02 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೮ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೮ 👊


ಈ ಲೋಕದಲ್ಲಿ ನಂಬುವಂತೆ ಜಗದ ಆಗುಹೋಗುಗಳನ್ನ ನಿರ್ಧರಿಸುವˌ ಇಲ್ಲಿನ ದಿನಚರಿಯನ್ನ ನಿಗವಿಟ್ಟು ಹರಸುವ ಧೃಗೋಚರವಲ್ಲದ ಶಕ್ತಿಗಳು ವಾಸ್ತವದಲ್ಲಿ ಇದ್ದಾವೋ? ಇಲ್ಲವೋ? ಅವನಿಗೆ ಅರಿವಿಲ್ಲ. ಆಸ್ತಿಕರ ವಾದ ನಾಸ್ತಿಕರ ವಿವಾದ ಎರಡಕ್ಕೂ ಹಾಗೆ ನೋಡಿದರೆ ಹೆಚ್ಚಿನ ಮೂಲಭೂತ ವ್ಯತ್ಯಾಸಗಳಿಲ್ಲ. ಇತ್ತಂಡಗಳೂ ತಮ್ಮ ತಮ್ಮ ಆವೃತ್ತಿಗಳನ್ನ ಪ್ರತಿಪಾದಿಸಲು ಕೊಡುವ ಸಕಲೆಂಟು ಅಂಶಗಳಲ್ಲಿ ದೇವರು ದೈವ ದೆವ್ವ ಯಾವುದನ್ನೂ ಪ್ರತ್ಯಕ್ಷವಾಗಿ ಕಂಡ ಬಗ್ಗೆ ಪುರಾವೆ ಒದಗಿಸಲು ಅಶಕ್ತರು! ಕೇಳಿ ನೋಡಿದರೆˌ ಸಲಹುವ ಇಲ್ಲವೆ ಕೊಲ್ಲುವ ಅದೃಶ್ಯ ಶಕ್ತಿಗಳನ್ನ ಕಂಡಿದ್ದೇನೆ ಅನ್ನುವುದಕ್ಕಿಂತ ಅದರ ಉಪಸ್ಥಿತಿಯ ಭಾವವನ್ನ ಅನುಭವಿಸಿದೆ ಅನ್ನುವವರೆ ಬಹುತೇಕ ಎಲ್ಲರೂ. ಇದೊಂಥರಾ ಅವರದೆ ಮೆದುಳಿನ ರಸಚೋದಕಗಳ ಸೃಷ್ಟಿ ಅಲ್ಲದೆ ಮತ್ತಿನ್ನೇನೂ ಇಲ್ಲ. 

ಸತ್ತ ನಂತರ ಮುಂದೇನು? ಅನ್ನುವುದನ್ನ ಈವರೆಗೂ  ಯಾರಿಂದಲೂ ಪೂರಕ ಪುರಾವೆಗಳನ್ನ ಒದಗಿಸಿ ಇದಮಿಥ್ಥಂ ಅಂತ ವಿವರಿಸಲು ಸಾಧ್ಯವಾಗಿಲ್ಲ. ಆದರೆ ಮತಾತೀತವಾಗಿ ಕೇವಲ ಪುರಾಣ ಶಾಸ್ತ್ರಗಳ ಕಥೆಗಳ ಕಂತೆಯನ್ನ ಮುಂದಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಉದ್ದುದ್ದ ಕೊರೆದಾರು ಅಷ್ಟೇ. ಅವರವರ ಧಾರ್ಮಿಕ ನಂಬುಗೆಗಳ ಕಗ್ಗದ ವಿವರಣೆಯಲ್ಲಿ ಸಕಲರೂ ನಿಪುಣರೆ ಹೊರತು ಸ್ವಾನುಭವ ಯಾರದ್ದೂ ಇಲ್ಲ ಈ ವಿಷಯದಲ್ಲಿ. ಸತ್ತವರ್ಯಾರೂ ತಿರುಗಿ ಬಂದು ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ. ಆದರೂ ಸಹ ಅಮಾನುಶ ಶಕ್ತಿಗಳ ಬಗ್ಗೆˌ ಅವುಗಳ ಪ್ರಭಾವ ತಮ್ಮ ದೈನಂದಿನ ಬದುಕನ್ನ ನಿರ್ದೇಶಿಸುವ ಬಗ್ಗೆ ಶ್ರೀಸಾಮಾನ್ಯರಲ್ಲಿ ಅಪಾರವಾದ ನಂಬಿಕೆಯಂತೂ ಇದೆ. 
ಬಹುಶಃ ಸಾಂಸ್ಕೃತಿಕ ನಡೆಯಾಗಿ ಆರಂಭವಾಗಿದ್ದ ಇಂತಹ ಆರಾಧನಾ ಪದ್ಧತಿಗಳು ಇಂದು ಸಂಸ್ಕಾರಕ್ಕಿಂತ ಹೆಚ್ಚಾಗಿ ಧಾರ್ಮಿಕ ನಡಾವಳಿಗಳಾಗಿ ಹೆಚ್ಚು ಪ್ರಚಲಿತದಲ್ಲಿವೆ. ಮತ್ತಿವು ಆಯಾ ಪ್ರದೇಶದ ನಂಬಿಕೆಗಳ ಅನುಸಾರ ಅಲ್ಲಲ್ಲಿನ ಜನಮಾನಸವನ್ನು ಪ್ರಭಾವಿಸುತ್ತವೆ. ಈ ಕೋಲˌ ತಂಬಿಲˌ ನೇಮˌ ಮಚ್ಚಿˌ ನಡಾವಳಿˌ ಮಹಾ ನಡಾವಳಿಗಳೂ ಕೂಡ ಇಂತವೆ. ಕರಾವಳಿ ಕರ್ನಾಟಕದ ವಿಶಿಷ್ಟ ಸಾಂಸ್ಕೃತಿಕ ಅನನ್ಯತೆಯಲ್ಲೊಂದಾಗಿರುವ ಭೂತಾರಾಧನೆಗೆ ಇವೆಲ್ಲಾ ಸಂಬಂಧಪಟ್ಟಿವೆ. ಸ್ಥೂಲವಾಗಿ ಇಂದಿನ ಭಾಷಾವಾರು ರಾಜ್ಯಗಳ ಲೆಕ್ಖದಲ್ಲಿ ಎರಡು ರಾಜ್ಯಗಳ ತಲಾ ಒಂದೂವರೆ ಜಿಲ್ಲೆಗಳಲ್ಲಿ ಈ ಆರಾಧನಾ ಕ್ರಮ ಪ್ರಚಲಿತದಲ್ಲಿದೆ. ಕರಾವಳಿಯ ಭೂತಗಳೆಂದರೆ ಘಟ್ಟದವರ ಕಲ್ಪನೆಯ ದೆವ್ವ ಪಿಶಾಚಿಗಳಲ್ಲ. ಇವು ಸ್ಥಳಿಯರ ಪಾಲಿಗೆ ಪಿತೃ ದೇವತೆಗಳು. ತಮ್ಮನ್ನ ಕಷ್ಟ ನಷ್ಟದಿಂದ ಪಾರು ಮಾಡುವ ಹಾಗೂ ಸತ್ಯದ ದೀವಿಟಿಗೆಯ ಬೆಳಕಲ್ಲಿ ಕಾಯುವ ಮಮತೆಯ ದೈವಗಳು. ತಮಾಷೆಯೆಂದರೆ ಇಲ್ಲಿನ ಬಹುತೇಕ ದೈವಗಳೆ ಸ್ಥಳಿಯವಲ್ಲ. ಕೊಜಿಲುˌ ಅಜ್ಜಿˌ ಕೊರಗಜ್ಜನಂತಹ ಸ್ಥಳಿಯ ಬುಡಕಟ್ಟಿನ ಕೆಲವೆ ಕೆಲವು ದೈವಗಳನ್ನ ಬಿಟ್ಟು ರಾಜನ್ ದೈವಗಳಿಂದ ಹಿಡಿದು ಅವುಗಳ ಪರಿವಾರ ದೈವಗಳವರೆಗೆ ಹಳೆಯ ದೈವಗಳೆಲ್ಲ ಘಟ್ಟವನ್ನಿಳಿದೆ ಕರಾವಳಿಗೆ ಬಂದು ನೆಲೆಯಾದವು. ಅವುಗಳ ಪಾಡ್ದನಗಳ ಆರಂಭದಲ್ಲೆ ಈ ವಿವರಣೆ ಬರುತ್ತದೆ. ಗಮನವಿಟ್ಟು ಪಾಡ್ದನ ಆಲಿಸುವ ತುಳು ಭಾಷೆ ಬರುವ ಎಲ್ಲರಿಗೂ ಇದು ಅರ್ಥವಾಗುತ್ತದೆ. 

ಅನಂತರದ ಘಟನಾವಳಿಗಳಲ್ಲಿ ದೈವತ್ವಕ್ಕೇರಿದವರಲ್ಲಿ ಇರುವವರೆಲ್ಲಾ ಒಂದಾ ಪರದೇಶಿ ಪರಮತೀಯರು ಇಲ್ಲವೆ ಆಯಾ ಕಾಲಘಟ್ಟದ ಸಾಮಾಜಿಕ ಅಸಮಾನತೆಗಳ ಜಾತಿ ಮೇಲು ಕೀಳಿನ ಕಟ್ಟಳೆಗಳ ವಿರುದ್ಧ ಬಂಡಾಯದ ಧ್ವನಿ ಎತ್ತಿ ಅಂದಿನ ಪ್ರಬಲರ ಅಧಿಕಾರಕ್ಕೆ ಸಂಚು ತರುವ ಭೀತಿ ಎಬ್ಬಿಸಿ ಆ ಆಳುವ ವರ್ಗದ ಮಸಲತ್ತಿಗೆ ಬಲಿಯಾಗಿ ದುರಂತ ಅಂತ್ಯವನ್ನ ಕಂಡ ಆ ಕಾಲದ ಕ್ರಾಂತಿಕಾರಿಗಳು. ಉದಾಹರಣೆಗೆ ಇತ್ತೀಚೆಗೆ ಚಾಲ್ತಿಯಲ್ಲಿ ಸಿಕ್ಕಾಪಟ್ಟೆ ಪ್ರಸಿದ್ಧಿ ಗಿಟ್ಟಿಸಿರುವ ಕೊರಗಜ್ಜನನ್ನೆ ತೆಗೆದುಕೊಳ್ಳಿ. ವಾಸ್ತವವಾಗಿ ಇವನೇನೂ ಅಜ್ಜನಲ್ಲ. ಕೊರಗ ತನಿಯ ಅನ್ನುವ ಯುವಕ. ಹಸಿದ ಹೊಟ್ಟೆಯನ್ನ ತಣಿಸಿಕೊಳ್ಳಲು ಕದ್ರಿಯ ಮಂಜುನಾಥೇಶ್ವರ ಸ್ವಾಮಿಯ ದೇವಸ್ಥಾನದ ಹೊರಾವರಣದ ಮಾಡನ್ನ ಏರಿ ಹಣ್ಣು ಕಿತ್ತು ತಿಂದ  ಅಪರಾಧಕ್ಕೆ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿ ಕೊಲೆಯಾಗಿ ಹೋಗಿದ್ದ ಅಸಹಾಯಕ ಯುವಕ. ಸತ್ತ ಮೇಲೆ ಕೊಂದವರೆ ಭಯ ಭೀತಿಯಿಂದ ಅವನನ್ನ "ಕೊರಗಜ್ಜ"ನನ್ನಾಗಿಸಿ ಆರಾಧನೆಯ ಸಾಲಿನವರಲ್ಲಿ ಸೇರಿಸಿಬಿಟ್ಟರು.

ಹೀಗೆ ಅನ್ಯಾಯ ಸಂಚು ಮೋಸದಂತಹ ಹತ್ತು ಹಲವಾರು ಕಾರಣಗಳಿಂದ ಅಪಮೃತ್ಯುಗೀಡಾದ ಆ ಕಾಲದ ಅಕಾಲ ಮರಣಕ್ಕೆ ಒಳಗಾಗಿ ಅನಂತರ ಭೂತಗಳಾಗಿ ಆರಾಧಿಸಲ್ಪಡುವ ಕೆಳವರ್ಗದವರ ಉದ್ದ ಪಟ್ಟಿಯನ್ನೆ ಕೊಡಬಹುದು. ಅಂದು ಸತ್ತು ಇಂದು ದೈವವಾಗಿರುವವರ ಬಗ್ಗೆ ಬಹುತೇಕ ತುಳುನಾಡಿನ ಎಲ್ಲರಿಗೂ ಭಯಭಕ್ತಿಯ ಭಾವವಿದ್ದೆ ಇದೆ.

ಈ ಲೋಕದಲ್ಲಿ ನಿಜವಾಗಿಯೂ ದೈವಿಕ ಶಕ್ತಿಗಳಿವೆಯೋ ಇಲ್ಲವೋ ಅನ್ನುವ ಅಂಶ ಅರಿವಿಲ್ಲದಿದ್ದರೂ ಸಹ ಇಲ್ಲಿನ ಶೋಚನೀಯ ಪರಿಸ್ಥಿತಿಯನ್ನ ನೋಡುವಾಗ ಅಂತಹ ದೇವರ ಅಥವಾ ದೈವದ ಅತ್ಯಗತ್ಯ ಈ ಬರಗೆಟ್ಟ ಜಗತ್ತಿಗಂತೂ ಇದ್ದೆ ಇದೆ ಅಂತ ಅವನಿಗೆ ಆಗಾಗ ಎಲ್ಲೆಲ್ಲೂ ಅನಾಚಾರ ಅನ್ಯಾಯ ಕಾಣುವಾಗ ಅನ್ನಿಸೋದಿದೆ. ಏನೋ ಸುಭಾಶನ ಅನಿರೀಕ್ಷಿತ ಆಹ್ವಾನದ ಪ್ರತಿಫಲವಾಗಿ ಅವನಿಗೆ ಕೋಲದ ಸಾಂಸ್ಕೃತಿಕ ಆಚರಣೆಯಲ್ಲಿ ಭಾಗಿಯಾಗುವ ಸದಾವಕಾಶ ಸಿಕ್ಕಿತ್ತು. ಅದರಿಂದ ಅವನೊಳಗಿನ ಅತೃಪ್ತ ಅನ್ವೇಷಕನಿಗೆ ಒಂಚೂರು ತೃಪ್ತಿಯಾಗತ್ತು.

*******

ಥಯ್ಯಂ ಅನ್ನುವ ಮಲಬಾರಿನ ಆಚರಣೆ ಹಾಗೆ ನೋಡಿದರೆ ಕೇರಳದ ಮಲೆಯಾಳಿಗಳ ಮೇಲೆ ಆಗಿರುವ ಸಾಂಸ್ಕೃತಿಕ ಪ್ರಭಾವಗಳಲ್ಲೊಂದು. ಇವತ್ತು ರಾಜಕೀಯವಾಗಿ ತುಳುನಾಡಿಗಿಂತ ಅದೆಷ್ಟೆ ಬಲಿಷ್ಠವಾಗಿ ಬೆಳೆದಿರಬಹುದುˌ ಆದರೆ ತುಳುನಾಡು ಹಾಗೂ ಅಲ್ಲಿನ ಸಾಂಸ್ಕೃತಿಕ ಅನನ್ಯತೆಗಳ ಬಗ್ಗೆ ಕೇರಳದ ಸಾಮಾಜಿಕ ಬದುಕಲ್ಲಿ ಮೊದಲಿನಿಂದಲೂ ಒಂದು ಗೌರವಯುತ ಸ್ಥಾನಮಾನವಿದೆ. ಮಲಯಾಳಿಗಳ ಸುಶಪ್ತಿಯಲ್ಲಿ ಹುದುಗಿರುವ ತೌಳುವ ಶ್ರೇಷ್ಠತೆಯ ಭಾವನೆಯೆ ಇದಕ್ಕೆ ಮೂಲಕಾರಣ. ಪ್ರಮುಖವಾಗಿ ಇಂದಿನ ಕೇರಳದಲ್ಲಿ ಚಾಲ್ತಿಯಲ್ಲಿರುವ ಲಿಪಿˌ ಭೂತಾರಾಧನೆಯ ನಕಲು ಥಯ್ಯಂˌ ಯಕ್ಷಗಾನದ ಎರವಲು ಕಥಕ್ಕಳಿˌ ಚಂಡೆ - ಕೊಂಬು ಕಹಳೆಯ ಬಳಕೆ ಹಾಗೂ ಕಳರಿ ಪಯಟ್ಟು ಎನ್ನುವ ತುಳುನಾಡಿನ ಗೆರೋಡಿಗಳಲ್ಲಿ ಕಲಿತು ಹೋಗಿರುವ ಸಮರ ಕಲೆ ಇವೆಲ್ಲಾ ತುಳುವರಿಂದ ಮಲೆಯಾಳಿಗಳಿಗೆ ಪಾರಂಪರಿಕವಾಗಿ ಉಡುಗೊರೆಯಾಗಿ ಸಿಕ್ಕಿರುವ ಸಾಂಸ್ಕೃತಿಕ ಅನನ್ಯತೆಯ ಅಂಶಗಳು.

ಸತ್ತ ತಾಯಿಯ ಸಂಸ್ಕಾರ ಮಾಡಲು ಬೆಂಕಿಯ ಸೊಡರು ಕೊಡದೆ ಶಂಕರಾಚಾರ್ಯರ ಕೆಂಗಣ್ಣಿಗೆ ಮಲಯಾಳಿಗಳು ತುತ್ತಾದರು ಎನ್ನಲಾಗುತ್ತದೆ. ಹೀಗಾಗಿ ಅವರ ಕಠೋರ ಶಾಪಕ್ಕೆ ಮಲಯಾಳಿ ಮೇಲ್ವರ್ಗ ಗುರಿಯಾಗಬೇಕಾಯಿತು. ಅದರ ಫಲವಾಗಿಯೆ ಯಾರಾದರೂ ಸತ್ತರೆ ಮನೆಯ ಹಿಂಬದಿಯ ಆವರಣದಲ್ಲಿಯೆ ದಹನ ಸಂಸ್ಕಾರ ನಡೆಸಬೇಕು ಅನ್ನುವ ಪದ್ಧತಿ ಮೇಲ್ವರ್ಗದ ಹಿಂದೂ ಮಲಯಾಳಿಗಳಲ್ಲಿದೆ. ಇದೆ ಕಾರಣಕ್ಕೆ ಅಲ್ಲಿನ ದೇವಸ್ಥಾನಗಳಲ್ಲಿ ಅರ್ಚನೆಗೆ ಹಾಗೂ ಪುರೋಹಿತಿಗೆಗೆ ಅಲ್ಲಿನ ಬ್ರಾಹ್ಮಣ ವರ್ಗ ಅನರ್ಹರು. ಹೀಗಾಗಿ ಮಲಬಾರಿನ ಕಣ್ಣೂರಿನಿಂದ ಹಿಡಿದು ಕೇರಳದ್ದೆ ಅನನ್ಯ ಭಾಗವಾಗಿದ್ದ ಕನ್ಯಾಕುಮಾರಿಗೂ ಮೂಡುದಿಕ್ಕಿನ ಶಚೀಂದ್ರಂವರೆಗಿನ ಕೈರಳೀಯ ಸಂಸ್ಕೃತಿಯ ದೇವಸ್ಥಾನಗಳಲ್ಲೆಲ್ಲಾ ಪೂಜೆ ಪುನಸ್ಕಾರ ಸಲ್ಲಿಸುವ ಅಧಿಕಾರ ಹಾಗೂ ಅವಕಾಶವಿರೋದು ಅದೆ ಶಂಕರಾಚಾರ್ಯರು ತುಳುನಾಡಿನಿಂದ ಕರೆತಂದು ನೆಲೆ ನಿಲ್ಲಿಸಿದ್ದಾರೆ ಎಂದೆ ನಂಬಲಾಗಿರುವ ತೌಳುವ ಹಿನ್ನೆಲೆಯ ತುಳು ಭಾಷಿಗ ಶಿವಳ್ಳಿ ಬ್ರಾಹ್ಮಣರಿಗೆ ಮಾತ್ರ. 


ಒಟ್ಟಿನಲ್ಲಿ ಸಾಂಸ್ಕೃತಿಕ ಕೇರಳ ನಯವಾಗಿ ಹೇಳಬೇಕೆಂದರೆ ಪುರಾತನ ತುಳನಾಡ ಪಡಿಯಚ್ಚು. ಸ್ವಲ್ಪ ಒರಟಾಗಿ ಹೇಳುವುದಾದರೆ ಸ್ವಂತಿಕೆಯಿಲ್ಲದ ತುಳುವ ಎರವಲು ಸಂಸ್ಕೃತಿಯ ಕೆಟ್ಟ ನಕಲು. ಕೇರಳದ ಮೇಲಿನ ತುಳುನಾಡಿನ ಸಾಂಸ್ಕೃತಿಕ ಪ್ರಭಾವ ಒಂಥರಾ ಸಾಫ್ಟ್ ಪವರ್ ತರದ್ದು. ಇಂದಿಗೂ ಇದೆ ಹಾಗೂ ಎದ್ದು ಕಾಣುತ್ತೆ.

( ಇನ್ನೂ ಇದೆ.)


https://youtu.be/cKOPJowJypg

No comments: