21 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೦.👊



ಪ್ರತಿದಿನ ಮೂರು ಸಲ ನಿತ್ಯಾನಂದಾಶ್ರಮದ ಗುಹೆಗಳ ಮೇಲಿರುವ ಭಗವಾನ್ ನಿತ್ಯಾನಂದರ ಮೂರ್ತಿಗೆ ಆರತಿ ಎತ್ತಲಾಗುತ್ತದೆ. ಅವನು ಹಿಂದಿನ ದಿನ ಬೆಳಗ್ಗಿನ ಆರತಿಗೆ ಹೋಗಿದ್ದಾಗ ಒಂದು ವಿಚಿತ್ರ ಅವನಲ್ಲಿ ಘಟಿಸಿತು. ಮೆಟ್ಟಲುಗಳ ಹತ್ತಿ ಆ ಪುಟ್ಟ ಬೆಟ್ಟವನ್ನೇರುವವರೆಗೂ ಸರಿಯಾಗಿದ್ದ ಅವನಿಗೆ ಗುಡಿಯ ಮುಂದೆ ಮೂರ್ತಿಗೆ ಕೈಮುಗಿದು ನಿಂತುಕೊಂಡಾಗ ತೀರಾ ನೀಶ್ಯಕ್ತನಾದ ಹಾಗನಿಸಿ ಕಣ್ಣಿಗೆ ಕತ್ತಲೆ ಕವಿದಂತಾಯಿತು. ಆ ಬೆಳಗಿನ ಚಳಿಯಲ್ಲೂ ಮೈ ಬೆವರಿ ಒದ್ದೆಮದ್ದೆಯಾದ ಹಾಗಾದವನಿಗೆ ಹೀಗೆಯೆ ನಿಂತುಕೊಂಡೆ ಇದ್ದರೆ ಕುಸಿದುಬಿದ್ದೇನು ಅನಿಸಿತುˌ ಘಂಟೆˌ ಜಾಗಟೆಗಳ ಗದ್ದಲದ ಮಧ್ಯೆ ಮಂಗಳಾರತಿ ಮಾಡುತ್ತಿದ್ದರು. ಅಲ್ಲಿ ನೆರೆದಿರುವ ಎಲ್ಲರೂ ನಿಂತುಕೊಂಡಿರುವಾಗ ತಾನೊಬ್ಬನೆ ಕೂತರೆ ಸರಿಯಲ್ಲ ಅನ್ನಿಸಿ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿದು ಬೇಲಿ ಗೋಡೆಗೆ ಒರಗಿ ನಿಂತು ಸುಧಾರಿಸಿಕೊಂಡ. ಪೂಜೆ ಮುಗಿದು ಪ್ರಸಾದ ಪಡೆದುˌ ಕೆಳಗಿಳಿದು ಬಂದು ತಿಂಡಿಯನ್ನೂ ತಿಂದಾದ ಮೇಲೂ ಸುಸ್ತಿತ್ತು. 

ಕೋಣೆಗೆ ಹೋಗಿ ಬಳಲಿಕೆಯಿಂದ ಮಲಗಿದ್ದಷ್ಟೆ ಗೊತ್ತುˌ ಎದ್ದಾಗ ಘಂಟೆ ಒಂದಾಗಿತ್ತು. ಮೈಮನ ಹಗೂರಾದ ಭಾವ ಆವರಿಸಿತ್ತು. ಸಣ್ಣಂದಿನಿಂದ ಸರಿಯಾದ ಭಂಗಿಯಲ್ಲಿ ನಡೆಯಲು ಕಲಿಯದ ಕಾರಣಕ್ಕೇನೋ ಬಹುಶಃˌ ಅಥವಾ ದಿನಕ್ಕೆ ಕನಿಷ್ಠ ಇಪ್ಪತ್ತು ಕಿಲೋಮೀಟರು ಹಟಯೋಗಿಯಂತೆ ನಡೆದೆ ಸವೆಸುವ ಕಾರಣಕ್ಕೂ ಇರಬಹುದು ಚೂರು ಉದ್ದವಾಗಿಯೆ ಇರುವ ಅವನಿಗೆ ನಿಧಾನವಾಗಿ ಬೆನ್ನುನೋವಿನ ಬಾಧೆ ಆವರಿಸಿಕೊಳ್ಳಲಾರಂಭಿಸಿತ್ತು. ಈ ಪ್ರಕರಣದ ನಂತರ ಬೆನ್ನುನೋವಿನ ಸೆಳೆತ ತುಂಬಾ ಕಡಿಮೆಯಾಗಿತ್ತು. ಇದು ಆ ಸ್ಥಳದ ಮಹಿಮೆಯೋˌ ಇವನ ಮನಭ್ರಾಂತಿಯೋ ಏನೋ ಒಂದು. ಆದರೆ ಮೊದಲಿದ್ದ ಮಹಾಬಾಧೆ ತುಂಬಾ ಇಳಿದಿತ್ತು ಅನ್ನೋದಂತೂ ಸತ್ಯˌ

ವಾಸ್ತವವಾಗಿˌ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಭಗವಾನ್ ನಿತ್ಯಾನಂದರು ಅಪರಿಚಿತರೇನಲ್ಲ. ಇಲ್ಲಿನ ಬಹುತೇಕ ಮಂದಿ ಒಂದಿಲ್ಲೊಂದು ಬಗೆಯಲ್ಲಿ ನಿತ್ಯಾನಂದರ ಆರಾಧಕರೆ. ಈ ಎರಡೂ ಜಿಲ್ಲೆಗಳ ಬಹಳಷ್ಟು ಊರುಗಳಲ್ಲಿ ನಿತ್ಯಾನಂದಾಶ್ರಮಗಳಿವೆ. ಅಲ್ಲೆಲ್ಲಾ ಸ್ವತಃ ನಿತ್ಯಾನಂದರೆ ಭೇಟಿಕೊಟ್ಟು ಕೆಲಕಾಲ ಇದ್ದು ಹೋಗಿರುವ ಐತಿಹ್ಯ ಇದೆ. ಈಗ ಹಣ್ಹಣ್ಣು ಮುದುಕರಾಗಿರುವ ಅನೇಕರು ತಮ್ಮ ಬಾಲ್ಯದಲ್ಲೋ ಅಥವಾ ತಾರುಣ್ಯದಲ್ಲೋ ನಿತ್ಯಾನಂದರನ್ನ ಕಂಡಿದ್ದಾರೆ ಹಾಗೂ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. 


ಕೋಳಿಕ್ಕೋಡಿನ ಕೊಯಿಲಾಂಡಿಯಲ್ಲಿ ಹುಟ್ಟಿ ಕಾಙಂನಗಾಡಿನಲ್ಲಿ ಸಂತರಾಗಿ ಬದುಕಿ ಭಾರತದಾದ್ಯಂತ ಪರಿವ್ರಾಜಕರಾಗಿ ಸಂಚರಿಸಿ ಕೊನೆಗೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿರುವ ಗಣೇಶಪುರಿಯಲ್ಲಿ ಇಹ ಜೀವನ ಮುಗಿಸಿದ ನಿತ್ಯಾನಂದರೆಂದರೆ ಕರಾವಳಿಯ ಮಂದಿಗೆ ಭಯ-ಭಕ್ತಿ ಎರಡೂ ಢಾಳವಾಗಿದೆ. ಇದೆ ಕಾರಣದಿಂದಲೇನೋ ಇವರ ಮನೆಯ ದೇವರ ಕೋಣೆಯಲ್ಲೂ ನಿತ್ಯಾನಂದರ ಭಾವಚಿತ್ರವೊಂದಿತ್ತು. ಸಣ್ಣಂದಿನಲ್ಲಿ ಬೆಳಗ್ಯೆ ಮಿಂದು ಮಣಮಣ ಮಂತ್ರಗಳನ್ನ ಹೇಳುತ್ತಾ ಅಲ್ಲಿರುವ ದೇವಾನುದೇವತೆಗಳನ್ನ ಸ್ತುತಿಸುವಾಗˌ ಸಂಜೆ ಶಾಲೆಯಿಂದ ಬಂದಾದ ಮೇಲೆ ಕೈಕಾಲು ತೊಳೆದು ಭಜನೆ ಕಿರುಚುವಾಗ ಆ ಫೊಟೋದಲ್ಲಿದ್ದ ಕೇವಲ ಲಂಗೋಟಿ ಮಾತ್ರ ಧರಿಸಿ ಅಸಡ್ಡಾಳ ಭಂಗಿಯಲ್ಲಿ ಕೂತಿರುವ ವ್ಯಕ್ತಿ ಯಾರು? ಅವರ ಅಕ್ಕಪಕ್ಕದಲ್ಲಿರುವ ರಾಜಾ ರವಿವರ್ಮ ಸೃಷ್ಟಿಯ ದೇವಾನುದೇವತೆಗಳಂತೆ ಅಪಾರ ಆಭರಣ ತೊಟ್ಟು - ರೇಷ್ಮೆ ವಸ್ತ್ರ ಧರಿಸಿ - ದೊಡ್ಡ ಕಿರೀಟ ಹೊತ್ತು - ಚಿತ್ರವಿಚಿತ್ರ ಆಯುಧ ಪಾಣಿಗಳಾಗಿ ತಲೆಯ ಹಿಂದೆ ಒಂದು ಪ್ರಭಾವಲಯ ಬೀರಿಕೊಂಡು ಅದ್ಯಾವುದೋ ಪ್ರಾಣಿಯನ್ನ ತಮ್ಮ ತಮ್ಮ ವಾಹನವನ್ನಾಗಿ ಇರಿಸಿಕೊಂಡು ಗಡದ್ದಾಗಿ ಮಿಂಚುತ್ತಿರದೆ ಇದ್ಯಾರಪ್ಪ ಹೀಗೆ ಕಡುಗಪ್ಪು ಮೈಯಲ್ಲಿ ಬೋಳು ಮಂಡೆಯೊಂದಿಗೆ ಕೋಮಣ ಮಾತ್ರ ತೊಟ್ಟು ಕೂತುಕೊಂಡಿರೋದು ಅನ್ನುವ ವಿಸ್ಮಯ ಅವನಿಗಾಗುತ್ತಿತ್ತು. 


ಭಜನೆ ಮಾಡುವಾಗ ಆ ಚಿತ್ರದಲ್ಲಿರುವವರು ತನ್ನನ್ನ ಕಂಡು ಕಣ್ಣು ಮಿಟುಕಿಸಿದಂತೆ ಅನ್ನಿಸುತ್ತಿತ್ತವನಿಗೆ. ಕುತೂಹಲ ತಾಳಲಾರದೆ ಶ್ರದ್ಧಾ ಭಕ್ತಿಯಿಂದ ಅವರ ಚಿತ್ರಕ್ಕೆ ನಮಿಸುತ್ತಿದ್ದ ಅಜ್ಜನಿಗೆ ಯಾರಜ್ಜ ಅದು? ಅಂದ. ಉತ್ತರವಾಗಿ ಅವರು "ಅಜ್ಜ" ಅಂದರು. ಓಹೋ ಬಹುಶಃ ನಮ್ಮಜ್ಜನ ಅಜ್ಜ ಇರಬೇಕು! ಅಂದುಕೊಂಡಿದ್ದ. ಹೈಸ್ಕೂಲು ದಾಟುವವರೆಗೂ ಅವರು ನಮ್ಮ ಕುಟುಂಬಸ್ಥರೆ. ನಮ್ಮಜ್ಜನ ಅಜ್ಜ ಅನ್ನುವ ಭಾವ ಅವನಲ್ಲಿತ್ತು. ಆದರೆ ಬೇರೆಯವರ ಅಂಗಡಿ - ಹೊಟೆಲ್ಲುಗಳ ಗಲ್ಲಾಪೆಟ್ಟಿಗೆ ಹಾಗೂ ಬಸ್ಸುಗಳ ಬಾನೆಟ್ ಮೇಲೆ ತೂಗು ಬಿಟ್ಟ ಚಿತ್ರಗಳಲ್ಲೂ ಅವರನ್ನ ಕಂಡಾಗ ಮಾತ್ರ ಚೂರು ಕಕ್ಕಾಬಿಕ್ಕಿಯಾದ. ನಮ್ಮಜ್ಜನ ಅಜ್ಜನ ಫೊಟೋ ನೀವ್ಯಾಕೆ ಹಾಕಿಕೊಂಡಿರೋದು ಅಂತ ಒಂದಿಬ್ಬರನ್ನ ಕೇಳಿ ಗೇಲಿಗೊಳಗಾದ ಮೇಲೆ ಅವರ್ಯಾರು ಅವರ ಹೆಸರೇನು ಅನ್ನುವ ಮರ್ಮ ಮೊದಲಸಲ ಅವನಿಗರಿವಾದದ್ದು. ಆದರೆ ಅವನ ಪಾಲಿಗೆ ಮಾತ್ರ ನಿತ್ಯಾನಂದರು ಯಾವತ್ತಿದ್ದರೂ ಅಜ್ಜನ ಅಜ್ಜ ಕೋಲಜ್ಜನೆ. ಅವರನ್ನ ಅವ ಅಜ್ಜ ಅಂತಲೆ ಕರೆಯೋದು.

ಅವರ ಪರಮ ಭಕ್ತರಾಗಿದ್ದ ಅವನಜ್ಜ ಕಾಙಂನಗಾಡಿನ ಈ ನಿತ್ಯಾನಂದರ ಕರ್ಮಭೂಮಿಗೆ ಬಂದಿರಲಾರರು. ಅವರ ಪರವಾಗಿ ಅವರ ಆಸೆ ಈಡೇರಿಸಲು ಮೊಮ್ಮಗನಾಗಿ ಅವ ಅಲ್ಲಿಗೆ ಬಂದಿದ್ದ. ಒಂಥರಾ ಅಜ್ಜನ ಮನೆಗೆ ಬಂದ ಮನಸ್ಥಿತಿಯಲ್ಲೆ ಇದ್ದ. ಎಲ್ಲರೂ ಬೆಟ್ಟ ಇಳಿದು ಹೋದ ಮೇಲೆ ದೇವಸ್ಥಾನದ ಮೆಟ್ಟಿಲ ಮೇಲೆ ಕೂತು ನಿರ್ಜನವಾಗಿದ್ದ ಗುಡಿಯ ಗರ್ಭಗುಡಿಯಲ್ಲಿದ್ದ ನಿತ್ಯಾನಂದರ ಮೂರ್ತಿಯ ಜೊತೆ ಜೀವಂತ ವ್ಯಕ್ತಿಯೊಬ್ಬರೊಂದಿಗೆ ಸಂಭಾಷಿಸುವಂತೆಯೆ ತುಂಬಾ ಹೊತ್ತು ಮಾತನಾಡಿದ. ತನ್ನ ಕಥೆ ವ್ಯಥೆ ತೋಡಿಕೊಂಡು ಹಗುರಾದ. ನಿಮ್ಮನ್ನ ಕಾಣಲು ಬಂದಿರೋದು ನಾನಾದರೂ ಇದು ಸತ್ತಿರೋ ನನ್ನಜ್ಜನ ಆಸೆ ಈಡೇರಿಸಲು. ಇದರಿಂದೇನಾದರೂ ಪುಣ್ಯ ಸಂಚಯವಾಗೋದಾದರೆ ಅದವರಿಗೆ ಆಗಬೇಕು ಅಂತ ನಿತ್ಯಾನಂದರಿಗೆ ತಾಕೀತು ಮಾಡಿದ. ತನಗೂ ಅವರಿಗೂ ಮರುಜನ್ಮ ಬೇಡ ಮುಕ್ತಿ ಸಾಕು ಅಂತ ಬೇಡಿದ. ಅದೂ ಇದೂ ಕಷ್ಟ ಸುಖ ಹೇಳಿಕೊಂಡ. ಮನಸಿಗೆ ಆಪ್ತರಾದವರೆಲ್ಲರನ್ನೂ ನೆನೆಸಿಕೊಂಡು ಅವರಿಗೆ ಶುಭವಾಗಲಿ ಅಂತ ಹಾರೈಸಿದ. ಒಂಥರಾ ಸ್ವಂತ ಅಜ್ಜನ ಎದುರು ಕೂತು ಮನದಾಳದ ನುಡಿಗಳನ್ನೆಲ್ಲಾ ಹಂಚಿಕೊಳ್ಳುವ ಮೊಮ್ಮಗನ ವರ್ತನೆಯಂತೆಯೆ ಸನ್ನಿವೇಶವಿತ್ತು. ಇದೇನು ತೋರಿಕೆಯ ಭಕ್ತಿಭಾವದಿಂದಾದದ್ದಲ್ಲ ಮನಸಿನಾಳದಿಂದಲೆ ಅವರನ್ನ ಅಜ್ಜ ಅಂತಲೆ ನಂಬಿಕೊಂಡು ಬೆಳೆದಿದ್ದವನಿಗೆ ಈಗ ಏಕಾಏಕಿ ಅಸಹಜ ಭಕ್ತಿ ತೋರಲು ಅಸಾಧ್ಯವಾಗಿತ್ತು. ಅವನ ಹಾಗೂ ಅವರ ಮಧ್ಯ ಮೂಡಬಹುದಾಗಿದ್ದು ಕೇವಲ ವಾತ್ಸಲ್ಯಭರಿತ ಪ್ರೀತಿ ಮಾತ್ರ ಬಿಟ್ಟರೆ ಮತ್ತಿನ್ನೇನೂ ಅಲ್ಲ.


*****

ಸಾಮಾನ್ಯವಾಗಿ ಆತ ಯಾವುದೆ ಸ್ವಯಂಘೋಷಿತ ಢೋಂಗಿ ಸಿದ್ಧಪುರುಷರನ್ನ ಬಡಪಟ್ಟಿಗೆ ನಂಬ. ಇತ್ತೀಚೆಗಂತೂ ತಾನು ಪರಮಹಂಸ ಎಂದು ಬೋರ್ಡು ಹಾಕಿಕೊಳ್ಳುವ ಪರಮಹಿಂಸರˌ ಅವಧೂತತನದ ಓನಾಮ ಗೊತ್ತಿಲ್ಲದಿದ್ದರೂ ಅಲ್ಲಷ್ಟು ಇಲ್ಲಷ್ಟು ಓದಿ ತಿಳಿದ ಸರಕುಗಳನ್ನೆ ಮಾರಿಕೊಂಡು ತನ್ನನ್ನ ತಾನು "ಅವಧೂತ" ಅಂತ ಕರೆದುಕೊಳ್ಳುವ ಖದೀಮ ಅವಭೂತಗಳನ್ನ ಕತ್ತಿನ ಪಟ್ಟಿ ಹಿಡಿದು "ಬಡ್ಡಿಮಗನೆ ಮೊದಲು ಸರಿಯಾಗಿ 'ಅವಧೂತ' ಅಂತ ತಪ್ಪಿಲ್ಲದೆ ಉಚ್ಛರಣೆ ಕಲಿˌ ಆ ಮೇಲೆ ಈ ಅವಧೂರ್ತತನದ ನೌಟಂಕಿ ಮಾಡುವಿಯಂತೆ!" ಅಂತ ತರಡಿಗೆ ಎರಡು ತದುಕಿ ಹೇಳಬೇಕು ಅಂತ ಅವನಿಗೆ ಅನಿಸುವುದಿದೆ. 


ಧರ್ಮ ಅನ್ನುವುದು ಒಂದು ಪ್ರಬಲ ನಶೆ ಅನ್ನುವುದನ್ನ ಅರಿತಿರುವ ಈ ಅತಿಬುದ್ಧಿವಂತರು ಹೀಗೆಲ್ಲಾ ತಾರಾತಿಗಡಿ ಮಾಡಿ ಸಮಾಜಕ್ಕೆ ಮಕಮಲ್ಲಿನ ಟೋಪಿ ತೊಡಿಸಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿರೋದು ಮಾತ್ರ ದುರಂತ. ನಿಜವಾಗಿ ಒದೆಯಬೇಕಿರೋದು ಅಂತಹ ಸದಾರಮೆ ನಾಟಕದ ಕಳ್ಳರನ್ನಲ್ಲˌ ಬದಲಿಗೆ ಅಂತಹ ಕಿಲಾಡಿ ಖದೀಮರನ್ನ ನಂಬುವ ಮಡ್ಡಮಂಡೆಯ ಮಳ್ಳರನ್ನ. ಇವರಿಗೆ ಗತಿಯಿಲ್ಲ ಅವರಿಗೆ ಮತಿಯಿಲ್ಲ. ಸರಿಯಾದ ಜೋಡಿ.

( ಇನ್ನೂ ಇದೆ.)


https://youtu.be/FCGj7TEiZEA

No comments: