20 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೯.👊


ಮುಂದಿನ ದಿನಮಾನಗಳಲ್ಲಿ ಅಲ್ಲಿಂದಲೂ ಆ ಖೂಳರನ್ನ ಸೋಲಿಸಿ ಅಟ್ಟಾಡಿಸಿದ ಅವರ ಯುರೋಪಿಯನ್ ದಾಯಾದಿಗಳಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಖದೀಮರುˌ ಕಡೆಗೆ ಡಚ್ಚರು ಇಂಡೋನೇಷ್ಯಾಕ್ಕೆ ಹೋಗಿ ಮುಟ್ಟಿ ಆ ದ್ವೀಪ ಸಮುಚ್ಛಯವನ್ನ ತಮ್ಮ ವಸಾಹತಾಗಿಸಿಕೊಳ್ಳುವುದನ್ನ ಅನಿವಾರ್ಯಗೊಳಿಸಿದರು. ಹಾಗಂತ ಭಾರತವೇನೂ ಯುರೋಪಿಯನ್ ವಸಾಹತುಕರಣದ ಬಲೆಯಿಂದ ಪಾರಾಗಲಿಲ್ಲˌ ಆದರೆ ದುಷ್ಟರಲ್ಲೆ ಅತಿ ಕಡಿಮೆ ದುರುಳತೆಯಿದ್ದ ಬ್ರಿಟಿಷರ ಪಾಲಾಯಿತು ಅಷ್ಟೆ.

ಶಸ್ತ್ರಗಳಲ್ಲಿ ಆಧುನಿಕರೆನಿಸಿದ್ದ ಹಾಗೂ ಶಿಸ್ತಿನ ಯುದ್ಧತಂತ್ರಗಳನ್ನ ಸೇನೆಯಲ್ಲಿ ಅಳವಡಿಸಿಕೊಂಡು ಹೋರಾಡಿ ಎದುರಾಳಿಗಳನ್ನ ಕಕ್ಕಾಬಿಕ್ಕಿಗೊಳಿಸಿಯೆ ಗೆಲುವನ್ನ ಪ್ರತಿಸಾರಿಯೂ ಖಾತ್ರಿ ಪಡಿಸಿಕೊಳ್ಳುತ್ತಿದ್ದ ಬಲಿಷ್ಠ ಯುರೋಪಿಯನ್ ಶಕ್ತಿಯೊಂದನ್ನ ತನ್ನ ಮುಂದೆ ಮಂಡಿಯೂರಿಸಿದ ಮಾರ್ತಾಂಡ ವರ್ಮನ ಈ ಅಭೂತಪೂರ್ವ ಗೆಲುವು ಬಿಳಿಯರ ದಿಗ್ವಿಜಯ ಯಾತ್ರೆಯ ಕಗ್ಗವಾಗಿರುವ ಯುರೋಪಿಯನ್ ಇತಿ"ಹಾಸ್ಯ""ಅಜ್ಞ"ರ ಸಂಶೋಧನೆಗಳಲ್ಲಿ ಕಾಣಿಸಿಕೊಳ್ಳದಿರಲು ಕಾರಣಗಳಿವೆ. ಆದರೆ ಭಾರತೀಯ ಇತಿಹಾಸ ಸಂಗ್ರಹದಲ್ಲೂ ಈ ಬಗ್ಗೆ ಕೇವಲ ಸೀಮಿತ ವಿವರಣೆಗಳಿರೋದು ದುರಾದೃಷ್ಟಕರ.

ಕೊಚ್ಚಿಯಲ್ಲಿ ಅದಾಗಲೆ ವ್ಯಾಪಾರಿ ಕೋಠಿ ಕಟ್ಟಿಕೊಂಡಿದ್ದ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಚ್ಚಿ ಸಂಸ್ಥಾನದ ಆಳರಸನನ್ನ ಕ್ರಮೇಣ ಬೆದರಿಸಿ ತೋಳ್ಬಲದಿಂದ ಕೈಗೊಂಬೆ ಮಾಡಿಕೊಂಡರು. ಅದಾದ ಮೇಲೆ ಅವರ ವಕ್ರದೃಷ್ಟಿ ಪಕ್ಕದ ತಿರುವಾಂಕೂರಿನ ಮೇಲೆ ಬಿತ್ತು. ಎಂದಿನ ಪೊಗರಿನಿಂದ ಅವರು ಹೇರಲು ಹೊರಟ ವ್ಯಾಪಾರಿ ನಿಬಂಧನೆಗಳಿಗೆ ನಾಯರ್ ಕುಲದ ಆಡಳಿತದಲ್ಲಿದ್ದ ತಿರುವಾಂಕೂರು ಸಂಸ್ಥಾನದ ಆಳರಸ ಮಾರ್ತಾಂಡ ವರ್ಮ ಸೊಪ್ಪು ಹಾಕದಿದ್ದಾಗ ಕೆರಳಿದ ಡಚ್ ಅಡ್ಮಿರಲ್ ಎಸ್ಟಾಚುಯಿಸ್ಟ್ ಡೆ ಲೆನಾಯ್
ತಿರುವಾಂಕೂರು ಸಾಮ್ರಾಜ್ಯದ ದಕ್ಷಿಣ ಗಡಿಯಾಗಿದ್ದ ಸಾಂಸ್ಕೃತಿಕವಾಗಿ ಕೇರಳದ ಭಾಗವಾಗಿದ್ದರೂ ಈಗ ರಾಜಕೀಯವಾಗಿ ತಮಿಳುನಾಡಿನ ಭೂಪಟವನ್ನ ಸೇರಿ ಹೋಗಿರುವ ಕೊಳಚ್ಚೆಲ್ಲಿನಿಂದ ನೌಕಾಯುದ್ಧ ಸಾರಿದ.

ತಿರುವಾಂಕೂರಿನವರ ನೌಕಾಬಲವನ್ನ ಕೀಳಂದಾಚಿಸಿದ ಲೆನಾಯ್ ಅತಿಯಾದ ಆತ್ಮವಿಶ್ವಾಸದಿಂದ ದಕ್ಷಿಣದಲ್ಲಿ ಯುದ್ಧ ಆರಂಭಿಸಿದಾಗˌ ಅವನನ್ನ ಎದುರಿಸಲು ದಕ್ಷಿಣದಲ್ಲಿ ಡಚ್ ನೌಕಾಪಡೆಯನ್ನ ಎದುರಿಸಲು ತನ್ನ ದಳಪತಿಗಳಾದ ಆರ್ಮುಗಂ ಪಿಳ್ಳೆ ಹಾಗೂ ಥಾನು ಪಿಳ್ಳೆಯನ್ನ ಛೂ ಬಿಟ್ಟವನೆˌ ತಾನು ಕೊಚ್ಚಿನ್ ಸಾಮ್ರಾಜ್ಯದ ಗಡಿಯೊಳಗಿದ್ದ ಡಚ್ ಠಿಕಾಣಿಗಳನ್ನ ಪುಡಿಗಟ್ಟಲು ನೆಚ್ಚಿನ ಬಂಟನಾಗಿದ್ದ ದಳಪತಿ ಚಂಪಕರಾಮನ್ ಮಾರ್ತಾಂಡ ಪಿಳ್ಳೆಯೊಡನೆ ಭೂ ಮಾರ್ಗವಾಗಿ ಮುನ್ನುಗ್ಗಿ ಬಂದ. ಇವರೊಂದಿಗೆ ಒತ್ತಾಸೆಯಾಗಿ ಪೂರ್ವದ ಘಟ್ಟದಿಂದ ಅದೆ ಕಾಲದಲ್ಲಿ ಇಳಿದು ಬಂದ ಪೊನ್ನಾನ್ ಪಾಂಡ್ಯನ್ ದೇವರ್ ನಾಯಕತ್ವದ ಮಾರವ ಪಡೆ ಕೂಡಾ ಜೊತೆಗೂಡಿತು.

ಈ ಕುಶಲ ಯುದ್ಧತಂತ್ರ ಡಚ್ಚರನ್ನ ಕಂಗಾಲಾಗಿಸಿದ್ದಷ್ಟೆ ಅಲ್ಲˌ ಕೊಚ್ಚಿನ್ನಿನಲ್ಲಿದ್ದ ಐದೂ ಕೋಠಿಗಳಿಂದ ಬೇರು ಕಿತ್ತು ಪರಾರಿಯಾಗಿ ಲೆನಾಯಿಯನ್ನ ಕೂಡಿಕೊಳ್ಳಲು ಕೊಳಚ್ಚೆಲ್ಲಿಗೆ ದೌಡಾಯಿಸಲು ಪ್ರಚೋದಿಸಿತು. ಆದರೆ ಅಲ್ಲಿ ನಡೆದಿದ್ದ ಮೂರು ವಾರಗಳ ರಣಭೀಕರ ಕಾಳಗದಲ್ಲಿ ಡಚ್ಚರು ಸೋತು ಮಾರ್ತಾಂಡ ವರ್ಮನ ಮುಂದೆ ಸಂಪೂರ್ಣವಾಗಿ ಶರಣಾಗಿ ಅವನ ಆದೇಶದಂತೆ ಭಾರತದಿಂದಲೆ ಪೇರಿ ಕಿತ್ತರು. ದಳಪತಿ ಅರ್ಮುಗಂ ಪಿಳ್ಳೆ ಡಚ್ಚರಲ್ಲಿ ಹುಟ್ಟಿಸಿದ್ದ ಆತಂಕ ಅವರನ್ನ ಭಾರತದತ್ತ ಮತ್ತೆಂದೂ ತಿರುಗಿ ನೋಡದಂತೆ  ಮಾಡಿತು. ಬಹುಶಃ ಭಾರತೀಯರ ಯುದ್ಧ ಕೌಶಲ್ಯವನ್ನ ಡಚ್ಚರು ತಪ್ಪಾಗಿ ಅಂದಾಜಿಸಿದ್ದರು. ಎರಡೆರಡು ಕಡೆಗಳಿಂದ ಸಂಘಟಿತ ದಾಳಿಯನ್ನ ಅವರು ನಿರೀಕ್ಷಿಸಿರಲಿಕ್ಕಿಲ್ಲ ಅನಿಸುತ್ತೆ. ಕ್ಷಿಪ್ರ ಕಾರ್ಯಾಚರಣೆಯ ಈ ಯದ್ಧತಂತ್ರ ಫಲ ಕೊಟ್ಟು ಅವರನ್ನ ಇಲ್ಲಿಂದ ಒಕ್ಕಲೇಳಿಸಿತು.

ಇದೆ ಆಕ್ರಮಣದ ಹೊತ್ತಿಗೆ ಡಚ್ಚರಿಗೆ ಆರಂಭಿಕ ಆಶ್ರಯ ಕೊಟ್ಟು ಕಡೆಗೆ ಅವರದ್ದೆ ಕೈಗೊಂಬೆಯಾಗಿದ್ದ ಪೇಲವ ರಾಜನ ಆಳ್ವಿಕೆಯಲ್ಲಿದ್ದ ಪೂರ್ತಿ ಕೊಚ್ಚಿ ಸಾಮ್ರಾಜ್ಯವನ್ನ ಕಬಳಿಸಿ ಅದನ್ನ ತಿರುವಾಂಕೂರಿನಲ್ಲಿ ವಿಲೀನಗೊಳಿಸಿಕೊಳ್ಳುವ ಆರಂಭಿಕ ಯೋಜನೆಯನ್ನ ಮಾರ್ತಾಂಡ ವರ್ಮ ಹಾಕಿಕೊಂಡಿದ್ದರೂ ಸಹ ಕಡೆಗೆ ಡಚ್ ಶರಣಾಗತಿ ಹಾಗೂ ಅವರ ಶಾಶ್ವತ ಸ್ಥಳಾಂತರದ ನಂತರ ಅದನ್ನ ಅನಗತ್ಯವೆಂದು ಬಗೆದು ಭೂ ಯುದ್ಧದಿಂದ ತನ್ನ ಪಡೆಯನ್ನ ಹಿಂದೆ ಕರೆಸಿಕೊಂಡ. ವಾಸ್ತವವಾಗಿˌ ಕೇರಳದ ಮುಂದಿನ ರಾಜಕೀಯ ಸ್ಥಿತ್ಯಂತರಗಳನ್ನ ಇಂದು ಅವಲೋಖಿಸಿದಾಗ ಇದೊಂದು ತಪ್ಪು ನಿರ್ಣಯವಾಗಿತ್ತು ಅನಿಸುತ್ತದೆ.

ಅಂದು ಬಯಸದೆ ತನ್ನನ್ನ ಆವರಿಸಿದ ಕಾಳಗದಿಂದಾದ ರಕ್ತಪಾತದಿಂದ ನೊಂದ ಮಾರ್ತಾಂಡ ವರ್ಮ ಅಧಿಕಾರ ತ್ಯಜಿಸಲು ನಿರ್ಧರಿಸಿದ! ತನ್ನ ಸೊತ್ತೆಲ್ಲವನ್ನೂ ಸಾಮ್ರಾಜ್ಯದ ಸಹಿತ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿಗೆ ಅರ್ಪಿಸಿದ. ಅದ ನಂತರ ತಾನು ಕೇವಲ "ಅನಂತಪದ್ಮನಾಭ ದಾಸ"ನೆಂದು ಕರೆಸಿಕೊಂಡು ಮಲಗಿದ ಭಂಗಿಯಲ್ಲಿರುವ ಆ ಮಹಾವಿಷ್ಣುವಿನ ಪ್ರತಿನಿಧಿಯಾಗಿ ಮಾತ್ರ ತನ್ನನ್ನ ಗುರುತಿಸಿಕೊಂಡುˌ ಭಗವಂತನ ರಾಜ್ಯವಾದ ಆ ತಿರುವಾಂಕೂರು ಸಂಸ್ಥಾನವನ್ನ ದೇವರ ಪರವಾಗಿ ಆಳಲು ಆರಂಭಿಸಿದ. ಅವನ ಮುಂದಿನ ಪೀಳಿಗೆಯವರೂ ನಿಯತ್ತಿನಿಂದ ಇದೆ ನೀತಿಯನ್ನ ಪಾಲಿಸಿ ಪಟ್ಟಾಭಿಷೇಕದ ಬದಲು ಹಿರಣ್ಯಗರ್ಭ ಸಂಸ್ಕಾರದ ವಿಧಿಯನ್ನ ಅನುಸರಿಸುತ್ತಾ ಸದಾಕಾಲಕ್ಕೂ ಸಹ ತಲೆಮಾರುಗಳವರೆಗೂ ಈಗಲೂ "ಪದ್ಮನಾಭದಾಸ"ರಾಗಿಯೆ ಉಳಿದಿದ್ದಾರೆ.

*****

ವಾಸ್ಕೊ-ಡ-ಗಾಮ ಭಾರತದಲ್ಲಿ ತನ್ನ ಮೊದಲ ಹೆಜ್ಜೆಯೂರಿದ್ದ ಕೊಯಿಲಾಂಡಿಯಲ್ಲೆ ಸ್ವತಂತ್ರ್ಯ ಪೂರ್ವದ ೧೮೯೭ರಲ್ಲಿ ಹುಟ್ಟಿದ್ದ ಅನಾಥ ಶಿಶುವೆ ಭಗವಾನ್ ನಿತ್ಯಾನಂದರು. ಹೆತ್ತ ತಂದೆ ತಾಯಿ ಯಾರೆಂದೆ ಗೊತ್ತಿಲ್ಲದ ಆ ಮಗುವನ್ನ ರೈತಾಪಿ ದಂಪತಿಗಳಾಗಿದ್ದ ಉಣ್ಣಿಯಮ್ಮ ಹಾಗೂ ಚಾತು ನಾಯರ್ ದಂಪತಿ ತಮ್ಮ ದತ್ತು ಪುತ್ರನನ್ನಾಗಿ ಸ್ವೀಕರಿಸಿದರು. ಅದಾಗಲೆ ಮನೆ ತುಂಬಾ ಮಕ್ಕಳಿದ್ದರೂ ಇವರನ್ನೂ ಸ್ವಂತ ಮಗನಾಗಿಯೆ ಪರಿಗಣಿಸಿ ರಾಮನ್ ಅನ್ನುವ ಹೆಸರಿಟ್ಟು ಪಾಲಿಸಿದರು. ದುರದೃಷ್ಟವಶಾತ್ ಆರಂಭದಲ್ಲಿ ಇನ್ನೂ ಮೂರುವರ್ಷಗಳ ಪ್ರಾಯವಾಗಿದ್ದಾಗಲೆ ತಮ್ಮ ಸಾಕು ತಂದೆಯನ್ನೂ ಹಾಗೂ ಆರರ ಪ್ರಾಯದಲ್ಲಿ ತಾಯಿಯನ್ನೂ ಕಳೆದುಕೊಂಡು ರಾಮನ್ ಮತ್ತೊಮ್ಮೆ ಅನಾಥನಾದ. ಸಾಯುವ ಮುನ್ನ ಉಣ್ಣಿಯಮ್ಮ ತಾವು ಗೇಣಿಗೆ ಗದ್ದೆಯನ್ನ ಹಿಡಿದಿದ್ದ ವಕೀಲ ಈಶ್ವರ ಅಯ್ಯರ್ರ ಮಡಿಲಿಗೆ ಈ ನತದೃಷ್ಟ ಮಗುವಿನ ಲಾಲನೆ ಪಾಲನೆಯ ಹೊಣೆಯನ್ನೊಪ್ಪಿಸಿ ಕಣ್ಮುಚ್ಚಿದ್ದರಂತೆ.

ಬೆಳೆಯುತ್ತಿದ್ದಂತೆ ಅಧ್ಯಾತ್ಮದತ್ತ ಹೊರಳಿದ ರಾಮನ್ ತನ್ನ ಹದಿಹರೆಯದಲ್ಲೆ ಕೇವಲ ಕೌಪಿನವೊಂದನ್ನಷ್ಟೆ ಉಟ್ಟು ದೇಶಾಂತರ ಹೊರಟ. ಹಿಮಾಲಯದವರೆಗೂ ಅಂಡಲೆದು ಪಡೆದ ಅಧ್ಯಾತ್ಮಿಕ ಸಾಧನೆಯ ನಂತರ ಕಾಙಂನಗಾಡಿನ ಹೊಸದುರ್ಗ ಕೋಟೆಯ ಪರಿಸರದಲ್ಲಿ ನೆಲೆ ನಿಂತ. ಅಲ್ಲಿ ಸ್ವತಃ ತಾನೆ ಮೇಲೆ ಗುಳಿಗನ ನೆಲೆಯಿದ್ಧ ಪುಟ್ಚ ಬೆಟ್ಚವೊಂದರ ಒಡಲಾಳದಲ್ಲಿದ್ದ ಮುರಕ್ಕಲ್ಲುಗಳಲ್ಲಿ ನಲವತ್ತಮೂರು ಗುಹೆಗಳನ್ನ ಕೊರೆದ. ಅದೆ ಇಂದು ಅಲ್ಲಿರುವ ಶ್ರೀನಿತ್ಯಾನಂದಾಶ್ರಮ. ಆ ಗುಹೆಗಳೆ ಧ್ಯಾನಸ್ಥಾನ.

ಅಲ್ಲಿಂದ ಘಟ್ಟದ ದಿಕ್ಕಿನಲ್ಲಿ ಐದು ಕಿಲೋಮೀಟರುಗಳಾಚೆ ಆಗ ಅಲ್ಲಿ ವಾಸವಿದ್ದ ಕೊರಗರ ಮನ ಒಲಿಸಿ ಪಡೆದ ಜಾಗದಲ್ಲಿ ಪ್ರಕೃತಿಯ ಮಡಿಲ ಮಧ್ಯೆ ಅವರೆ ನಿರ್ಮಿಸಿರುವ ಗುರುವನ ಆ ಊರಿನಲ್ಲಿರುವ ಮತ್ತೊಂದು ಅದ್ಭುತ. ದೇವಗಂಗೆಯನ್ನೆ ಅಲ್ಲಿಗೆ ಗುರುಗಳು ಇಳಿಸಿದ್ದಾರೆ ಎಂದು ನಂಬಲಾಗುವ ಗೋಮುಖ ತೀರ್ಥವೊಂದಲ್ಲಿದೆ. ಮಲೆಯ ಆಳದಿಂದ ಉಕ್ಕಿಬರುವ ಆ ನೀರಿನಲ್ಲೇನೋ ಸೊಗಸಿದೆ. ಆ ನೀರಲ್ಲಿ ಮಿಂದರೆ ಮೈ ಮನ ಹಗುರಾಗುವ ಭಾವ ಆವರಿಸುತ್ತದೆ. ಮಿಂದವರಿಗೆ ಹೊಸ ಸುಗಂಧ ಹೊತ್ತ ಅನುಭವವಾಗುತ್ತದೆ. ಇವನೂ ಅಲ್ಲಿಗೆ ಹೋದಾಗ ಆ ಅಕ್ಷಯ ಜಲದಲ್ಲಿ ಮಿಂದು ಉಲ್ಲಸಿತನಾದ. ಆ ಪರಿಸರದ ಹಸಿರು ಆಹ್ಲಾದಕರವಾಗಿತ್ತು.

( ಇನ್ನೂ ಇದೆ.)

https://youtu.be/nqiAwAlP1NM

No comments: