರ್ತಿ ಇಳಿದು ಭೂತ ಅವನ ದೇಹದಿಂದ ಹೊರಟ ನಂತರ ಸಂಪೂರ್ಣ ಸೋತ ಅವನು ಇವರ ಒತ್ತಾಯಕ್ಕೆ ಸೆರೆಯಾದ. 

ಹತ್ತಿರದಲ್ಲೆ ಕುರ್ಚಿಯೊಂದನ್ನ ಹಾಕಿ ದಣಿದು ಧಾರಾಕಾರ ಬೆವರು ಹರಿಸುತ್ತಿದ್ದ ಅವನನ್ನ ಬಲವಂತವಾಗಿ ಕೂರಿಸಿ ಬೀಸಣಿಗೆಯಿಂದ ಗಾಳಿ ಬೀಸಿˌ ಮುಖಕ್ಕೆ ನೀರು ಚುಮುಕಿಸಿˌ ಬೊಂಡ ತರಿಸಿ ಒತ್ತಾಯ ಮಾಡಿ ಕುಡಿಸಿ ಸಹಜ ಸ್ಥಿತಿಗೆ ತರಲು ಬಂಟರು ಶ್ರಮಿಸಿದರು. ಈ ಬೆಂಕಿಯಾಟದ ಪ್ರಹಸನದಲ್ಲಿ ಭೂತ ಕಟ್ಟಿದ್ದ ನಲಿಕೆಯವನಿಗೂ ಅವನನ್ನ ಹೊರಗೆಳೆಯುತ್ತಿದ್ದ ಜವಾನರಿಗೂ ಅಷ್ಟಿಷ್ಟು ಮೈ ಸುಟ್ಟಿರಬಹುದು ಅನ್ನಿಸಿತು. ಅಂತೂ ಕೋಲ ಸುಸಂಪನ್ನವಾಗಿತ್ತು. ಈಗ ಸುಭಾಶ ಎಲ್ಲಿದ್ದಾನೆ ಅಂತ ಹುಡುಕಿದರೆ ತೀ ಪತ್ತುನು ನೋಡು ನೋಡುತ್ತಲೆ ಜೊತೆಜೊತೆಗೆ ತೂಕಡಿಕೆಯನ್ನೂ ತಾಳಲಾರದೆ ಅಂಗಳದ ಚಪ್ಪರದಂಚಿನ ಅಡಿಕೆ ಕಂಭವನ್ನ ಆಶ್ರಯಿಸಿ ಹಿಡಿದು ಒಂದೂವರೆ ಕಾಲಿನ ಬಲದಲ್ಲಿ ನಿಂತು ಅಲ್ಲೆ ಕುಗುರುತ್ತಾ ಇದ್ದದ್ದು ಕಣ್ಣಿಗೆ ಬಿತ್ತು. ಹೆಗಲಿನಲ್ಲಿ ಹರಕೆ ಕೋಳಿಯಿದ್ದ ಚೀಲ ನೇತು ಬಿದ್ದಿತ್ತು.


*****

ಕೋಲಕ್ಕೆ ಬರುವಾಗಲೇನೋ ಅವನೆ ಕರೆದುಕೊಂಡು ಬಂದದ್ದು ನಿಜ. ಈಗ ಮರಳಿ ಮನೆಯ ಹಾದಿ ಹಿಡಿವಾಗ ನಿದ್ದೆ ಕಣ್ಣಿನಲ್ಲಿದ್ದ ಅವನನ್ನು ಹಾಗೆಲ್ಲಾ ನಡುದಾರಿಯಲ್ಲೆ ಬಿಟ್ಟು ಹೋಗುವಂತಿರಲಿಲ್ಲ. ಮನೆಗೆ ಮಟ್ಟಿಸಿ ಬರುವ ಅನಿವಾರ್ಯತೆ ಎದುರಾಗಿತ್ತು.


( ಇನ್ನೂ ಇದೆ.)



https://youtu.be/j-Ey742mJ3k

No comments: