19 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೭.👊




ಆದರೂ ಬೆಳ್ಳಂಬೆಳಗ್ಯೆಯೆ ತನ್ನ ಮೇಲಾದ ಆ ಬಲವಂತದ ಔಷಧ ಪ್ರಾಶನದ ದೌರ್ಜನ್ಯದ ವಿರುದ್ಧ ಇನ್ನೂ ಪಿಸುರು ಕೂಡ ತೆಗೆಯದ ಒಂದೆ ಕಣ್ಣಿನಲ್ಲಿ ಕಣ್ಣೀರು ಹಾಕುತ್ತಿದ್ದಂತೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ "ಭೂಲೆ ಬಿಸರೆ ಗೀತ್" ಮಾಲಿಕೆಯಲ್ಲಿ "ಲಗ್ ಜಾ ಗಲೇ...." ಹರಿದು ಬಂತು ನೋಡಿ ಅವನಿಗೆ ಅರಿವಿಲ್ಲದಂತೆ ಅವನ ಭಾವದ ಕಟ್ಟೆ ಒಡೆದು ಹರಿಯಲು ತಯಾರಾಗಿ ಬಿಟ್ಟಂತಾಯಿತು. ಮಲಗುವ ಕೋಣೆಯಲ್ಲಿದ್ದ ರೇಡಿಯೋದಿಂದ ಸುಸ್ಪಷ್ಟವಾಗಿ ಕೇಳುತ್ತಿದ್ದ ಆ ಗಂಧರ್ವ ರಾಗವನ್ನ ಆಲಿಸುತ್ತಾ ಕಲ್ಲಾದವನಂತೆ ಕಡೆಯುವ ಕಲ್ಲಿನ ಪಕ್ಕದ ಮಣೆಯ ಮೇಲೆಯೆ ಗೋಡೆಗೊರಗಿ ಕುಕ್ಕರಿಸಿದ. 

ರೇಡಿಯೋದ ಸಕಲೆಂಟು ಗಲಭೆಗಳ ಮಧ್ಯೆ ಅಷ್ಟಿಷ್ಟು ಕೇಳುತ್ತಿದ್ದ ಹಾಡು ಅಷ್ಟು ಬೇಗ ಮುಗಿದಾಗ ಮೊದಲಬಾರಿಗೆ ಹಾಡೊಂದು ಬಹಳ ಬೇಗ ಮುಗಿದ ಕಾರಣಕ್ಕೆ ತೀವೃ ನಿರಾಸೆ ಅನುಭವಿಸಿದ. ಕಣ್ಣಿಂದ ಕಂಬನಿ ಹರಿಯುತ್ತಿತ್ತು. ಅದನ್ನ ನೋಡಿದ ಎಲ್ಲರೂ ಔಷಧಿ ಕುಡಿಸಿದ್ದಕ್ಕೆ ನಾಟಕ ಮಾಡ್ತಿದ್ದಾನೆ ಅನ್ನೋ ತೀರ್ಪು ಕೊಟ್ಟರು. ಆದರೆ ಗರ ಬಡಿದಂತೆ ಕೂತು ಕಣ್ಣೀರಿಡಲು ವಿವರಿಸಲಾಗದ ಕಾರಣವೂ ಒಂದಿರಬಹುದುˌ ಸಂಕಟಕ್ಕಷ್ಟೆ ಅಲ್ಲ ಸಂತಸ ಹೆಚ್ಚಾದಾಗಲೂ ಬರೋದು ಕೇವಲ ಕಣ್ಣೀರೆ ಅನ್ನುವ ಕಲ್ಪನೆ ಸ್ವತಃ ಅವನಿಗೇನೆ ಅರಿವಿದ್ದಿರದ ಪ್ರಾಯ ಅದು. ಆ ಮಾನಸಿಕ ಸ್ಥಿತಿಯನ್ನ ಸರಿಯಾದ ಪದಗಳಲ್ಲಿ ಹಿಡಿದು ಅರ್ಥಪೂರ್ಣ ವಾಕ್ಯವಾಗಿಸಿ ವಿವರಿಸಿ ಹೇಳುವಷ್ಟು ವ್ಯಾಕರಣ ಬದ್ಧ ಕನ್ನಡವೂ ಅವನಿಗಿನ್ನೂ ಬರುತ್ತಿರಲಿಲ್ಲ. 

ಒಂದು ವೇಳೆ ಆದ ಆ ದೈವೀಕ ಅನುಭವವನ್ನು ಬರಿಮಾತಿನಲ್ಲೇನಾದರೂ ಅವನು ವಿವರಿಸಲು ಶಕ್ತನಾಗಿದ್ದರೆˌ ತಾವು ಸರಿಯಾಗಿ ಕೇಳದೆ ಕಳೆದೆ ಹೋದ ಆ ಅಮೂಲ್ಯ ಹಾಡನ್ನ ಕೇಳದೆ ಹೋಗಿ ತಮಗಾದ ತುಂಬಲಾರದ ನಷ್ಟಕ್ಕೆ ಮನೆ-ಮಂದಿಯೆಲ್ಲಾ ಅಪಾರ ದುಃಖ ಪಡೋದು ಖಾತ್ರಿಯಿತ್ತು! ಅನ್ನುವಷ್ಟರ ಮಟ್ಟಿಗೆ ಅದರ ಆಲಾಪನೆಯ ಮೋಡಿಗೆ ಅವನು ಸಿಕ್ಕಿಹಾಕಿಕೊಂಡು ಬಿಟ್ಟಿದ್ದ. ಹಾಡಿನ ಮುಕ್ತಾಯದಲ್ಲಿ ಗದ್ದಲದ ಮಧ್ಯೆ ಮಧ್ಯೆ ಉದ್ಘೋಷಕಿ ಮಂಗೇಷ್ಕರ್... ಅಲಿ ಖಾನ್ˌ ಮದನ್ ಮೋಹನ್ ಅಂದದ್ದು ಮೊತ್ತಮೊದಲ ಸಲ ಕೇಳಿಸಿಕೊಂಡ. ಅಂದು ಆ ಹಾಡನ್ನ ಮೊತ್ತಮೊದಲ ಸಲ ಕೇಳಿಸಿಕೊಂಡು ಆದ ಅನುಭೂತಿಯನ್ನ ಇಂದು ಅಷ್ಟೆ ಜೀವಂತವಾಗಿ ವಿವರಿಸಲು ಅವನಲ್ಲಿ ಸೂಕ್ತ ಪದಗಳಿಲ್ಲ.

ಬೆಳೆಯುತ್ತಾ ಸಂಗೀತದಾಸಕ್ತಿಯೂ ಹೆಚ್ಚಿ ಒಂದು ಪಾಕೆಟ್ ರೇಡಿಯೋವನ್ನ ರಜೆಯ ಹೊತ್ತಲ್ಲಿ ಮನೆ ಮನೆಗೆ ಪೇಪರ್ ಹಾಕಿ ಸಂಪಾದಿಸಿದ್ದ ತನ್ನದೆ ದುಡಿಮೆಯಿಂದ ಖರೀದಿಸಿದ. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಂತೂ ತಂಪಾದ ರಾತ್ರಿ ಹಾಗೂ ಬೆಳ್ಳಂಬೆಳಗ್ಯೆ ಮಾತ್ರ ಸುಸ್ಪಷ್ಟವಾಗಿ ಅದರಿಂದ ಪ್ರಸಾರವಾಗುತ್ತಿದ್ದ ಮುಂಬೈ ವಿವಿಧಭಾರತಿ ಹಾಗೂ ಸಿಲೋನು ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದ ಹಳೆಯ ಹಿಂದಿ ಚಿತ್ರಗೀತೆಗಳನ್ನ ಅದಕ್ಕೊಂದು ಕಿವಿಗಾಪು ಸಿಕ್ಕಿಸಿಕೊಂಡು ಕೇಳುವ ಚಟ ಹತ್ತಿಸಿಕೊಂಡ.

ಆಗಿದ್ದ ಏಕೈಕ ದೆಹಲಿ ದೂರದರ್ಶನದ ಕಾರ್ಯಕ್ರಮಗಳನ್ನ ನೋಡಿಯೋ - ಹಿಂದಿ ಸಿನೆಮಾಗಳನ್ನ ವೀಕ್ಷಿಸಿಯೋ - ಇಲ್ಲಾ ಥರೇವಾರಿ ಹಿಂದಿ ಹಾಡುಗಳನ್ನ ಆಲಿಸಿಯೋ - ಅಥವಾ ಶಾಲೆಯಲ್ಲಿ ಹಿಂದಿಯೂ ಒಂದು ಭಾಷೆಯಾಗಿ ಕಲಿಸಲಾರಂಭಿಸಿದ್ದ ಕಾರಣದಿಂದಲೋ ಹರುಕು ಮುರುಕು ಹಿಂದಿ ಅರ್ಥವಾಗುತ್ತಿತ್ತು.  ಭಾವಪೂರ್ಣವಾಗಿರುವ ಸಾಹಿತ್ಯವಿರುವ - ಲಾಲಿತ್ಯಪೂರ್ಣವಾದ ಸರಳವೆನಿಸುವ ರಾಗ ಸಂಯೋಜಿಸಲಾಗಿರುವ ಹಾಗೂ ಸುಶ್ರಾವ್ಯವಾಗಿ ಗಾಯಕರು ಹಾಡಿ ಜೀವ ತುಂಬಿರುವ ಚಿತ್ರಗೀತೆಗಳಿಗೆ ಅವನಿಗೇನೆ ಅರಿವಾಗದಂತೆ ಅವನ ಮನ ಸೋಲಲಾರಂಭಿಸಿದ್ದ ಕಾಲ ಅದಾಗಿತ್ತು. ಚಿತ್ರಗೀತೆಗಳು ಪ್ರಸಾರವಾದ ನಂತರ ಯಾರ ಸಂಗೀತ? ಯಾರು ಬರೆದ ಹಾಡದು? ಹಾಡಿದ್ದವರ್ಯಾರು? ಅನ್ನುವ ಮಾಹಿತಿಯನ್ನ ಗಮನವಿಟ್ಟು ಆಲಿಸುವ ಪ್ರವೃತ್ತಿ ಬೆಳೆಸಿಕೊಂಡ. ಈಗಿನ ಏಳು ತಿಂಗಳಿಗೆ ಅಕಾಲಿಕವಾಗಿ ಹುಟ್ಟಿರೋ ಎಫ್ ಎಂ ವಾಹಿನಿಗಳ ಆರ್ ಜೆಗಳಂತಲ್ಲದೆˌ ಆಗಿನ ಕಾರ್ಯಕ್ರಮ ನಿರೂಪಕರೂ ಸಹ ಸ್ಪಷ್ಟವಾಗಿ ಇವೆಲ್ಲ ವಿವರಗಳ ಸಹಿತ ಕೆಲವೊಮ್ಮೆ ಆ ಚಿತ್ರ ತಯಾರಾದ ವರ್ಷˌ ನಿರ್ದೇಶಕರ ಹೆಸರು ಹಾಗೂ ಅದರಲ್ಲಿ ಅಭಿನಯಿಸಿದ್ದ ನಟ - ನಟಿಯರ ಹೆಸರನ್ನೂ ಉದ್ಘೋಷಿಸುವ ಕ್ರಮವಿತ್ತು. ಅವರ ಕೃಪೆಯಿಂದ ಇವನಿಗೆ ಮದನ ಮೋಹನ ಸಾಹೇಬರ ಹಾಡುಗಳು ಒಂದೊಂದಾಗಿ ಪರಿಚಯವಾಗುತ್ತಾ ಬಂದವು.

"ಆಪ್ ಕೇ ನಜ಼ರೋನೆ ಸಮಜಾ಼" 
"ನಾ ತುಮ್ ಬೇವಫಾ ಹೋ"
"ವಹಂ ಭೂಲೀ ದಾಸ್ತಾನ್"
"ತೇರೀ ಆಂಖೋನ್ ಕೇ ಸಿವಾ"
"ಹೈಂ ತೇರಾ ಸಾಥ್ ಮೇರೀ ವಫಾ"
"ತೂ ಜಹಾ ಜಹಾ ಚಲೇಗಾ ಮೇರಾ ಸಾಯಾ"
"ರುಖೇ ರುಖೇ ಸೇ ಕದಮ್"
"ನೈನಾ ಭರಸೇ ರಿಮಜಿಮ್ ರಿಮಜಿಮ್"
"ದಿಲ್ ಡೂಂಢ್ ಥಾ ಹೈಂ"
"ಭೈಯಾ ನಾ ಧರೋ"
"ದೋ ದಿಲ್ ಟೂಠೇ ದೋ ದಿಲ್ ಹಾರೇ"
"ಜಾನಾ ಥಾ ಹಮ್ ಸೇ ದೂರ್"
"ಮಿಲೋ ನಾ ತುಮ್ ಥೋ ಹಮ್ ಗಬರಾಏ"
"ಯೂಂ ಹಸರತೋಂಕೇ ಧಾಗ್"
"ತುಮ್ ಜೋ ಮಿಲಗಏ ಹೋ"
"ಅಗರ್ ಮುಝ್ ಸೇ ಮೊಹಬ್ಬತ್ ಹೈಂ"
"ಹೋಕೇ ಮಜಬೂರ್ ಮುಝೇ"
"ಫಿರ್ ವಹೀಂ ಶಾಮ್"
"ಕರ್ ಚಲೇಂ ಹಮ್ ಫಿದಾ" ಹೀಗೆ ಸಕಲ ಭಾವಾಭಿವ್ಯಕ್ತಿಗಳಿಗೂ ಹೊಂದಿಸಿ ಅವರು ಸಂಯೋಜಿಸಿದ ಗೀತೆಗಳನ್ನ ಆಗಾಗ ಆಲಿಸುವ ಸಂದರ್ಭ ದೊರೆತಾಗಲೆಲ್ಲ ಅದೇನೋ ಅರಿವಿಲ್ಲದ ಸುಖ ಮನಸಿನ ಮನೆಯ ಕದ ತಟ್ಟಿದಂತಾಗುವ ನೆಮ್ಮದಿಯನ್ನ ಅನುಭವಿಸಿದ್ದನವನು. ಹಾಡಿನ ಮೊದಲಿಗೋ ಇಲ್ಲಾ ಕೊನೆಗೋ ಅವರ ಹೆಸರನ್ನ ಉದ್ಘೋಷಿಸಿದಾಗ ಅದು ಅಲ್ಲಿ ಹೇಳುವ ಮೊದಲೆ ತಾನು ಊಹಿಸಿದ್ದಕ್ಕೆ ಒಂಥರಾ ಪುಳಕವಾಗುತ್ತಿತ್ತು.

ರೇಡಿಯೋದ ಕಾರ್ಯಕ್ರಮಗಳ ಕೃಪೆಯಿಂದಲೆ ಅವರು ಬಾಗ್ದಾದಲ್ಲಿ ಹುಟ್ಟಿದ್ದ ಭಾರತೀಯˌ ತಾನು ಹುಟ್ಟೋಕೆ ಏಳು ವರ್ಷಗಳ ಮೊದಲೆ ಇಲ್ಲವಾಗಿದ್ದಾರೆˌ ಅವರ ಸಂಯೋಜನೆಯ ಮನಮೋಹಕ ಶೈಲಿಗೆ ಹಾಗೂ ಅವರ ಹಾಡುಗಳಲ್ಲಿನ ಅರ್ಥಪೂರ್ಣ ಸಾಹಿತ್ಯಕ್ಕೆ ಅವರನ್ನ "ಗಜ಼ಲ್ ಕಾ ಬಾದಶಾಹ್" ಅನ್ನುತ್ತಾರೆ ಅನ್ನುವ ಹೊಸ ಹೊಸ ಮಾಹಿತಿಗಳು ಅವನಿಗೆ ಸಿಗುತ್ತಾ ಹೋದವು. ಜೀವನದಲ್ಲಿ ಒಂದೆ ಒಂದು ಸಲವಾದರೂ ಅವರನ್ನ ಭೇಟಿಯಾಗಿ ತನ್ನ ಅಭಿಮಾನವನ್ನ ಹೇಳಿಕೊಳ್ಳಬೇಕು ಅನ್ನುವ ಆಸೆ ಈಡೇರಲಾಗದ ನಿರಾಸೆಯಿಂದ ಹಳಹಳಿಸಿದ. ತಾನು ಅವರ ಅಭಿಮಾನಿ ಎಂದು ಎದೆತಟ್ಟಿ ಹೇಳಿಕೊಳ್ಳಲು ಅವನು ಹೆಮ್ಮೆ ಪಡುವಂತಹ ಕಾಲ ಕೂಡ ಇತ್ತೀಚೆಗಷ್ಟೆ ಬಂದಿತ್ತು.

ಅವನು ಶಾಶ್ವತವಾಗಿ ಈ ಮಹಾನಗರಿಯ ಮಡಿಲಲ್ಲಿ ಸೇರಿ ಹೋಗಿ ಅದಾಗಲೆ ಐದು ವರ್ಷಗಳು ಸರಿದಿದ್ದವು. ಆಗಿನ್ನೂ ಚುಮುಚುಮು ಚಳಿ ಬೆಂಗಳೂರಲ್ಲಿ ಆರಂಭವಾಗಿತ್ತಷ್ಟೆˌ ಆ ತಂಪು ಹೊತ್ತಿನಲ್ಲಿ ತೆರೆಕಂಡಿದ್ದ ಚಿತ್ರ "ವೀರ್ - ಝಾ಼ರಾ"ದಲ್ಲಿ ಅವರ ಸಂಗೀತ ಸಂಯೋಜನೆ ಇತ್ತು ಅನ್ನೋದಷ್ಟೆ ಸಾಕಿತ್ತು ಅವನ ಕುತೂಹಲಕ್ಕೆ ಕೊಂಬು ಮೂಡಿಸಲು. ಅದಾಗಲೆ ಬಿಡುಗಡೆಯಾಗಿದ್ದ ಧ್ವನಿಸುರುಳಿ ಕೇಳಿ ಅದೆಷ್ಟೋ ಸಲ ಹಾಡುಗಳನ್ನ ಮನದಣಿಯೆ ಕೇಳಿ ಖುಷಿ ಪಟ್ಟಿದ್ದ. 

ಮದನ ಮೋಹನ ಸಾಬರು ಕಾಲವಾದ ಮೂರು ದಶಕಗಳ ನಂತರ ಉಪಯೋಗಿಸಲಾದ ಅವರ ಆತನಕ ಕೇಳಿರದಿದ್ದ ಹಾಡುಗಳನ್ನ ಕೇಳಿಯೆ ನಿರ್ದೇಶಕ ಯಶ್ ಛೋಪ್ರಾ ಸಿನೆಮಾದ ಕಥಾಹಂದರ ಹೊಲೆದರು ಅನ್ನುವ ಮಾಹಿತಿ ಸಿನೆಮಾ ಪತ್ರಿಕೆಯೊಂದರಲ್ಲಿ ಓದಿ ಒಂಥರಾ ಆಸಕ್ತಿ ಹುಟ್ಟಿತ್ತು. ಸಿನೆಮಾ ನೋಡಿ ಸಂಭ್ರಮಿಸಿದನಾದರೂˌ ಧ್ವನಿಸುರುಳಿಯಲ್ಲಿದ್ದ ಎರಡು ಹಾಡುಗಳು ಚಿತ್ರದಲ್ಲಿ ಕಾಣೆಯಾಗಿದ್ದಕ್ಕೆ ಬಹಳ ಬೇಜಾರಾದ. ಮೂವತ್ತು ವರ್ಷ ಹಳೆಯ ರಾಗಸಂಯೋಜನೆಗಳೂ ಸಹ ಕೊಂಚವೂ ಹಳೆಯದೆನಿಸದಷ್ಟು ಸಕಾಲಿಕವಾಗಿದ್ದವು. ಆ ಸಾಲಿನ ಸಿನೆಮಾ ಸಂಗೀತಕ್ಕಾಗಿನ ಹಲವಾರು ಪ್ರಶಸ್ತಿಗಳನ್ನ "ವೀರ್ - ಝಾ಼ರಾ" ಗೆದ್ದುಕೊಂಡಿದ್ದು ಅವನಿಗೆ ಯಾವ ಅಚ್ಚರಿಯನ್ನೂ ಹುಟ್ಟಿಸಲಿಲ್ಲ. 


ಶ್ರದ್ಧೆಯಿಟ್ಟು ಹೃದಯಾಂತರಾಳದಿಂದ ಹುಟ್ಟುವ ರಾಗಗಳು ಯಾವತ್ತಿಗೂ ಅಮರ ಅನ್ನುವುದಕ್ಕೆ ಇದೆ ತಕ್ಕ ಉದಾಹರಣೆ. ಯಾವುದೆ ಕೆಲಸಕ್ಕೂ ಅನ್ವಯಿಸಿ ಹೇಳಬಹುದಾದ ಈ ಮಾತುಗಳುˌ ಸಂಗೀತಕ್ಕೆ ಹೆಚ್ಚು ಹೊಂದಿಕೊಳ್ಳುತ್ತದೆ.

( ಇನ್ನೂ ಇದೆ.)



https://youtu.be/VZiL9sPXA-Q

No comments: