25 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೪.👊


ಭಾರತದ ಭೂಪಟದಲ್ಲಿದ್ದರೂ ಸಹ ತಾನು ಭೂಭಾಗವನ್ನೆ ಹಂಚಿಕೊಳ್ಳದಿರೋ ಅನೇಕ ವಿದೇಶಗಳೊಂದಿಗೆ ಕೇರಳಕ್ಕೆ ಇರುವಷ್ಟು ಹೊಕ್ಕು ಬಳಕೆಯ ಸಂಬಂಧ ಸ್ವತಃ ಭಾರತದ್ದೆ ಇನ್ಯಾವುದೆ ಪ್ರದೇಶಗಳೊಂದಿಗೆ ಕೇರಳಕ್ಕೆ ಇರದಿರುವುದಕ್ಕೂ ಸಹ ಕಾರಣಗಳಿವೆ. ಒಂದು ದೃಷ್ಟಿಯಿಂದ ನೋಡಿದಾಗ ಕೇರಳದ ಪಾಲಿಗಿದು ವರದಾನದಂತೆ ಪರಿಣಮಿಸಿದ್ದರೆˌ ಇನ್ನೊಂದು ದೃಷ್ಟಿಯಿಂದ ತನ್ನದೆ ಈ ಗೆಲುವಿಗೆ ತಾನೆ ಬಲಿಪಶುವಾದ ಕರ್ಮ ಕೇರಳದ್ದು. 


ಮೊದಲಿನಿಂದಲೂ ಸಾಂಸ್ಕೃತಿಕವಾಗಿ ಮಲಯಾಳಿಗಳದ್ದು ಹೊರ ಜಗತ್ತಿಗೆ ಮುಚ್ಚಿದ ಪ್ರಪಂಚ. ದಟ್ಟ ಕಾಡುˌ ಅಡಿಗಡಿಗೆ ಎದುರಾಗುವ ನದಿ ನದ ಜಲಧಾರೆಗಳು ಭಾರತದ ಮುಖ್ಯಭೂಮಿಯ ಇತರ ರಾಜ್ಯಗಳಿಂದ ಇವರನ್ನ ಪ್ರತ್ಯೇಕಿಸಿಟ್ಟಿದ್ದರೆˌ ಪಶ್ಚಿಮಕ್ಕೆ ತೆರೆದುಕೊಂಡ ವಿಶಾಲ ಕಡಲ ತೀರ ಇವರನ್ನ ವಿದೇಶಿಗರ ಪಾಲಿಗೆ ಸದಾ ಬಾಗಿಲು ತೆರೆದಿಟ್ಟ ವಿಶಾಲ ಮನೆಯನ್ನಾಗಿಸಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿˌ ಜಗತ್ತಿನಲ್ಲಿ ಇವತ್ತು ಆಚರಣೆಯಲ್ಲಿರುವ ಸಕಲ ಧಾರ್ಮಿಕ ನಂಬಿಕೆಯವರೂ ಇಂದಿನ ಕೇರಳದಲ್ಲಿದ್ದಾರೆ! 

ಬೆಜೈಂಟೆನ್ ಗ್ರೀಕ್ - ರೋಮನ್ನರ ಕಾಲದಿಂದಲೂ ಕೇರಳದ ಆರ್ಥಿಕ ವ್ಯವಹಾರ ವಿದೇಶಿಯರೊಂದಿಗೆ ಕುದುರಿದೆ. ಅರೆ ಮಲೆಯಾಳಿ - ಅರೆ ಅರಬ ಸಿರಿಯನ್ ಅಥವಾ ಅರೆ ಮಲಯಾಳಿ - ಅರೆ ಚೀನಾ ತಳಿಯ ಸಮುದಾಯಗಳನ್ನ ಬಹುಶಃ ಕೇರಳದಲ್ಲಿ ಮಾತ್ರ ಕಾಣಲು ಸಾಧ್ಯ. ಸ್ವಭಾವತಃ ವ್ಯವಹಾರಸ್ಥನಾದ ಮಲಯಾಳಿ ತನ್ನ ವ್ಯಾಪಾರಿ ಉದ್ದೇಶದಿಂದ ಬೆಳೆಸಿದ ವಿದೇಶಿಗರೊಂದಿಗಿನ ಸಂಬಂಧಗಳು ಕ್ರಮೇಣ ವಾಣಿಜ್ಯ ವ್ಯಾವಹಾರಿಕ ಕಾರಣಗಳನ್ನ ಮೀರಿ ವೈವಾಹಿಕತೆಗೂ ತಿರುಗಿ ಅನೇಕ ಮಿಶ್ರತಳಿ ಮಲಯಾಳಿ ಸಮುದಾಯಗಳು ಕಾಲಾಂತರದಲ್ಲಿ ಇಲ್ಲಿ ಅಸ್ತಿತ್ವಕ್ಕೆ ಬಂದಿವೆ.


ಹೀಗಾಗಿ ಎಂದಿಗೂ ಮಲಯಾಳಿಗಳ ಪಾಲಿಗೆ ಸಂಸ್ಕೃತಿ ಅನ್ನೋದು ಉತ್ತರ ಭಾರತೀಯರಿಂದ ಪ್ರತಿಪಾದಿಸಲಾಗಿರುವಂತೆ ಅಥವಾ ಅದರ ಪ್ರಭಾವಕ್ಕೆ ಸಿಲುಕಿರುವ ನೆರೆಯ ಎರಡು ನಾಡುಗಳಂತೆ ಏಕತ್ರ ವಾದ ಅಂದರೆ ಮೋನೋಲಿಥಿಕ್ ಅಲ್ಲ. ಅದು ಎಲ್ಲಾ ಮಲಯಾಳಿಗಳೂ ಒಂದೆ ಬಗೆಯ ಆಚಾರ ವಿಚಾರ ಆಹಾರ ಜೀವನ ಪದ್ಧತಿಗಳನ್ನ ಮಾತ್ರ ಅನುಸರಿಸಿ ಬಾಳಿ ಕಟ್ಟಿದ ಕೈರಳಿ ಸಮಾಜವಲ್ಲ. ಅದೆಲ್ಲದರಲ್ಲಿ ಮನೆ ಮನೆಗಳ ಮಟ್ಟಿಗೆ ಸಾಕಷ್ಟು ವೈವಿಧ್ಯತೆಯನ್ನ ಉಳಿಸಿಕೊಂಡೂ ಸಹ ಒಂದು ಭಾಷಾ ಸಮುದಾಯವಾಗಿ ಒಂದಾಗಿರೋದಕ್ಕೆ ಕೊಟ್ಟ ಪ್ರಾಮುಖ್ಯತೆಯೆ ಮಲಯಾಳಿಗಳ ಇಂದಿನ ಕೇರಳದ ಸಾಮಾಜಿಕ ವ್ಯವಸ್ಥೆಯನ್ನ ರೂಪಿಸಿದೆ. 

ಉತ್ತರ ಭಾರತೀಯರ ಹಿಂದೂವಾದ ಮಲಯಾಳಿಗಳಿಗೆ ಎಂದೆಂದಿಗೂ "ಮನಸಿಲಾಯಿಲ್ಲ". ಅದು ಅವರಿಗರ್ಥವಾಗದ ಕಾರಣದಿಂದಲೆ ಕೈರಳಿ ಸಮಾಜ ಬಹುಶಃ ಸ್ವಸ್ಥವಾಗಿದೆ. ಆಗಾಗ ಮಲಬಾರು ಪ್ರಾಂತ್ಯದ ಧಾರ್ಮಿಕ ಮತಭ್ರಾಂತ ಪೊನ್ನಾನಿ ಮೂಲದ ಮುಸ್ಲಿಂ ಮೂಲಭೂತವಾದದ ತರದ್ದು ತನ್ನ ಮಾನಸಿಕ ಅಸ್ವಸ್ಥ್ಯತೆಯನ್ನ ಈಗೀಗ ಬರಗೆಟ್ಟ ಇ"ಸ್ಲಂ"ಮಿಕ್ ವಿತಂಡವಾದಗಳ ಮೂಲಕ ಕೇರಳದ ಸಾಮಾಜಿಕತೆಯಲ್ಲಿ ತೂರಿಸಲು ಪರದಾಡುತ್ತಿರೋದು ನಿಜವಾದರೂˌ ಇದಕ್ಕೂ ಏಕರೂಪದ ಹಿಂದೂ - ಹಿಂದುತ್ವಕ್ಕಾದ ದುರ್ಗತಿಯನ್ನೆ ಮಲಯಾಳಿಗಳು ಕರುಣಿಸಲಿದ್ದಾರೆ. 

ಸರಿಯಾದ ಉದಾಹರಣೆಗಳನ್ನ ಕೊಟ್ಟು ಇದನ್ನ ವಿವರಿಸೋದಾದರೆ "ಓಣಂ"ನಷ್ಟು ಸುಲಭವಾದ ವಿಷಯ ಇನ್ನೊಂದಿರಲಿಕ್ಕಿಲ್ಲ. ಈ ಓಣಂ ನಿಜಾರ್ಥದಲ್ಲಿ ಇಲ್ಲಿ ನಾಡ ಹಬ್ಬ. ಮಾವೇಲಿ ಎಂದು ಮಲಯಾಳಿಗಳು ಆದರಿಸಿ ಕರೆಯುವ ಮಹಾಬಲಿಯನ್ನ ಇಲ್ಲಿ ಮತಾತೀತವಾಗಿ ಪ್ರತಿಯೊಬ್ಬರೂ ಓಣಂ ಕಾಲದಲ್ಲಿ ತಮ್ಮ ತಮ್ಮ ಮನೆಗೆ ಆಹ್ವಾನಿಸಿ ಹಬ್ಬ ಮಾಡುತ್ತಾರೆ. 


ಮಾವೇಲಿಯ ಪ್ರತಿನಿಧಿಯಾದ "ಓಣಂ ಪೊಟ್ಟಾನ್" ಅಂದರೆ ಕಿವುಡ ಮೂಕನಾಗಿರೋ ಮಹಾಬಲಿಯ ದೂತ ಹಬ್ಬ ಸಾರಲು ಹಿಂದೂˌ ಮುಸ್ಲಿಂˌ ಕ್ರೈಸ್ತ ಯಹೂದ್ಯ ಅನ್ನುವ ಬೇಧವನ್ನೆಣಿಸದೆ ಪ್ರತಿಯೊಬ್ಬರ ಹಿತ್ತಲನ್ನೂ ಹೊಕ್ಕು ಅವರ ಅಂಗಳಕ್ಕಿಳಿದು ಅವರಿತ್ತ ಪಡಿ ಪಡೆದು ಅದರಿಂದಲೆ ಕೆಲವು ಕಾಳುಗಳನ್ನ ಸಮೃದ್ಧಿಯ ಸಂಕೇತವಾಗಿ ಅವರಿಗೇನೆ ಹಿಂದಿರುಗಿಸಿˌ ಅವನಿತ್ತ ಹೂ ಪ್ರಸಾದವನ್ನ ಅವರೂ ಸ್ವೀಕರಿಸಿ ಒಂದಾಗಿ ಹಬ್ಬದ ಆಚರಣೆ ಆರಂಭವಾಗುತ್ತದೆ. ಹೀಗೆ ಮನೆ ಮನೆಗೂ ಬರುವ ಓಣ ಪೊಟ್ಟಾನ್ನನ್ನ ಕಾಲುದೀಪ ಹೊತ್ತಿಸಿದ ಬೆಳಕಲ್ಲಿ ಕಡುಗಪ್ಫು ಮುಂಗಾರು ಮಳೆ ಮೋಡಗಳ ಕತ್ತಲ ಹಗಲಲ್ಲಿ ಪ್ರತಿಯೊಬ್ಬ ಮಲಯಾಳಿಯೂ ಭಯಭಕ್ತಿಯಿಂದ ಎದುರುಗೊಳ್ಳುತ್ತಾನೆ. 


ಈಗೀಗ ಕೇವಲ ಸಸ್ಯಾಹಾರಿ ಓಣಂ ಸದ್ಯವೆ ಅತಿರಂಜಿತ ಪ್ರಚಾರ ಗಿಟ್ಟಿಸುತ್ತಿರೋದು ಸತ್ಯವಾದರೂ ಅದೆಲ್ಲಾ ವ್ಯಾಪಾರಿ ತಂತ್ರಗಳಷ್ಟೆ. ಮಲೆಯಾಳಿಗಳ ಮನೆ ಮನೆಗಳಲ್ಲಿ ತಯಾರಾಗುವ ಓಣಂ ಸದ್ಯದಲ್ಲಿ ಅವಿಯಿಲ್ - ಅಡೈ ಪ್ರಥಮನ್ - ಒತ್ತೆ ಕೊಳಂಬು - ನೈ ಅಪ್ಪಂ ಇರುವಂತೆಯೆ ಮೀನ್ ವೆವಿಚ್ಚದು - ಕೋಳಿ ಕರಿ - ಆಟ್ಟು ಉಲರ್ತಿಯದು - ಬೀಫ್ ಪಿಡಿ - ಪಂದಿ ಪುಲಿಸ್ಸೆರಿ - ಓಲನ್ - ಕಾಳನ್ - ಪಾಲ್ ಪಾಯಸಂ ಇವೆಲ್ಲವೂ ಇವೆ. ಅವರವರ ಮನೆಯ ಆಹಾರ ಪದ್ಧತಿಯಂತೆ ಅವರವರು ಕೇರಳದಲ್ಲಿ ಬಗೆಬಗೆಯ ಆಹಾರ ವೈವಿಧ್ಯಗಳನ್ನ ಮಾಡಿ ಸಂತೋಷದಿಂದ ಓಣಂ ಆಚರಿಸುತ್ತಾರೆ ಅಂದರೆ ಉತ್ತರ ಭಾರತೀಯರನ್ನ ಬಿಡಿ ಹಿಂದೂ ಹಬ್ಬವೆಂದರೆ ಅಂದು ಸಸ್ಯಾಹಾರ ಮಾತ್ರ ಪ್ರಧಾನ ಎಂದೆ ಬಲವಾಗಿ ನಂಬಿರುವ ಕನ್ನಡಿಗರಿಗೂ ಒಂಥರಾ ಸಾಂಸ್ಕೃತಿಕ ಅಘಾತವಾಗುವುದು ಖಚಿತ.

ಮಲಯಾಳಿಗಳ ಹಾಸ್ಯಪ್ರಜ್ಞೆ ಸಹ ಅದ್ವಿತೀಯ. ಅವರಷ್ಟು ತಮ್ಮವರನ್ನೆˌ ತಮ್ಮನ್ನಾಳುವವರನ್ನೆ ಮಸ್ಕಿರಿ ಮಾಡಿ ವ್ಯಂಗ್ಯ ಹುಟ್ಟಿಸುವವರು ಇಡಿ ಭಾರತದಲ್ಲಿ ಮತ್ತೊಬ್ಬರು ಸಿಗಲಿಕ್ಕಿಲ್ಲ ಬಹುಶಃ. ತಮ್ಮ ಆರಾಧ್ಯ ದೈವ ಮಹಾಬಲಿಯನ್ನ ಪರಿಪರಿಯಾಗಿ ವ್ಯಂಗ್ಯವಾಡಿಕೊಂಡು ತಮಾಷೆ ಮಾಡುತ್ತಾರೆ ಅಂದರೆ ಉತ್ತರ ಭಾರತೀಯರಿಗೆ ಆಶ್ಚರ್ಯವಾಗಬಹುದು. ಸಿನೆಮಾ ನಟರನ್ನಾಗಲಿˌ ರಾಜಕಾರಣಿಗಳನ್ನಾಗಲಿ ಬಿಡದ ಮಲಯಾಳಿ ಮಾಧ್ಯಮಗಳು ಮಾಡುವ ಮಟ್ಟಿಗೇನಾದರೂ ಕೇರಳದ ಹೊರಗೆ ಅಲ್ಲಿನ ನಾಯಕಮಣಿಗಳನ್ನ ಹಾಸ್ಯಾಸ್ಪದವಾಗಿ ಆಡಿಕೊಂಡರೆ ಮರುದಿನ ತಲೆ ಎತ್ತಿಕೊಂಡು ಓಡಾಡಲು ಅವಕಾಶ ಸಿಗೋದು ಅನುಮಾನ. ಮಹಾರಾಷ್ಟ್ರದಲ್ಲಿ ಅದೆ ಮಟ್ಟದಲ್ಲಿ ಶಿವಾಜಿಯ ಕುರಿತು ತಮಾಷೆ ಮಾಡಿದರೆ ಮರಾಠಿಗರು ಖಂಡಿತವಾಗಿ ಸಹಿಸರು.


ಅವನೊಮ್ಮೆ ಅವನ ಮಲಯಾಳಿ ಗೆಳೆಯನ ಮಗುವಿನ ಶಾಲಾ ವಾರ್ಷಿಕೋತ್ಸವ ನೋಡಲು ಹೋಗಿದ್ದ. ಮಿತ್ರನ ಪುಟ್ಟ ಪುತ್ರ ವಿಷ್ಣು ಮಾವೇಲಿ ವೇಷ ತೊಟ್ಟಿದ್ದರೆˌ ಅವನ ಸಹಪಾಠಿ ಉಸ್ಮಾನ್ ಜನಿವಾರ ಧರಿಸಿ ಓಲೆ ಕೊಡೆ ಹಿಡಿದಿದ್ದ ಬ್ರಾಹ್ಮಣ ವಟುವಾಗಿದ್ದ! ಸಂತ ಥಾಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ಈ ಹಾಸ್ಯಪ್ರಸಂಗದಲ್ಲಿ ಬಲಿಯ ತಲೆ ಮೇಲೆ ಕಾಲಿಟ್ಟ ವಾಮನಮೂರ್ತಿಯ ಅಂಗಾಲಿಗೆ ಮಾವೇಲಿ ಮಂಡೆಯೊಳಗಿಟ್ಟುಕೊಂಡಿದ್ದ ಮುಳ್ಳು ಚುಚ್ಚಿ ಅವ ಲೊಬೊಲೊಬೊ ಹೊಡೆದುಕೊಳ್ತಾ ನೆಗೆನೆಗೆದು ಕುಣಿಯುತ್ತಿದ್ದರೆ ಅದೆ ಮಾವೇಲಿಯ ಪರಮ ಆರಾಧಕರಾದ ಮಲಯಾಳಿ ಪ್ರೇಕ್ಷಕರು ಕೈ ಚಪ್ಪಾಳೆ ತಟ್ಟಿˌ ಸೀಟಿ ಹೊಡೆದು ಗೊಳ್ಳನೆ ನಗುತ್ತಾ ಹಾಸ್ಯ ಪ್ರಸಂಗವನ್ನ ಆಸ್ವಾದಿಸುತ್ತಿದ್ದರು. ನೆನಪಿಡಿˌ ಹಿಂದೂ ಹಾಗೂ ಮುಸಲ್ಮಾನ ಮಕ್ಕಳ ಈ ಪ್ರದರ್ಶನ ನಡೆಯುತ್ತಿದ್ದುದು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ಶಾಲೆಯಲ್ಲಿ.


ಇದೆ ತರಹ ವನವಾಸಕ್ಕೆ ಹೊರಟ ಶ್ರೀರಾಮಚಂದ್ರ ಹಾಗೂ ದಶರಥನ ಕಾಲು ಮುಗಿಯಲು ಹೋದಾಗ ಅನ್ನೋ ಪ್ರಸಂಗದಲ್ಲಿ ಇಂತಹ ಹಾಸ್ಯವಿಟ್ಟು ಇದರಷ್ಟಲ್ಲದಿದ್ದರೂ ಇದರ ಹತ್ತರಲ್ಲೊಂದು ಪಟ್ಟು ತಮಾಷೆಯಲ್ಲಿ ತೋರಿಸ ಹೊರಟರೆ ಸಾಕುˌ ಯಾರು ಹೋಗಿ ಕೇಳಿರದಿದ್ದರೂ ಸಹ ತಮಗೆ ತಾವೆ ಧರ್ಮ ರಕ್ಷಣೆಯ ಸುಪಾರಿ ಕೊಟ್ಟುಕೊಂಡಿರುವ ಮೈ ಬಗ್ಗಿಸಿ ದುಡಿಯಲರಿಯದ ಧರ್ಮರಕ್ಷಕ ಬೋರ್ಡು ಹಾಕಿಕೊಂಡು ಭಂಡಾಟ ಮಾಡುವ ದುರುಳ ಸೋಮಾರಿ ಲೋಫರುಗಳು ಬೀದಿಗಿಳಿದು "ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ" ಅಂತ ಬಾಯಿ ಬಾಯಿ ಬಡಿದುಕೊಳ್ತಾ ಅರಾಜಕತೆ ಸೃಷ್ಟಿಸಿರುತ್ತಿದ್ದರು. ಆ ವಿಷಯದಲ್ಲಿ ಕೇರಳದಲ್ಲಿರುವ ಮುಕ್ತತೆ ಆ ಸಮಾಜದ ಪಕ್ವತೆಗೆ ಸಾಕ್ಷಿ.

( ಇನ್ನೂ ಇದೆ.)

https://youtu.be/3-RYN3bqizg

No comments: