04 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೧ 👊


"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೧೧ 👊


ಒಂದು ಕಟ್ಟು ಬೀಡಿˌ ಹಾಲು ಹಾಕದ ನಾಲ್ಕು ಲೋಟ ಕಟ್ಟಂಚಾಯ, ರಾತ್ರಿಗೆ ಕುಪ್ಪಿ ಕಳ್ಳು ಇಷ್ಟಿದ್ದರೆ ಸಾಕು. ಸುಟ್ಟ ಒಣಮೀನು ನಂಚಿಕೊಂಡ ಕುಚ್ಚಲಕ್ಕಿ ಗಂಜಿಯುಂಡು ಆ ನರಪೇತಲ ಸಮೃದ್ಧವಾಗಿರುವ ಇಡಿ ಕಾಡನ್ನೆ ತಿಂಗಳೊಪ್ಪತ್ತಿನಲ್ಲಿ ಹೆರೆದು ಬೋಳಿಸಿ ಹುಡಿ ಹಾರಿಸಬಲ್ಲ!

ಒಂದು ಇಬ್ಬಾಯಿಯ ಗರಗಸ ಹೊತ್ತು ಇಬ್ಬರು ಮಲಯಾಳಿಗಳು ಆನೆಯೊಂದನ್ನ ಕಟ್ಟಿಕೊಂಡು ಕಾಡೊಂದಕ್ಕೆ ನುಗ್ಗಿದರೆಂದರೆ ಆ ಕಾಡಿನ ಹಣೆಬರಹ ಪೂರ್ತಿ ಕೆಟ್ಟು ಕೆರ ಹಿಡಿಯೋದನ್ನ ತಪ್ಪಿಸಲು ಸಾಕ್ಷಾತ್ ಆ ಸೃಷ್ಟಿಕರ್ತ ಬ್ರಹ್ಮನಿಂದಲೂ ಸಾಧ್ಯವಿಲ್ಲ ಅನ್ನೋದು ಅತಿಶಯೋಕ್ತಿಯಂತೂ ಅಲ್ಲ.

ಕೇವಲ ಕಾಡನ್ನಷ್ಟೆ ಅಲ್ಲ ನಾಡಲ್ಲೂ ಸಹ ಮಲಯಾಳಿಗಳು ಕಾಲಿಟ್ಟಲ್ಲಿ ಶನಿ ಹೆಜ್ಜೆಯಿಟ್ಟಂತೆ. ಕರ್ನಾಟಕ ಹಾಗೂ ತಮಿಳುನಾಡಿನ ಮಲೆನಾಡುˌ ಕರಾವಳಿ ಹಾಗೂ ಅರೆ ಮಲೆನಾಡಿನಲ್ಲಿ ರಬ್ಬರುˌ ಗೋಡಂಬಿˌ ಹೊಗೆಸೊಪ್ಪುˌ ಶುಂಠಿˌ ಏಲಕ್ಕಿ ಹಾಗೂ ಮಜ್ಜಿಗೆ ಸೊಪ್ಪು ಬೆಳೆಯಲು ರೈತರ ಹಡಲು ಜಮೀನನ್ನ ಮಾರುಕಟ್ಟೆ ದರಕ್ಕಿಂತ ಅತಿಹೆಚ್ಚು ಬೆಲೆಗೆ ಗುತ್ತಿಗೆ ಹಿಡಿದ ಮಲಯಾಳಿಗಳು ಶೀಘ್ರ ಲಾಭ ಕಾಣಲು ಅನುಸರಿಸಿದ ವಾಮಮಾರ್ಗಗಳು ಒಂದೆರಡಲ್ಲ. 


ಅವರು ತಂದು ಸುರಿದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಹೊಡೆತ ಹೇಗಿತ್ತೆಂದರೆ ಸಾರ ಕಳೆದುಕೊಂಡು ಸುಟ್ಟು ಬರಬಾದಾಗಿ ಹೋಗಿರುವ ಇಲ್ಲಿನ ಜಮೀನುಗಳು ಈಗ ಪೂರ್ತಿ ಕೃಷಿಗೆ ಅನರ್ಹವಾಗಿ ಹೋಗಿವೆ. ಹಾಗೂ ಅದೆ ಮಲಯಾಳಿಗಳು ಹಾಕಿದ್ದ ಬೆಳೆಗಳನ್ನೆ ಬೆಳೆಯಬೇಕಂತ ಹೊರಟ ಆ ಜಮೀನಿನ ನೈಜ ಮಾಲಕರಾದ ರೈತರು ಅವವೆ ವಿಷಕಾರಿ ರಸಾಯನಿಕಗಳನ್ನ ತಂದು ಸುರಿದೆ ಪೂತನಿಯ ಎದೆ ಹಾಲಂತ ಆ "ಆಕರ್ಷಕ" ಬೆಳೆಗಳನ್ನ ಬೆಳೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಯಾರಿಗೂ ಬೇಡದಂತಾಗಿರುವ ಮಜ್ಜಿಗೆ ಹುಲ್ಲಿನಂತ ಬೆಳೆಯಿಂದ ಸ್ಥಳಿಯ ನಾಡು ಕಾಡು ಎರಡರ ಪರಿಸ್ಥಿತಿಯೂ ನಾಯಿಪಾಡಾಗಿ ಹೋಗಿದೆ. ಬೀಜ ಪ್ರಸರಣವಾಗಿ ಸಿಕ್ಕಸಿಕ್ಕಲ್ಲಿ ಹರಡಿ ಪೀಡೆಯಾಗಿರುವ ಈ ಮೂಲಿಕೆಯಂತಹ ಬೆಳೆ ಅತ್ತ ಜಾನುವಾರುಗಳಿಗೆ ಮೇವೂ ಅಲ್ಲ. ಇತ್ತ ಜನರಿಗೂ ಸಹ ಬೆಳೆಯಾಗಿಯೂ ಬೇಕಿಲ್ಲ.


*****


ಎಂಬತ್ತರ ದಶಕದ ಉತ್ತರಾರ್ಧದಲ್ಲಿ ಅಮೇರಿಕಾದ ಚಿತಾವಣೆಯಿಂದ ಇರಾನ್ ಹಾಗೂ ಇರಾಕ್ ಮಧ್ಯೆ ನಡೆದಿದ್ದ ಯುದ್ಧ ಮತ್ತದರ ಬೆನ್ನ ಹಿಂದೆಯೆ ಅಮೇರಿಕಾದ ಪುಸಲಾವಣೆಯಿಂದ ಅದಾಗಲೆ ಹಾದಿ ತಪ್ಪಿ ಭ್ರಮೆಯೊಂದರ ಬಂಧಿಯಾಗಿದ್ದ ಸದ್ದಾಂ ಹುಸೈನ್ ಕುವೈಟನ್ನ ಅತಿಕ್ರಮಿಸಿ ಅಟ್ಟಹಾಸದಿಂದ ಆರಂಭಿಸಿದ್ದ ಗಲ್ಫ್ ಯುದ್ಧದ ದೆಸೆಯಿಂದ ಅನೇಕ ಮಲಯಾಳಿಗಳ ಬದುಕಿನ ದಿಕ್ಕು ದೆಸೆ ಏಕಾಏಕಿ ಬದಲಾಗಿ ಹೋಯಿತು. ಇರಾಕ್ ಎಡವಟ್ಟಿನ ನಡೆ ಕೇರಳದ ದುಡಿಯುವ ವರ್ಗಗಳಿಗೆ ಗಲ್ಫ್ ರಾಷ್ಟ್ರಗಳ ಬದಲಾದ ರಾಜಕೀಯ ಸಮೀಕರಣದಲ್ಲಿ ವೃತ್ತಿಯನ್ನಾರಂಭಿಸುವ ಅವಕಾಶ ಕಲ್ಪಿಸಿಕೊಟ್ಟಿತು. ಹಾಗೆ ನೋಡಿದರೆ ಭಾರತೀಯ ಉಪಖಂಡದ ಐದೂ ರಾಷ್ಟ್ರಗಳ ದುಡಿಯುವ ವರ್ಗದ ಮಂದಿ ಇದರ ಫಲಾನುಭವಿಗಳೆ. ಆದರೆˌ ಭಾರತೀಯ ರಾಜ್ಯಗಳಲ್ಲಿ ಇದರ ಗರಿಷ್ಠ ಪ್ರಯೋಜನ ಪಡೆದದ್ದು ಮಾತ್ರ ಕೇರಳದ ಮಲಯಾಳಿಗಳು. 


ಇರಾಕಿನ ಪೂರ್ವದ ಗಡಿಯಲ್ಲಿ ಆರಂಭವಾಗಿದ್ದ ಮೊದಲ ಗಲ್ಫ್ ಬಿಕ್ಕಟ್ಟಿನಲ್ಲಿ ಸದಾವಕಾಶ ಕಂಡುಕೊಂಡಿದ್ದವರಲ್ಲಿ ಮಲಯಾಳಿ ಮುಸಲ್ಮಾನರೆ ಅಧಿಕವಾಗಿದ್ದರು. ಆದರೆ ಅದೆ ಇರಾಕಿನ ಪಶ್ಚಿಮದ ಗಡಿತಂಟೆ ಮಾತ್ರ ಮತಾತೀತವಾಗಿ ಬಹಳಷ್ಟು ಮಲಯಾಳಿಗಳ ಭಾಗ್ಯದ ಬಾಗಿಲು ತೆರೆಯಿತು. ಗಲ್ಫ್ ವಲಯದ ಇರಾಕ್ˌ ಸಿರಿಯಾˌ ಕುವೈಟ್ˌ ಸೌದಿ ಅರೇಬಿಯಾˌ ಜೋರ್ಡನ್ˌ ಲೆಬೆನನ್ˌ ಯಮನ್ˌ ಒಮನ್ˌ ಯುಎಇˌ ಕತರ್ˌ ಬಹಿರೈನ್ ಇಲ್ಲೆಲ್ಲಾ ಹಂತಹಂತವಾಗಿ ಮಲಯಾಳಿ ದುಡಿಯುವ ವರ್ಗ ತುಂಬಿ ಹೋಯಿತು. ಕುಶಲಕರ್ಮಿಗಳುˌ ಅರೆ ಕುಶಲಕರ್ಮಿಗಳುˌ ಆಡಳಿತ ವಿಭಾಗ ನಿಪುಣರು ಹೀಗೆ ಇದೆ ಮಾದರಿಯ ದುಡಿಮೆ ಭಾರತದಲ್ಲಿ ಮಾಡಿದ್ದರೆ ಗಳಿಸುವುದಕ್ಕಿಂತ ಹದಿನೈದರಿಂದ ಇಪ್ಪತ್ತೈದು ಪಟ್ಟು ಪಗಾರ ತರುತ್ತಿದ್ದ ಮಧ್ಯಪ್ರಾಚ್ಯದ ಮರಳುಗಾಡಿನ ಉದ್ಯೋಗವಕಾಶಗಳು ಮಲಯಾಳಿಗಳನ್ನ ಅಯಸ್ಕಾಂತದಂತೆ ಸೆಳೆದವು. ಹೀಗೆ ಕೇರಳದತ್ತ ಸಿರಿತನದ ಹೊಳೆ ಹರಿಸಿದ ತೈಲ ಸಂಪನ್ನ ರಾಷ್ಟ್ರಗಳತ್ತ ಆದ ವಲಸೆ ಒಂದು ದೃಷ್ಟಿಯಿಂದ ಲಾಭದಾಯಕವಾಗಿಯೆ ಕಂಡರೂ ಸಹˌ ಅದರ ಮತ್ತೊಂದು ಮಗ್ಗುಲು ಮಾತ್ರ ಬಹಳ ಭೀಕರ ಗಾಯ ಕೇರಳದ ಸಾಮಾಜಿಕ ಬದುಕಿನ ಮೇಲೆ ಮಾಡಿಬಿಟ್ಟಿದೆ. ಬಹುಶಃ ಈ ಗಾಯ ಏಂದೆಂದೂ ಮಾಯಲಾರದು. ಮಾಡುವವರು ಇಲ್ಲದೆ ಅನೇಕ ಪಿತ್ರಾರ್ಜಿತ ಕೃಷಿಭೂಮಿ ಹಡಲು ಬಿದ್ದು ಇಲ್ಲಿನ ವ್ಯವಸಾಯ ಹಾಗೂ ಪಾರಂಪಾರಿಕ ಹೈನುಗಾರಿಕೆ ನೆಲ ಕಚ್ಚಿದೆ. ಇಂದು ತರಕಾರಿ ಅಕ್ಕಿಗೆ ತಮಿಳುನಾಡು ಕೇರಳದ ಪ್ರಮುಖ ಸರಬರಾಜುದಾರ ಅಂತಾಗಿದ್ದರೆˌ ಹಾಲು ಮೊಸರು ಮಾಂಸಕ್ಕೆ ಮಲಯಾಳಿಗಳು ಬಹುತೇಕ ಕರ್ನಾಟಕದ ಮೇಲೆ ಆಶ್ರಿತರು. ಅವರು ಹೊರನಾಡಿಗೆ ಸರಬರಾಜು ಮಾಡುತ್ತಿರೋದು ಬಹುಶಃ ಮೂರೆ ಮೂರು ಉತ್ಪನ್ನಗಳನ್ನ! ಮೊದಲನೆಯದು ತಾವು ತಿಂದು ತೇಗಿ ಉಳಿದ ಮೀನುˌ ಎರಡನೆಯದು ಅಡವಿರಿಸಿಕೊಂಡು ಸಾಲ ಕೊಡಲು ಹಣˌ ಮೂರನೆಯದು ಮಲಯಾಳಂ ಸಿನೆಮಾಗಳು ಇವಷ್ಟೆ. 


ತಮಗೆ ಅಗತ್ಯವಿರುವಷ್ಟು ಅನ್ನ ಬೆಳೆದುಕೊಳ್ಳಲಾಗದ ಮಲಯಾಳಿಗಳು ಚಿನ್ನದ ವಿಚಾರದಲ್ಲಿ ಮಾತ್ರ ಸಂಪನ್ನರು. ಗಲ್ಫ್ ಹಣದಲ್ಲಿ ಬಡ್ಡಿ ವ್ಯವಹಾರ ಇಲ್ಲಿ ಗರಿಗೆದರಿ ಪರ ರಾಜ್ಯಗಳಿಗೂ ಹರಡಿದೆ. ಭಾರತದಾದ್ಯಂತ ಇರುವ ಪ್ರತಿ ಎರಡನೆ ಅಡವಿನಂಗಡಿ ಕೇರಳ ಮೂಲದ್ದು. ಇಲ್ಲಿ ಅಡವಿಗೆ ಬರುವ ಚಿನ್ನ, ತೆರಿಗೆ ರಹಿತ ಮಧ್ಯಪ್ರಾಚ್ಯದ ದೇಶಗಳಿಂದ ಕಳ್ಳಸಾಗಣೆಯಾಗುವ ಬಂಗಾರವೂ ಸೇರಿ ಮಲಯಾಳಿಗಳಷ್ಟು ತಲಾವಾರು ಬಂಗಾರ ಖರೀದಿದಾರರು ಭಾರತದ ಇನ್ಯಾವ ರಾಜ್ಯದಲ್ಲೂ ಇಲ್ಲ. ಬಹುತೇಕ ದುಡಿಯುವ ಪ್ರಾಯದ ಮಲಯಾಳಿಗಳು ಪರದೇಶದ ಪಾಲಾಗಿ ಅವರ ನಾಡಿನಲ್ಲಿ ಅದೆ ವೃತ್ತಿ ಮಾಡಲು ಅಸ್ಸಾಮಿˌ ಬಂಗಾಳಿ ಹಾಗೂ ಒಡಿಯಾದ ನಿರುದ್ಯೋಗಿ ಯುವ ಜನತೆ ಇಲ್ಲಿಗೆ ವಲಸೆ ಬರುವಂತಾಗಿದೆ. ಯುವ ರಕ್ತವೆಲ್ಲ ಮರಳುಗಾಡಿನ ದೇಶಗಳಲ್ಲಿ ಬೆವರು ಹರಿಸುತ್ತಿದ್ದು ಕೇರಳದ ಮನೆಗಳಲ್ಲಿ ಪ್ರಾಯ ಸಂದವರಷ್ಟೆ ಉಳಿದು ಒಟ್ಟಿನಲ್ಲಿ ಪೂರ್ತಿ ಕೇರಳವೆ ಒಂದು ಬಯಲು ವೃದ್ಧಾಶ್ರಮದಂತಾಗಿ ಹೋಗಿದೆ. ಪ್ರಾಯಶಃ ಇಲ್ಲಿ ಸಾವಿಲ್ಲದವರ ಮನೆಯಿಂದ ಹುಡುಕಿ ಸಾಸಿವೆ ತಂದರೂ ತರಬಹುದೇನೋ! ಆದರೆˌ ಗಲ್ಫ್ ದೇಶಗಳಲ್ಲಿಲ್ಲದವರ ಮನೆ ಹುಡುಕಿ ಗ್ಲಾಸು ನೀರು ಕೇಳಿ ಕುಡಿಯೋದು ಕಷ್ಟ ಕಷ್ಟ!

*****


ನೆನಪಿನ ಪಥ ಯಾವಾಗಲೂ ದುಃಖವನ್ನೆ ಹೊತ್ತು ತರುತ್ತೆ ಅನಿಸೋಕೆ ಅವನಿಗೆ ಅವನದ್ದೆ ಆದ ಕಾರಣಗಳಿವೆ. ಅಂತಃರ್ಮುಖಿ ಅವನಾಗಿರೋದು ಅವನ ಪ್ರಭಾವಿಸಿದ್ದ ಬಾಲ್ಯದ ಕೆಲವು ಘಟನೆಗಳಿಂದ. ಸ್ವತಃ ತಾನು ಎದುರಿಸಿದ ಕಹಿ ಅನುಭವಗಳನ್ನ ಇನ್ನಿತರರಿಗೆ ದಾಟಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಹೀಗಾಗಿ ಅವನು ತನ್ನ ನೋವಿನ ಅನುಭವಗಳನ್ನ ಆದಷ್ಟು ಅವನೊಳಗೆ ಇಟ್ಟುಕೊಂಡಿರಲು ಬಯಸುತ್ತಾನೆ. 


ನಮ್ಮ ನೋವುಗಳಿಗೆ ಜಗತ್ತಿನ ಯಾವ ಮೂಲೆಯಲ್ಲಿಯೂ ಮಾರುಕಟ್ಟೆ ಇರೋದಿಲ್ಲ. ಹಾಗಂತˌ ಬೇರೆಯವರ ಸಂಕಟಗಳ ಬಗ್ಗೆ ಜನರಿಗೆ ಕುತೂಹಲ ಇರೋದಿಲ್ಲ ಅಂತೇನಿಲ್ಲ. ಆದರೆ ನೋವುಗಳನ್ನ ಬಿಕರಿಗಿಟ್ಟು ಲಾಭ ಮಾಡಿಕೊಳ್ಳುವುದು ನಮ್ಮನ್ನ ನಾವೇನಾಗಿದ್ದೇವೆಯೋ ಅದರಂತೆ ರೂಪಿಸಿದ ನೋವಿನ ಅನುಭವಗಳಿಗೆ ಸ್ವತಃ ನಾವೆ ಮಾಡಿಕೊಳ್ಳುವ ಅವಮಾನ. ಅನುಭವಗಳು ನೋವಿನದ್ದೋ ಇಲ್ಲಾ ನಲಿವಿನದ್ದೋˌ ಅದಕ್ಕೆ ಅದರದ್ದೆ ಆದ ಘನತೆಯಿದ್ದೆ ಇರುತ್ತೆ. ಯಾವಾಗಲೂ ಅದನ್ನ ಮುಕ್ಕಾಗಿ ಅದು ಮಣ್ಣು ಪಾಲಾಗಲು ಬಿಡಕೂಡದು ಅನ್ನುವ ನಿಲುವು ಆತನದ್ದು.


Perhaps, Nostalgia always does hurts! it reminds us that we could have made different choices in a path of journey of our life we concluded so far. also nonetheless, nostalgia hurts because we may wish that we had made different choices in life. 


( ಇನ್ನೂ ಇದೆ.)



https://youtu.be/2OtxmddxNMo

No comments: